ಗೆಳೆಯ ಟೈಲರ್ ಇದ್ದ ಆರೂವರೆ ಅಡಿ
ವಿರಗಿ ವಿರಾಹಿ ನಿರಾಶಾವಾದಿ
ಕಳೆದಿಹನು ಏಳೂವರೆ ದಶಕ
ವಾಕಿಂಗು, ಜಾಗಿಂಗ್‌ನಲಿ ಬೆರೆಯುತ್ತಿದ್ದನೆಲ್ಲರ
ಅನುಮಾನದಿ ಕಾಣುತ್ತಿದ್ದ ಅವರಿವರನು
ಆದರೂ ನಂಬಿ ಇವನ ಬಳಿ
ಸುಳಿವ ಗಿರಾಕಿ ಸ್ನೇಹಿತರನೇಕರು
ಸಮಯಕೆ ಅಂಗಿ ಹೊಲಿದು ಕೊಡಲಿಲ್ಲೆಂದು
ಹೋದವರೆಷ್ಟೋ ಗಿರಾಕಿಗಳು ಕೋಪ ತಾಪದಲಿ
ಸಮಯಕೆ ಬಟ್ಟೆ ಕೊಡುವ ಪರಿಯಿಲ್ಲೆಂದರು
ಪೇಟೆಯವರಷ್ಟೇ ಅಲ್ಲ ಹಳ್ಳಿಯವರೂ
ಬಾರಿ ಬಾರಿ ಕನಲಿ ಪ್ರೀತಿಯಲಿ
ಇವ ಹೊಲಿದಂಗಿಯೇ ಬೇಕೆನ್ನುವರು
ಎಲ್ಲರಂತಿವನಲ್ಲ ಈ ಟೈಲರ್
ಭೀಮಣ್ಣ, ರಘಣ್ಣ, ಮಲ್ಲಿಕಣ್ಣ, ಶ್ರೀಧರ
ಗುಡಿಗಾರ ನಾರಾಯಣಪ್ಪ, ಪ್ರಕಾಶ್, ಸೇನಾಪತಿ
ಹೀಗೆ ಅನೇಕರ ಸ್ನೇಹ ಮಾಡಿದ
ಇವ ಯಾರ ಹಂಗಿಲ್ಲದಂತಿದ್ದ
ಆದರಿವ ಟೈಲರೊಳಗುತ್ತಮ ಟೈಲರ್
ಸದಾ ಹೂವಿನಂತೆ ಹಸನ್ಮುಖಿ
ನಡು ನಡುವೆ ಒಮ್ಮೊಮ್ಮೆ ಸಿಡುಕುತ್ತಿದ್ದ
ಆದರೂ ನಮ್ಮೆಲ್ಲರ ಪ್ರೀತಿಯ ಟೈಲರ್
ಎಳೆಯರ ಹಿರಿಯರ, ಹೆಂಗಳೆಯರ
ಮನವ ಗೆಲಿದಿಹನು ನಮ್ರ ಮಾತಿನಲಿ
ನೇರ ನಡೆ ನುಡಿಯುವನೀತ ತೀಕ್ಷಣದಲಿ
ಜೀವನದಲಿ ಹಿಗ್ಗರಿಸಿ ಮುಗ್ಗರಿಸಿ
ಗಿರಾಕಿಗಳ ರಂಜಿಸಿ ಪ್ರೀತಿಯ ಕಾಣುತಲಿ
ಸಲ್ಲಿಸುತಿಹನು ಉಚಿತ ಸೇವೆಯ
ಶವದ ಚೀಲ ಹೊಲಿದು ಕೊಡುತ
ಕಾಗೆಗಳಿಗೆ ಬ್ರೆಡ್ ಮಂಡಕ್ಕಿ ಹಾಕುತ
ಕಾಗೆಗಳೊಂದಿಗೆ ಪ್ರೀತಿಯ ಗಳಿಸಿದ
ಇವ ಎಲ್ಲರಿಗೂ ಮಾದರಿ ಟೈಲರ್
ಸಾಗರದ ಎಸ್ಸೆನ್ ನಗರದಲ್ಲೊಂದು
ಖರೀದಿಸಿದ ನಿವೇಶನದಲಿ
ವಾಸ ಮಾಡ ತೊಡಗಿದ
ಚಿಕ್ಕದಾದ ಚೊಕ್ಕದಾದ ಎರಡು
ರೂಮಿನ ಮನೆಯ ಕಟ್ಟಿಸಿ
ವಯಸ್ಸು ನಿಲ್ಲುವುದೇ
ಆರೋಗ್ಯ ಹದಗೆಟ್ಟಿತು ಒಂಟಿ ಜೀವಕೆ
ಅಂದುರಾತ್ರಿ ಹನ್ನೆರಡು ಬಡಿದಿತ್ತು
ಓಡಿದ ಗೆಳೆಯ ಮಲ್ಲಿಕಣ್ಣನ ಮನೆಗೆ
ಹೊಟ್ಟೆ ಸರಿಯಿಲ್ಲೆಂದ ಸೀರಿಯಸ್ಸೆಂದ ಅವನೆಬ್ಬಿಸಿ
ಸರಿ, ನಡೆ ಎಂದವನ ಸೇರಿಸಿದರು
ಆಸ್ಪತ್ರೆಗೆ ಸರಿರಾತ್ರಿಯಲಿ
ಶ್ರೀಧರನ ಕರೆಸಿದರೂ ಜಗ್ಗಲಿಲ್ಲ
ಭೀಮಣ್ಣನ, ರಘಣ್ಣನ ಕರೆಯಿಸಿದರು
ಸ್ನೇಹಿತನ ಸಹಾಯಕ್ಕೆ ಧಾವಿಸಿದರೆಲ್ಲರೂ
ಬೆಂಗಳೂರಿನಲ್ಲಿದ್ದ ಹೆಂಡತಿ ಮಕ್ಕಳಿಗೆ
ಫೋನಾಯಿಸಿದರು ಆದೀತೆಂದು ಹೆಚ್ಚು ಕಡಿಮೆ
ಬಂದ ಬಂಧುಗಳು ಕರೆದೊಯ್ದರು
ಅಲ್ಲಿಯೂ ಅವರನ್ನು ಕಂಡ ಅನುಮಾನದಿ
ಒಂದು ದಿನ ಇದ್ದಕ್ಕಿದ್ದಂತೆ ಇವ ಮಾಯ
ಗಾಬರಿ ಮನೆಯವರೆಲ್ಲ
ಎಲ್ಲಿ ಹೋದರೆಂದು ತಿಳಿಯಲಿಲ್ಲ
ನೀಡಿದರು ಕಂಪ್ಲೆಂಟು
ಎಷ್ಟು ಹುಡುಕಿದರೂ
ಪ್ರೀತಿಯ ಟೈಲರ್ ಸಿಗಲೇ ಇಲ್ಲ
ಯಾರಿಗೂ ತಿಳಿಸದೇ ಸೇರಿದ್ದ ವೃದ್ಧಾಶ್ರಮ
ನಾನು ಅನಾಥ ನನಗೆ ಯಾರೂ ಇಲ್ಲೆಂದ
ಅಲ್ಲಿಯೂ ತರಲೆ ಸಿಡುಕುತನ ಜಗಳ
ಅರೆ ಹುಚ್ಚುತನದಲಿ ಆಗಿಬಿಟ್ಟ ಪ್ರೀತಿಯ ಟೈಲರ್
‘ನನ್ನ ತಮ್ಮ ರಮೇಶ
ಶಿಕಾರಿಪುರದಲಿ ಪೋಲೀಸ್ ಎಂದು’
ಬಿಟ್ಟ ಬಾಯಿ ಈ ಟೈಲರ್
ತಮ್ಮನ ಕರೆಯಿಸಿ ಅವನಿಗೊಪ್ಪಿಸಿದರು
ಅಂತೂ ಮೂವತ್ತೈದು ನಾಲ್ವತ್ತು ವರ್ಷಗಳಿಂದ ಬಿಟ್ಟಿದ್ದ
ಹೆಂಡತಿಯೊಂದಿಗೆ ಸೇರಿಸಿದಾಕ್ಷಣದಲಿ
ಮೋಕ್ಷಕೆ ದಾರಿಯಾಯಿತು ಸುಗಮ
*****