ಪ್ರಿಯ ಸಖಿ,
ಸೂಫಿ ಕಥೆಯೊಂದು ನೆನಪಾಗುತ್ತಿದೆ. ಒಬ್ಬಾತ ಸೂಫಿ ಗುರುವಿನ ಬಳಿ ಹೋಗಿ ಸ್ವಾಮಿ ನಾನು ನಿಮ್ಮಿಂದ ಸತ್ಯ ಹಾಗೂ ವಾಸ್ತವದ ಬಗ್ಗೆ ಅರಿಯಬೇಕೆಂದಿದ್ದೇನೆ. ದಯಮಾಡಿ ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಿ ಎಂದ. ಆತನ ಮಾತನ್ನು ಕೇಳಿದ ಗುರು ಅವನನ್ನು ಕರೆದುಕೊಂಡು ಒಂದು ಬಾವಿಯ ಬಳಿ ನಿಂತು ತಾನು ತಂದಿದ್ದ ಪಾತ್ರೆಗೆ ನೀರು ಸೇದಿ ತುಂಬಿಸಿದ. ಪಾತ್ರೆ ತುಂಬಿ ನೀರು ಹೊರಚೆಲ್ಲುತ್ತಿದ್ದರೂ ನೀರು ಸೇದಿ ಹುಯ್ಯುತ್ತಲೇ ಇದ್ದ. ಇದನ್ನು ನೋಡಿದ ಶಿಷ್ಯ ತುಂಬಿರುವ ಪಾತ್ರೆಗೆ ನೀರು ಹೊಯ್ಯುವುದರಲ್ಲಿ ಏನು ಅರ್ಥವಿದೆ. ಇನ್ನೂ ಹೆಚ್ಚಿನ ನೀರು ಅದರಲ್ಲಿ ಹಿಡಿಸದು ಎಂದ. ಅದಕ್ಕೆ ಸೂಫಿ ಗುರು ನೋಡಪ್ಪಾ, ನಿನ್ನ ಮನಸ್ಸು ಸಹ ಪಾತ್ರೆಯ ತರಹ. ಅದರಲ್ಲಿ ತುಂಬಿರುವ ಪೂರ್ವಪರ ಪರಿಕಲ್ಪನೆಗಳನ್ನೂ, ಬೇಡದ ಮೌಲ್ಯಗಳನ್ನೂ, ಭಾವನೆಗಳನ್ನು ಖಾಲಿಮಾಡದೆ ಅದರಲ್ಲಿ ಸತ್ಯ ಹಾಗೂ ವಾಸ್ತವವನ್ನು ತುಂಬುವುದಾದರೂ ಹೇಗೆ ಎಂದ.
ಸಖಿ, ನಾವೂ ಹೀಗೆ ಅನೇಕ ವ್ಯಕ್ತಿ, ವಸ್ತು ಸತ್ಯ, ಸಿದ್ಧಾಂತ, ತತ್ವ, ವಯಸ್ಸು, ಕಾಲ, ಜಾತಿ…. ಹೀಗೆ ಎಲ್ಲದರ ಬಗೆಗೂ ನಮ್ಮ ಆನುಭವಕ್ಕೆ ತಕ್ಕಂತೆ ಪೂರ್ವಗ್ರಹವನ್ನು ಇಟ್ಟುಕೊಂಡು ಬಿಟ್ಟಿರುತ್ತೇವೆ. ಅಲ್ಲವೆ? ಚೌಕಟ್ಟನ್ನು ಮೀರಿ ಇವುಗಳ ಬಗೆಗೆ ನಮ್ಮ ಭಾವನೆಗಳನ್ನು ಬದಲಿಸಿಕೊಳ್ಳಲು ಪ್ರಯತ್ನಿಸುವುದೆ ಇಲ್ಲ. ಒಬ್ಬ ವ್ಯಕ್ತಿ ಯಾವುದೋ ಒಂದು ಸಂದರ್ಭದಲ್ಲಿ ಯಾರೊಂದಿಗೋ ಆಡಿದ ಮಾತಿನಿಂದಲೇ ಅವನನ್ನು ಅಳೆದು ಅವನೆಂದರೆ ಇಷ್ಟೇ ಎಂದು ಚೌಕಟ್ಟು ಹೊಂದಿಸಿ ಕುಳ್ಳರಿಸಿಬಿಡುತ್ತೇವೆ. ಅದನ್ನು ಮೀರಿ ಅವನ ವ್ಯಕ್ತಿತ್ವ ಅನೇಕಪಟ್ಟು ವಿಸ್ತಾರವುಳ್ಳದ್ದೂ, ಆಳವುಳ್ಳದ್ದಾಗಿದ್ದರೂ ನಾವದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಆದರೆ ಹಾಗೆಂದು ಸತ್ಯವೇನೂ ಬದಲಾಗುವುದಿಲ್ಲವಲ್ಲ. ನಿಜಕ್ಕೂ ಆ ವ್ಯಕ್ತಿ ಏನಾಗಿರುತ್ತಾನೋ ಅದೇ ಆಗಿರುತ್ತಾನೆ. ನಮ್ಮ ಪೂರ್ವ ಗ್ರಹಗಳು ವ್ಯಕ್ತಿಯ ವ್ಯಕ್ತಿತ್ತವನ್ನಳೆಯುವ ಮಾನದಂಡವಾಗಿರುವುದಿಲ್ಲ. ನಾವು ನಮಗೇ ಈ ಪೂರ್ವಗ್ರಹದ ಮಿತಿಯನ್ನು ಹಾಕಿಕೊಂಡು ಪ್ರಪಂಚವನ್ನು ನೋಡಲಾರಂಭಿಸಿದರೆ ಕುಬ್ಜರಾಗುವುದು ನಾವೇ ಹೊರತು ಪ್ರಪಂಚವಲ್ಲ!
ಆದ್ದರಿಂದಲೇ ಮೊದಲು ನಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕು. ಎಲ್ಲವೂ ನಾವೆಂದುಕೊಂಡಿರುವಂತೆಯೇ ನಾವೆಂದುಕೊಂಡಿರುವಷ್ಟೇ ಆಗಿರುವುದಿಲ್ಲ. ಸತ್ಯ ಎನ್ನುವುದು ಎಂದಿಗೂ ಆಳದಲ್ಲಿರುತ್ತದೆ. ಅದನ್ನು ತಿಳಿಯಲು ತೆರೆದ ಮನಸ್ಸು, ಪೂರ್ವಗ್ರಹವಿಲ್ಲದ ದೃಷ್ಟಿಕೋನ ಅಗತ್ಯವಾಗಿರುತ್ತದೆ. ಒಂದು ಖಾಲಿ ಲೋಟದಲ್ಲಿ ಏನೂ ಇಲ್ಲ ಎಂದು ನಾವು ಭ್ರಮಿಸಿಬಿಟ್ಟಿರುತ್ತೇವೆ. ಆದರೆ ಅದರಲ್ಲಿ ಗಾಳಿ ತುಂಬಿರುತ್ತದೆ!
ಲೋಟದಲ್ಲಿ ಗಾಳಿಯಿರುವುದನ್ನು ನಾವು ಕಂಡಿಲ್ಲ ಎಂದ ಮಾತ್ರಕ್ಕೆ ಅದು ಸುಳ್ಳಾಗಿಬಿಡುವುದಿಲ್ಲ. ಆ ಲೋಟದಲ್ಲಿ ಅರ್ಧನೀರು ತುಂಬಿಸಿ ಅರ್ಧ ನೀರಿದೆ ಅಷ್ಟೇ ಎಂದುಕೊಂಡರೆ ಇನ್ನರ್ಧ ಲೋಟದಲ್ಲಿ ಗಾಳಿಯಿರುವುದೂ ಸುಳ್ಳಾಗುವುದಿಲ್ಲ!
ಸಖಿ, ಪೂರ್ವಗ್ರಹಗಳನ್ನು ಹೊಂದಿ, ನಂಬಿ, ನಮಗೆ ನಾವೇ ಮಿತಿಗಳನ್ನು, ಚೌಕಟ್ಟುಗಳನ್ನು ಹಾಕಿಕೊಂಡು ಕಣ್ಕಾಪು ಬಿಗಿದ ಕುದುರೆ ನೇರ ದಾರಿಯಷ್ಟೇ ಪ್ರಪಂಚ ಎಂದುಕೊಂಡಂತೆ ನಾವೂ ಆಗಿಬಿಡುವುದು ಬೇಡ. ತೆರೆದ ಮನಸ್ಸಿನಿಂದ ಸತ್ಯವನ್ನು ನೋಡುವ, ಆಸ್ವಾದಿಸುವ, ಆಹ್ವಾನಿಸುವ, ಒಪ್ಪಿಕೊಳ್ಳುವ, ವಿವೇಕ ನಮ್ಮಲ್ಲಿ ಮೂಡಲಿ. ನಾವು ಕಲ್ಪಿಸಿಕೊಂಡಂತೆಲ್ಲಾ ಸತ್ಯವಾಗಿಬಿಡುವುದಿಲ್ಲ. ಸತ್ಯವೆಂಬುದನ್ನರಿಯಲು ಮೊದಲು ಪೂರ್ವಗ್ರಹಗಳಿಲ್ಲದ ಮುಕ್ತ ಮನಸ್ಸು ನಮ್ಮದಾಗಲಿ ಎಂದು ಹಾರೈಸೋಣ.
*****