ಬದಲಾದ ವಾತಾವರಣ
ಮದುವೆಯ ನಂತರ ಮನೆಯ ತಿಳಿಯಾದ ವಾತಾವರಣದಲ್ಲಿ ಒಂದು ರೀತಿಯ ಬಿಗಿತ ಕಂಡುಬರುತ್ತಿತ್ತು. ಎಲ್ಲರ ಮೌನದ ಮಧ್ಯೆ ತಮಾಷೆ ಬೆರೆಸುತ್ತಾ ಸುತ್ತುತ್ತಿದ್ದವನು ಅಚಲ ಮಾತ್ರ. ತಾಯಿಯ ಮಾನಸಿಕ ಆಂದೋಲನವನ್ನು ಅರಿಯುವ ವಯಸ್ಸು ಅವನದಲ್ಲ. ತಂದೆಯ ನಿರ್ವಿವಾದದ ಹಿಂದೆ ಅಡಗಿರೋ ಸೋಲೂ ಅವನಿಗೆ ತಿಳಿಯುವುದು ಸಾಧ್ಯವಿಲ್ಲ. ಕಾಲೇಜಿಗೆ ಹೋಗುತ್ತಿರುವ ಹುಡುಗನಾದರೂ ಅವನಲ್ಲಿ ಹುಡುಗತನವಿನ್ನೂ ಮಾಯವಾಗಿಲ್ಲ. ಚಿಕ್ಕ ಮಕ್ಕಳಂತೇ ಈಗಲೂ ಇದ್ದಾನೆ. ಅತ್ತಿಗೆ ಎನಿಸುವವಳೊಬ್ಬಳು ಹೊಸತಾಗಿ ಮನೆಗೆ ಬಂದಿದ್ದಾಳೆ. ಅಷ್ಟೆ ಗೊತ್ತು ಅವನಿಗೆ ಅವಳು ಯಾರು? ಹೇಗೆ? ಏನು? ಎನ್ನುವ ಜಿಜ್ಞಾಸೆ ಅವನಿಗಿಲ್ಲ. ಪ್ರೀತಿಯ ಅಕ್ಕನಿಗೆ ಮದುವೆಯಾಗಿ ಅವಳು ಮನೆ ಬಿಟ್ಟು ಹೋಗುವಾಗ ಅವನಿಗೆ ಏನೋ ಕಳೆದುಕೊಂಡಂತೆ ಬೇಸರವಾಗಿತ್ತು. ಅಣ್ಣನ ಹತ್ತಿರ ಅವನಿಗೆ ಮೊದಲಿನಿಂದಲೂ ಹೆಚ್ಚಿನ ಸಲುಗೆಯಿಲ್ಲ. ಅವರಿಬ್ಬರ ಮಧ್ಯೆ ವಯಸ್ಸಿನ ಅಂತರವೂ ಸುಮಾರಿತ್ತು. ಅದೂ ಅಲ್ಲದೆ ಆನಂದ ಯಾರಲ್ಲೂ ಬೆರೆಯುವ ಜಾಯಮಾನದವನಲ್ಲ. ಹಾಗಾಗಿ ಅಣ್ಣನೆಂದರೆ ಪ್ರೀತಿಗಿಂತ ಜಾಸ್ತಿ ಹೆದರಿಕೆ.
ರಾಮಕೃಷ್ಣಯ್ಯನವರದ್ದು ಯಾವಾಗಲೂ ಗಂಭೀರ ನಡವಳಿಕೆ, ಯಾರ ಹತ್ತಿರವೂ ಹೆಚ್ಚ ಇಲ್ಲ, ಕಡಿಮೆಯೂ ಇಲ್ಲ ಎನ್ನುವಂತೆ. ಅದರಿಂದಲೇ ಅವರು ಕಾಲೇಜಿನಲ್ಲಿ ಅಷ್ಟು ಆತ್ಮೀಯರಾದದ್ದು, ಪ್ರಖ್ಯಾತರಾದದ್ದು. ಅನುರಾಧಳೊಬ್ಬಳನ್ನು ಬಿಟ್ಟರೆ ಅವರು ಯಾರಲ್ಲೂ ಏನೂ ಕೆಲಸ ಮಾಡಿಸಿದವರಲ್ಲ. ಅವರ ಎಲ್ಲಾ ಕೆಲಸಗಳಿಗೂ ಅನುರಾಧಳೇ ಬೇಕು. ಈಗ ಅವಳಿಲ್ಲದ್ದು ಅವರಿಗೆ ತುಂಬಾ ಅಡಚಣೆ ತಂದಿತ್ತು. ಆಗಾಗ ಹೆಂಡತಿಯನ್ನು ಕೂಗುವುದೂ ಅವರಿಗೆ ಅಷ್ಟು ಸುಲಭವಾಗುತ್ತಿರಲಿಲ್ಲ. ಮನೆಕೆಲಸದಲ್ಲಿಯೇ ಸುಸ್ತಾಗುತ್ತಿರುವ ಹೆಂಡತಿಯಿಂದ ತಮ್ಮ ಕೆಲಸ ಮಾಡಿಸುವ ಮನಸ್ಸೂ ಅವರಿಗೆ ಬರುತ್ತಿಲ್ಲ. ಅದೂ ಈಗೀಗ ಸುಶೀಲಮ್ಮನ ಆರೋಗ್ಯವೂ ಸರಿಯಿರುತ್ತಿರಲಿಲ್ಲ. ಮುಟ್ಟು ನಿಲ್ಲುವ ತೊಂದರೆ, ಇದರಿಂದಾಗಿ ಯಾವಾಗಲೂ ಸುಸ್ತು, ತನ್ನ ಚಿಕ್ಕಪುಟ್ಟ ಕೆಲಸಕ್ಕೆ ಸೊಸೆಯನ್ನು ಕರೆಯುವುದೂ ಅವರಿಗೆ ಸಾಧ್ಯವಾಗುತ್ತಿಲ್ಲ. ಹೊರಗೆ ದುಡಿಯುವ ಹುಡುಗಿ ಬೇರೆ. ಬಾಯಲ್ಲಿ ಹೆಂಡತಿಗೆ ಹೇಳಿದಷ್ಟು ಸುಲಭದಲ್ಲಿ ಸೊಸೆಯನ್ನು ಒಗ್ಗಿಸಿಕೊಳ್ಳುವುದು ರಾಮಕೃಷ್ಣಯ್ಯನವರಿಗೆ ಸಾಧ್ಯವಾಗಿಲ್ಲ. ಹಲವು ಬಾರಿ ಮಗ ತನ್ನ ಇಚ್ಛೆ ಮೀರಿದನಲ್ಲ, ಎನ್ನುವ ನೋವೇ ಅವರ ಮತ್ತು ಸೊಸೆಯ ಮಧ್ಯೆ ಏರ್ಪಟ್ಟ ಅಂತರಕ್ಕೂ ಕಾರಣವಾಗಿರಬಹುದೇನೋ ಎಂದು ಅವರೇ ವಿವೇಚಿಸಿದ್ದೂ ಉಂಟು. ಇನ್ನು ಪೂರ್ಣಿಮಾ ನಿರುಪಮಾ, ಅವರಿಗೆ ಏನಾದರೂ ಕೆಲಸ ಮಾಡಲು ಬರುವುದೇ ಇಲ್ಲವೇನೋ ಎನ್ನುವ ಸಂಶಯ ಅವರಿಗೆ ಇತ್ತು.
ನಿರ್ಮಲಾಳಿಗೋ ಎಲ್ಲಾ ಒಂದೇ. ಹೆತ್ತ ತಂದೆ ತಾಯಿಯೊಡನಾಗಲೀ ಒಡಹುಟ್ಟಿದ ವಾಚಾಳಿ ತಮ್ಮನೊಡನಾಗಲೀ ತಂಗಿಯವರೊಡನಾಗಲೀ ಹೆಚ್ಚು ಬೆರೆಯದ ಗಂಡನೆದುರು ಮನೆಯವರೆಲ್ಲರೊಡನೆ ಸಲಿಗೆ ಬೆಳೆಸಿ ಒಂದಾಗುವ ರೀತಿಯೂ ಅವಳಿಗೆ ತಿಳಿಯದು. ತನ್ನ ಮನೆಯ ರೀತಿಯೇ ಬೇರೆ. ಅಲ್ಲಿ ಯಾರಲ್ಲೂ ಯಾವುದಕ್ಕೂ ಸಂಕೋಚವಿಲ್ಲ. ತಂದೆ-ತಾಯಿಯರೂ ಸ್ನೇಹಿತರಂತೇ. ಇಲ್ಲಿ ಭಾಷೆಯದ್ದೂ ತೊಂದರೆ, ಒಂದೆರಡು ಕನ್ನಡ ಶಬ್ದ ಬಿಟ್ಟರೆ ಬೇರೇನೂ ತಿಳಿಯದು ಅವಳಿಗೆ ಎಲ್ಲರೂ ಕನ್ನಡ ಮಾತನಾಡುತ್ತಿದ್ದರೆ ಅದರ ಮಧ್ಯೆ ತನ್ನ ಇಂಗ್ಲೀಷ್ ಅವಳಿಗೇ ಸರಿ ಕಾಣುತ್ತಿರಲಿಲ್ಲ. ಆನಂದ ಮನೆಗೆ ಬರುವುದೂ ಏಳು-ಎಂಟು ಗಂಟೆಯ ಮೇಲೆಯೇ ಹಾಗಿರುವಾಗ ಹೇಗೆ ಯಾರೊಡನೆ ಹೊತ್ತು ತೆಗೆಯೋದೆಂದೂ ಅವಳಿಗೆ ತಿಳಿಯುತ್ತಿರಲಿಲ್ಲ. ಸಂಜೆಯ ಹೊತ್ತು ಕೋಣೆಯೊಳಗೇ ಕೂತು ಅವಳಿಗೆ ಹುಚ್ಚು ಹಿಡಿದ ಹಾಗಾಗುತ್ತಿತ್ತು. ಗಂಡನಿಗೆ ಹೇಳಿದರೂ ಇದೆಲ್ಲಾ ಅರ್ಥವಾಗದ ಪರಿಸ್ಥಿತಿ. ಹೇಳಿದರೆ “ಅಮ್ಮ, ಪೂರ್ಣಿಮಾ, ನಿರುಪಮಾ, ಅಚಲ ಎಲ್ಲಾ ಇಲ್ಲವೇ ಮನೆಯಲ್ಲಿ ನೀನೊಬ್ಬಳೇ ಇರುವುದೇನೂ ಅಲ್ಲವಲ್ಲಾ” ಎನ್ನುತ್ತಿದ್ದ. ಮೆಚ್ಚಿ ಮದುವೆಯಾಗಿದ್ದರೂ ಈ ರೀತಿಯ ವಾತಾವರಣದಿಂದ ಅವಳಿಗೂ ಬೇಸರವೆನಿಸಿತ್ತು. ಪ್ರೀತಿ ಮಾಡುವಾಗ ಇದೆಲ್ಲಾ ಯೋಚನೆ ಯಾವ ಗಂಡು ಹೆಣ್ಣಿಗೆ ಬರುತ್ತದೆ? ಆಗ ಬರೇ ಪ್ರೀತಿಯೊಂದೇ ಕಾಣೋದು!
ನಿರ್ಮಲಳ ಸಪ್ಪೆ ಮುಖ ಕಂಡಾಗಲೆಲ್ಲಾ ಸುಶೀಲಮ್ಮ ಯೋಚಿಸುತ್ತಿದ್ದರು. ತನ್ನ ಮಗನೇ ಮೌನ ಮೂರ್ತಿ! ಯಾರನ್ನೂ ಸರಿಯಾಗಿ ಮಾತಾಡಿಸುವವನಲ್ಲ. ಈಗಲೂ ಅಷ್ಟೇ. ಹೆಂಡತಿಯ ಜೊತೆಗೂ ವಿಪರೀತ ಮಾತುಕತೆ ಇದ್ದ ಹಾಗಿಲ್ಲ, ಇಂಥಾ ಮನುಷ್ಯ ಹೇಗೆ ಇವಳನ್ನು ಹಚ್ಚಿಕೊಂದು ಮದುವೆಯಾದ? ಇವಳಾದರೂ ಈ ಮಾತು ಬಾರದವನನ್ನು ಮೆಚ್ಚಿದ್ದು ಹೇಗೆ? ಇದಕ್ಕೇ ಹೇಳುವುದಿರಬೇಕು ಪ್ರೀತಿ ಕುರುಡೆಂದು! ಎಷ್ಟಾದರೂ ಅವರಿಬ್ಬರೂ ಮೌನವಾಗಿ ಕೋಣೆಯೊಳಗೆ ಹೊತ್ತು ತೆಗೆಯುವುದನ್ನು ನೋಡುವಾಗ ಸುಶೀಲಮ್ಮನಿಗೆ ಬೇಸರವಾಗುತ್ತಿತ್ತು. ಮೊನ್ನೆ ಮೊನ್ನೆ ಮದುವೆಯಾದವರು ಇರುವ ರೀತಿಯೇ ಇದು? ನಗು ನಗುತ್ತಾ ಇರಬೇಕಾದವರು ಈಗಲೇ ಹೀಗೆ ಮೂಲೆ ಸೇರಿದರೆ ನಾಳೆ ಇವರ ಜೀವನದಲ್ಲಿ ಕಟ್ಟಿಟ್ಟ ಬುತ್ತಿಯಾದರೂ ಏನು? ನಾವು ಮೂವತ್ತು ವರುಷದ ಹಿಂದೆ ಹೇಗಿದ್ದೆವು! ಎಷ್ಟೊಂದು ಉತ್ಸಾಹವಿತ್ತು ನಮ್ಮಲ್ಲಿ! ಇವರಿಗೆ ಈಗಲೇ ಯಾಕೆ ಈ ನಿರಾಸಕ್ತಿ? ಎಂದು ನೊಂದುಕೊಳ್ಳುತ್ತಿದ್ದರು.
ಇವರ ಕುರಿತು ಯೋಚಿಸಿದಾಗಲೆಲ್ಲಾ ಅವರಿಗೆ ಅನುರಾಧಾಳ ನೆನಪು ಕಾಡುತ್ತಿತ್ತು. ಹೇಗಿದ್ದಾಳೋ ಹುಡುಗಿ. ಮನೆಬಿಟ್ಟು ಗೊತ್ತಿಲ್ಲ ಅವಳಿಗೆ! ಆದರೂ ಹೊಸ ಜನರ ಮಧ್ಯೆ ಹೊಂದಿಕೊಳ್ಳುವುದು ಅವಳಿಗೇನೂ ಕಷ್ಟದ ಕೆಲಸವಲ್ಲ. ಅವಳಲ್ಲಿ ಜೀವನದ ಬಗ್ಗೆ ಆಸಕ್ತಿಯಿದೆ. ಜೀವಿಸೋ ಉತ್ಸಾಹವಿದೆ. ಕಾಗದದಲ್ಲಿ ಬರೆಯುತ್ತಾಳೆ. ಒಳ್ಳೆಯ ಜನರ ಮಧ್ಯೆ ಬಂದು ಸೇರಿರುವುದರಿಂದ ತನಗೆ ಯಾವ ತೊಂದರೆಗಳೂ ಇಲ್ಲವೆಂದು. ಈ ಒಂದು ತಿಂಗಳು ಹೀಗೆ, ಮತ್ತೆ ಗಂಡನೊಡನಷ್ಟೇ ಹೊಂದಾಣಿಕೆ, ಡಿಲ್ಲಿಗೆ ಹೋದರೆ ಅವರೇ, ಆಗ ಹೊಸ ಜವಾಬ್ದಾರಿಗಳು. ಹುಡುಗನೇನೋ ಒಳ್ಳೆಯವನೇ. ಆನಂದನಂತೆ ತೀರ ಗಂಭೀರನೂ ಅಲ್ಲ. ಚೆಲ್ಲೂ ಅಲ್ಲ. ಮಾತು ಸಾಕಷ್ಟಿದೆ. ಉತ್ಸಾಹದಲ್ಲಿ ಅನುರಾಧಾಳನ್ನು ಮೀರಿಸುವಂತಿದ್ದಾನೆ. ಜೋಡಿಯೂ ಹೇಳಿ ಮಾಡಿಸಿದ ಹಾಗೆ. ನೋಡುವ ಕಣ್ಣಿಗೆ ತೃಪ್ತಿ ಕೊಡೋ ಜತೆ! ಮದುವೆಯಾಗಿ ಹೋಗುವಾಗ ದುಃಖ ನುಂಗಲು ಸಾಧ್ಯವಾಗದೇ ಬಿಕ್ಕಳಿಸಿದ ಅನುರಾಧಳನ್ನು ಎಷ್ಟು ಚೆನ್ನಾಗಿ ಸಮಾಧಾನಿಸಿದ್ದ! ಅವಳ ಬೆನ್ನು ತಟ್ಟುತ್ತಾ “ಅಳಬೇಡ, ನಿನ್ನ ಅಳುವಿನಲ್ಲಿ ನಾನೂ ಪಾಲುದಾರ ಖಂಡಿತಾ. ನನ್ನ ಸಂತಸದಲ್ಲಿ ನೀನೂ ಪಾಲುದಾರಳಾಗಬೇಡ್ವೆ? ನಗು ಸ್ವಲ್ಪ!” ಎಂದು, ಕೈಹಿಡಿದ ಒಂದು ಗಳಿಗೆಯಲ್ಲೇ ಒಂದಾದ ಜೋಡಿ. ಮಾನಸಿಕ ಬಂಧನ ಬಲವಾದರೆ ಜೀವನದಲ್ಲೇಳುವ ಯಾವ ಬಿರುಗಾಳಿಯೂ ಅದಕ್ಕೆ ತಟ್ಟದು. ಅದಕ್ಕೆ ಮದುವೆಯ ಮೊದಲಿನ ಪ್ರೀತಿಯೇ ಅಗತ್ಯವಿಲ್ಲ. ಆ ಇನ್ನೊಂದು ಜೀವ ಸಂಪೂರ್ಣ ತನ್ನದೇ ತಾನು ಆ ಇನ್ನೊಂದು ಜೀವದ ಸಂಪೂರ್ಣವಶವಾಗಿದ್ದೇನೆ ಎನ್ನೋಭಾವನೇನೇ ಮುಖ್ಯ.
ಅನುರಾಧಳ ವ್ಯಕ್ತಿತ್ವ ಹಾಗೇ. ಪಾದರಸದಂತೆ ಯಾವ ಪರಿಸರಕ್ಕೂ ಕ್ಷಣದಲ್ಲಿ ಹೊಂದಿಕೊಳ್ಳುವ ಸಾಮರ್ಥ್ಯ ಅವಳಿಗಿದೆ. ಬರೇ ನೋಟದಿಂದಲೇ ಸಂದರ್ಭದ ಅರಿವು ಮಾಡಿಕೊಳ್ಳುವ ಜಾಣತನವಿದೆ. ಅವಳ ಜೀವನ ರಸಮಯವಾಗುವುದರಲ್ಲಿ ಸುಶೀಲಮ್ಮನಿಗಾಗಲಿ, ರಾಮಕೃಷ್ಣಯ್ಯನವರಿಗಾಗಲಿ, ಸಂಶಯವಿಲ್ಲ. ಅವರಿಬ್ಬರಿಗೂ ಮಗನದ್ದೇ ಯೋಚನೆ. ಆನಂದ, ನಿರ್ಮಲರ ಮಧ್ಯೆ ಮಾತಿಲ್ಲ. ಕತೆಯಿಲ್ಲ. ವಿನೋದವಂತೂ ಇಲ್ಲವೇ ಇಲ್ಲ. ಇಬ್ಬರೂ ಕೋಣೆಯೊಳಗೇನೊ ಮೌನ ತಪಸ್ಸು ಮಾಡ್ತಿದ್ದಾರೆಯೇ? ಹೊರಗಿದ್ದ ನಮ್ಮ ಮನದಲ್ಲೂ ಅಸಮಾಧಾನದ ಹೊಗೆಯಾಡುತ್ತಿದೆ. ಛಿ! ಈ ಹೊಗೆ ಹಬ್ಬುತ್ತಾ ಹೋದರೆ ಎಲ್ಲರಿಗೂ ಉಸಿರು ಕಟೀತು! ಇದನ್ನು ತಾನೇ ಜಾಡಿಸಿ ಓಡಿಸಿ ಎಲ್ಲರೂ ಸರಾಗವಾಗಿ ಉಸಿರಾಡುವಂತೆ ಮಾಡಬೇಕು ಎಂದು ಸುಶೀಲಮ್ಮ ಯೋಚಿಸುವುದು ಇದು ಹನ್ನೆರಡನೇ ಬಾರಿ. ಹೀಗೆ ಯೋಚನೆ ಬಂದಾಗಲೆಲ್ಲಾ ಅವರು ನಿರ್ಧರಿಸಿಕೊಳ್ಳುತ್ತಿದ್ದರು. “ಛಿ! ಸುಮ್ಮನೆ ನನ್ನ ನೆಮ್ಮದಿಯನ್ನು ನಾನೇ ಹಾಳು ಮಾಡುತ್ತಿದ್ದೇನೆ. ಸೊಸೆ ಯಾರಾದರೇನು? ನಮ್ಮವಳೇ ಅಲ್ಲವೆ? ನಮ್ಮ ಮನೆಗೆ ಬಂದ ಮೇಲೆ ಅವಳು ನಮ್ಮ ಸ್ವತ್ತು. ನಾನೇ ಎಲ್ಲಾ ಸರಿಮಾಡಬೇಕು. ಹಿರಿಯಳಾಗಿ ಕಣ್ಣು ಮುಚ್ಚಿ ಕುಳಿತಿರಬಾರದು. ಮಕ್ಕಳಿಗೇನು ತಿಳಿಯುತ್ತದೆ?”
ಸುಶೀಲಮ್ಮನೂ ಓದಿದ ಹೆಂಗಸೇ, ಇಂಗ್ಲೀಷ್‌ನಲ್ಲಿ ಸರಾಗವಾಗಿ ಮಾತನಾಡಬಲ್ಲರು. ಎಷ್ಟೋ ಆಧ್ಯಾತ್ಮಿಕ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಂಡವರು. ವಿಶಾಲ ಹೃದಯದವರು. ಆದರೆ ಈ ಆಂತರಿಕ ಭಾವನೆಗಳೇ ವಿಚಿತ್ರ ಅಲ್ಲಿ ಹುದುಗಿ ಕುಳಿತಿರುವ ಅಸಹನೆ, ಅಸಮಾಧಾನ, ಹೊರಗೆ ಬರುವುದಿಲ್ಲ ಎನ್ನುವ ಹಾಗೆ ಹಟ ಕಟ್ಟಿ ಕುಳಿತ ಹಾಗಿದೆ. ಅದನ್ನು ಹೊರಗೆ ಹೊಡೆದೋಡಿಸಬೇಕೆಂಬ ಪ್ರಯತ್ನ ಸುಶೀಲಮ್ಮ ಮಾಡುತ್ತಲೇ ಇದ್ದಾರೆ. ಗಂಡನನ್ನು ನೋಡಿದಾಗಲೆಲ್ಲಾ ಅವರ ಪ್ರಯತ್ನ, ನಿರ್ಧಾರ ಬಲವಾಗುತ್ತದೆ. ಅವರು ಎಲ್ಲಾ ಹೊಟ್ಟೆಯೊಳಗೆ ಹಾಕಿಕೊಂಡು ಸಮಾಧಾನದಿಂದಿರುವಾಗ ನನಗೇಕೆ ಈ ಕೊರಗು? ಅವರು ಎಲ್ಲರನ್ನು ಸ್ಥಿತಪ್ರಜ್ಞರಂತೆ ನೋಡುತ್ತಾರೆ. ಅವರದ್ದು ಮೌನ ಪ್ರೇಕ್ಷಣೆ! ಜೀವನವನ್ನು ಅವರಷ್ಟು ನಾನು ಅರ್ಥ ಮಾಡಿಕೊಂಡಿಲ್ಲವೇನೋ ಎನ್ನುವ ಸಂಶಯ ಸುಶೀಲಮ್ಮನಿಗೆ ಆಗಾಗ ಬರುತ್ತಿತ್ತು.
ಮನಸ್ಸು ಈ ರೀತಿ ದ್ವಂದ್ವಕ್ಕೊಳಗಾದಾಗ ಅವರಲ್ಲಿ ವಿಶ್ಲೇಷಣೆ ತೀವ್ರವಾಗುತ್ತಿತ್ತು. ‘ಹಿಂದೂ ಧರ್ಮ ವಿಶಾಲ ಮನೋಭಾವನೆ ಉಳ್ಳದ್ದು, ಅದರಲ್ಲಿ ಮೂಲತಃ ಜಾತಿಮತ ಭೇದವೆಲ್ಲಿತ್ತು? ಏನೋ ದಿನ ಹೋದಂತೆ, ಅನುಕೂಲಕ್ಕೆ ತಕ್ಕಂತೆ ಜನರೇ ನಿರ್ಮಿಸಿದ ಕೆಲವು ಪಂಗಡಗಳೇ ಮತ್ತೆ ಜಾತಿಗಳಾಗಿ ರೂಪುಗೊಂಡಿರಬೇಕು. ಎಲ್ಲಾ ಧರ್ಮಗಳಿಗೂ ಪುರಾತನ ಸನಾತನ ಧರ್ಮ ಹಿಂದೂ ಧರ್ಮವೇ ಆದುದರಿಂದ ಬೇರೆಲ್ಲಾ ಧರ್ಮಗಳು ಅದರ ಬೇರೆ ಬೇರೆ ಗೆಲ್ಲುಗಳೇ ಆಗಿರಬಾರದೇಕೆ? ನಿರ್ಮಲಾ ಆಂಗ್ಲೋ ಇಂಡಿಯನ್ನ ಆದರೇನು? ನಮ್ಮೆಲ್ಲರ ಭಾರತೀಯ ರಕ್ತವೇ ಅವಳ ಧಮನಿಗಳಲ್ಲಿ ಹರಿಯುತ್ತಿರುವುದಲ್ಲ? ಮನಸ್ಸು ಮಾಡಿದರೆ ಅವಳಲ್ಲಿ ಭಾರತೀಯ ಸಂಸ್ಕೃತಿಯನ್ನು ತುಂಬಿಸಲಾಗಲಿಕ್ಕಿಲ್ಲವೇ? ಹಿಂದೂವನ್ನು ಮೆಚ್ಚಿ ಮದುವೆಯಾದ ಮೇಲೆ ಹಿಂದೂವಿನಂತೇ ಇರಬೇಕೆಂಬ ಮನಸ್ಸು ಅವಳಲ್ಲಿರಲಿಕ್ಕಿಲ್ಲವೆ? ಅಥವಾ ಆನಂದನನ್ನೇ ಅವರ ಧರ್ಮಕ್ಕೆಳೆಯುವ ಇಚ್ಛೆ ಏನಾದರೂ ಇರಬಹುದೇ? ಹಾಗಿರಲಿಕ್ಕಿಲ್ಲ. ಹಾಗೇನಾದರೂ ಇದ್ದರೆ ಅವಳು ಹಿಂದೂ ಪದ್ಧತಿಯಂತೆ ಮದುವೆಯಾಗಲು ಒಪ್ಪುತ್ತಿದ್ದಳೇ? ಅವಳನ್ನು ಸರಿಯಾಗಿ ಅರಿಯುವ ಪ್ರಯತ್ನ ಮಾಡದೆ ನಾನೇ ಅವಳನ್ನು ನನ್ನಿಂದ ದೂರ ಇಡುತ್ತಿದ್ದೇನೆಯೇ?”
ಸುಶೀಲಮ್ಮನ ಯೋಚನೆಗಳು ಹೀಗೆ ಸಾಗಿದಾಗ ಅವರಿಗೆ ಮೂಡುವ ಸಮಾಧಾನ ಅಳೆಯಲೂ ಸಾಧ್ಯವಾಗದ್ದು. ಮನದಲ್ಲಿ ಸಮಾಧಾನ ಮೂಡಿದ ಕೂಡಲೇ ದೃಢವಾದ ನಿರ್ಧಾರ ಮಾಡಿಕೊಂಡಂತೆ ಒಳಗೇ ಇದ್ದ ಸೊಸೆಯನ್ನು ಕರೆದು ಹೇಳುತ್ತಾರೆ. “ನಿರ್ಮಲಾ, ನಾನು ಹೀಗೆಲ್ಲಾ ಹೇಳುತ್ತೇನೆಂದು ಬೇಜಾರುಪಟ್ಟುಕೊಳ್ಳಬೇಡ. ನನ್ನ ಯೋಚನೆಗಳು ನಿನ್ನ ಯೋಚನೆಗಳಿಗಿಂತ ಭಿನ್ನವಾಗಿದ್ದರೆ ವಿಚಿತ್ರವೇನೂ ಇಲ್ಲ. ಅದು ಒಂದೇ ಆಗುವುದೂ ಸಾಧ್ಯವಿಲ್ಲ. ಆದರೆ ನಮ್ಮ ಸ್ವಂತ ಅಭಿಪ್ರಾಯಗಳು ಏನಿದ್ದರೂ ಕೆಲವೊಮ್ಮೆ ಪರಿಸರಗಳಿಗೆ ತಕ್ಕಂತೆ ನಮ್ಮ ಯೋಚನೆಗಳನ್ನು, ಅನಿಸಿಕೆಗಳನ್ನು ತಿದ್ದಿಕೊಳ್ಳಲೇಬೇಕಲ್ಲ? ನೀನು ಈ ಪ್ಯಾಂಟ್, ಶರ್ಟು, ಅಂಗಿಗಳನ್ನು ಕೆಲವೊಂದು ಸಂದರ್ಭಗಳಲ್ಲಾದರೂ ಬಿಟ್ಟು ಲಕ್ಷಣವಾಗಿ ಸೀರೆ ಉಡಲು ಕಲಿಯಮ್ಮ. ನಮ್ಮ ಮನೆಯ ಸೊಸೆ ನೀನು, ಹೊರಗಿನವರ ಕಣ್ಣಿಗೆ ನಮ್ಮವಳಾಗಿಯೇ ಕಾಣಬೇಕಲ್ಲದೇ ಬೇರೆಯಾಗಿ ಯಾಕೆ ಕಾಣಬೇಕು. ಲಕ್ಷಣವಾಗಿ ಸೀರೆ ಉಟ್ಟು ಹಣೆಗೆ ಕುಂಕುಮವಿಟ್ಟುಕೊಂಡರೆ ನಮಗೆಲ್ಲರಿಗೂ ನೀನು ನಮ್ಮವಳೇ ಎನ್ನುವ ಭಾವನೆ ಬರುತ್ತದೆ. ನಿನಗೂ ನಮ್ಮಲ್ಲಿ ಒಂದಾಗಿ ಬೆರೆಯೋದು ಸಾಧ್ಯವಾಗುತ್ತದೆ. ನೀನು ಬೇರೆ ಉಡುಪು ಹಾಕುವುದನ್ನು ನಾನು ವಿರೋಧಿಸುತ್ತೇನೆಂದು ಖಂಡಿತಾ ಯೋಚಿಸಬೇಡ. ಒಮ್ಮೊಮ್ಮೆ ಉಪಯೋಗಿಸು. ಆದರೆ ಈ ಉಡುಪುಗಳಲ್ಲಿ ಭಾರತೀಯತೆ ಖಂಡಿತಾ ಇಲ್ಲ. ಅನುಕೂಲವಾಗಿರಬಹುದು ಅಷ್ಟೇ.”
ನಿರ್ಮಲಾಳ ಒಂದು ಮನಸ್ಸು ಪ್ರತಿಭಟನೆ ತೋರಿದರೂ ಒಂದು ಕ್ಷಣ ಯೋಚಿಸುತ್ತಾಳೆ. “ಅತ್ತೆ ಹೇಳುವುದರಲ್ಲಿ ತಪ್ಪೇನಿದೆ? ನಾನು ಹೊರಗಿನವಳೆಂಬ ಭಾವನೆ ಹೋದರೆ ಅವರೆಷ್ಟು ಪ್ರೀತಿ ಮಾಡಲಿಕ್ಕಿಲ್ಲ? ಎಲ್ಲಾ ಅತ್ತೆಯರಂತೆ ತನ್ನ ಅತ್ತೆ ಖಂಡಿತಾ ಇಲ್ಲ. ಅವರ ಮುಖ ನೋಡಿದರೆ ಏನೋ ಒಂದು ರೀತಿಯ ಗೌರವ ಭಾವನೆ ಉಕ್ಕಿ ಬರುತ್ತದೆ. ಅವರ ಮುಖದಲ್ಲಿ ತೃಪ್ತ ಕಳೆಯಿದೆ. ಪ್ರಾಯ ಐವತ್ತರ ಗಡಿಗೆ ಹತ್ತಿರವಾಗಿದ್ದರೂ ಆ ಮುಖದಲ್ಲಿನ ಮುಗ್ಧತೆ ಮಾಯವಾಗಿಲ್ಲ. ಅವರ ಮನಸ್ಸಿಗೆ ನನ್ನಿಂದಾಗಿ ಬೇಸರ ಯಾಕಾಗಬೇಕು? ಈ ಮನೆಗೆ ಯಾರಾದರೂ ಬಂದರೆ ನನ್ನನ್ನು ನೋಡುವಾಗ, ಎಲ್ಲರ ಮುಖದಲ್ಲೂ ಪ್ರಶ್ನಾರ್ಥಕ ಚಿಹ್ನೆಯೇ. ನಾನು ಸೀರೆ ಉಟ್ಟುಕೊಂಡು ಎಲ್ಲರ ಹಾಗಿದ್ದರೆ ಆ ದೃಷ್ಟಿಯಾದರೂ ತಪ್ಪಬಹುದು. ಮನೆಯಲ್ಲೂ ಎಲ್ಲರಿಗೂ ಖುಷಿಯಾಗಬಹುದು. ಮಾವನ ಯೋಚನೆಗಳೇನೆಂದೂ ತಿಳಿಯುವ ಹಾಗಿಲ್ಲ. ಆದರೆ ಆನಂದರೆಂದೂ ನಿನ್ನ ಈ ವೇಷ ಬಿಟ್ಟು ಸೀರೆ ಉಡೆಂದು ಒಂದು ಮಾತು ಈವರೆಗೂ ಹೇಳಿಲ್ಲ. ಅವರು ಒಂದು ಮಾತು ಹೇಳಿದ್ದರೆ ನಾನು ಮದುವೆಯ ಸಮಯದಲ್ಲಿ ಇಷ್ಟೊಂದು ಉಡುಪುಗಳನ್ನು ಖರೀದಿಸುವ ಬದಲು ಸೀರೆಗಳನ್ನೇ ಆಯ್ದುಕೊಳ್ಳುತ್ತಿದ್ದೆ. ಅವರೊಂದು ಯಾವುದನ್ನೂ ಬಾಯಿಬಿಟ್ಟು ಹೇಳುವುದಿಲ್ಲವಲ್ಲ? ನನಗೆ ಇದೆಲ್ಲಾ ಹೊಳೆಯಲೂ ಇಲ್ಲ. ಆನಂದರ ಯೋಚನೆ ಏನೇ ಇರಲಿ, ಮತ್ತೆ ನೋಡೋಣ. ಅತ್ತೆ ಇಷ್ಟೊಂದು ನಯವಾಗಿ ಹೇಳುವಾಗ ಪ್ರತಿಭಟನೆ ತೋರುವುದೂ ಸರಿಯಲ್ಲ. ನಮ್ಮ ಮದುವೆಗೆ ಯಾವ ಪ್ರತಿಭಟನೆಯನ್ನೂ ತೋರಿಸದೆ ಅವರೇ ನಿಂತು ಮದುವೆ ಮಾಡಿಸಿ ನನ್ನನ್ನು ಸೊಸೆಯನ್ನಾಗಿ ಸ್ವೀಕರಿಸಿದ್ದಾರೆ. ಹಾಗಿರುವಾಗ ನಾನು ಇಷ್ಟು ಚಿಕ್ಕ ವಿಷಯವನ್ನು ಅಲ್ಲಗಳೆಯೋದು ಸರಿಯಲ್ಲ. ನನಗೇನು ಸೀರೆ ಉಡಲಿಕ್ಕೆ ಗೊತ್ತಿಲ್ಲವೇ? ಕಾಲೇಜಿನಲ್ಲಿರುವಾಗಲೆಲ್ಲಾ ಅಪರೂಪಕ್ಕೊಮ್ಮೆ ಸೀರೆ ಉಟ್ಟು ಹಣೆಗೆ ತಿಲಕವಿಟ್ಟು ಹೋದಾಗ ಎಲ್ಲರೂ ನೀನೀಗ ನೂರರಲ್ಲಿ ನೂರು ಪಾಲು ಹಿಂದುವಿನಂತೆ ತೋರುತ್ತೀ ಎನ್ನುತ್ತಿರಲಿಲ್ಲವೇ? ಎಲ್ಲರಿಗೂ ಅದರಿಂದ ಖುಷಿಯಾಗುವುದಾದರೆ ನಾನೇಕೆ ನನ್ನ ಉಡುಗೆಯನ್ನು ಬದಲಾಯಿಸಬಾರದು? ಅದರಲ್ಲೂ ಸೀರೆಗೆ ಅದರದ್ದೇ ಸೊಬಗಿದೆ, ಬೆಡಗಿದೆ, ಸಿರಿತನವಿದೆ!
ನಿರ್ಮಲಾ ತನ್ನೊಡನಿದ್ದ ಕೆಲವೇ ಸೀರೆಗಳಲ್ಲಿ ಒಂದನ್ನಾಯ್ದು ಉಟ್ಟುಕೊಂಡು ಅತ್ತೆಯೆದುರು ಬಂದಾಗ ಅತ್ತೆಯವರಿಗಿಂತಲೂ ಮಿಗಿಲಾಗಿ ಮಾವನವರ ಮುಖದಲ್ಲಿ ತೃಪ್ತ ನಗೆ ಮಿಂಚಿತ್ತು. ಸುಶೀಲಮ್ಮನವರಂತೂ ಸಂತೋಷದಿಂದ ತಾನೇ ಅವಳ ಹಣೆಗೆ ಕುಂಕುಮದ ಬೊಟ್ಟು ಹಚ್ಚಿ “ನಿರ್ಮಲಾ, ನೀನು ಸಾಧ್ಯವಾದಷ್ಟು ಹೀಗೇ ಇರಮ್ಮ, ನನ್ನ ಮನಸ್ಸಿಗೆ ತುಂಬಾ ಹಿತವೆನಿಸುತ್ತದೆ” ಎಂದಾಗ ನಿರ್ಮಲಾಗೂ ಖುಷಿಯಾಗುತ್ತದೆ.
ಅತ್ತೆಯ ಮುಗ್ಧ ಮಾತು ಕೇಳಿ ನಿರ್ಮಲಾ ಅಂದುಕೊಳ್ಳುತ್ತಾಳೆ. ‘ಅತ್ತೆಯ ಮಗುವಿನಂಥಾ ಮನಸ್ಸಿಗೆ ತಾನೆಂದೂ ನೋವು ತರಬಾರದು. ಇನ್ನು ಇದು ತನ್ನದೇ ಮನೆ. ಈ ಮನೆಗೆ ತಕ್ಕಂತೆ ನಾನಿರುವುದೇ ಸರಿ’ ಎನ್ನುವ ನಿರ್ಧಾರವನ್ನೂ ಮಾಡಿಕೊಳ್ಳುತ್ತಾಳೆ.
ಸಂಜೆ ಆನಂದ ಬಂದಾಗ ಹೆಂಡತಿಯ ಅಪರೂಪದ ವೇಷನೋಡಿ ನಕ್ಕು “ಈಗಾದರೆ ನೀನು ಥೇಟ್ ಅಮ್ಮನ ಸೊಸೆಯೇ. ನಾನು ಮದುವೆಯಾದ ಹುಡುಗಿ ಎಲ್ಲಿ ಎಂದು ನಾನೇ ಹುಡುಕುವಂತಾಗಿದೆ” ಅಂದಾಗ ನಿರ್ಮಲಾ,
“ನೀವು ಮೊದಲೇ ಸೀರೆ ಉಟ್ಟುಕೊಂಡರೆ ಎಲ್ಲರಿಗೂ ಇಷ್ಟವಾಗುವುದೆಂದು ಯಾಕೆ ಹೇಳಲಿಲ್ಲ? ನಾನು ಹೀಗೆ ಇರ್‍ತಿದ್ದೆನಲ್ಲ? ನಿಮಗೆ ಹೇಗೆ ತೋರುತ್ತಿದೆ? ಸೀರೆ ನನಗೆ ಒಪ್ಪುವುದಲ್ಲ?” ಚಿಕ್ಕ ಮಕ್ಕಳ ಹಾಗೆ ಕೇಳುತ್ತಾಳೆ.
ಆನಂದ ಮೆಚ್ಚುಗೆಯ ನೋಟ ಬೀರಿದರೂ ಹೇಳುತ್ತಾನೆ. “ನಿರ್ಮಲಾ, ನನಗೆ ಹೊರಗಿನ ಉಡುಪು ಹಾಗಿರಬೇಕು. ಹೀಗಿರಬೇಕು ಎನ್ನುವ ಕಟ್ಟುಪಾಡು ಏನೂ ಇಲ್ಲ. ಅವರವರಿಗೆ ಅನುಕೂಲವಾಗುವ ಹಾಗೆ ಅವರವರಿಗೆ ಇಷ್ಟವಾದ ಉಡುಪು ಧರಿಸಿದರೇನು ತಪ್ಪು? ನನಗೆ ನೀನು ಸೀರೆ ಉಟ್ಟರೂ ಒಂದೇ, ಬೇರೆ ಉಡುಪು ಧರಿಸಿದರೂ ಒಂದೇ, ನಿನಗೆ ಸರಿ ಕಂಡ ರೀತಿಯಲ್ಲಿ, ನಿನಗೆ ಅನುಕೂಲವಾಗುವ ಹಾಗೆ ಉಡುಪು ಧರಿಸಿಕೋ. ಅದರಲ್ಲಿ ಬೇರೆಯವರ ಅಭಿಪ್ರಾಯವೇಕೆ?”
ನಿರ್ಮಲಾಳ ಉತ್ಸಾಹ, ನಿರ್ಧಾರವೆಲ್ಲಾ ಆನಂದನ ಈ ಮಾತಿನಿಂದ ಝರನೇ ಇಳಿಯುತ್ತದೆ. ಗಂಡ ನಿನಗೆ ಹೀಗೆ ಚೆನ್ನಾಗಿರುತ್ತದೆ ಅಂದಿದ್ದರೆ ನಿರ್ಮಲ ಯಾವಾಗಲೂ ಸೀರೆಯೇ ಉಟ್ಟುಕೊಳ್ಳಲು ತಯಾರಾಗಿದ್ದಳು. ಆನಂದನ ಈ ಮಾತು ಅವಳಲ್ಲಿ ನಿರಾಸಕ್ತಿ ತುಂಬುತ್ತದೆ. ಏನಾದರೇನು? ಅತ್ತೆ ಹೇಳಿದರೆ ನಾಲ್ಕು ಸಲ ಹೇಳುತ್ತಾರೆ. ಮತ್ತೆ ಸುಮ್ಮನಾಗುತ್ತಾರೆ. ಅವರು ಹೇಳುವರೆಂದು ನನ್ನ ಹತ್ತಿರವಿದ್ದ ಇಷ್ಟೊಂದು ಉಡುಪುಗಳನ್ನು ಮಾಡುವುದಾದರೂ ಏನು? ಅವೆಲ್ಲಾ ಹಳೆಯದಾಗುವ ತನಕವಾದರೂ ತಾನು ಅದನ್ನು ಉಪಯೋಗಿಸಲೇಬೇಕು. ಇದನ್ನೆಲ್ಲಾ ಬಿಸಾಡಲು ಆಗುವುದೇ? ಎನ್ನುವ ಭಾವನೆ ಮೇಲಾಗುತ್ತದೆ.
ಮರುದಿನ ಸೊಸೆ ರೂಢಿಯಂತೆ ಪ್ಯಾಂಟ್, ಶರ್ಟ್‌ನಲ್ಲೇ ಹೊರಬಂದಾಗ ಸುಶೀಲಮ್ಮನ ಮನವೂ ಮುದುಡುತ್ತದೆ. ನಿರ್ಧಾರವೆಲ್ಲಾ ಸಡಿಲವಾಗಿ ಅತೃಪ್ತಿ ಹೃದಯವನ್ನೆಲ್ಲಾ ಆವರಿಸುತ್ತದೆ. ಮೊದಲಿನ ಒಂದು ಮಾತಿಗೆ ಬೆಲೆ ಕೊಡಲಾರದವಳು ಇನ್ನು ಜೀವನವಿಡೀ ಹೊಂದಿಕೊಂಡು ಹೋಗಲಿದೆಯೇ? ಈಗಿನ ಹುಡುಗಿಯರೇ ಹೀಗೆಯೇ ಏನೋ! ಯಾಕೆ, ನಮ್ಮ ಅನುರಾಧ ಇಲ್ಲವೇ? ಅವಳಿಗೆ ಒಂದು ಮಾತು ಹಾಗಲ್ಲ ಹೀಗೆ ಅಂದರೆ ಸಾಕು, ಎಷ್ಟು ಬೇಗ ತಿದ್ದಿಕೊಳ್ಳುತ್ತಾಳೆ. ಒಂದು ಸೀರೆ ಉಟ್ಟುಕೊಂಡು ನಮ್ಮ ಮನೆಯ ಹುಡುಗಿಯರಂತೇ ಇದ್ದರೆ ಏನು ಅವಳಿಗೆ? ಆ ವೇಷವೋ, ಇದ್ದ ಅಂದವನ್ನೂ ಹಾಳು ಮಾಡುತ್ತದೆ, ಸ್ತ್ರೀಯೆಂದ ಮೇಲೆ ಸ್ತ್ರೀ ಯ ಕೋಮಲತೆಗೆ ತಕ್ಕಂತೆ ಅಲಂಕಾರ ಮಾಡಿಕೊಂಡರೇ ಚೆನ್ನ’.
ಮನದಲೆದ್ದ ಅತೃಪ್ತಿಯನ್ನು ಗಂಡನೆದುರು ತೋಡಿಕೊಂಡಾಗ ರಾಮಕೃಷ್ಣಯ್ಯನವರದ್ದು ಒಂದೇ ಮಾತು. ಇದಕ್ಕೆಲ್ಲಾ ಬೇಜಾರು ಪಟ್ಟುಕೊಂಡರೆ ನಡೆಯುವುದೇ? ಹೇಗೂ ಮದುವೆಗೆ ಒಪ್ಪಿಕೊಳ್ಳುವಾಗ ನಿನಗೆ ಗೊತ್ತೇ ಇತ್ತು. ಸೊಸೆ ಸೀರೆ ಉಡುವ ಜಾತಿಯವಳಲ್ಲವೆಂದು. ಈಗ ಉಡೋದಿಲ್ಲವೆಂದು ಗಲಾಟೆ ಮಾಡಿದರೆ ಏನು ಫಲ? ಹೇಗೆ ಬೇಕೋ ಹಾಗಿದ್ದುಕೊಳ್ಳಲಿ. ಅವಳಿಗೆ ಮೊದಲಿನಿಂದಲೂ ಅದೇ ಅಭ್ಯಾಸವಲ್ಲವೇ? ಹಾಗೆ ಮಾಡಬೇಡ ಎಂದರೆ ಅವಳಿಗೂ ಬೇಜಾರು. ಯಾರಾದರೂ ಒಬ್ಬರು ಹೊಂದಿಕೊಳ್ಳಬೇಕಲ್ಲ! ನೀನು ಹಿರಿಯವಳು. ಎಲ್ಲಾ ಮರೆತು ಸುಮ್ಮನಿರು.”
“ಏನು ಸುಮ್ಮನಿರುವುದು? ನಿಮ್ಮ ಹಾಗಿನ ಸ್ಥಿತಪ್ರಜ್ಞತೆ ನನಗಿಲ್ಲ. ನನಗಂತೂ ಬೇಜಾರಾಗಿದೆ. ನಮ್ಮ ಹುಡುಗಿಯರಿನ್ನು ಅವಳಂತಾಡದಿದ್ದರೆ ಸಾಕು.”
“ಮದುವೆಯಾಗಿ ಇನ್ನೂ ಪೂರ್ತಿ ಮೂವತ್ತು ದಿನಾನೂ ಆಗಲಿಲ್ಲ. ಈಗಲೇ ಬೇಜಾರಾಗಿದೆ ಅಂದರೆ ಆಗುವುದೇ? ಇದು ಜೀವನವಿಡೀ ನೋಡುವ ನೋಟ. ಎದುರಿಸಬೇಕಾದ ಪ್ರಶ್ನೆ. ಬೇಸರಿಸಿದರೆ ಏನೇನೂ ಪ್ರಯೋಜನವಿಲ್ಲ. ಆ ಕುರಿತು ಯೋಚಿಸದೇ ಸುಮ್ಮನಿರು. ಅಷ್ಟೇ.”
ಸುಶೀಲಮ್ಮ ಗಂಡನ ಮಾತು ಕೇಳಿ ಮೌನ ತಾಳಿದಾಗ ಅವರ ಕಣ್ಣೆದುರಿನಲ್ಲಿ ಅನುರಾಧಾಳೇ ಓಡಾಡುತ್ತಾಳೆ. ಅವಳ ನಯ ವಿನಯ, ನಾಜೂಕು, ಸಂಯಮ ಎಲ್ಲಾ ಹುಡುಗಿಯರಲ್ಲೂ ಯಾಕಿಲ್ಲ ಎನ್ನುವ ಜಿಜ್ಞಾಸೆ ಸುಶೀಲಮ್ಮನ ಮನದಲ್ಲಿ ಉಂಟಾಗುತ್ತದೆ. ಪೂರ್ಣಿಮಾ, ನಿರುಪಮಾ ಮಕ್ಕಳಾಟಿಕೆ ಮಾಡುತ್ತಾರಾದರೂ ಅವರಲ್ಲೂ ಹೊಂದಿಕೊಳ್ಳುವ ಗುಣವಿದೆ. ಅಷ್ಟಾದರೂ ಇರಬೇಡವೇ ಮನೆಯ ಸೊಸೆಗೆ? ಹೇಳಿದ್ದನ್ನಾದರೂ ತಿಳಿದುಕೊಳ್ಳುವ ಮನಸ್ಸು ಬೇಕು. ಇಲ್ಲದಿದ್ದರೆ ಅವಳು ಹೇಗೆ ನಮ್ಮ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ? ಎನ್ನುವ ಯೋಚನೆ ಸುಶೀಲಮ್ಮನವರನ್ನು ಕಾಡುತ್ತದೆ. ಅವಳಿಗೆ ತಿಳಿಯದಿದ್ದರೆ ಆನಂದನಾದರೂ ಹೇಳಬಹುದಲ್ಲ? ಅವನೊಬ್ಬ ಅರ್ಥವಾಗದ ಮನುಷ್ಯ! ಬಾಯಿಗೆ ಬೀಗ ಹಾಕಿಕೊಂಡೇ ಇರುತ್ತಾನೆ. ಮೊದಲಿನಿಂದಲೂ ಅವನಿಗೆ ಮಾತು ಕಡಿಮೆ. ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿಕೊಳ್ಳಲಾರ. ಸಲಿಗೆಯಂತೂ ಇಲ್ಲವೇ ಇಲ್ಲ. ಎಷ್ಟು ಬೇಕೋ ಅಷ್ಟೇ ಮಾತು. ಹೀಗಾದರೆ ಯಾರಿಗೂ ನೆಮ್ಮದಿಯೇ ಇಲ್ಲ.
ಇನ್ನೊಂದೆರಡು ದಿನದಲ್ಲಿ ಅನುರಾಧ ಗಂಡನ ಜತೆ ಬರುತ್ತಾಳೆ. ಮತ್ತೆ ದೂರದ ಡಿಲ್ಲಿಗೆ ಪ್ರಯಾಣ. ಬೇಕೆನಿಸಿದಾಗ ಅವಳನ್ನು ನೋಡುವುದೂ ಅಸಾಧ್ಯ. ಬೇಸರವೆಂದು ನಾಲ್ಕು ದಿನಕ್ಕೆ ಹೋಗಿ ಬರುವಾ ಎಂದರೂ ಅದಕ್ಕೆ ದಾರಿಯಿಲ್ಲ. ಈ ಮನೆಯ ಜವಾಬ್ದಾರಿ ಯಾರಿಗೆ ಹೊರಿಸಿ ಹೋಗುವುದು? ಹಣಕ್ಕೂ ಪೇಚಾಟ. ಎಲ್ಲದಕ್ಕೂ ಮಗನ ಕೈಯನ್ನೇ ಕಾಯಬೇಕು. ಕೈಯಲ್ಲಿದ್ದುದನ್ನೆಲ್ಲಾ ಮುಗಿಸಿ ಕುಳಿತುದಾಗಿದೆ. ಈ ಯೋಚನೆ ಬಂದಾಗಲೆಲ್ಲಾ ಸುಶೀಲಮ್ಮನ ಹೃದಯ ತುಂಬ ಭಯ ಆವರಿಸುತ್ತದೆ. ಅಮ್ಮ ಎಂದು ಬಾಯಿ ತುಂಬಾ ಕರೆಯದ ಹುಡುಗ ಆನಂದ. ಇನ್ನು ನಮ್ಮ ಎಲ್ಲಾ ಬೇಕು ಬೇಡಗಳನ್ನು ಅವನೇ ನಿಭಾಯಿಸಬೇಕು. ಅದು ಹೇಗೆ ಅರ್ಥಮಾಡಿಕೊಂಡು ಪೂರೈಸುತ್ತಾನೋ? ಈ ರೀತಿಯ ಹೆಂಡತಿ ಬೇರೆ. ನನ್ನ ಸಂಗತಿ ಸಾಯಲಿ, ಅವರಿನ್ನು ಹೇಗಿರುತ್ತಾರೋ? ಅವತ್ತಿನಿಂದಲೇ ಎಷ್ಟೊಂದು ಇಳಿದು ಹೋಗಿದ್ದಾರೆ. ಬರೇ ಯೋಚನೆಯನ್ನೇ ಸಂಗಾತಿಯನ್ನಾಗಿ ಮಾಡಿಕೊಂಡ ಹಾಗಿದೆ. ನಾನೂ ಏನೆಂದೂ ಕೇಳಿಯೂ ಇಲ್ಲ ಈ ಎಲ್ಲಾ ಗಡಿಬಿಡಿಯಲ್ಲಿ, ಆದರೆ ಏನೆಂದು ಕೇಳುವುದು? ಗೊತ್ತೆ ಇರುವ ಸಂಗತಿಯಲ್ಲ? ಇನ್ನು ಮುಂದಿನ ಜೀವನವೇ ಕಷ್ಟ. ಅವರಿಗೆ ಬೇರೆ ಕೆಲಸ ಹಿಡಿಯುವುದು ಅಷ್ಟು ಸುಲಭದ ಸಂಗತಿಯಲ್ಲ. ಇನ್ನೂ ಎಷ್ಟೊಂದು ಜವಾಬ್ದಾರಿಗಳಿವೆ. ಹೇಗೆ ಇದನ್ನೆಲ್ಲಾ ನೆರವೇರಿಸುವುದೋ? ಆ ಪರಮಾತ್ಮನಿಗೇ ಗೊತ್ತು. ಈ ರೀತಿಯ ಯೋಚನೆಗಳು ಸುಶೀಲಮ್ಮನ ಮನಸ್ಸಿನ ಸ್ವಾಸ್ಥ್ಯವನ್ನೇ ಕೆಡಿಸುತ್ತವೆ. ಎದುರಿಗಿರುವ ಪ್ರಶ್ನೆಗಳಿಗೆಲ್ಲಾ ಬೃಹದಾಕಾರವಾಗಿ ಬೆಳೆದಂತೆ ತೋರುತ್ತದೆ.
*****
ಮುಂದುವರೆಯುವುದು