ಹಕ್ಕಿ-ಪಕ್ಕಿ ಮೂಕವಾಗಿ
ಗಿರಿ-ಶಿಖರ ಮೌನತಾಳಿ
ಗಿಡ-ಮರ ಆಗೊಮ್ಮೆ ಈಗೊಮ್ಮೆ
ಸುಯ್ಯೆಂದು ಉಸಿರು ಬಿಡುತಿವೆ
ಎಲ್ಲೋ ನರಿಯ ಕೂಗೊಂದು ಕೇಳುತಿದೆ
ಜಿರ್ರೋ ಎನ್ನುತಿದೆ ಜೀರುಂಡೆ
ಖಗ-ಮೃಗ ಬರುತಿಹವು ಬಾಯಾರಿಸಲು
ನದಿ-ಸಾಗರದೊಡಲು ಸೇರಲು
ಬಯಸುತಿವೆ ಹಳ್ಳ-ಕೊಳ್ಳ
ರಮಿಸುತಿಹವು ತೊಗಲಿಗೆ-ತೊಗಲು
ಚುಕ್ಕಿಗಳು ನಲಿತಿಹವು ಬಾನಂಗಳದಲಿ
ಚಂದಿರನು ಮಲ್ಲಿಗೆಯಂತೆ ನಳ-ನಳಿಸಿ
ತುಂಟ ತನದಲಿ ನೀಡುತ ಕಚಗುಳಿ
ಬೆಳ್ದಿಂಗಳ ಕಂಪಸೂಸಿ ಕಿಲ-ಕಿಲನೆ ನಗುತಿಹನು
ಬೀದಿ ಬದಿಯಲಿ ಗಟಾರದ ನೀರಿನಲಿ
ಕಂಡ ಚಂದಿರನ ಹಿಡಿಯಲು ಬಿದ್ದಿಹನೊಬ್ಬ
ಅಮಲಿನಲಿ ತಡಬಡಿಸಿ ನುಡಿದ
ಅಂಧಕಾರದ ಅಮಲಿನ
ಮಾಯೆಯಲ್ಲಡಗಿಹುದು ಈ ಜಗವು
*****