ಗ್ರೀಷ್ಮ ಋತು
ತಾಪದ ಪ್ರಖರತೆಯ ಪ್ರತೀಕ
ಜಗದ ಜೀವಿಗಳಿಗೆ ಬೇಕ
ಮರಗಿಡ ಬಳ್ಳಿಗಳಾಶ್ರಯ
ದಾಹವ ನೀಗಿಸಿಕೊಳ್ಳಲು
ಸರ್‍ಪದ ಹೆಡೆಯ ನೆರಳಲಿ
ಕಪ್ಪೆಯೊಂದು ವಿರಮಿಸಿದಂತೆ
ಶತೃಮಿತ್ರರೊಂದಾಗುವರು
ಇದುವೇ ಗ್ರೀಷ್ಮನ ಪ್ರಭಾವ
ಮಾವು ಬೇವು ಚಿಗುರೊಡೆದು
ಉಸಿರಿಗೆ ಉಸಿರು
ಬೇವು ಬೆಲ್ಲಗಳ ಸಂಮಿಶ್ರಣ
ಸುಖ ದುಃಖಗಳ ದುಮ್ಮಾನ
ಬದುಕಿನ ಚಿತ್ರಣವೇ
ಚೈತ್ರದ ಜಾಣ್ಮೆಯ ಸೊಬಗು
ಹೊಂಗನಸಿನಲಿ ಹೊಸವರ್‍ಷ
ಹರುಷ ತರಲೆಂದು
ಬರುತಿದೆ ಪ್ರತಿಯುಗಾದಿ
ಚೈತ್ರದ ಗಾಳಿ ಬೀಸುತಿರಲು
ನಿಯಮಾವಳಿಗಳೆಲ್ಲ ಗಾಳಿಗೆ ತೂರುತಿರಲು
ಹಣ್ಣೆಲೆ ಉದುರಿ ತರಗೆಲೆ ಹಾರುತಿರಲು
ಚಿಗುರು ಸಂತಸದಿ ಇಣುಕುತಿರಲು
ಪ್ರೀತಿಯ ಆಯ್ಕೆ
ನನಗೂ ನಿನಗೂ
ಎದಕೂ ಉಂಟು
ಶೃಂಗಾರ ಮಾಸವೇ ಹೀಗೆ
ವಸಂತದ ವೈಭವದಲಿ
ಎದುರಾಳಿಗಳೇ ಇಲ್ಲದ ಮನಸು
ಹಳತು ಹೊಸತು ನೆಪಗಳು
ನಿಲ್ಲುವವು ಅಂಚಿನಲಿ ಸುರುಳಿಬಿಚ್ಚಿ
*****
ಸಾಗರದ ವಾರಪತ್ರಿಕೆ ‘ಸಾಗರ ಸುತ್ತ’ ವಿಶೇಷಾಂಕದಲ್ಲಿ ಪ್ರಕಟ