ಬೀಸಿಬಂದ ತಂಗಾಳಿ
ಅನುರಾಧ, ಶಂಕರ ಬಂದಿಳಿದಾಗ ಸುಶೀಲಮ್ಮನ ಮನಸ್ಸಿಗೆ ಕವಿದ ಮೋಡ ಕರಗಿ ಹಿತವೆನಿಸುತ್ತದೆ. ಮಗಳನ್ನು ನೋಡಿದಾಗ ರಾಮಕೃಷ್ಣಯ್ಯನವರೂ ಮಾತು ಬಾರದೆ ಮೂಕರಾಗುತ್ತಾರೆ. ಪ್ರೀತಿಯ ಮಗಳು ಒಂದು ತಿಂಗಳ ನಂತರ ಮುಂದೆ ಬಂದು ನಿಂತಾಗ ಅವರ ಪ್ರೀತಿಯೆಲ್ಲಾ ಉಕ್ಕಿ ಹರಿದಂತೆ ಭಾಸವಾಗುತ್ತದೆ. ಅನುರಾಧಾ ಸುಸ್ತಾದವಳಂತೆ ಕಂಡರೂ, ಅವಳ ಕಣ್ಣಲ್ಲಿ ಎಂದೂ ಇಲ್ಲದ ಹೊಳಪಿತ್ತು. ಅದನ್ನು ಗುರುತಿಸಿದ ಕೂಡಲೇ ರಾಮಕೃಷ್ಣಯ್ಯನವರು ಅಂಥಾ ಹೊಳಪು ನಿರ್ಮಲಾಳ ಕಣ್ಣಲ್ಲಿದೆಯೇ ಎಂದು ಪ್ರಶ್ನಿಸಿಕೊಂಡಿದ್ದರು.
ಅನುರಾಧ ಬಂದವಳೇ ಮೊದಲಿನಂತೇ ಮನೆಯಲ್ಲೆಲ್ಲಾ ಓಡಾಡಿ ಅತ್ತಿಗೆ ಎಲ್ಲೂ ಕಾಣದಾಗ ಅಣ್ಣನ ಕೋಣೆಗೆ ಹೋಗಿ ಪ್ರೀತಿಯಿಂದ ಮಾತನಾಡಿಸಿದಾಗ ನಿರ್ಮಲಾಗೂ ವಾತಾವರಣ ಸ್ವಲ್ಪ ಸಡಿಲಿಸಿದಂತೆ ಭಾಸವಾಗುತ್ತದೆ. ‘ಈ ಹುಡುಗಿಯಾದರೂ ಇಲ್ಲಿರುತ್ತಿದ್ದರೆ ನನ್ನ ಜೀವನ ಇಷ್ಟು ನೀರಸವೆನಿಸುತ್ತಿರಲಿಲ್ಲ.’ ಎಂದು ನಿರ್ಮಲಾ ಯೋಚಿಸದಿರಲಿಲ್ಲ.
ಈ ಮನೆಯಲ್ಲಿ ಎಲ್ಲರಿಗೂ ಮಾತು ಬೇಕು. ಆನಂದನೊಬ್ಬನೇ ಮಾತಿಲ್ಲದ ಮೂಕ. ನಾನಾದರೂ ಈ ಮಾತಿಲ್ಲದ ಚೆಲುವನನ್ನು ಹೇಗೆ ಯಾಕೆ ಮೆಚ್ಚಿದೆ? ಬರೇ ಚೆಲುವಿಗಾಗಿಯೇ? ಆಗಾಗ ನಾನು ಕೆಲಸ ಮಾಡುವಲ್ಲಿಗೆ ಟಿಕೆಟ್ ಬುಕ್ ಮಾಡಿಸಲು ಬರ್‍ತಿದ್ದ, ಅಷ್ಟೇ. ಆನಂದನ ಹತ್ತಿರ ತಾನಾದರೂ ಮಾತಾಡಿದ್ದು ನಾಲ್ಕೈದು ಸಲ. ಅದೂ ವ್ಯವಹಾರಿಕ. ಅಷ್ಟರಲ್ಲಿ ಮಾತು ಆಡದ್ದನ್ನು ನಮ್ಮಿಬ್ಬರ ಕಣ್ಣು ಹೃದಯ ಆಡಿಬಿಟ್ಟಿತ್ತು. ಆಮೇಲೂ ಅಷ್ಟೇ ನಮ್ಮಿಬ್ಬರ ಪರಿಚಯವಾಗಿ ಒಂದು ವರುಷವಾದರೂ ಮಾತೆಷ್ಟು ಕಡಿಮೆ! ಆದರೆ ಆಗ ನನಗೆ ಮಾತಿನ ಮಹತ್ವ ತಿಳಿಯಲಿಲ್ಲ. ಕಣ್ಣ ಮಾತಲ್ಲೇ ತೃಪ್ತಿಯಿತ್ತು. ಹರಿಯುತ್ತಿದ್ದ ಹುಚ್ಚು ಪ್ರೀತಿಗೆ ಮೌನ ಒಂದು ತಡೆಯಾಗಿ ನಿಲ್ಲಲಿಲ್ಲ. ನಾನೆಂದೂ ಆನಂದನನ್ನು ಬಿಟ್ಟಿರಲಾರೆನೆಂಬ ಭಾವನೆ ಹೃದಯ ತುಂಬಾ ಹರಡಿ ಕುಳಿತಾಗ ಬೇರೆಲ್ಲಾ ಗೌಣವಾಗಿತ್ತು. ಈಗಲೂ ನನಗೆ ಹಾಗೇ ಅನಿಸುತ್ತಿದೆ. ಎಷ್ಟು ಸಿಟ್ಟು ಬಂದರೂ ಆನಂದನಿಂದ ದೂರವಾಗಲು ಸಾಧ್ಯವೇ? ದೂರವಾಗೋದು ಇರಲಿ. ಆನಂದನೊಡನೆ ಜಗಳಾಡಿ ಮನಬಂದಂತೆ ಒದರುವ ಧೈರ್ಯವಾದರೂ ನನ್ನಲ್ಲಿ ಇದೆಯೇ? ಅನುಬಂದ ಜಾಸ್ತಿಯಾಗಿದೆ. ಜತೆಗೆ ಆನಂದನ ಮೌನ ಜೀವ ತಿನ್ತಿದೆ. ಆನಂದನೇಕೆ ಹೀಗೆ, ಎಂದು ತಿಳಿಯಲಾಗದೆ ನಿರ್ಮಲಾ ಒದ್ದಾಡುತ್ತಾಳೆ.
ಅನುರಾಧ ಮನೆತುಂಬಾ ಓಡಾಡುವಾಗ, ನಗುನಗುತ್ತಾ ಎಲ್ಲರೊಡನೆ ಮಾತನಾಡುವಾಗ, ನಿರ್ಮಲಾಗೂ ಎಲ್ಲರೊಡನೆ ಒಂದಾಗುವ ಆಸೆ ಬಲವಾಗಿ ಬೆಳೆಯುತ್ತದೆ. ನಿರ್ಮಲಾ ಮೊದಲಿನಿಂದಲೂ ಸಂಘಜೀವಿ. ಹೀಗೆ ಮೌನ ತಪಸ್ಸು ಮಾಡಿ ಅವಳಿಗೆ ಅಭ್ಯಾಸವಿಲ್ಲ. ಈ ರೀತಿ ಮೂಲೆ ಸೇರಿದವಳು ಅಲ್ಲವೆ ಅಲ್ಲ. ಮನೆ ತುಂಬಾ ಮಾತಿನ ಗುಲ್ಲೆಬ್ಬಿಸಿ ನಗುವಿನ ಹೊಳೆ ಹರಿಸಿದಳು. ಇಲ್ಲಿ ಬಂದ ಮೇಲೆ ಅವಳ ವ್ಯಕ್ತಿತ್ವವೇ ಬದಲಾಗಿದೆ. ಅವಳು ಅವಳಾಗಿ ಉಳಿದಿಲ್ಲ. ಇದು ಒತ್ತಾಯ ಪೂರ್ವಕವಾಗಿ ಒಗ್ಗಿಸಿಕೊಂಡ ರೀತಿ, ಅವಳದಲ್ಲದ ಕ್ರಮ. ಉಸಿರು ಕಟ್ಟುವಂಥಾ ಅನುಭವ!
ನಿರ್ಮಲಾ ಎಲ್ಲರೊಡನೆ ಬೆರೆಯುವ ಸಲುವಾಗಿ ಮೆಲ್ಲನೇ ಹೊರಬರುವಾಗ ಅತ್ತೆ ಅನುರಾಧಳೊಡನೆ ಹೇಳುತ್ತಿರುವುದು ಅವಳ ಕಿವಿಗೆ ಬೀಳುತ್ತದೆ. “ಏನು ಹುಡುಗಿಯೋ! ಈ ವೇಷ ಬಿಟ್ಟು ಸೀರೆ ಉಟ್ಟುಕೊ ಅಂದರೆ ಕೇಳುವುದಿಲ್ಲ. ಅಷ್ಟಾದರೂ ಹೊಂದಿಕೊಳ್ಳಬಾರದೇ.”
ಪೂರ್ತಿಯಾಗಿ ಅರ್ಥವಾಗದಿದ್ದರೂ ತನ್ನ ಉಡುಪಿನ ಬಗ್ಗೆಯೇ ಈ ಮಾತುಕತೆ ಎಂದು ಅವಳಿಗೆ ಅರಿವಾಗದಿರಲಿಲ್ಲ.
ಅನುರಾಧ ತಾಯಿಯನ್ನು ಸಮಾಧಾನ ಪಡಿಸುವುದೂ ಅವಳ ಕಿವಿಗೆ ಬೀಳುತ್ತದೆ. “ಅದಕ್ಕೇನಮ್ಮ? ಮೊದಲಿನಿಂದಲೂ ಅಂಗಿ ಹಾಕಿ ರೂಢಿ. ಒಮ್ಮೆಲೇ ಸೀರೆ ಉಡೆಂದರೆ ಆಗುವುದೇ? ನನಗೀಗ ಸೀರೆ ಬಿಟ್ಟು ಬೇರೆ ಅಂಗಿ ತೊಡೆಂದರೆ ಸಾಧ್ಯವೇ? ಹಾಗೇ ಅದಕ್ಕೆಲ್ಲಾ ತಲೆಬಿಸಿ ಮಾಡಿಕೊಂಡರೆ ಆಗುವುದೇ? ಸ್ವಲ್ಪ ದಿನ ಕಳೆಯಿರಿ, ಆ ಮೇಲೆ ಎಲ್ಲಾ ಸರಿಯಾಗುತ್ತಾಳೆ.”
ಇವರ ಮಾತು ಕೇಳಿ ನಿರ್ಮಲಾಗೆ ತನ್ನ ಮೇಲೆ ಸಿಟ್ಟು ಬರುತ್ತದೆ. ನನ್ನದಾದರೂ ಎಂಥಾ ಬುದ್ಧಿ? ಸೀರೆ ಉಟ್ಟರೆ ನನ್ನ ಗಂಟೇನು ಹೋಗುತ್ತದೆ? ಜೀವನದಲ್ಲಿ ಹೊಂದಾಣಿಕೆ ಬೇಕು. ಅದೂ ನಾನು ಬೇರೆಯೇ ಧರ್ಮದವಳು. ಆ ಧರ್ಮವನ್ನೆ ಮರೆತು ನಾನಿಲ್ಲಿ ಒಂದಾಗಬೇಕು. ನಾನು ಎಂದಿಗೂ ಈ ಮನೆಯ ಸೊಸೆಯಾಗಿಯೇ ಇರಬೇಕಲ್ಲದೆ ಆ ಮನೆಯ ಮಗಳಾಗಿಯೇ ಉಳಿಯಬಾರದು.
ಈ ನಿರ್ಧಾರ ತಾಳಿದವಳೇ ನಿರ್ಮಲಾ ತಿರುಗಿ ತನ್ನ ಕೋಣೆಗೆ ಹೋಗಿ ಸೀರೆ ಉಟ್ಟುಕೊಂಡು ನಗುತ್ತಾ ಹೊರಬಂದಾಗ ಸುಶೀಲಮ್ಮನವರಿಗೆ ಗಲಿಬಿಲಿಯಾಗುತ್ತದೆ. ಅನುರಾಧ ಸಂತಸದಿಂದ ನಗುತ್ತಾ, “ಅತ್ತಿಗೆ, ನನಗಂತೂ ಪೂರ್ಣಿಮಾಳೇ ಬಂದು ನಿಂತಂತೆ ಆಯಿತು. ನಿಮಗೆ ಸೀರೆ ಚೆನ್ನಾಗಿ ಒಪ್ಪುತ್ತದೆ. ನನಗಿಂತ ಚೆನ್ನಾಗಿ ಸೀರೆ ಉಡುತ್ತೀರಿ ನೀವು. ಇನ್ನೇನು, ಪೂರ್ಣಿಮಾ ಬರೋ ಹೊತ್ತು. ಅವಳ ಜತೆಗೆ ಒಂದಿಷ್ಟು ಸುತ್ತಿಕೊಂಡಾದರೂ ಬನ್ನಿ, ಒಳಗೇ ಕೂತು ಬೇಸರವಾಗೋದಿಲ್ಲವೇ? ನಿರುಪಮಾ ಇನ್ನೂ ಚಿಕ್ಕ ಮಗೂನೇ. ಅವಳ ಕಂಪೆನಿಯೂ ನಿಮಗೆ ಸರಿಯಾಗಲಿಕ್ಕಿಲ್ಲ. ಅವಳಿಗೆ ಒಗ್ಗಿ ಕೊಳ್ಳುವುದೂ ಕಷ್ಟ, ಅಚಲನೂ ಅಷ್ಟೇ. ಇನ್ನೂ ಚಿಕ್ಕವರಂತಾಡುತ್ತಾನೆ. ಎಲ್ಲಾ ಚಿಕ್ಕವರಲ್ಲ? ಎಲ್ಲರ ಗಾಂಭೀರ ಅಣ್ಣನಿಗೆ ಬಂದಿದೆಯಲ್ಲಾ. ನೀವಾದರೂ ಅದನ್ನು ಸ್ವಲ್ಪ ಕಡಿಮೆ ಮಾಡಿ ನೋಡೋಣ.”
ನಿರ್ಮಲಾಗೆ ಏನು ಉತ್ತರಿಸಬೇಕೆಂದೇ ತಿಳಿಯೋದಿಲ್ಲ. ‘ಇವರೆಲ್ಲರ ಮಾತು ಸ್ವಲ್ಪವಾದರೂ ಆನಂದನಲ್ಲಿರುತ್ತಿದ್ದರೆ!’ ಎಂದಷ್ಟೇ ಯೋಚಿಸುತ್ತಾಳೆ.
ನಿರ್ಮಲಾ ಅನುರಾಧಾ ನಗುತ್ತಾ ಮಾತಾಡುವುದನ್ನು ನೋಡಿದ ಸುಶೀಲಮ್ಮ ಯೋಚಿಸುತ್ತಾರೆ. ‘ಸದಾ ಹೀಗೇ ಇರುವಂತಾದರೆ ಎಷ್ಟು ಚೆನ್ನಾಗಿರುತ್ತದೆ! ಆದರೆ ಅನುರಾಧಳಂತೆ ಮೈಚಳಿ ಬಿಟ್ಟು ಇವಳನ್ನು ಮಾತನಾಡಿಸಲು ನನಗೆಲ್ಲಿ ಆಗುತ್ತದೆ? ಹಾಗೆ ನೋಡಿದರೆ ನನ್ನ ಮನಸ್ಸು ಬರೇ ದುರ್ಬಲವೆಂದು ತೋರುತ್ತದೆ. ಎಲ್ಲಾ ಸುಲಭದಲ್ಲಿ ಸರಿತೂಗಿಸಿಕೊಂಡು ಹೋಗಲು ನನಗೆ ಗೊತ್ತಿಲ್ಲವೇನೊ? ನಾನೇನು ಜೀವನದ ಕಹಿ ಉಂಡವಳು ಅಲ್ಲವೇ? ಆದರೂ ನನ್ನ ಮನಸ್ಸು ಇನ್ನೂ ಪಕ್ವವಾಗಿಲ್ಲವೇನೋ? ಛಿ, ಈ ಮನಸ್ಸಿಗೆ ಬುದ್ಧಿ ಹೇಳಿ ಕಡಿವಾಣ ಹಾಕಿ ಇಟ್ಟುಕೊಳ್ಳಬೇಕು. ಅನು ಇಲ್ಲೇ ಕೆಲವು ದಿನಗಳಾದರೂ ಇರುತ್ತಿದ್ದರೆ ಪರಿಸ್ಥಿತಿ, ಪರಿಸರ, ಎಷ್ಟೋ ಸುಧಾರಿಸುತ್ತಿತ್ತು. ಈ ಹುಡುಗಿಯ ಬುದ್ದಿ ನನಗೇಕಿಲ್ಲ?
ಪೂರ್ಣಿಮಾ ಕಾಲೇಜಿನಿಂದ ಬಂದವಳು ಅತ್ತಿಗೆಯನ್ನು ನೋಡಿ ಖುಷಿ ಪಡುತ್ತಾಳೆ. “ಅತ್ತಿಗೆ ನೀವು ಹಾಕುವ ಬೇರೆ ಬೇರೆ ಉಡುಪುಗಳು ಅನುಕೂಲವಾಗಿರಬಹುದು. ಆದರೆ ಈ ಸೀರೆಯಲ್ಲಿ ನೀವಂತೂ ತುಂಬಾ ಚೆನ್ನಾಗಿ ಕಾಣುತ್ತೀರಿ. ಅಣ್ಣನೇನೂ ಹೇಳೋದಿಲ್ಲವೇ?”
“ಆ ಅಣ್ಣ ಹೇಳಿದ, ಇವಳು ಕೇಳಿದಳು.” ಸುಶೀಲಮ್ಮನೆಂದಾಗ ಅನುರಾಧಗೂ ಹಾಗೇ ಅನಿಸುತ್ತದೆ. ಅನುರಾಧ ತನ್ನಲ್ಲೇ ಪ್ರಶ್ನಿಸಿಕೊಳ್ಳುತ್ತಾಳೆ. “ಏನಂತ ಆನಂದಣ್ಣನನ್ನು ಮೆಚ್ಚಿ ಮದುವೆಯಾಗಿದ್ದಾಳೋ ಈ ಹುಡುಗಿ! ಮದುವೆಯಾದ ಮೇಲೂ ಆನಂದಣ್ಣ ಬದಲಾದ ಹಾಗೆ ಕಾಣಿಸೋದಿಲ್ಲ. ಅನುರಾಧ ಯೋಚನೆ ನಿಲ್ಲಿಸಿ ಪೂರ್ಣಿಮಾಳೊಡನೆ ಹೇಳುತ್ತಾಳೆ. “ಪೂರ್ಣಿ, ಅತ್ತಿಗೆಯೊಡನೆ ಒಂದು ಸುತ್ತು ತಿರುಗಾಡಿ ಬಾ, ಆ ಅಣ್ಣನನ್ನು ಕಾದರೆ ಅವರು ಕೋಣೆಯೊಳಗೇ ಕುಳಿತಿರಬೇಕಷ್ಟೇ.”
“ನೀನೇ ಹೋಗಕ್ಕಾ, ನನಗೆ ನಾಳೆ ಪರೀಕ್ಷೆ ಇದೆ. ಅಲ್ಲದೇ ಈಗ ನಡೆದೇ ಬಂದೆ. ಪುನಃ ಯಾರು ಹೋಗುತ್ತಾರೆ, ಅಣ್ಣ ಬಂದರೆ ಅವರಿಬ್ಬರೇ ಹೋಗಲಿ.”
ನಿರ್ಮಲಾಗೂ ಸುತ್ತಾಡುವ ಉತ್ಸಾಹವಿಲ್ಲದೆ, “ಬಿಡು ಅನುರಾಧ, ಹೊರಗೆಲ್ಲೂ ಹೋಗೋದು ಬೇಡ. ನಾವಿಲ್ಲೇ ಮಾತಾಡುತ್ತಾ ಇರುವಾ. ನನಗೂ ಹಾಗೆ ಹೋಗುವ ಉತ್ಸಾಹ ಎಲ್ಲಿದೆ?” ಎಂದು ಅವರಿಬ್ಬರ ಚರ್ಚೆಗೆ ಅವಕಾಶ ಕೊಡುವುದಿಲ್ಲ.
ರಾಮಕೃಷ್ಣಯ್ಯನವರು ಸಂಜೆಯ ಸುತ್ತಾಟ ಮುಗಿಸಿ ಬರುವಾಗ ಅತ್ತೆ, ಸೊಸೆ ಮಕ್ಕಳೆಲ್ಲಾ ಸುತ್ತು ಕೂಡಿ ಆರಾಮವಾಗಿ ಹರಟೆ ಹೊಡೆಯುವುದನ್ನು ನೋಡಿ, “ಏನಿದು ಮಹಿಳಾ ಸಮ್ಮೇಳನ? ಶಂಕರ ಎಲ್ಲಿ? ಅವನನ್ನ ಹೊರಗೆ ಕಳುಹಿಸಿ ನಿಮ್ಮದೇ ಪಟ್ಟಾಂಗವೇ” ಎಂದು ನಗುತ್ತಾ ಕೇಳುತ್ತಾರೆ.
‘ಭಾವ ಹೊರಗೆಲ್ಲೋ ಹೋಗಿದ್ದಾರೆ’ ಎಂದು ಪೂರ್ಣಿಮ ಉತ್ತರಿಸಿದಾಗ ರಾಮಕೃಷ್ಣಯ್ಯನವರು, “ಹೋಗದೇ ಅವನಾದರೂ ಈ ಹೆಂಗಸರ ಕೂಟದಲ್ಲಿ ಮಾಡುವುದಾದರೂ ಏನು?” ಎಂದು ಹೇಳುವಾಗ ಅವರ ಕಣ್ಣಿಗೆ ಅಚಲ ಬೀಳುತ್ತಾನೆ.
“ಅಲ್ಲಯ್ಯ ಅಚ್ಚು, ನೀನು ಯಾವಾಗ ಹುಡುಗಿಯಾದದ್ದು? ನೀನೂ ಅವರ ಮಧ್ಯೆ ಕೂತುಬಿಟ್ಟಿದ್ದೀಯಲ್ಲಾ?”
ಸುಶೀಲಮ್ಮ ಮನಬಿಚ್ಚಿ ನಗುತ್ತಾ, “ಬೇಕಾದರೆ ನೀವೂ ಬನ್ನಿ, ಹೆಂಗಸರ ಮಧ್ಯೆ ಹೇಗಾಗುವುದೆಂದು ನೋಡಿ.” ಅಂದಾಗ “ಆ ಶಿಕ್ಷೆ ಬೇಡಪ್ಪಾ” ಎನ್ನುತ್ತಾ ರಾಮಕೃಷ್ಣಯ್ಯನವರು ಕೈಕಾಲು ತೊಳೆಯಲು ಹೋಗುತ್ತಾರೆ.
ಅನುರಾಧ, ಶಂಕರ ಏಳೆಂಟು ದಿನ ಕಳೆದು ಡಿಲ್ಲಿಗೆ ಹೋಗಲು ಹೊರಟು ನಿಂತಾಗ ತಂದೆ ತಾಯಿ ತಂಗಿಯರಂತೇ ದುಃಖ ತುಂಬಿ ನಿಂತಳು ನಿರ್ಮಲಾ ಅನುರಾಧಳ ನಿರ್ಗಮನ ಎಲ್ಲರಲ್ಲೂ ಒಂದು ದೊಡ್ಡ ಶೂನ್ಯವನ್ನೇ ನಿರ್ಮಿಸಿತ್ತು. ಅವಳಿಲ್ಲಿರುವಾಗ ಎಲ್ಲದರಲ್ಲೂ ಅವಳ ಕೈಯಿತ್ತು. ಎಲ್ಲರಿಗೂ ಅವಳ ಸಲಹೆ ಬೇಕಿತ್ತು. ಎಲ್ಲರನ್ನೂ ಒಂದಾಗಿಸಿ ಮಾತಿಗೆಳೆಯುತ್ತಿದ್ದ ಅನುರಾಧ ಹೊರಟು ಹೋದ ಮೇಲೆ ಪುನಃ ಮನೆಯನ್ನೆಲ್ಲಾ ಮೌನವೇ ಆವರಿಸುತ್ತದೆ.
ರಾಮಕೃಷ್ಣಯ್ಯನವರು ಏನೋ ಕಳೆದು ಹೋದಂತೇ ಇರುತ್ತಿದ್ದರು. ಅವರಿಗೆ ಯಾವಾಗಲೂ ಅನುರಾಧಳ ಸಹಾಯ ಬೇಕಿತ್ತು. ಇನ್ನೆಲ್ಲಾ ಕೆಲಸಗಳನ್ನು ಪೂರ್ಣಿಮಾಳೇ ಮಾಡಬೇಕು. ಆದರೆ ಅನುರಾಧಳ ಅಚ್ಚುಕಟ್ಟುತನ ಬೇರೆ ಯಾವ ಮಕ್ಕಳಿಗಿದೆ? ಅವಳು ತಾಯಿಯಂತೆ. ಎಲ್ಲದರಲ್ಲೂ ಕ್ರಮವಿತ್ತು. ಇವರದ್ದೆಲ್ಲಾ ಅರ್ಧಂಬರ್ಧ ಕೆಲಸ. ಒಂದು ಕೆಲಸ ಹೇಳಿ ಎರಡನೇಯದ್ದು ಹೇಳಿದರೆ ಬೇಜಾರು ಪಡೋ ಮಕ್ಕಳು, ನಿರುಪಮಾಳಿನ್ನೂ ಮನೆಗೆ ಚಿಕ್ಕ ಮಗುವೇ. ಇದಕ್ಕೆ ಎಲ್ಲರ ಬೆಂಬಲ ಕೂಡಾ ಇದೆ. ಕೆಲವೊಮ್ಮೆ ಅಚಲನ ಶರ್ಟು ಹಾಕಿಕೊಂಡು ನಿಂತರಂತೂ ಅಚಲನಾರು ನಿರುಪಮನಾರು ಎಂದೇ ರಾಮಕೃಷ್ಣಯ್ಯನವರಿಗೆ ತಿಳಿಯುತ್ತಿರಲಿಲ್ಲ. ಎಷ್ಟೋ ಸಲ ವ್ಯತ್ಯಾಸ ತಿಳಿಯದೇ, ಮಕ್ಕಳ ತಂದೆ ಬೇಸ್ತು ಬಿದ್ದು ಸುಶೀಲಮ್ಮನ ಮೇಲೆ ಕೋಪ ತೋರಿಸಿದ್ದೂ ಉಂಟು. ‘ಯಾಕೆ ಅವರಿಬ್ಬರೂ ಒಂದೇ ರೀತಿಯ ಅಂಗಿ ಹೊಲಿಸೋದು? ಅವಳು ಈ ಅವತಾರದಲ್ಲಿ ಹುಡುಗಿಯೆಂದೂ ತಿಳಿಯೊದಿಲ್ಲ!’
ಇಂಥ ಸಂದರ್ಭಗಳಲ್ಲಿ ಅನುರಾಧಾಳೇ ತಂದೆಗೆ ಸಮಾಧಾನ ಹೇಳುವುದಿತ್ತು. “ಚಿಕ್ಕವಳು ಹಾಕಲಿ ಬಿಡಿ ಅಪ್ಪಾ. ಈಗ ಹಾಕದೇ ಇನ್ನಾವಾಗ ಹಾಕ್ತಾಳೆ? ಅವಳ ಪ್ರಾಯದವರು ಹಾಕೋ ವೇಷ ನೀವು ನೋಡಿಲ್ಲವೇ?”
ಮಗಳ ಮಾತಿನೆದುರು ರಾಮಕೃಷ್ಣಯ್ಯನವರ ಕೋಪ ತಣ್ಣಗಾಗುತ್ತಿತ್ತು. ಅಲ್ಲದೆ ಈಗಿನ ಹೆಣ್ಣು ಮಕ್ಕಳು ಹಾಕೋ ವೇಷ ಭೂಷಣಗಳನ್ನು ಅವರೂ ನೋಡದೆ ಇಲ್ಲ. ಕಾಲೇಜಿನಲ್ಲಿ ದಿನಾ ನೋಡಿ ನೋಡಿ ಅದರಲ್ಲಿ ಅವರಿಗೆ ವಿಚಿತ್ರ ಕಾಣಿಸುತ್ತಿರಲಿಲ್ಲ. ಮನೆಯಲ್ಲಿ ಮಗಳು ಮಾತ್ರ ಸ್ವಲ್ಪ ವ್ಯತ್ಯಾಸ ಕಂಡರೆ ಅವರಿಗೆ ತಿಳಿಯುತ್ತಿತ್ತು.
ಆದರೆ ಅನುರಾಧ ಹೇಳಿದ ಮೇಲೆ ಅವರೆಂದೂ ನಿರುಪಮಾಳ ಉಡುಗೆಯ ವಿಷಯದಲ್ಲಿ ತಲೆ ಹಾಕಿದವರಲ್ಲ. ಈ ವಿಷಯ ಮಾತ್ರವಲ್ಲ, ಮನೆಯ ಎಲ್ಲಾ ವಿಚಾರದಲ್ಲೂ ಅನುರಾಧಳ ಮಾತಿಗೆ ಅವರು ತುಂಬಾ ಬೆಲೆ ಕೊಡುತ್ತಿದ್ದರು.
*****
ಮುಂದುವರೆಯುವುದು