ಅನೃತದಿ ಛೇದಿಸಿದ ಕೊರಳನು
ಹೆಜ್ಜೆಯ ಸಪ್ಪಳ ಕೇಳಿ ಭೀಷ್ಮರು ಕಣ್ತೆರೆದರು. ಕಳೆದ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೆ ಇಂದು ಇಡೀ ದಿನ ಅವರು ಆಗಾಗ ಮಂಪಿನಲ್ಲಿದ್ದರು. ಹಗಲು ನಿದ್ದೆ ಮಾಡಿದರೆ ರಾತ್ರಿಯನ್ನು ಕಳೆಯುವುದು ಹೇಗೆಂಬ ಆತಂಕದಿಂದ ಅವರು ಗಾಢ ನಿದ್ದೆಗೆ ಶರಣಾಗಿರಲಿಲ್ಲ. ಇಂದು ಯಾವ ವಾರ್ತೆಯನ್ನು ಕೇಳಬೇಕಾಗುತ್ತದೆಯೋ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಅಂಬೆಯ ನೆನಪು ಜೀವವನ್ನು ಹಿಂಡುತ್ತಿತ್ತು. ಈಗ ಕಣ್ತೆರೆದಾಗ ದುರ್ಯೋಧನ ನಿಂತಿದ್ದಾನೆ. ಅವನ ಮುಖ ಬಾಡಿದೆ.
ದುರ್ಯೋಧನನ ಮುಖವನ್ನು ಓದಲು ಅವರು ಯತ್ನಿಸಿದರು. ಘಟೋತ್ಕಚನ ಮರಣ ವಾರ್ತೆಯನ್ನು ತಿಳಿಸಲು ರಾತ್ರಿ ದುರ್ಯೋಧನ ಬಂದಿರಲಿಲ್ಲ. ಕರ್ಣನನ್ನು ಕಳುಹಿಸಿಕೊಟ್ಟಿದ್ದ. ಭೀಷ್ಮರು ಯೋಚಿಸತೊಡಗಿದರು. ನಿನ್ನೆ ಇವನಿಗೆ ನನ್ನನ್ನು ಎದುರಿಸುವ ನೈತಿಕ ಬಲ ಇರಲಿಲ್ಲ. ರಾತ್ರಿಯುದ್ಧಕ್ಕೆ ನನ್ನ ಒಪ್ಪಿಗೆಯಿರಲಿಲ್ಲ! ಇವನೂ ತನ್ನ ಗುರಿ ಸಾಧಿಸಲಿಲ್ಲ. ಪಾಂಡವರಲ್ಲೊಬ್ಬ ನನ್ನು ಕೊಲ್ಲಹೋಗಿ, ಬಹುಕಾಲ ಬದುಕಬೇಕಿದ್ದ ಘಟೋತ್ಕಚನನ್ನು ಕೊಲ್ಲಿಸಿದ್ದ. ಪಾಪಪ್ರಜ್ಞೆಯಿಂದ ಬಂದನೆ? ಅಮಂಗಳ ವಾರ್ತೆ ತಂದನೆ?
ಎದೆ ಅಸಹನೀಯವಾಗಿ ನೋಯತೊಡಗಿತು. ಎದೆಗೆ ಚುಚ್ಚಿದ್ದ ಬಾಣದ ತುದಿಯ ಸುತ್ತ ಕೀವು ತುಂಬಿ ನೋವು ಉಲ್ಬಣಿಸುತ್ತಿದೆ. ನನ್ನ ಗಾಯ ನನ್ನಲ್ಲೇ ಅಸಹ್ಯ ಮೂಡಿಸುತ್ತಿದೆ. ಇನ್ನು ಬದುಕಿ ಸಾದಿಸಲಿಕ್ಕೇನಿದೆ? ಚಂದ್ರವಂಶೀಯರಲ್ಲಿ ಎಲ್ಲರಿಗಿಂತ ಹೆಚ್ಚು ಕಾಲ ಬದುಕಿದೆ. ಬ್ರಹ್ಮಚರ್ಯದಿಂದಾಗಿ ದತ್ತವಾದ ದೀರ್ಘಾಯುಷ್ಯ. ಪ್ರಜೆಗಳ ಮಾತಿನಲ್ಲಿ ನಾನು ಇಚ್ಛಾಮರಣಿ! ಅಸಾಧ್ಯ ನೋವುಂಟು ಮಾಡುತ್ತಿರುವ ಈ ಬಾಣವನ್ನು ಕಿತ್ತೆಸೆದು ಇಚ್ಢಾಮರಣಿಯಾಗಿ ಬಿಡಲೆ?
ದುರ್ಯೋಧನನಿಗೆ ಭೀಷ್ಮರ ಮೌನ ಆತಂಕವುಂಟು ಮಾಡಿತು. ಗಾಬರಿಯ ದನಿಯಲ್ಲಿ ಅವನು ಕೇಳಿದತ: “ಏನಾಗುತ್ತಿದೆ ತಾತಾ? ಏನಾದರೂ ಬೇಕಿತ್ತೆ?”
ಹೇಳಿಬಿಡಲೇ ನನಗೆ ಬೇಕಿರುವುದು ಯುದ್ಧ ನಿಲುಗಡೆಯೆಂದು. ಅದಕ್ಕಿವನು ಒಪ್ಪುವುದಿಲ್ಲ. ಬೇರೆ ಏನೂ ನನಗೆ ಬೇಕಾಗಿಲ್ಲ. ಯುದ್ಧ ಭೀಕರ ಗತಿಯಲ್ಲಿ ಸಾಗುತ್ತಿದೆ. ದ್ರೋಣಾಚಾರ್ಯರ ಸೇನಾಧಿಪತ್ಯದ ಬಳಿಕ ಧರ್ಮಯುದ್ಧವೆಂಬುದು ಹುಸಿಬಾಯಿ ಮಾತಾಗಿ ಬಿಟ್ಟಿದೆ. ಕುರು ಸಾಮ್ರಾಜ್ಯದ ಭವಿಷ್ಯವಾಗಬೇಕಾಗಿದ್ದ ಆ ಎಳೆಯ ಹುಡುಗ ಅಭಿಮನ್ಯುವನ್ನು ಅತಿರಥ, ಮಹಾರಥರು ಸೇರಿ ಮೋಸದಿಂದ ಕೊಂದರು. ಅದಕ್ಕೆ ಪ್ರತಿಯಾಗಿ ಜಯದ್ರಥನನ್ನು ಅರ್ಜುನ ಮೋಸದಿಂದ ಸಂಹರಿಸಿದ. ಧರ್ಮಕ್ಷೇತ್ರವಾದ ಕುರುರಣಾಂಗಣದಲ್ಲಿ ಮೋಸದ ಧರ್ಮಯುದ್ಧ ನಡೆದುಹೋಯಿತು. ಅದಕ್ಕೆ ಗುರುದ್ರೋಣರ ಸಮ್ಮತಿಯಿತ್ತು. ಇವರ ತಂತ್ರಕ್ಕೆ ಅಲ್ಲಿ, ಪಾಂಡವರ ಪಾಳಯದಲ್ಲಿ, ಕೃಷ್ಣ ಪ್ರತಿತಂತ್ರ ಹೂಡುತ್ತಾನೆ. ಯುದ್ಧದಲ್ಲಿ ತಂತ್ರಗಾರಿಕೆ ಪ್ರಾಧಾನ್ಯ ಪಡೆಯುತ್ತಿದೆ. ಈಗ ದುರ್ಯೋಧನನೊಬ್ಬನೇ ಬಂದಿದ್ದಾನೆ. ಯಾಕಿರಬಹುದು?
ಭೀಷ್ಮರು ಯೋಚನೆಯಲ್ಲಿ ಮುಳುಗಿರುವಾಗ ಇನ್ನೊಬ್ಬ ವ್ಯಕ್ತಿಯ ಪ್ರವೇಶವಾಯಿತು. ಅವನು ಕರ್ಣ. ಅವನು ನಿನ್ನೆ ರಾತ್ರಿ ಅವರಲ್ಲಿ ತುಂಬಾ ಹೊತ್ತು ಮಾತಾಡಿ ಹೋಗಿದ್ದ. ಅವನ ಅಂತರಂಗವನ್ನೆಲ್ಲಾ ತೆರೆದಿಟ್ಟು ಹಗರುರಾಗಿದ್ದ. ಭೀಷ್ಮರ ದೃಷ್ಟಿ ಪ್ರವೇಶದ್ವಾರದತ್ತ ಹರಿಯಿತು. ಅದನ್ನು ಅರ್ಥಮಾಡಿಕೊಂಡ ದುರ್ಯೋಧನನೆಂದ: “ಇನ್ನು ಯಾರೂ ಬರುವುದಿಲ್ಲ ತಾತಾ. ಇವನು ಮೊದಲಿಗೆ ಒಪ್ಪಲೇ ಇಲ್ಲ. ಆ ಮೇಲೆ ಅದು ಹೇಗೋ ಸಮ್ಮತಿಸಿದ. ಕರ್ಣನನ್ನು ಸೇನಾಧಿಪತಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ. ನಿಮ್ಮ ಸಮ್ಮತಿ ಮತ್ತು ಆಶೀರ್ವಾದಕ್ಕಾಗಿ ಬಂದಿದ್ದೇನೆ.”
ಬಿಡದಿಯೊಳಗಿನ ಮಂದ ಬೆಳಕಿನಿಂದಾಗಿ ಭೀಷ್ಮರಿಗೆ ಇಬ್ಬರ ಮುಖಭಾವಗಳು ತಿಳಿಯಲಿಲ್ಲ. ಕರ್ಣನನ್ನು ಸೇನಾದಿಪತಿಯನ್ನಾಗಿ ಮಾಡಬೇಕಾದರೆ ದ್ರೋಣರ ಕೈ ನೋವು ಉಲ್ಬಣಿಸಿರಬೇಕು. ಅಭಿಮನ್ಯುವಿನ ಬಾಣದಿಂದ ಹಾರಿಹೋದ ಹೆಬ್ಬೆರಳಿನ ಬುಡದಲ್ಲಿ ವ್ರಣವಾಗಿರಬೇಕು. ದ್ರೋಣಾಚಾರ್ಯರೂ ದುರ್ಯೋಧನನ ಪಾಲಿಗೆ ನಿಷ್ಪ್ರಯೋಜಕರಾದರೆಂದು ಕೊಂಡು ಭೀಷ್ಮರು ಕೇಳಿದರು: “ಮಗೂ, ದ್ರೋಣಾಚಾರ್ಯರಿಗೆ ಯುದ್ಧರಂಗದಿಂದ ನಿವೃತ್ತರಾಗಬೇಕಾದ ಪ್ರಮೇಯವೇನು ಬಂತು?”
“ಮೋಸ ತಾತಾ, ಯುಧಿಷ್ಠಿರ ಮೋಸ ಮಾಡಿ ಬಿಟ್ಟ. “ಕಂಪಿಸುವ ಸ್ವರದಲ್ಲಿ ದುರ್ಯೋಧನನೆಂದ: “ಇಂದು ಭೀಕರವಾದ ಯುದ್ಧ ಸಂಭವಿಸಿತು. ಗುರುಗಳ ಪರಾಕ್ರಮವನ್ನು ನೋಡಿ ನಾವು ಮೂಕವಿಸ್ಮಿತರಾದೆವು. ರಣಾಂಗಣದಲ್ಲಿ ವಿಜೃಂಭಿಸಿದ ಗುರುಗಳು ಮತ್ಸ್ಯದೇಶದ ನೃಪಾಲ ವಿರಾಟನನ್ನು ಮತ್ತು ಪಾಂಚಾಲದ ದ್ರುಪದನನ್ನು ಸಂಹರಿಸಿದರು. ಅದೇ ತೀವ್ರತೆಯಲ್ಲಿ ಯುದ್ಧ ಮುಂದುವರಿಯುತ್ತಿದ್ದರೆ ನಾವು ಗೆದ್ದುಬಿಡುತ್ತಿದ್ದೆವು. ಆದರೆ ತಾತಾ, ಆ ಯುಧಿಷ್ಠಿರ ಮೋಸ ಮಾಡಿಬಿಟ್ಟ.”
ದುರ್ಯೋಧನನ ಕಂಠ ಗದ್ಗದಿತವಾಗಿ ಮಾತು ಮುಂದುವರಿಸಲು ಅವನಿಗೆ ಕಷ್ಟವಾಯಿತು. ಮಂಚದ ಎದುರಿಗಿದ್ದ ಆಸನದಲ್ಲಿ ತಲೆತಗ್ಗಿಸಿ ಕುಳಿತುಕೊಂಡ. ದ್ರೋಣರು ದ್ರುಪದನನ್ನು ಕೊಂದಿದ್ದಾರೆಂದರೆ ಹಳೆಯ ಅಪಮಾನವನ್ನು ಅವರು ಮರೆಯಲಿಲ್ಲವೆಂದಾಯಿತು. ತನ್ನ ಶಿಷ್ಯರಿಂದ ಅಂದು ಪ್ರತೀಕಾರಾರ್ಥವಾಗಿ ದ್ರುಪದನ ಗರ್ವಭಂಗ ಮಾಡಿಸಿದ್ದ ದ್ರೋಣಾಚಾರ್ಯರು ಅಷ್ಟರಿಂದ ತೃಪ್ತರಾಗದೆ ಇಂದು ದ್ರುಪದನನ್ನು ವಧಿಸಿದರೆ? ಅಥವಾ ಪಾಂಡವರಲ್ಲಿ ಯಾರನ್ನೂ ಕೊಲ್ಲಲಾಗದ ಹತಾಶೆ ಅವರಿಂದ ಆ ಕೃತ್ಯವನ್ನು ಮಾಡಿಸಿತೆ?
ದುರ್ಯೋಧನ ಸುಧಾರಿಸಿಕೊಂಡು ಮಾತು ಮುಂದುವರಿಸಿದತ: “ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ಪಾಂಡವರು ಯುದ್ಧ ನಿಲ್ಲಿಸಿದರು. ಯಾಕೆಂದು ನಮಗೆ ಗೊತ್ತಾಗದಿದ್ದರೂ ನಾವೂ ಯುದ್ಧ ನಿಲ್ಲಿಸಿದೆವು. ಶತ್ರು ಪಕ್ಷದಿಂದ ಯುಧಿಷ್ಠಿರ ದೊಡ್ಡ ದನಿಯಲ್ಲಿ ‘ಅಶ್ವತ್ಥಾಮ ಹತಃ’ ಎಂದ. ತಕ್ಷಣ ಕೃಷ್ಣ ಗಟ್ಟಿಯಾಗಿ ಪಾಂಚಜನ್ಯವನ್ನು ಊದಿದ. ಆಘಾತಗೊಂಡ ಗುರುಗಳ ಕೈಯಿಂದ ಬಿಲ್ಲು ಜಾರಿತು. ರಥದಲ್ಲಿ ಕುಸಿದು ಬಿದ್ದಿದ್ದ ಗುರುಗಳ ಶಿರವನ್ನು ಧೃಷ್ಟಧ್ಯುಮ್ನ ಕತ್ತರಿಸಿ ಹಾಕಿ ವಿಜಯೋನ್ಮಾದದಿಂದ ಸಿಂಹನಾದ ಹೊರಡಿಸಿದ.”
ಭೀಷ್ಮರಿಗೆ ದ್ರುಪದನ ದತ್ತಕ ಪ್ರಕರಣ ನೆನಪಾಯಿತು. ದ್ರೋಣಶಿಷ್ಯರಿಂದ ಗರ್ವಭಂಗಿತನಾಗಿದ್ದ ದ್ರುಪದನಿಗೆ ದ್ರೋಣಾಚಾರ್ಯರನ್ನು ಹೇಗಾದರೂ ಮಾಡಿ ಕೊಲ್ಲಿಸಲೇಬೇಕೆಂಬ ಸೇಡಿತ್ತು. ಅವನ ದುರ್ದೈವಕ್ಕೆ ಮೊದಲ ಸಂತಾನ ಶಿಖಂಡಿಯಾಗಿ ಹೋಯಿತು. ದ್ರೋಣಾಚಾರ್ಯರನ್ನು ಕೊಲ್ಲಲೆಂದೇ ಅವನು ಒಬ್ಬ ಬಾಲಕನನ್ನು ಮತ್ತು ಓರ್ವಳು ಬಾಲಕಿಯನ್ನು ಯಜ್ಞ ಮುಖೇನ ದತ್ತಕ ಪಡೆದಿದ್ದ. ಆ ಬಾಲಕನೇ ದೃಷ್ಟಧ್ಯುಮ್ನ. ಅವನಲ್ಲಿ ದ್ರುಪದ ನಖಶಿಖಾಂತ ದ್ರೋಣ ದ್ವೇಷವನ್ನು ತುಂಬಿಸಿರಬೇಕು. ಇಲ್ಲದಿದ್ದರೆ ನಿರಾಯುಧ ಪಾಣಿಯಾದ, ಮೂರ್ಛೆ ತಪ್ಪಿ ರಥದಲ್ಲಿ ಬಿದ್ದಿದ್ದ ವೃದ್ಧ ಆಚಾರ್ಯನ ತಲೆ ಕಡಿಯಲು ದೃಷ್ಟಧ್ಯುಮ್ನನಿಗೆ ಸಾಧ್ಯವಾಗುತ್ತಿರಲಿಲ್ಲ. ಸತ್ತ ಬಳಿಕವೂ ದ್ರುಪದ ಸೇಡು ತೀರಿಸಿಕೊಂಡ.
ಸ್ವಲ್ಪ ಹೊತ್ತಿನ ಬಳಿಕ ದುರ್ಯೋಧನ ಮತ್ತೆ ಪ್ರಾರಂಭಿಸಿದ: “ನಾವು ದಿಗ್ಭ್ರಂತಿಯಿಂದ ಕಿಂಕರ್ತವ್ಯತಾ ಮೂಢರಾಗಿದ್ದಾಗ ಅಶ್ವತ್ಥಾಮ ಕಾಣಿಸಿಕೊಂಡ! ನಮಗೆ ಎಲ್ಲಿಲ್ಲದ ಸಿಟ್ಟು ಬಂದು ಯುಧಿಷ್ಠಿರನ ಮೇಲೆ ಏರಿಹೋದೆವು. ‘ನೀನು ಗುರುಗಳೆದುರು ಸುಳ್ಳು ಬೊಗಳಿ ಅವರ ವಧೆಗೆ ಕಾರಣನಾದ ಪಾಪಿ’ ಎಂದು ಬಯ್ದೆವು. ಅವನಲ್ಲಿ ಕಿಂಚಿತ್ತೂ ಪಶ್ಚಾತ್ತಾಪವಿರಲಿಲ್ಲ. ‘ನಾನೆಂದೂ ಸುಳ್ಳು ಹೇಳಿದವನಲ್ಲ. ನಮ್ಮ ಭೀಮಸೇನ ನಿಮ್ಮ ಪಕ್ಷದ ಅಶ್ವತ್ಥಾಮನೆಂಬ ಆನೆಯನ್ನು ಕೊಂದದ್ದಕ್ಕೆ ಅಶ್ವತ್ಥಾಮ ಹತಃ ಕುಂಜರಃ ಎಂದೆ. ಕೃಷ್ಣನ ಪಾಂಚಜನ್ಯದ ನಾದದಿಂದಾಗಿ ಕುಂಜರಃ ಎಂಬ ಶಬ್ದ ನಿಮಗೆ ಕೇಳಿಸಿರದಿದ್ದರೆ ಅದು ನನ್ನ ತಪ್ಪಾಗುವುದಿಲ್ಲ’ ಎಂದು ನುಣುಚಿ ಕೊಂಡ. ಅವನ ದವಡೆಗೆ ಎರಡು ಕೊಡಬೇಕೆಂದು ನಾನು ಮುನ್ನುಗ್ಗುವಾಗ ಭೀಮಾರ್ಜುನರು ಅವನ ಸುತ್ತ ಕೋಟೆ ನಿರ್ಮಿಸಿ ಅವನನ್ನು ರಕ್ಷಿಸಿದರು. ನೀವು ಆ ಸುಳ್ಳ ಯುಧಿಷ್ಠಿರನನ್ನು ಬಾಯಿ ತುಂಬಾ
‘ಧರ್ಮರಾಯಾ’ ಎಂದು ಕರೆಯುತ್ತೀರಿ. ಹೇಳಿ ತಾತಾ, ಯುಧಿಷ್ಠಿರ ಮಾಡಿದ್ದು ಧರ್ಮವಾ?”
ಭೀಷ್ಮರು ಅಂತರ್ಮುಖಿಯಾದರು. ದುರ್ಯೋಧನ ಧರ್ಮದ ಪ್ರಶ್ನೆ ಎತ್ತುತ್ತಿದ್ದಾನೆ! ವಾರಣಾವತದಲ್ಲಿ ಅರಗಿನರಮನೆ ನಿರ್ಮಿಸಿ ಪಾಂಡವರನ್ನು ಭಸ್ಮೀಭೂತರನ್ನಾಗಿ ಮಾಡಲು ಯತ್ನಿಸಿದವನು ಇವನು. ಕಪಟದ್ಯೂತ, ದ್ರೌಪದೀ ವಸ್ತ್ರಾಪಹರಣ, ಪಾಂಡವರ ವನವಾಸ ಮತ್ತು ಅಜ್ಞಾತವಾಸ ಧರ್ಮಬದ್ಧವಾದುದೆಂದು ಈಗಲೂ ವಾದಿಸುತ್ತಾನೆ. ಹೊನ್ನು ಕೊಟ್ಟು ಇವನ್ನು ಸಮರ್ಥಿಸುವ ಶ್ಲೋಕಗಳನ್ನು ಪುರೋಹಿತರುಗಳಿಂದ ಬರೆಯಿಸಿಟ್ಟುಕೊಂಡಿದ್ದಾನೆ. ಪಾಂಡವರ ಹುಟ್ಟಿನ ಮೂಲವನ್ನು ಕೆದಕಿ ಅವರಿಗೆ ಕುರು ಸಾಮ್ರಾಜ್ಯದಲ್ಲಿ ಹಕ್ಕಿಲ್ಲವೆನ್ನುತ್ತಾನೆ. ಇವನು ಪ್ರತಿಪಾದಿಸುವ ಧರ್ಮ ಯಾವುದು?
ಭೀಷ್ಮರಿಗೆ ವಸ್ತ್ರಾಪಹರಣದ ಘಟನೆ ನೆನಪಾಯಿತು. ತುಂಬಿದ ಸಭೆಗೆ ದ್ರೌಪದಿಯನ್ನು ದುಶ್ಯಾಸನ ಎಳೆದು ತಂದಾಗ ಅವಳು ಧರ್ಮದ ಪ್ರಶ್ನೆ ಎತ್ತಿದ್ದಳು. ದ್ಯೂತದಲ್ಲಿ ಸೋತು ದುರ್ಯೋಧನನ ದಾಸನಾಗಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡ ಮೇಲೆ, ತನ್ನ ಮಡದಿಯನ್ನು ಪಣಕ್ಕೊಡ್ಡುವ ಸ್ವಾತಂತ್ರ್ಯ ಧರ್ಮರಾಯನಿಗಿಲ್ಲವೆಂದವಳು ವಾದಿಸಿದ್ದಳು. ತನ್ನ ಸ್ವಾತಂತ್ರ್ಯವನ್ನು ಕಳಕೊಂಡವನು ಪರರ ಮೇಲೆ ಹಕ್ಕನ್ನು ಹೊಂದಿರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಳು. ಅವಳ ಪ್ರಶ್ನೆಗೆ ಒಬ್ಬ ವಿಕರ್ಣನ ಹೊರತಾಗಿ ಯಾರೂ ಉತ್ತರಿಸಿರಲಿಲ್ಲ. ಗದರಿಕೆಯಿಂದ ವಿಕರ್ಣನ ಬಾಯಿಯನ್ನು ದುರ್ಯೋಧನ ಮುಚ್ಚಿಸಿದ ಮೇಲೆ ಪ್ರತಿಭಟನೆಯ ಸೊಲ್ಲೇ ಇರಲಿಲ್ಲ. ದುರ್ಯೋಧನನನ್ನು ಮೆಚ್ಚಿಸಲೆಂದು ಪುರೋಹಿತನೊಬ್ಬ್ ‘ನಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂದು ಗಟ್ಟಿಯಾಗಿ ಹೇಳಿದ್ದ. ದುಶ್ಯಾಶನ ದ್ರೌಪದಿಯ ಸೀರೆ ಎಳೆದು ತುಂಬಿದ ಸಭೆಯಲ್ಲಿ ಇನ್ನೇನು ಅವಳನ್ನು ನಗ್ನಳನ್ನಾಗಿಸುತ್ತಾನೆ ಎಂದಾಗುವಾಗ, ಎಲ್ಲಿದ್ದನೋ ಅವ, ಆ ಕೃಷ್ಣ ಸಮಯಕ್ಕೆ ಸರಿಯಾಗಿ ಬಂದಿದ್ದ. ದ್ಯೂತದಲ್ಲಿ ಸೋತುಪರರ ದಾಸನಾದ ಗಂಡನಿಗೆ ತನ್ನ ಹೆಂಡತಿಯನ್ನು ಪಣಕ್ಕೊಡ್ಡಲು ಹಕ್ಕಿಲ್ಲವೆಂದಿದ್ದ. ಶಕುನಿ ಅವನ ವಾದಕ್ಕೆ ಶಾಸ್ತ್ರಾಧಾರವನ್ನು ಕೇಳಿದಾಗ ಪಂಡಿತರೂ ತಲೆದೂಗುವಂತಹ ಶ್ಲೋಕವೊಂದನ್ನು ಹೇಳಿದ್ದ. ಅದು ಅವನು ಆ ಕ್ಷಣಕ್ಕೆ ಹೊಸೆದ ಆಶು ಶ್ಲೋಕ. ಅಷ್ಟರವರೆಗೆ ಯಾವುದು ಧರ್ಮ, ಯಾವುದು ಅಧರ್ಮವೆಂಬ ಗೊಂದಲದಲ್ಲಿ ಮುಳುಗಿಹೋಗಿದ್ದ ಭೀಮ ರೋಷಾವಿಷ್ಠನಾಗಿ ಗದೆಯನ್ನೆತ್ತಿಕೊಂಡು ದುಶ್ಯಾಸನನ್ನು ಕೊಂದುಬಿಡಲು ಮುನ್ನುಗಿದ್ದ. ಯುಧಿಷ್ಠಿರ ತಡೆಯದಿರುತ್ತಿದ್ದರೆ ಅಂದು ದುಶ್ಯಾಸನನ ಹೆಣ ಉರುಳುತ್ತಿತ್ತು.
ಪಾಂಡವರು ಕುರು ಸಾಮ್ರಾಜ್ಯದಲ್ಲಿ ತಮ್ಮ ನ್ಯಾಯಬದ್ಧ ಪಾಲನ್ನು ಅಂದೇ ಪಡೆದು ಕೊಳ್ಳುತ್ತಿದ್ದರೆ ಈ ಯುದ್ಧ ಸಂಭವಿಸುತ್ತಿರಲಿಲ್ಲವೆಂದು ಭೀಷ್ಮರಿಗೆ ಒಂದೆರಡು ಬಾರಿ ಅನಿಸಿತ್ತು. ದ್ಯೂತವೇ ಕಪಟವೆಂದಾಗುವಾಗ ವನವಾಸ, ಅಜ್ಞಾತವಾಸಗಳನ್ನು ಧಿಕ್ಕರಿಸುವುದು ಅಧರ್ಮ ವಾಗುತ್ತಿರಲಿಲ್ಲ. ದುರ್ಯೋಧನ ತಕರಾರು ಎತ್ತುತ್ತಿದ್ದರೆ ಪ್ರತಿತಂತ್ರ ಹೂಡಲು ಕೃಷ್ಣ ಅಲ್ಲೇ ಇದ್ದ. ಆದರೆ ಯುಧಿಷ್ಠಿರ ಅವನ ಮಾತಿಗೆ ಬದ್ಧನಾಗಿ ವನವಾಸಕ್ಕೆ ಹೊರಟುಬಿಟ್ಟ. ತಮ್ಮಂದಿರೂ ಹೊರಟರು. ದ್ರೌಪದಿಯೂ ತೆರಳಿದಳು. ಹದಿಮೂರು ವರ್ಷ ಪಾಂಡವರೊಡನಿದ್ದು ಅವರಲ್ಲಿದ್ದ ಕೌರವ ವಿದ್ವೇಷ ಸದಾ ಜಾಗೃತವಾಗಿರುವಂತೆ ನೋಡಿಕೊಂಡಳು. ಇಂದು ಯುಧಿಷ್ಠಿರ ಸುಳ್ಳು ಹೇಳಿದ್ದರೆ ಅದಕ್ಕೆ ಕೃಷ್ಣನ ತಂತ್ರ ಕಾರಣವಾಗಿರಬೇಕು. ತನ್ನ ಮಾತು ಗುರುಗಳ ಹತ್ಯೆಗೆ ಕಾರಣವಾಗುತ್ತದೆಂಬ ಶಂಕೆ ಅವನಲ್ಲಿ ತಿಲಮಾತ್ರವಾದರೂ ಇರುತ್ತಿದ್ದರೆ ಅವನು ಖಂಡಿತಾ ಹಾಗೆ ಹೇಳುತ್ತಿರಲಿಲ್ಲ.
ಒಮ್ಮೆ ನೀಳವಾಗಿ ಉಸಿರೆಳೆದುಕೊಂಡು ಭೀಷ್ಮ ರೆಂದರು: “ಮಗೂ, ಕಪಟದ್ಯೂತದ ಬಳಿಕ ತುಂಬಿದ ಸಭೆಗೆ ದ್ರೌಪದಿಯನ್ನು ಎಳಕೊಂಡು ಬಂದು ವಸ್ತ್ರಾಪಹರಣಕ್ಕೆ ದುಶ್ಯಾಸನ ಮುಂದಾದಾಗ ನಿನ್ನದು ಅಧರ್ಮವೆಂದು ತಿಳಿದಿದ್ದರೂ ಏನನ್ನೂ ಮಾಡಲಾರದೆ ಹೋದೆ. ಅಂದಿನಿಂದ ಧರ್ಮಾಧರ್ಮಗಳ ಬಗ್ಗೆ ತೀರ್ಪು ನೀಡುವ ನೈತಿಕತೆಯನ್ನು ಕಳೆದುಕೊಂಡಿದ್ದೇನೆ. ಒಂದಂತೂ ನಿಜ. ದ್ರುಪದ ಸಂತತಿ ಕುರುವಂಶದ ಸರ್ವನಾಶಕ್ಕೆ ಕಾರಣವಾಗುತ್ತಿದೆ. ಶಿಖಂಡಿಯಿಂದ ನಾನು ಹೀಗಾದೆ. ಧೃಷ್ಟಧ್ಯುಮ್ನ ಗುರು ದ್ರೋಣಾಚಾರ್ಯರನ್ನು ನಿಮ್ಮೆಲ್ಲರ ಕಣ್ಣೆದುರೇ ಕತ್ತರಿಸಿ ಹಾಕಿದ. ಇನ್ನುಳಿದಿರುವುದು ದ್ರೌಪದಿ ಗಾದ ಅಪಮಾನಕ್ಕೆ ಪ್ರತೀಕಾರವಾಗಿ ಭೀಮ ಮಾಡಿರುವ ಪ್ರತಿಜ್ಞೆಗಳ ಈಡೇರಿಕೆ. ದ್ರೋಣರು ಸತ್ತಿದ್ದಾರೆ. ನಾನು ಬದುಕಿದ್ದೂ ಸತ್ತಂತಾಗಿದ್ದೇನೆ. ಇನ್ನು ದ್ರೌಪದೀ ನಿಮಿತ್ತವಾಗಿ ಭೀಮ ಮಾಡಿರುವ ಪ್ರತಿಜ್ಞೆಗಳನ್ನು ನೆರವೇರದಂತೆ ತಡೆಯುವವರು ಯಾರಿದ್ದಾರೆ ಮಗೂ?”
ದುರ್ಯೋಧನ ಮಾತಾಡಲಿಲ್ಲ. ತಾತ ಹೇಳುತ್ತಿರುವುದು ಸತ್ಯವೆಂಬುದನ್ನು ಅವ ಒಪ್ಪಿ ಕೊಂಡಂತಿತ್ತು. ಸ್ವಲ್ಪ ಹೊತ್ತಿನ ಮೌನದ ಬಳಿಕ ಭೀಷ್ಮರೇ ಮುಂದುವರಿಸಿದರು: “ಕರ್ಣನ ಬಗ್ಗೆ ನನಗೆ ಪ್ರೀತಿಯಿದೆ, ಮರುಕವೂ ಇದೆ. ಅವನು ಅಪಾರ ವಿಕ್ರಮಿ. ಶೂದ್ರನಾದ ಅಧಿರಥನ ಸಾಕು ಮಗನಾದುದಕ್ಕೆ ಜೀವನದುದ್ದಕ್ಕೂ ನೋವುಂಡವನು. ಅವನನ್ನು ನೋಯಿಸಲೆಂದು ಈ ಮಾತುಗಳನ್ನು ನಾನು ಹೇಳುತ್ತಿಲ್ಲ. ನೀನೇ ಯೋಚಿಸಿ ನೋಡು. ಇಷ್ಟು ದಿನಗಳ ಯುದ್ಧದಲ್ಲಿ ಪಾಂಡವರೈವರಲ್ಲಿ ಒಬ್ಬನನ್ನೂ ಮುಗಿಸಲು ಇವನಿಂದಾಗಲಿಲ್ಲ. ನನ್ನಿಂದ ದ್ರೋಣಾಚಾರ್ಯರಿಂದ ಸಾಧ್ಯವಾಗದ್ದನ್ನು ಕರ್ಣನಿಂದ ನಿರೀಕ್ಷಿಸಬೇಡ. ಮಗೂ, ಭೀಷ್ಮ ಮತ್ತು ದ್ರೋಣರ ಬಲಿದಾನದೊಡನೆ ಯುದ್ಧ ಮುಕ್ತಾಯವಾಗಲಿ. ಕೃಷ್ಣ ಮತ್ತು ಯುಧಿಷ್ಠಿರ ಈ ಬಿಡದಿಗೆ ಬರಲಿ. ದ್ಯೂತಪೂರ್ವದ ನಿಯಮದಂತೆ ನ್ಯಾಯಯುತವಾಗಿ ಪಾಂಡವರಿಗೆ ಕೊಡಬೇಕಾದುದನ್ನು ಕೊಡು. ಈ ವಿನಾಶಕಾರೀ ಅರ್ಥಹೀನ ಯುದ್ಧ ಮುಗಿದು ಧರ್ಮಕ್ಕೆ ಜಯ ಸಿಕ್ಕಿತೆಂಬ ಸಂತೋಷವನ್ನು ಕೊನೆಗಾಲಕ್ಕಾದರೂ ನನಗೆ ನೀಡು”.
ದುರ್ಯೋಧನ ಗಂಭೀರನಾದ: “ತಾತಾ, ನೀವು ಎಲ್ಲಾ ತಪ್ಪುಗಳನ್ನು ನನ್ನೊಬ್ಬನ ತಲೆಯ ಮೇಲೆ ಹೊರಿಸುತ್ತಿದ್ದೀರಿ. ಪಾಂಡವರು ಪಾಂಡು ಪುತ್ರರಲ್ಲ. ಅವರಿಗೆ ಕುರು ಸಾಮ್ರಾಜ್ಯದಲ್ಲಿ ಹಕ್ಕಿಲ್ಲ. ಎಲ್ಲೋ ಅರಣ್ಯದಲ್ಲಿ ಎಂದೋ ಸತ್ತು ಹೋಗಬೇಕಾಗಿದ್ದ ಪಾಂಡವರನ್ನು ಈ ಮಟ್ಟಕ್ಕೆ ತಂದವರು ನೀವು. ಕುರು ಸಾಮ್ರಾಜ್ಯ ಕೌರವರದ್ದು. ಅದೆಂದಿಗೂ ಪಾಂಡವರದ್ದಾಗ ಬಾರದು. ಆಯಿತೆಂದರೆ ಅದು ಕುರುಸಾಮ್ರಾಜ್ಯದ ಅವನತಿ ಎಂದಾಗುತ್ತದೆ. ಒಂದು ಕ್ಷಣ ಪಾಂಡವರ ಹುಟ್ಟಿನ ಪ್ರಶ್ನೆಯನ್ನು ಬದಿಗಿಟ್ಟು ಬಿಡೋಣ. ನಿಮ್ಮನ್ನು ಈ ಸ್ಥತಿಗೆ ತಂದುದಕ್ಕೆ, ಗುರು ದ್ರೋಣಾಚಾರ್ಯರ ಅಮಾನುಷ ವಧೆಗೆ ನಾನು ಪ್ರತೀಕಾರವೆಸಗಲೇಬೇಕು. ಈ ಹಂತದಲ್ಲಿ ನಾನು ಸಂಧಾನಕ್ಕಿಳಿದರೆ ಅದು ಶರಣಾಗತಿಯಾಗುತ್ತದೆ. ಪ್ರಾಣ ಭೀತಿಯಿಂದ ದುರ್ಯೋಧನ ಪಾಂಡವರಿಗೆ ಶರಣಾದ ಎಂದು ಲೋಕ ನಗುತ್ತದೆ.”
ಭೀಷ್ಮರು ಮತ್ತೆ ಅಂತರ್ಮುಖಿಯಾದರು. ಪಾಂಡವರನ್ನು ಕೌರವರೊಡನೆ ತೂಗಿ ನೋಡಿದರು. ಪಾಂಡವರು ಪಾಂಡುಪುತ್ರರಲ್ಲವೆನ್ನುವುದು ಲೋಕಕ್ಕೇ ಗೊತ್ತಿರುವ ಸತ್ಯ. ಆದರೆ ಯಾರಾದರೂ ಕುಂತಿಯ ಭಾಗ್ಯಕ್ಕೆ ಕರುಬಲೇಬೇಕು. ಯುದ್ಧದಿಂದ ಎಂದೂ ಪಲಾಯನ ಮಾಡದ ಯುಧಿಷ್ಠಿರನ ಧರ್ಮನಿಷ್ಠೆಯಿಂದಾಗಿ ಅವನಿಗೆ ಧರ್ಮರಾಯನೆಂಬ ಅನ್ವರ್ಥನಾಮ ದೊರಕಿದೆ. ಭೀಮನ ದೇಹದಾಢ್ರ್ಯ, ಗದೆ ಮತ್ತು ಮಲ್ಲಯುದ್ಧದ ನೈಪುಣ್ಯ ಆರ್ಯಾವರ್ತದಲ್ಲಿ ಯಾರಿಗಿದೆ? ಅರ್ಜುನ ಸ್ಫುರದ್ರೂಪಿ. ಹೋದಲೆಲ್ಲಾ ಅವನನ್ನು ಸುಕೋಮಲೆಯರು ಮುತ್ತಿಕೊಳ್ಳುತ್ತಾರೆ. ಸಮಸ್ತ ಆರ್ಯಾವರ್ತದಲ್ಲಿ ಅವನಂಥ ಧನುರ್ವಿದ್ಯಾ ನಿಪುಣರಿಲ್ಲ. ಕುಂತಿ ತನಗಿಷ್ಟ ಬಂದವರಿಂದ ಪತಿಯ ಅಪ್ಪಣೆಯಂತೆ ಮಕ್ಕಳನ್ನು ಪಡಕೊಂಡಳು. ಈ ಭಾಗ್ಯ ಯಾವ ಹೆಣ್ಣಿಗೆ ದೊರಕೀತು? ಪಾಂಡು ಮಹಾರಾಜ ಉದಾರಿ. ಹೆಣ್ಣಿನ ನೋವನ್ನು ಬಲ್ಲವನು. ಅವನು ಕುಂತಿಗೆ ನ್ಯಾಯ ದೊರಕಿಸಿಕೊಟ್ಟ. ಲೋಕ ಕೊಂಡಾಡುವಂತಹ ಶೂರರು ಆರ್ಯಾವರ್ತಕ್ಕೆ ದೊರೆಯಲು ಅನುವು ಮಾಡಿದ. ಪಾಂಡುವಿಗೆ ಸ್ವಂತ ಸಾಮಥ್ರ್ಯ ಇರುತ್ತಿದ್ದರೆ ಇಂತಹ ಸಂತಾನದ ಸೃಷ್ಟಿಯಾಗುತ್ತಿರಲಿಲ್ಲ. ಕುಂತಿಯ ಕೃತ್ಯ ಅಧರ್ಮವಾಗುವುದಿಲ್ಲ.
ನಾನು ದ್ರೋಣ ಮತ್ತು ಕರ್ಣ ಜಾತಿ ವ್ಯವಸ್ಥೆಯನ್ನು ಮೀರಿದವರು. ಜಾತಿವ್ಯವಸ್ಥೆಯನ್ನು ಆಮೂಲಾಗ್ರ ನಾಶಪಡಿಸಬೇಕೆಂದು ಸಾರುವ ಪರಶುರಾಮರು ನಮಗೆ ಮೂವರಿಗೂ ಗುರುಗಳು! ಕುಂತಿಯ ನಡವಳಿಕೆ ನನಗೆ ಜಾತಿ ವಿನಾಶದ ಯತ್ನವೆಂದೂ ಅನ್ನಿಸಿತ್ತು. ಬಹುತೇಕ ಮಾನವರು ಉದ್ದೇಶರಹಿತರಾಗಿ ಹೇಗೋ ಜೀವನ ಸಾಗಿಸಿ, ಯಾವ ಸಾಧನೆಯನ್ನೂ ಮಾಡದೆ, ಸಮಾಜ ನೆನಪಿಡಬಹುದಾದ ಒಂದೇ ಒಂದು ಸಮಷ್ಟಿ ಕಾರ್ಯವನ್ನು ಮಾಡದೆ, ಜೀವನ ಪಯಣದ ಒಂದು ಹೆಜ್ಜೆಯನ್ನೂ ಮೂಡಿಸಲಾಗದೆ ಸತ್ತು ಹೋಗುತ್ತಾರೆ. ಅವರು ಹುಟ್ಟಿಸಿದ ಮಕ್ಕಳೇ ಅವರ ಕೊಡುಗೆಗಳು! ಈ ಲೋಕಕ್ಕೆ ಮಕ್ಕಳೇ ನಮ್ಮ ಕೊಡುಗೆಯೆಂದಾದರೆ, ಅವು ಶ್ರೇಷ್ಠ ಸಂತಾನಗಳಾಗಿರಬೇಕು. ಜಾತಿ ವ್ಯವಸ್ಥೆಯ ಹೊರಗಿನ ಸೃಷ್ಟಿಯ ಶ್ರೇಷ್ಠತೆಗೆ ಗುರುಪರಶುರಾಮರು, ದ್ವೈಪಾಯನರು, ನಾನು ದ್ರೋಣಾಚಾರ್ಯರು, ಕರ್ಣ ಮತ್ತು ಪಾಂಡವರು ಸಾಕ್ಷಿ. ಜಾತಿ ವ್ಯವಸ್ಥೆಯ ಒಳಗಿನ ಸೃಷ್ಟಿಯ ದುರಂತಕ್ಕೆ ಕೌರವರೇ ದೃಷ್ಟಾಂತ. ತಮಗಿಷ್ಟ ಬಂದವರನ್ನು ಮದುವೆಯಾಗುವ ಸ್ವಾತಂತ್ರ್ಯ ಆರ್ಯಾವರ್ತದ ಕ್ಷತ್ರಿಯರಿಗಿದೆ. ಹೆಣ್ಣುಗಳು ತಮಗಿಷ್ಟ ಬಂದವರಿಂದ ಆರೋಗ್ಯವಂತ, ಬುದ್ಧಿವಂತ ಸಂತಾನವನ್ನು ಪಡೆಯುವುದು ಅಧರ್ಮವಾಗುವುದಿಲ್ಲ. ಮೇಧಾವಿಗಳಿಂದ ಮಕ್ಕಳನ್ನು ಪಡೆಯುವ ಸ್ವಾತಂತ್ರ್ಯ ಹೆಣ್ಣುಗಳಿಗಿರಬೇಕೆಂದು ಸಾರುವ ಕೆಲವು ಶ್ಲೋಕಗಳನ್ನು ನಾನು ನೋಡಿದ್ದೆ. ಎಲ್ಲೆಂದೀಗ ನೆನಪಾಗುತ್ತಿಲ್ಲ. ಅಸಹಜವಾದ ಜಾತಿ ಮತ್ತು ವರ್ಣ ವ್ಯವಸ್ಥೆಗಳನ್ನು ಮೀರುವ ಪ್ರಯತ್ನವದು. ಮನುಕುಲವನ್ನು ಜಾತಿ, ವರ್ಣ, ಕುಲಶ್ರೇಷ್ಠತೆ ಯಂತಹ ಭ್ರಾಮಕ ಪರಿಕಲ್ಪನೆಗಳಲ್ಲಿ ಬಂಧಿಸಿಟ್ಟು ಅವರ ಸ್ವಾತಂತ್ರ್ಯಹರಣ ಮಾಡುತ್ತಿರುವ ಪ್ರಭುತ್ವವನ್ನು ಮತ್ತು ಪುರೋಹಿತ ವರ್ಗವನ್ನು ತಿದ್ದುವುದು ಹೇಗೆ?
ಭೀಷ್ಮರು ಶಾಂತ ಸ್ವರದಲ್ಲಿ ಹೇಳಿದರು: “ಮಗೂ, ಪಾಂಡವರು ಪಾಂಡುಪುತ್ರರಲ್ಲವೆನ್ನುವುದು ನಿನ್ನ ವಾದ. ಆದರೆ ಕುಂತಿ ಮತ್ತು ಮಾದ್ರಿ ಎಂತಹ ಮಕ್ಕಳನ್ನು ಪಡೆದಿದ್ದಾರೆ ನೋಡು. ಹುಟ್ಟಿನಿಂದ ಶ್ರೇಷ್ಠತೆಯೆನ್ನುವುದು ಭ್ರಮೆ ಮತ್ತು ಪಲಾಯನವಾದ. ನಿನ್ನಪ್ಪ ಧೃತರಾಷ್ಟ್ರ ಹನ್ನೊಂದು ಮಂದಿ ರಾಣಿಯರಿಂದ ನೂರ ಒಂದು ಮಕ್ಕಳನ್ನು ಪಡೆದ. ಇವರಲ್ಲಿ ಯುದ್ಧವನ್ನು ಗೆದ್ದುಕೊಡಬಲ್ಲವರು ಯಾರಿದ್ದಾರೆಂದು ತೋರಿಸು. ನೀನು ಬೀಜಕ್ಷೇತ್ರ ನ್ಯಾಯಕ್ಕೆ ಅಂಟಿಕೊಂಡು ಹಸ್ತಿನಾವತಿಯ ಸಿಂಹಾಸನವನ್ನು ದಕ್ಕಿಸಿಕೊಳ್ಳಬಹುದೆಂದು ಭಾವಿಸಿದ್ದರೆ ಅದು ಕೇವಲ ಭ್ರಮೆ. ಕೌರವರು ಮತ್ತು ಪಾಂಡವರು ಒಂದಾದರೆ ಕುರು ಸಾಮ್ರಾಜ್ಯವನ್ನು ಸಮಸ್ತ ಆರ್ಯಾವರ್ತಕ್ಕೆ ವಿಸ್ತರಿಸಬಹುದು. ಇನ್ನೊಮ್ಮೆ ಸರಿಯಾಗಿ ಯೋಚಿಸು. ಈಗಲೂ ನಾನು ಯುದ್ಧ ನಿಲ್ಲಿಸಬಲ್ಲೆ.
ಅಳುಕಿಲ್ಲದ ದೃಢ ಸ್ವರದಲ್ಲಿ ದುರ್ಯೋಧನ ತನ್ನ ತೀರ್ಮಾನ ಹೇಳಿದ: “ತಾತಾ, ನನ್ನ ಮಗನನ್ನು ಮತ್ತು ಸಹೋದರರನ್ನು ಕೊಂದವರ, ದುಶ್ಶಳೆಯನ್ನು ವಿಧವೆಯನ್ನಾಗಿ ಮಾಡಿದವರ, ಗುರುಗಳನ್ನು ವಧಿಸಿದವರ, ನಿಮ್ಮನ್ನು ಈ ಸ್ಥತಿಯಲ್ಲಿ ನರಳಿಸಿದವರ ಜತೆಯಲ್ಲಿ ಎಂದಿಗೂ ಸಂಧಾನ ಮಾಡಿಕೊಳ್ಳಲಾರೆ. ನನ್ನ ದೇಹದಲ್ಲಿ ಕೊನೆಯುಸಿರು ಇರುವವರೆಗೆ ಹಸ್ತಿನಾವತಿಯ ಸಿಂಹಾಸನದಲ್ಲಿ ಪಾಂಡವರ ಪ್ರತಿಷ್ಠಾಪನೆಯಾಗದಂತೆ ನೋಡಿಕೊಳ್ಳುತ್ತೇನೆ. ಯುದ್ಧವನ್ನು ನಿಲ್ಲಿಸುವ ಮಾತೇ ಇಲ್ಲ.”
ಭೀಷ್ಮರು ಮೌನಿಯಾದರು. ದುರ್ಯೋಧನ ಮತ್ತು ಕರ್ಣ ತಲೆಬಾಗಿ ವಂದಿಸಿ ಹೊರನಡೆದರು. ಭೀಷ್ಮರ ನೆನಪುಗಳು ಹಿಂದಕ್ಕೋಡಿದವು. ಆ ಮಾತುಗಳು ಮತ್ತೆ ನೆನಪಾದವು: “….ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ನಿನ್ನನ್ನು ಕೊಲ್ಲುತ್ತೇನೆ.”
*****
ಮುಂದುವರೆಯುವುದು