ಮೇಯಾಕ ಹ್ವಾದ ದನಕರುಗಳ ಹಿಂಡು
ಸಂಜೆಯಾಗತ್ಲು ಊರೊಳಗ ಬರಾಕ್ಕೊಲ್ದು
ಕೊರಳೆತ್ತಿ ಬಾಯ್ತೆರೆದು ಬಾಲವ ಸೆಟೆಸಿ
ಹುಗಿದು ನಿಲ್ಲಿಸಿದ್ದ ಊರ ಹೊರಗಿನ ಇತಿಹಾಸವಿದ್ದ
ಈ ಕಲ್ಲಿಗೆ ಉಜ್ಯಾವ ಅರೆತೆರದ ಕಣ್ಣಿನಾಗ
ತಮ್ಮ ಮೈ ನವೆ ನೀಗಿಸಿಕೊಳ್ತಾ
ಆನಂದದ ಪರಮಾವಧಿಯೊಳಗ ತೇಲ್ಯಾವ
ಪವಿತ್ರ ಗೋವಿನ ಅಂಗಾಂಗದೊಳಗಿಡಗಿದ್ದ
ಮುಕ್ಕೋಟಿ ದ್ಯಾವರುಗಳೆಲ್ಲಾ ಮುಟ್ಟಿದ
ಈ ಕಲ್ಲು ಪವಿತ್ರವಾಗೈತಿ
ದನಕರುಗಳೆಲ್ಲಾ ಸಂದಾಗಿದ್ರ
ರೈತನಿಗೆ ಸುಖ ನೆಮ್ಮದಿ
ಅದ್ರಾಗ ಮಡಗೈತಿ ಊರಿನ ಹಿತ
ನೂರಾರು ವರುಷಗಳಿಂದ ಸವೆದು ಸವೆದು ನುಣುಪಾಗೈತಿ
ಅದಕ್ಕ ಗೋಕಲ್ಲು ಎಂದು ಭಕ್ತಿಯೊಳಗ
ಪೂಜಿ ಸಲ್ಲಿಸ್ತಾರ ಊರಿನ ಜನ
*****
೦೬-೦೫-೨೦೦೭ ರ ಸಂಯುಕ್ತ ಕರ್ನಾಟಕ : ಸಾಪ್ತಾಹಿಕ ಸೌರಭದಲ್ಲಿ ಪ್ರಕಟ