ತಿಳಿಯಾದ ವಾತಾವರಣ
ಈ ಎಲ್ಲಾ ತಲೆ ಬಿಸಿಗಳ ಮಧ್ಯೆ ಅನುರಾಧ ಬಂದಿಳಿದಾಗ ಮನೆಯಲ್ಲಿ ಎಲ್ಲಾ ನೋವು ಮರೆಯಾಗಿ ಹರ್ಷದ ಹೊನಲೇ ಹರಿಯುತ್ತದೆ. ಎಲ್ಲರಲ್ಲೂ ಉತ್ಸಾಹ ತುಂಬಿಕೊಳ್ಳುತ್ತದೆ. ಸುಶೀಲಮ್ಮ ಕಳೆದು ಹೋದ ಯೌವನ ತುಂಬಿಕೊಳ್ಳುತ್ತಾರೆ. ರಾಮಕೃಷ್ಣಯ್ಯನವರ ನಡಿಗೆಯಲ್ಲಿ ಸಡಗರ ಕಾಣುತ್ತದೆ. ಪೂರ್ಣಿಮಾಳ ಬಾಡಿದ ಮೊಗದಲ್ಲಿ ಗೆಲುವು ಮೂಡುತ್ತದೆ. ‘ಅಕ್ಕ ಬಂದಾಯ್ತು. ಇನ್ನು ತನ್ನ ಹೃದಯವನ್ನೆಲ್ಲಾ ಒಮ್ಮೆ ಬರಿದು ಮಾಡಬಹುದು. ನೋವನ್ನು ಹಂಚಿಕೊಳ್ಳಬಹುದು’ ಎಂದವಳ ಯೋಚನೆ!
ಅಚಲನೂ ಅಕ್ಕನ ಬರವಿನಿಂದ ಉಲ್ಲಸಿತನಾಗುತ್ತಾನೆ. ತನ್ನ ಭವಿಷ್ಯದ ಯೋಜನೆ ಸಿದ್ಧವಾಗಿದೆ. ಯಾರಿಗೂ ತಿಳಿಯದಂತೆ ಎಲ್ಲಾ ರೂಪಿಸಿಕೊಂಡಾಗಿದೆ. ಇನ್ನು ಅಕ್ಕನ ಮೂಲಕ ತಂದೆ ತಾಯಿಗೆ ತಿಳಿಸಬೇಕು. ಅವರನ್ನು ಒಪ್ಪಿಸಬೇಕು. ಇಲ್ಲದಿದ್ದರೆ ನಾನು ವಾಯು ಸೇನೆಗೆ ಸೇರುವುದನ್ನು ಯಾರು ಬೆಂಬಲಿಸುತ್ತಾರೆ? ಅಕ್ಕನನ್ನು ಒಪ್ಪಿಸಿದರೆ ತನ್ನ ಹೊರೆ ಕಳಚಿದಂತೆ, ಎನ್ನುವ ಯೋಚನೆ ಅವನದ್ದು. ನಿರುಪಮಾ ಮಾತ್ರ ಯಾವ ಯೋಚನೆಗೂ ಸಿಲುಕಿರಲಿಲ್ಲ. ಅವಳಾಯಿತು. ಅವಳ ಕಾಲೇಜಾಯಿತು, ಗೆಳತಿ ಪ್ರೇರಣಾಳಾಯಿತು. ಅವಳ ಪ್ರಪಂಚವೇ ಇಷ್ಟು, ಬೇರೆ ಕಡೆಗೆ ಅವಳ ಗಮನ ಅಷ್ಟಾಗಿಲ್ಲ.
ಮೈ ತುಂಬಿ ನಿಂತ ಮಗಳನ್ನು ನೋಡುವಾಗ ಹೆತ್ತವರ ಹೃದಯವೂ ತುಂಬಿ ನಿಂತಿತ್ತು. ತಮ್ಮ ಕರುಳಿನ ಕುಡಿ, ಇನ್ನೊಂದು ಕುಡಿ ಹೊತ್ತು ನಿಂತಿದ್ದಾಳೆ. ನಮ್ಮ ವಂಶದ ಚಿಗುರದು. ಸುಖವಾಗಿ ಭಾರ ಕಳೆದರೆ ಸಾಕು ಎನ್ನುವ ಭಾವನೆ ಸುಶೀಲಮ್ಮನವರ ಮನದಲ್ಲಿ ಮಿಂಚಿ ಮಾಯವಾಗುತ್ತದೆ.
ಅನುರಾಧ ಬಂದ ಕೂಡಲೇ ತಂದೆಯ ಕುಗ್ಗುತ್ತಿರುವ ದೇಹ ನೋಡಿಯೇ ಏನೋ ಸರಿಯಾಗಿಲ್ಲವೆಂಬ ಅಭಿಪ್ರಾಯಕ್ಕೆ ತಲುಪಿಯಾಗಿತ್ತು. ಆದರೆ ಮನೆಗೆ ಹೊಕ್ಕ ಕೂಡಲೇ ತಪಾಸಣೆ ಸರಿಯಲ್ಲವೆಂದು ಯಾರೊಡನೆಯೂ ಕೇಳದೇ ಮೌನ ತಾಳಿದ್ದಳು. ಒಂದೆರಡು ದಿನ ಕಳೆದರೆ ಯಾರೂ ಹೇಳದಿದ್ದರೂ ಮನೆಯ ಪರಿಸ್ಥಿತಿ ತನಗೆ ಚೆನ್ನಾಗಿ ಅರ್ಥವಾಗುತ್ತದೆ. ನನ್ನ ಕಣ್ಣಿಂದ ತಪ್ಪಿಸಲು ಸಾಧ್ಯವೇ? ಜತೆಗೆ ಗಂಡ ಬಂದಿರುವರಾದರೂ ನಾಲ್ಕು ದಿನವಿದ್ದು ವಾಪಾಸು ಹೋಗುತ್ತಾರೆ. ಆಮೇಲೆ ಇಲ್ಲಿ ನಾವೇ. ತವರಿನ ಜೀವನದ ಸವಿಯೇ ಬೇರೆ. ಮೂರು ವರುಷದ ಹತ್ತಿರವೇ ಆಯ್ತು, ನಾನಿಲ್ಲಿಂದ ಮರೆಯಾಗಿ ಇಷ್ಟು ಸಮಯದಿಂದ ನನಗೆ ಈ ಸುಖ ತಪ್ಪಿತ್ತು. ಗಂಡನ ಜತೆಗೆ ಎಷ್ಟು ನೆಮ್ಮದಿಯ ಜೀವನ ಬೇಕಾದರೂ ಇರಲಿ, ತವರು ಮನೆಯ ಜೀವನದ ಸುಖದ ಆನಂದ ಕಡಿಮೆಯೇ? ಅದನ್ನು ಮರೆಯಲಾಗುವುದೇ? ಅದನ್ನು ಅನುಭವಿಸುವ ಭಾಗ್ಯ ಪುನಃ ನನ್ನದಾಗಿದೆ! ಆದರೆ ಎಲ್ಲರೂ ಬೇರೆಯೇ ಆಗಿ ತೋರುತ್ತಿದ್ದಾರೆ. ನಾನು ಹೋಗುವಾಗ ಇದ್ದ ಹಾಗೆ ಯಾರೂ ಇಲ್ಲ. ಮೂರು ವರುಷದಲ್ಲಿ ಆಗಿರಬಹುದಾದ ಬದಲಾವಣೆಗಳನ್ನು ನಾನು ಕಲ್ಪಿಸಿಕೊಂಡು ಮನದಲ್ಲಿ ರೂಪಿಸಿ ಕೊಂಡಿದ್ದ ಚಿತ್ರಕ್ಕೂ ಈಗ ಕಾಣುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ! ಅಚಲನಂತೂ ಎಷ್ಟು ಚೆನ್ನಾಗಿ ಬೆಳೆದು ಬಿಟ್ಟಿದ್ದಾನೆ. ಆನಂದನಿಗಿಂತಲೂ ಚೆಲುವ! ಪೂರ್ಣಿಮಾ ಒಣಗಿ ಹೋಗಿದ್ದಾಳೆ. ಕಣ್ಣುಗಳಲ್ಲಿನ ಹೊಳಪೆಲ್ಲಾ ಮಾಯವಾಗಿದೆ! ಬತ್ತಿ ಹೋದ ಬಾವಿಯಂತಾಗಿದೆ. ಪಾಪ! ಹೊರಗಿನ ದುಡಿತ. ಹೊರಗೆ ದುಡಿಯೋ ಹೆಂಗಸರೆಲ್ಲಾ ಒಣಗುವುದೇ. ಅವಳಿಗೊಂದು ಮದುವೆ ಮಾಡಬೇಕು ಈ ಸಲ. ಇವರ ಚಿಕ್ಕಮ್ಮನ ಮಗನನ್ನೇ ಮಾಡಬೇಕೆಂದು ನನ್ನ ಆಸೆ. ಅವರದ್ದೂ ಅದಕ್ಕೆ ಎದುರಿಲ್ಲ, ನೋಡೋಣ! ಮದುವೆಯೆನ್ನುವುದು ವಿಚಿತ್ರ ಬಂಧನ! ಎಲ್ಲೆಲ್ಲೋ ಇರುವವರನ್ನು ಒಂದುಗೂಡಿಸುತ್ತದೆ. ಎಲ್ಲಾ ಸರಿಕಟ್ಟಾದರೆ ಅವನನ್ನು ಒಮ್ಮೆ ಇಲ್ಲಿ ತರಿಸಿ ಪೂರ್ಣಿಮಾಳನ್ನು ತೋರಿಸಿ ಮದುವೆ ಮಾಡಿಸಿ ಬಿಡಬೇಕು. ಅವಳನ್ನು ಹೀಗೆ ಒಣಗಲು ಬಿಡಬಾರದು. ನಾನಿರುವಷ್ಟು ದಿನವೂ ನನಗೆ ಬೇಕಷ್ಟು ಕೆಲಸವಿದೆ. ಮೊದಲು ಈ ಭಾರವೊಂದು ಕಳೆಯಲಿ. ಆ ಮೇಲೆ ಎಲ್ಲಾ. ಅಮ್ಮನೂ ವಿಪರೀತ ಮುದುಕಿಯಂತೆ ತೋರಿದ್ದಾರೆ. ಬಂದ ಕೆಲವು ನಿಮಿಷಗಳಲ್ಲೇ ಇಷ್ಟೆಲ್ಲಾ ಅಳತೆ ಮಾಡಿಕೊಂಡಿದ್ದಳು ಅನುರಾಧ.
ತಾಯಿ ಬಡಿಸಿದ ಬಿಸಿ ಬಿಸಿ ಅಡಿಗೆ ಊಟ ಮಾಡಿ ಏಳುವಾಗ ಅವಳ ದಣಿವೂ ಮುಕ್ಕಾಲು ಪಾಲು ಮಾಯವಾಗಿತ್ತು. ತಾಯಿಯ ಅಡಿಗೆಯ ರುಚಿ ಅಪ್ಯಾಯಮಾನವಾಗಿತ್ತು. ಅದು ಅಮೃತವೆಂದೇ ಹೇಳಬೇಕು. ಅದಕ್ಕೆ ಬೇರೇನೂ ಸರಿಸಾಟಿಯಿಲ್ಲ. ಬರುವಾಗ ತಾನು ತನ್ನವರಿಗೆಲ್ಲಾ ಬೇಕೆನಿಸಿದ್ದನ್ನೆಲ್ಲಾ ತಂದಿದ್ದಳು. ಪ್ರೀತಿಯ ತಂದೆಗೆ ಚಳಿಗೆ ಹೊದ್ದುಕೊಳ್ಳಲು ದೊಡ್ಡದೊಂದು ರಚಾಯಿ, ಅಮ್ಮನಿಗೆ ಚೆನ್ನಾಗಿರುವ ಒಂದು ಶಾಲು, ಪೂರ್ಣಿಮಾ, ನಿರುಪಮಾರಿಗೆ ಸೀರೆ. ಅಚಲಗೆ ಡ್ರೆಸ್, ಇಲ್ಲಿ ಬಂದು ಎಲ್ಲರಿಗೆ ಹಂಚಿದ ಮೇಲೆ ತಾನು ಆನಂದನಿಗೇನೂ ತರಲಿಲ್ಲವೆಂದು ಗೋಚರವಾಗುತ್ತದೆ. ಕೂಡಲೇ ಅವಳ ಮನಸ್ಸಿನಲ್ಲಿ “ಛಿ! ನಾನು ಮನದಾಳದಲ್ಲಿ ಆನಂದನನ್ನು ದ್ವೇಷಿಸುತ್ತಿದ್ದೇನೋ ಏನೋ, ಮತ್ತೆ ತನಗೇಕೆ ಮರೆತು ಹೋಯಿತು” ಎಂದು ಅನಿಸದಿರಲಿಲ್ಲ.
ಶಂಕರ ಊರಲ್ಲಿ ಇರುವ ತನಕ ಅನುರಾಧಗೆ ಮನೆಯ ಪರಿಸ್ಥಿತಿ ಬಗ್ಗೆ ಯೋಚಿಸಲು ಸಮಯ ಇರಲಿಲ್ಲ. ಅವನು ಹೊರಟು ಹೋದ ಮೇಲೆ ಅನುರಾಧಳ ಸಮಯವೆಲ್ಲಾ ಅವಳದ್ದೇ! ಎಲ್ಲರ ನಡವಳಿಕೆಗಳನ್ನು, ಭಾವನೆಗಳನ್ನು ಭೂತ ಕನ್ನಡಿ ಹಿಡಿದು ನೋಡಿದಾಗ ಅವಳಿಗೆ ಒಂದೊಂದಾಗಿಯೇ ಮನೆಯ ಪರಿಸ್ಥಿತಿ ಸ್ಪಷ್ಟವಾಗತೊಡಗಿತ್ತು. ತಂದೆ ದಿನಾ ಸಂಜೆ ಹೋಗಿ ರಾತ್ರಿ ಮನೆಗೆ ಸುಸ್ತಾಗಿ ಬರುವುದು, ಪೂರ್ಣಿಮಾ ಯಾವ ಉತ್ಸಾಹವೂ ಇಲ್ಲದೇ ಸಂಜೆಯ ಹೊತ್ತನ್ನು ತೆಗೆಯುವುದು, ಎಲ್ಲಾ ನೋಡುವಾಗ ಅವಳ ಊಹೆಗಳಿಗೆ ರೆಕ್ಕೆ, ಪುಕ್ಕ ಎಲ್ಲಾ ಹುಟ್ಟಿಕೊಂಡಿತ್ತು. ನಿರುಪಮಾಳೂ ಬೇರೆಯೇ ಆಗಿದ್ದಳು. ಮನೆಯಲ್ಲಿ ಗಲಾಟೆ ನಗುಗಳೇ ಮಾಯವಾಗಿತ್ತು. ಅಚಲನೊಬ್ಬ ಮಾತ್ರ ಮೊದಲಿನಂತೇ ಅಕ್ಕನ ಹಿಂದೆ ತಿರುಗುತ್ತಾ ಮಾತಾಡಿ ನಗಿಸುತ್ತಿದ್ದ. ಸುಶೀಲಮ್ಮನೂ ಮಗಳೊಡನೆ ಮಾತನಾಡುವಾಗ ಹಲವಾರು ಬಾರಿ ಮಗಳ ಪ್ರಶ್ನಾರ್ಥಕ ದೃಷ್ಟಿ ತಪ್ಪಿಸಲು ಒದ್ದಾಡುತ್ತಿದ್ದರು. ಮನಬಿಚ್ಚಿ ಮಾತಾಡಲು ಹಿಂಜರಿಯುವ ಹಾಗಿತ್ತು ಅವರ ರೀತಿ. ಯಾಕಮ್ಮ, ಅಪ್ಪ, ಸಂಜೆ ಹೋದವರು ಇಷ್ಟು ಹೊತ್ತಾದರೂ ಬಂದೇ ಇಲ್ಲ. ಅಂದಾಗ ‘ಬಾರ್‍ತಾರೆ ಈಗ’ ಎಂದು ಮಾತು ಹಾರಿಸಿದ್ದರಷ್ಟೇ.
ಶಂಕರ ಹೋಗಿ ನಾಲೈದು ದಿನವಾಗಿದ್ದರೂ ಯಾರೂ ಅವಳ ಹತ್ತಿರ ಯಾವ ವಿಷಯಕ್ಕೂ ಬಾಯಿ ಬಿಟ್ಟಿರಲಿಲ್ಲ. ಅನುರಾಧಳಲ್ಲಿ ಚಡಪಡಿಕೆ ಶುರುವಾಗಿತ್ತು. ಯಾಕೆ ಎಲ್ಲರೂ ಹೀಗಾಡುತ್ತಾರೆ? ಒಬ್ಬರೂ ನನ್ನ ಹತ್ತಿರ ಮುಚ್ಚುಮರೆಯಿಲ್ಲದೆ ಮಾತಾಡುತ್ತಿಲ್ಲ. ನಾನು ಹೊರಗಿನವಳೇ? ಎಂದು ನೊಂದು ಕೊಳ್ಳುತ್ತಾಳೆ.
ಒಂದು ಆದಿತ್ಯವಾರ-ಅನುರಾಧ ಬಂದ ಎರಡನೇ ಆದಿತ್ಯವಾರ – ಮಧ್ಯಾಹ್ನ ಊಟದ ನಂತರ ಅನುರಾಧ ಯೋಚಿಸುತ್ತಾ, ಅಡ್ಡಾಗಿದ್ದಳು. ಅವಳಿಗೆ ಎಲ್ಲರೂ ತನ್ನಿಂದ ಏನೋ ಮುಚ್ಚಿಡಲು ಪ್ರಯತ್ನಿಸುತ್ತಿರುವುದನ್ನು ನೋಡಿ ಸಿಟ್ಟೂ ಬರುತ್ತಿತ್ತು. ಪೂರ್ಣಿಮಾಳು ಹತ್ತಿರವೇ ಬಂದು ಕುಳಿತುಕೊಂಡಿದ್ದಳು. ಅನುರಾಧ ಅವಳನ್ನು ದೃಷ್ಟಿ ಕದಲಿಸದೇ ನೋಡುತ್ತಾ “ಪೂರ್ಣಿ, ಯಾಕೆ ನಿನ್ನಲ್ಲಿ ಮೊದಲಿನ ಉತ್ಸಾಹವೇ ಇಲ್ಲ? ಯಾಕೆ ಇಷ್ಟೊಂದು ಸಪ್ಪೆಯಾಗಿರುತ್ತೀ? ಕೆಲಸದ ಸುಸ್ತೇ? ಮನಸ್ಸಿಗೆ ಏನೋ ಹಚ್ಚಿಕೊಂಡು ಕೊರಗುವಂತಿದೆ ಯಾಕೆ?” ಎಂದು ನೇರವಾಗಿಯೇ ಕೇಳುತ್ತಾಳೆ.
“ಹಾಗೇನಿಲ್ಲಕ್ಕಾ, ಬರೇ ಬೇಜಾರು ಅನ್ನಿಸುತ್ತದೆ. ಈ ಜೀವನಕ್ಕೆ ಏನರ್ಥ ಎಂದು ತಿಳಿಯದೇ ಮನದ ಆಸೆಗಳೆಲ್ಲಾ ಮುರುಟಿ ಸಾಯುತ್ತಿವೆ ಅದಕ್ಕೇ ಇರಬೇಕು.”
“ನನಗೊತ್ತು ಯಾಕೆ ಹೀಗಂತ, ಆಗುವ ಕಾಲದಲ್ಲಿ ಎಲ್ಲಾ ಆದರೆ ಎಲ್ಲಾ ಸರಿಯಾಗುತ್ತೆ. ಅದಕ್ಕೂ ಪರಿಹಾರ ಹುಡುಕಿಕೊಂಡೇ ಬಂದಿದ್ದೇನೆ ಬಿಡು, ಅಪ್ಪನ ಹತ್ತಿರ ಮಾತಾಡಿ ನಿನ್ನಲ್ಲಿ ಹೇಳುತ್ತೇನೆ. ಈಗ ಬೇಡ.”
“ಏನಕ್ಕ ನೀನು ಹೇಳುವುದು?”
“ಏನಂತ ಬಿಡಿಸಿ ಹೇಳಬೇಕೇ? ನಿನಗೊಂದು ಮದುವೆ ಮಾಡಿದರೆ ಎಲ್ಲಾ ಸರಿಹೋಗುತ್ತೆ ಅಷ್ಟೇ” ನಗುತ್ತಾ ಅನುರಾಧ ಹೇಳಿದಾಗ ಪೂರ್ಣಿಮಾ ಒಮ್ಮೆಲೇ, “ಮದುವೆ ಮಾಡಿದರೆ, ಎಲ್ಲಾ ಸರಿ ಹೋಗುತ್ತದೆಯೇ? ಅದು ನಿನ್ನ ಕಲ್ಪನೆ. ನಾನು ಮದುವೆಯಾಗಿ ಹೋದರೆ ಇಲ್ಲೆಲ್ಲಾ ಹದಗೆಡುತ್ತದೆ ಅಷ್ಟೇ.”
“ಯಾಕೆ ಹಾಗನ್ತೀಯಾ ಪೂರ್ಣಿಮಾ?”
“ಮತ್ತೇನು ಹೇಳಲಿ ಅಕ್ಕಾ? ನಾನು ಮದುವೆಯಾಗಿ ಹೋದರೆ ಅಪ್ಪ ಅಮ್ಮನ ಗತಿ? ನಿರುಪಮಾಳ ಓದು? ಅಚಲನಿಗೆ ಏನಾದರೂ ಕೆಲಸ ಸಿಕ್ಕಿ ಅವನೊಂದು ನೆಲೆಯಾದರೆ ಸರಿ. ಇಲ್ಲದಿದ್ದರೆ?”
“ಯಾಕೆ ಅಣ್ಣನಿಗೆ ಆ ಜವಾಬ್ದಾರಿ ಇಲ್ಲವೇ?”
“ಅಣ್ಣ ಆ ಜವಾಬ್ದಾರಿ ಕಳಚಿಕೊಂಡು ಎಷ್ಟೋ ಕಾಲವಾಯ್ತು. ಅವನಿಗೆ ಇಲ್ಲಿಯ ಯೋಚನೆಯಿದ್ದಿದ್ದರೆ ಅಪ್ಪ ಈ ಪ್ರಾಯಕ್ಕೆ ಪುನಃ ಕೆಲಸಕ್ಕೆ ಹೋಗಬೇಕಿತ್ತೆ?” ದಡಕ್ಕನೇ ಎದ್ದು ಕುಳಿತ ಅನುರಾಧ “ಏನು? ಅಪ್ಪ ಕೆಲಸಕ್ಕೆ ಹೋಗ್ತಿದ್ದಾರೆಯೇ? ಅಣ್ಣ ಏನೂ ಕಳುಹಿಸುತ್ತಿಲ್ಲವೇ?” ಬೆಚ್ಚಿ ಕೇಳುತ್ತಾಳೆ. ಅವಳಿಗೆ ಈ ಸುದ್ದಿ ಹೊಚ್ಚ ಹೊಸದು! ಕನಸಿನಲ್ಲೂ ಕಲ್ಪಿಸಿರದ ಸತ್ಯ!
“ಅಣ್ಣ ಏನೂ ಕಳುಹಿಸುತ್ತಿಲ್ಲ. ಅವನು ನಮ್ಮನ್ನೆಲ್ಲಾ ಮರೆತೇ ಬಿಟ್ಟಿರುವನೇನೋ? ನನ್ನ ಹಾಗೂ ಅಪ್ಪನ ಸಂಪಾದನೆಯಿಂದ ಈ ರಥ ಚಲಿಸುತ್ತಿದೆ ಅಷ್ಟೇ.”
ಅನುರಾಧ ಮೌನ ತಾಳುತ್ತಾಳೆ. ಹೃದಯದಲ್ಲಿದ್ದ ವೇದನೆ ಮನವನ್ನೆಲ್ಲಾ ಆವರಿಸುತ್ತದೆ. ಮತ್ತೆ ನೊಂದ ದನಿಯಲ್ಲಿ ಮೆಲ್ಲನೇ ಸ್ವರ ಹೊರಡಿಸುತ್ತಾಳೆ. “ಪೂರ್ಣಿಮಾ ಇದೆಲ್ಲಾ ನನಗೆ ಯಾಕೆ ಮೊದಲೇ ತಿಳಿಸಲಿಲ್ಲ?” ಗದರಿಸುವ ದನಿಯಿರುತ್ತದೆ ಮಾತಲ್ಲಿ.
“ತಿಳಿಸಿ ಏನು ಪ್ರಯೋಜನ? ನೀನಲ್ಲಿ ತಲೆಬಿಸಿ ಮಾಡಿಕೊಂಡು ಭಾವಾಜಿಯ ತಲೆಯನ್ನು ಕೆಡಿಸಲಿಕ್ಕೆಯೇ?”
“ತಲೆ ಬಿಸಿಯಾಗುವುದೆಂದು ಇಲ್ಲಿಯ ನೋವು ನನಗೆ ತಿಳಿಯಲಿಕ್ಕಿಲ್ಲವೇ ನಾನೇನು ಹೊರಗಿನವಳೇ? ನಾನಲ್ಲಿ ನಗುತ್ತಿರುವಾಗ ನೀವಿಲ್ಲಿ ನೋಯುತ್ತಿದ್ದಿರಿ” ಅಷ್ಟು ಹೇಳುವಾಗ ಅವಳ ಕಣ್ಣು ತುಂಬಿ ಬರುತ್ತದೆ.
“ಇರಲಿ ಬಿಡಕ್ಕ, ನೀನೀಗ ಇದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳಬಾರದು. ಯಾಕೋ ಅಣ್ಣನಿಗೆ ತಂದೆ ತಾಯಿ ಒಡಹುಟ್ಟಿದವರ ನೆನಪೇ ಇದ್ದ ಹಾಗಿಲ್ಲ. ಇನ್ನು ಅಚಲನೊಬ್ಬ ಹಾಗಾಗದಿದ್ದರೆ ಸಾಕು.”
“ಒಬ್ಬರು ಹಾಗಾದರೆಂದು ಎಲ್ಲರೂ ಹಾಗಾಗೋದಿಲ್ಲ ಬಿಡು. ಈಗ ನೀನೇ ಇಲ್ಲವೇ ಗಂಡು ಮಗನಿಗಿಂತಲೂ ಹೆಚ್ಚಾಗಿ ಈ ಮನೆಗೆ ಆಧಾರವಾಗಿ?”
“ಏನೋ ಯಾರಿಂದ ಯಾವ ಯಾವ ಕೆಲಸ ಮಾಡಿಸಬೇಕಂತ ಆ ಭಗವಂತನ ಇಚ್ಛೆಯೋ ಯಾರಿಗೆ ಗೊತ್ತು? ಯಾರಿಗೆ ಯಾರು ಒದಗುತ್ತಾರೆ, ಆಧಾರವಾಗಿರುತ್ತಾರೆ ಎಂದು ಮೊದಲೇ ಗೊತ್ತಾಗುವಂತಿದ್ದರೆ ಜೀವನದಲ್ಲಿ ಈ ರೀತಿಯ ಒದ್ದಾಟಗಳಿರುತ್ತಿತ್ತೇ? ಪುರಂದರದಾಸರು ಹಾಡಿದ ‘ಯಾರಿಗೆ ಯಾರುಂಟು ಎರವಿನ ಸಂಸಾರ’ ಎಂಬ ಹಾಡು ಎಂದೆಂದಿಗೂ ನಿಜವೇ. ನೂರು ವರುಷಗಳ ಹಿಂದೆಯೂ ಸತ್ಯ ಇಂದೂ ಸತ್ಯ, ನೂರು ವರುಷಗಳ ನಂತರವೂ ಸತ್ಯ. ನೀನೇನು ಹೇಳುತ್ತಿ ಅಕ್ಕಾ?” ಎಂದು ನಗುತ್ತಾ ಕೇಳುವಾಗ ಅಚಲನ ಸವಾರಿ ಬರುತ್ತದೆ.
“ಇಬ್ಬರು ಅಕ್ಕಂದಿರ ಗುಪ್ತ ಸಭೆ ನಡೆದ ಹಾಗಿದೆ. ನಾನು ಬರಬಹುದೇ?”
ಪೂರ್ಣಿಮಾ ಏನೂ ಮಾತಾಡದಿದ್ದರೂ, ಅನುರಾಧ ನಗುವಿನ ಮುಖವಾಡ ಹಾಕಿ, “ನೀನೇನು ಹೊರಗಿನವನೇ ಅಪ್ಪಣೆ ಕೇಳಿ ಬರಲು? ಬಾ, ಏನು ಇವತ್ತು ಎಲ್ಲೂ ಹೋದ ಹಾಗಿಲ್ಲ? ಸ್ನೇಹಿತರಾರೂ ಸಿಗಲಿಲ್ಲವೇ?”
“ಸ್ನೇಹಿತರಿಗೇನು ಕೊರತೆ? ಆದರೆ ಯಾರಿಗೆ ಬೇಕು ಯಾವಾಗಲೂ ಸ್ನೇಹಿತರರ ಜತೆ? ಅವರೇನು ಅನ್ನ ಕೊಡ್ತಾರೆಯೇ?” ಅನುರಾಧಳಿಗೆ ಅಚ್ಚರಿಯಾಗುತ್ತದೆ. ಸ್ನೇಹಿತರೆಂದರೆ ಒಂದು ಕಾಲದಲ್ಲಿ ನಿಂತಿರುತ್ತಿದ್ದ ಅಚಲನಿಂದ ಈ ಮಾತು ಅವಳ ನಿರೀಕ್ಷೆಗೆ ಮೀರಿದ್ದು.
“ಅಬ್ಬಬ್ಬಾ, ನಮ್ಮ ಅಚ್ಚು ಅಷ್ಟು ಗಂಭೀರವಾಗಿ ಯೋಚಿಸುತ್ತಿರುವುದು ಯಾವಾಗಿನಿಂದ?”
ಅಚಲ ನೊಂದ ಧ್ವನಿಯಿಂದ ನುಡಿಯುತ್ತಾನೆ.
“ಯಾಕಕ್ಕಾ ಹಾಗನ್ನುತ್ತಿ? ನಾನೇನು ಇನ್ನೂ ಚಿಕ್ಕ ಮಗುವೇ? ನನಗೆ ಏನೇನೂ ಅರ್ಥವಾಗುವುದಿಲ್ಲವೆಂದು ನಿಮ್ಮ ಅಭಿಪ್ರಾಯವೇ? ಏನೋ ಎಲ್ಲರೊಡನೆ ಹುಚ್ಚುಹುಚ್ಚಾಗಿ ಮಾತಾಡುತ್ತೇನೆ. ಆದರೆ ನನಗೆ ನನ್ನ ಕಾಲ ಮೇಲೆ ನಿಂತು ಆದಷ್ಟು ಬೇಗನೇ ಅಪ್ಪ ಕೆಲಸ ಮಾಡುವುದನ್ನು ನಿಲ್ಲಿಸಬೇಕೆಂಬ ಆಸೆ ಎಷ್ಟಿದೆ ಗೊತ್ತಾ?”
ಅನುರಾಧಾಳ ಕೊರಳ ನರಗಳುಬ್ಬಿ ಮತ್ತೊಮ್ಮೆ ಗಂಟಲು ಭಾರವಾಗುತ್ತದೆ. ಕಣ್ಣು ಮಂಜಾಗುತ್ತದೆ. ಮನಸ್ಸು ಪ್ರಶ್ನಿಸುತ್ತದೆ. ಆನಂದನಿಗೆ ಹೀಗೆ ಒಂದು ಬಾರಿಯಾದರೂ ಅನಿಸಿದ್ದರೆ ಅಪ್ಪ ಅಮ್ಮನಿಗೆ ಈ ಒದ್ದಾಟವೆಲ್ಲಾ ಎಲ್ಲಿರುತ್ತಿತ್ತು.?’
ಅಚಲ ಒಮ್ಮೆಲೇ ತುಂಬಾ ಬೆಳೆದು ನಿಂತಂತೆ ಭಾಸವಾಗುತ್ತದೆ.
*****
ಮುಂದುವರೆಯುವುದು