ಸ್ವಪ್ನ ಮಂಟಪ – ೮

ಸ್ವಪ್ನ ಮಂಟಪ – ೮

ಶಿವಕುಮಾರ್‌ಗೆ ಮಂಕು ಬಡಿದಿತ್ತು. ಊರಿಗೆ ಹೋಗಿದ್ದ ಮಂಜುಳ ಮರಳಿ ಬಂದ ಮೇಲೆ ಅನೇಕ ವಿಷಯಗಳನ್ನು ಮಾತನಾಡಬೇಕೆಂದು ಬಯಸಿದ್ದಳು. ಬಾಡಿಗೆ ಮನೆಯಲ್ಲಿ ನೆಲೆಸಿದ ಮೇಲೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಒದಗುತ್ತದೆಯೆಂದು ಭಾವಿಸಿದ್ದಳು. ಆದರೆ ಹಳ್ಳಿಗಳಲ್ಲಿ ಇದು ಅಷ್ಟು ಸಲೀಸಾದ ಸಂಗತಿಯಾಗಿರಲಿಲ್ಲ. ಕೆಲವು ನೂರು ಮನೆಗಳ ಊರಿನಲ್ಲಿ ಯಾರು ಕೆಮ್ಮಿದರೂ ಸೀನಿದರೂ ಅದೊಂದು ಸುದ್ದಿಯಾಗುತ್ತದೆ. ಬೀದಿಗೆಲ್ಲ ಕಣ್ಣು; ಗೋಡೆಗಳಿಗೆಲ್ಲ ಕಿವಿ. ಇಂಥ ಸ್ಥಿತಿಯಿಂದಲೋ ಏನೋ ಕರಿಯಮ್ಮ ಒಮ್ಮೆ ಶಿವಕುಮಾರನಿಗೆ ಹೇಳಿಯೇ ಬಿಟ್ಟಳು: ‘ಇದು ಪ್ಯಾಟೆ ಅಲ್ಲ ಕಣಪ್ಪ. ಹಳ್ಳಿ ಅಂಬಾದ್ನ ಜ್ಞಪ್ತಿ ಇಟ್ಕಂಡು ಸರ್‍ಯಾಗ್ ನಡ್ಕ? ಶಿವಕುಮಾರ್‌ಗೆ ಇದಿಷ್ಟು ಸಾಕಿತ್ತು. ಈ ಮಾತಿನ ವಾಸನೆ ಹಿಡಿದು, ತಾನಾಗಿಯೇ ಮಂಜುಳಾ ಬಳಿಗೆ ಹೋಗಲಿಲ್ಲ. ಈತ ತನ್ನನ್ನು ಉದ್ದೇಶಪೂರ್ವಕವಾಗಿ ದೂರ ಮಾಡುತ್ತಿದ್ದಾನೆಂಬ ಅನಿಸಿಕೆಯೊಂದು ಹಾದು ಹೋದರೂ ಮಂಜುಳ ಅದನ್ನು ತೀರಾ ತೀವ್ರವಾಗಿ ಮನಸ್ಸಿಗೆ ತಂದುಕೊಳ್ಳಲಿಲ್ಲ. ಹಳ್ಳಿಯ ವಾತಾವರಣದ ಕಾರಣ ಕೊಟ್ಟುಕೊಂಡು ಸುಮ್ಮನಾದಳು. ಆದರೆ ಇಬ್ಬರ ನಡುವೆ ಸೆಳೆತದ ಹೊಳೆಯಂತೂ ಹರಿಯುತ್ತಿತ್ತು.

ಶಿವಕುಮಾರ್‌ಗೆ ‘ರಾಜಕುಮಾರಿಯ ದರ್ಶನ’ ದಂಗು ಬಡಿಸಿತ್ತು. ಜೊತೆಗೆ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯವಿದ್ದ ಮಂಜುಳಾ ಜೊತೆ ನಿಕಟವಾಗಿ ವರ್ತಿಸಲು ಸಾಧ್ಯವಾಗದ ಸ್ಥಿತಿ, ಮಂಕಾಗಿ ಓಡಾಡುತ್ತಿದ್ದ ಆತನನ್ನು ನೋಡಿ ‘ಒಂದು ಮದ್ವೆ ಮಾಡಿದ್ರೆ ಎಲ್ಲಾ ಸರ್‍ಯಾಗ್ತೈತೆ’ ಎಂದು ಕರಿಯಮ್ಮ ವ್ಯಾಖ್ಯಾನಿಸಿದ್ದಳು. ಅದಕ್ಕೆ ಸಿದ್ದಣ್ಣ ತನ್ ಕಾಲ್‌ ಮ್ಯಾಲ್ ತಾನ್ ನಿಂತ್ಕಮಾಕೇ ಇನ್ನೂ ಆಗಿಲ್ಲ ಅವ್ನಿಗೆ, ಈಗ್ಲೆ ಮದ್ವೆ ಬ್ಯಾರೆ ಕೇಡು’ ಎಂದಿದ್ದ. ಈ ಮಧ್ಯೆ ಲಕ್ಷ್ಮಿ ಮಾತ್ರ ಮಂಜುಳ ಮೇಡಂ ಜೊತೆ ಬಿಡುವಾದಾಗಲೆಲ್ಲ ಕಾಲ ಕಳೆಯುತ್ತ ಆತ್ಮೀಯವಾಗಿಬಿಟ್ಟಿದ್ದಳು.

ಒಂದು ರಾತ್ರಿ ಎಲ್ಲರೂ ಮಲಗಿದ್ದಾರೆ. ಯಾಕೊ ಎಚ್ಚರವಾಗಿ ಶಿವಕುಮಾರ್‌ ನೋಡುತ್ತಾನೆ. ಎದುರಿಗೆ ಹಟ್ಟಿಯಲ್ಲಿ ಹುಚ್ಚಿ ನಿಂತಿದ್ದಾಳೆ! ತಕ್ಷಣ ಆತನಿಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ತಕ್ಷಣ ಮುಖ ಮುಚ್ಚಿಕೊಂಡು ಮಲಗಿದ. ಸ್ವಲ್ಪ ಹೊತ್ತಿನಲ್ಲಿ ತನ್ನನ್ನು ಯಾರೊ ಮುಟ್ಟಿ ಹೊದಿಕೆ ತೆಗೆದು ನೋಡಿದರೆ : – ಆ ಹುಚ್ಚಿ ಹಜಾರದ ತುದಿಯಲ್ಲಿ ನಿಂತಿದ್ದಾಳೆ. ಕುಮಾರ್ ತಕ್ಷಣ ಕಿರುಚಿದ.

‘ಏಯ್! ಹೋಗು! ಹೊರಟೋಗು ಇಲ್ಲಿಂದ’

‘ಇಲ್ಲ. ಹೋಗಲ್ಲ! ನಾನು ರಾಜಕುಮಾರಿ! ನಾನು ರಾಜಕುಮಾರಿ!’ ಎಂದಳು ಆಕೆ.

‘ರಾಜಕುಮಾರಿ ಆಗಿದ್ರೆ ಯಾರಾದ್ರು ರಾಜಕುಮಾರನ್ನ ಹುಡಿಕ್ಕೊಂಡ್ ಹೋಗು.’ ಎಂದು ಶಿವಕುಮಾರ ಗದರಿದ.

‘ನೀನೇ ನನ್ನ ರಾಜಕುಮಾರ’ – ಎಂದಳು ಆಕೆ.

‘ನಿನ್ ನಾಲಿಗೆ ನಗದ್ ಬಿದ್ ಹೋಗ’ ಎಂದು ಗೊಣಗಿದ ಕುಮಾರ್ ’ಹೊರಟೋಗ್ತೀಯ ಇಲ್ಲೊ ಹೇಳು’ ಎಂದು ಕೆರಳಿ ನುಡಿದ.

‘ಇಲ್ಲ, ನಾನ್ ಹೋಗಲ್ಲ. ನಾನು ಈ ಮನೆಯಾಗೆ ಇರ್‍ತೀನಿ.’

‘ಇದು ನಿನ್ನ ಅರಮನೆ ಅಲ್ಲ. ಹೋಗು ಮೊದ್ಲು.’

‘ನಾನ್ ಹೋಗಲ್ಲ, ನಾನು ರಾಜಕುಮಾರಿ.’

‘ಹೋಗ್ತಿಯೊ ಇಲ್ಲ ಎದ್ದು ಎರಡು ಬಾರುಸ್ಲೊ’ ಎಂದು ಕುಮಾರ್ ಮತ್ತೆ ಗದರಿದ. ಕೂಡಲೇ ಆಕೆ ‘ಅಯ್ಯಯ್ಯೋ ನನ್ ಹೊಡೀತಾರಪ್ಪೋ ನನ್ ಹೊಡೀತಾರೆ. ಹೊಡೀತಾರೆ’ ಎಂದು ಗಟ್ಟಿಯಾಗಿ ಕಿರಚಿದಳು. ಈ ರಾಜಕುಮಾರೀನ ಹೊಡೀತಾರೆ’ ಎಂದು ಗಟ್ಟಿಯಾಗಿ ಕಿರಚಿದಳು.

ಒಳಗಿನಿಂದ ಸಿದ್ದಣ್ಣ ಓಡಿಬಂದ ಕರಿಯಮ್ಮ, ಲಕ್ಷ್ಮಿ ಎದ್ದು ಬಂದರು. ಹೊರಬಂದ ಸಿದ್ದಣ್ಣ ಇವಳನ್ನು ನೋಡಿ ‘ನಿಂಗೇನ್ ಬಂತು ಕೆಟ್ಟಾಪತ್ತು ನಮ್ ಮನೆತಾವ್ ಬರಾಕೆ. ಹೋಗಿಲ್ಲಿಂದ’ ಎಂದು ಹೊಡೆಯುವವನಂತೆ ಬಂದ. ಈ ವೇಳೆಗೆ ಗದ್ದಲ ಕೇಳಿಸಿಕೊಂಡ ಅಕ್ಕಪಕ್ಕದವರು ಎದ್ದು ಹೊರಬಂದಿದ್ದರು. ಮಂಜುಳ ಸಹ ಗಾಬರಿಯಿಂದ ಬಂದು ನಿಂತಿದ್ದಳು.

ಎಲ್ಲರನ್ನೂ ನೋಡಿದ ‘ಹುಚ್ಚಿ’ ಮಂಜುಳಾಳನ್ನು ಹೆಚ್ಚು ಹೊತ್ತು ದಿಟ್ಟಿಸಿದಳು. ಆನಂತರ ದುಃಖಿಸತೊಡಗಿದಳು. ತಲೆ ತಗ್ಗಿಸಿ ಹೊರಟು ಹೋದಳು.

ಆಗ ಸಿದ್ದಣ್ಣ ‘ನಡ್ ನಡೀರಿ ಮಲಿಕ್ಕಳಿ. ಈ ಹುಚ್ಚೀದೂ ಅಮಾವಾಸೇಗೂ ಪೋರ್ಣಮೀಗೂ ಹಿಂಗೆಲ್ಲ ಇದ್ದೇ ಇರ್‍ತೈತೆ.’ ಎಂದು ಹೇಳಿದ. ಎಲ್ಲರೂ ಒಳಹೋದರೂ ಮಂಜುಳ ನಿಂತೇ ಇದ್ದಳು. ಕರಿಯಮ್ಮ ಇದನ್ನು ಗಮನಿಸಿ ‘ನೀವೂ ಹೋಗ್ರಮ್ಮ, ಆಮ್ಯಾಕೆ ಅವ್ಳ್ ಗಾಳಿ ಬೀಸ್ಬಿಟ್ಟಾತು’ ಎಂದಳು. ಮಂಜುಳಾಗೆ ಎದೆ ಧಸಕ್ಕೆಂದಿತು. ಏನು ಮಾತನಾಡಬೇಕೆಂದು ಗೊತ್ತಾಗಲಿಲ್ಲ. ಅಷ್ಟರಲ್ಲಿ ಕರಿಯಮ್ಮ ಕುಮಾರನನ್ನು ಕುರಿತು ‘ಇಲ್ಲೇ ಹಜಾರ್ ದಾಗ್ ಯಾಕ್ ಮಲೀಕಂಬ್ತೀಯ? ಒಳೀಕ್ ಬಾ’ ಎಂದು ಕರೆದು ಹೋದಳು.

ಮಂಜುಳಾಗೆ ತುಂಬಾ ಕಸಿವಿಸಿಯಾಯಿತು. ಅಲ್ಲಿ ನಿಲ್ಲಲಾಗದೆ ತಕ್ಷಣ ಹೋದಳು. ಆನಂತರ ಶಿವಕುಮಾರ್ ‘ಯಾಕಮ್ಮ ಹೆಂಗೆಂಗೊ ಆಡ್ತೀಯ? ನಾನೇನು ಹಸುಗೂಸಲ್ಲ. ಇಲ್ಲೇ ಮಲಗ್ತಿನಿ, ನಿನ್ ಪಾಡಿಗ್ ನೀನು ಒಳೀಕ್ ಹೋಗು.’ ಎಂದು ಸಿಡುಕಿದ. ಹೊದ್ದು ಮಲಗಿದ.

ಮಾರನೇ ದಿನ ಮಂಜುಳಾ ಮನಸ್ಸು ಮೊದಲಿನಂತಿರಲಿಲ್ಲ. ಏನೇನೊ ಭಾವನೆಗಳು ನುಸುಳಿ ವಿಚಿತ್ರ ಸಂಕಟವಾಗತೊಡಗಿತ್ತು. ತರಗತಿ ಮುಗಿದರೆ ಸಾಕೆಂದು ಕಾದಳು. ಯಾಕೆಂದರೆ ಏಕಾಗ್ರತೆಯಿಂದ ಪಾಠ ಮಾಡುವುದಕ್ಕೂ ಆಗುತ್ತಿರಲಿಲ್ಲ. ತನ್ನ ಪಾಲಿನ ತರಗತಿಗಳು ಮುಗಿಯುವುದನ್ನೇ ಕಾಯುತ್ತಿದ್ದು ಹೆಡ್ ಮಾಸ್ಟರ ಬಳಿಗೆ ಬಂದಳು.

‘ಯಾಕೊ ತಲೆನೋವು ಸಾರ್, ಸ್ವಲ್ಪ ಮುಂಚೆ ಹೋಗ್ತಿನಿ.’ ಎಂದು ಕೇಳಿದಳು. ಹೆಡ್ ಮಾಸ್ಟರ್ ಒಪ್ಪಿಗೆ ಕೊಟ್ಟ ಕೂಡಲೆ ಬೆಟ್ಟದ ಕಡೆಗೆ ಹೊರಟಳು.

ಮಂಜುಳ ಬೆಟ್ಟ ಹತ್ತುತ್ತಿದ್ದಾಗ ಆ ‘ಹುಚ್ಚಿ ಈಕೆಯನ್ನು ಗಮನಿಸುತ್ತಲೇ ಇದ್ದಳು. ಆದರೆ ಇದು ಮಂಜುಳಾಳ ಗಮನಕ್ಕೆ ಬರಲಿಲ್ಲ. ಸ್ವಲ್ಪ ದೂರ ಹೋಗಿ ಒಂದು ಬಂಡೆಯ ಮೇಲೆ ಕೂತಳು. ಮಂಜುಳಾಗೆ ಕಾಣದಂತೆ ‘ಹುಚ್ಚಿ’ ಅಲ್ಲಿಯೇ ಸುಳಿದಾಡಿದಳು. ಸ್ವಲ್ಪ ಹೊತ್ತಾದ ನಂತರ ಮೃದುವಾಗಿಯೇ ‘ಏ ಮೇಡಮ್ಮ’ ಎಂದು ಕೂಗಿದಳು. ನಿಶ್ಯಬ್ದ ವಾತಾವರಣದಲ್ಲಿ ತನ್ನನ್ನು ಯಾರೋ ಕರೆದದ್ದು ಕೇಳಿಸಿ ಮಂಜುಳ ಬೆಚ್ಚಿದಳು.

‘ನಾನೇ! ರಾಜಕುಮಾರಿ!’

ಮಂಜುಳ ತಿರುಗಿ ನೋಡಿದಳು.

ರಾಜಕುಮಾರಿಯೆಂದು ಕರೆದುಕೊಳ್ಳುವ ಆಕೆ ನಿಂತಿದ್ದಳು!

ಮಂಜುಳ ಧಿಗ್ಗನೆ ಎದ್ದು ನಿಂತಳು.

‘ಒಬ್ರೇ ಬಂದಿದ್ದೀರಲ್ಲ?’ – ‘ಹುಚ್ಚಿ’ ವಯ್ಯಾರದಿಂದ ಕೇಳಿದಳು. ಮಂಜುಳಾಗೆ ಏನು ಹೇಳಬೇಕೆಂದು ತೋಚದೆ ತೊದಲಿದಳು.

‘ಯಾಕ್ ಒಬ್ರೇ ಬಂದಿದ್ದೀರಲ್ಲ ಅಂಬ್ತ ಕೇಳ್ದೆ’-ಆಕೆ ಮತ್ತೆ ಒತ್ತಿ ಹೇಳಿದಳು.

‘ಇನ್ಯಾರ್ ಬರ್ ಬೇಕಾಗಿತ್ತು?’ ಮಂಜುಳ ಧೈರ್ಯ ಮಾಡಿ ಮರು ಪ್ರಶ್ನೆ ಹಾಕಿದಳು.

‘ಅದೇ ನನ್ ರಾಜಕುಮಾರ ಬರ್‍ಲಿಲ್ವ?’

‘ನಿನ್ ರಾಜಕುಮಾರ?’

‘ಹೂ ಮತ್ತೆ ನನ್ ರಾಜಕುಮಾರ ಅಲ್ದೆ ನಿನ್ ರಾಜಕುಮಾರ ಆಗ್ತಾನ್?’

‘ಯಾರ್ ಬಗ್ಗೆ ಮಾತಾಡ್ತಾ ಇದ್ದೀಯಾ?’

‘ಅದೇ ಶಿವಕುಮಾರ ಅವ್ನಲ್ಲ ಅವ್ನೇ ನನ್ ರಾಜಕುಮಾರ.’

‘ನಿನ್ನ ರಾಜಕುಮಾರನ್ನ ನೀನೇ ಇಟ್ಕೊ, ಯಾರ್ ಬೇಡ ಅಂದ್ರು.’

‘ಎಲ್ರೂ ಬಾಯಾಗೇಳ್ತಾರೆ. ಆದ್ರೆ ಬ್ಯಾರೆ ಮಾಡ್ತಾರೆ.’

‘ಏನ್ ಬೇರೆ ಮಾಡ್ತಾರೆ?’

‘ಎಲ್ಲಾ ಬೇರೆ ಮಾಡ್ತಾರೆ. ನನ್ನ-ನನ್ನ ರಾಜಕುಮಾರನ್ನ ಬ್ಯಾರೆ ಮಾಡ್ತಾರೆ. ನನ್ನ-ನನ್ನ ಅಪ್ಪ ಅಮ್ಮನ್ನ ಬ್ಯಾರೆ ಮಾಡ್ತಾರೆ. ಇನ್ ಮೇಲೆ ನಿನ್ನೂ ಅವನ್ನೂ ಬ್ಯಾರೆ ಮಾಡ್ತಾರೆ. ಬ್ಯಾರೆ ಮಾಡಾಕೆ ಅಂಬ್ತಾನೇ ಕೆಲವ್ರು ಹುಟ್ಟಿರ್‍ತಾರೆ.’

ಮಂಜುಳಾಗೆ ವಿಚಿತ್ರವೆನ್ನಿಸಿತು. ಎಷ್ಟು ಸೊಗಸಾಗಿ ಮಾತನಾಡುತ್ತಾಳೆ! ಇವಳೊಳಗೆ ಅಡಗಿರುವ ಸತ್ಯಗಳು ಎಷ್ಟಿರಬಹುದು! ಮಂಜುಳ ಮೆಲ್ಲಗೆ ಆಕೆಯ ಹತ್ತಿರಕ್ಕೆ ಬಂದಳು. ಮೃದುವಾಗಿ ಕೇಳಿದಳು.

‘ನಾನೊಂದ್ ಮಾತು ಕೇಳ್ತೀನಿ. ಸತ್ಯ ಹೇಳ್ತೀಯ?’

‘ನಾನ್ ಹೇಳೋದೇ ಸತ್ಯ.’

‘ಹಾಗಾದ್ರೆ ಈಗ ಹೇಳು. ನೀನು ಹುಚ್ಚಿ ಆಗಿದ್ದು ಯಾಕೆ?’

‘ಬಾಯ್ಮುಚ್ಚು’ – ಆಕೆ ಘರ್ಜಿಸಿದಳು- ‘ಯಾರ್ ಹೇಳಿದ್ದು ನಾನು ಹುಚ್ಚಿ ಅಂಬ್ತ? ಊರಾಗಿರೋ ಹುಚ್ಚುರು ಹೇಳ್ತಾರೆ ಅಂಬ್ತ ನೀನೂ ನಂಬ್ತೀಯೇನು? ನಾನು ರಾಜಕುಮಾರಿ! ಈ ಸಾಮ್ರಾಜ್ಯಕ್ಕೆ ನಾನೇ ರಾಜಕುಮಾರಿ! ನಂಗೆ ರಾಜಕುಮಾರಿ ಅಂಬ ಗೌರವ ಕೊಡೊ ಹಂಗಿದ್ರೆ ಈ ಕೋಟೆತಾವ ಬಂದೋಗು. ಇಲ್ದಿದ್ರೆ ಇಲ್ಲಿ ನಿನ್ನ ಕಾಲಿಟ್ಟೀಯ ಹುಷಾರ್.’

‘ಕಾಲಿಟ್ರೆ ಏನ್ ಮಾಡ್ತೀಯ?’ -ಸಮಾಧಾನದಿಂದಲೇ ಮಂಜುಳ ಕೇಳಿದಳು.

‘ಕಾಲ್ ಮುರೀತೀನಿ’ – ಥಟ್ಟನೆ ಉತ್ತರಿಸಿದಳು ಆಕೆ.

ಮಂಜುಳ ಕ್ಷಣಕಾಲ ಮೌನವಹಿಸಿದಳು. ಆನಂತರ ಚೇತರಿಸಿ ಕೊಂಡು ಹೇಳಿದಳು.

‘ಬೇಜಾರ್ ಮಾಡ್ಕೊಬೇಡ. ನನ್ನ ಪಾಲಿಗೆ ನೀನು ಖಂಡಿತ ರಾಜಕುಮಾರಿ!’

‘ಹೌದಾ?’ ಆಕೆ ಆನಂದ ಪಟ್ಟಳು- ಈ ವಿಷ್ಯಾನ ಆ ನಿನ್ ಗೆಣೆಕಾರ ಅವ್ನಲ್ಲ, ಅದೇ ಶಿವಕುಮಾರ, ಅವ್ನಿಗೆ ಒಸಿ ಸರ್‍ಯಾಗ್ ಹೇಳು’ ಎಂದಳು.

‘ಖಂಡಿತ ಹೇಳ್ತೀನಿ. ರಾಜಕುಮಾರಿ ಹೇಳಿದ್ಮೇಲೆ ನಮ್ಮಂಥ ಸಾಮಾನ್ಯರು ಅದನ್ನ ಕೇಳಲೇ ಬೇಕಲ್ವ?’-ಮಂಜುಳ ಆಕೆಗೆ ಹಿಡಿಸುವಂತೆ ಮಾತನಾಡಿದಳು. ಆಕೆಗೆ ಖುಷಿಯಾಯಿತು.

‘ಹಂಗ್ ದಾರೀಗ್ ಬಾ, ಹಂಗೇ ನಿನ್ ಗೆಣೆಕಾರನಿಗೆ ಒಸಿ ಬುದ್ಧಿ ಹೇಳು. ಈ ರಾಜಕುಮಾರೀನ ಕೈಬಿಟ್ಟು ರಾಜ್ಯ ಕೋಶ ಎಲ್ಲಾ ಕಳ್ಕೊಬೇಡ ಅಂಬ್ತ ಸರ್‍ಯಾಗಿ ಕಿವಿಹಿಂಡು.’

‘ಹಾಗೆ ಆಗಲಿ ರಾಜಕುಮಾರಿ.’

‘ನನ್ನನ್ನ ರಾಜಕುಮಾರಿ ಅಂತ ಒಪ್ಪಿಕೊಂಡ ಮೇಲೆ ನೀನ್ ಏನ್ ಬೇಕಾದ್ರು ಕೇಳು ದಯಪಾಲಿಸ್ತೇನೆ’ – ಆಕೆ ಹೆಮ್ಮೆಯಿಂದ ಅಪ್ಪಣೆ ಕೊಡಿಸಿದಳು.

‘ನಾನು ಏನ್ ಕೇಳಲಿ ರಾಜಕುಮಾರಿ? ನೀವ್ಯಾಕೆ ಒಬ್ಬರೇ ಈ ಬೆಟ್ಟ ಗುಡ್ಡ ಅಲೀತೀರ? ಆ ಸ್ವಪ್ನ ಮಂಟಪದ ಹತ್ರಾನೇ ಯಾಕ್ ಸುತ್ತುತ್ತೀರಿ?’

‘ಲೇ ಹುಚ್ಚಿ! ನಿನಗಷ್ಟು ಗೊತ್ತಾಗಕಿಲ್ವ? ಸ್ವಪ್ನ ಮಂಟಪದ್ ತಾವ ಹರೇದ್ ಹುಡ್ಗಿ ಯಾಕ್ ಸುತ್ತುತ್ತಾಳೆ ಅಂಬ್ತ ನಿಂಗೊತ್ತಾಗಕಿಲ್ವ? ನೀನೂ ಒಸಿ ಸುತ್ತಿ ನೋಡು. ಅದ್ರ ಮಜ ಗೊತ್ತಾಗ್ತೈತೆ!’

‘ಎಷ್ಟೇ ಆದ್ರೂ ನೀವು ರಾಜಕುಮಾರಿ ತಾನೆ? ನಿಮ್ಮ ಬಾಯಿಂದ ಬಂದ್ರೆ ಚೆನ್ನ ಅಲ್ವ?’ – ಮಂಜುಳ ಪುಸಲಾಯಿಸಿದಳು.

‘ಸ್ವಪ್ನ ಮಂಟಪ ಅಂದ್ರೆ ಅದೇನೊ ನಂಗೊಂಥರಾ ಸುಳಿ ಸೆಳ್ದಂಗೆ! ಮೈಯ್ಯಾಗೆಲ್ಲ ಮಿಂಚು ಹರ್‍ದಂಗೆ! ಎದೆ ಒಳಗೆ ಬೆಳ್ಳಿ ಬೆಳಕು ಬಿತ್ತಿ ಬೆಳೆ ಬೆಳ್ದಂಗೆ! ಅದಕ್ಕೇ ಅಲ್ಲೇ ಸುತ್ತುತೀನಿ. ನನ್ ರಾಜಕುಮಾರ ಬಳೀಕ್ ಬಂದೇ ಬತ್ತಾನೆ; ಕೈ ಹಿಡ್ದೆ ಹಿಡೀತಾನೆ ಅಂಬ್ತ ಕಾಯ್ತಾ ಇರ್‍ತೀನಿ.’

‘ಆದ್ರೆ ಹೀಗೆ ಹಗಲು ರಾತ್ರಿ ಏನೂ ನೋಡ್ದೆ ಯಾಕ್ ಸುತ್ತುತೀಯ?’

‘ಅದನ್ನ ಆ ನಿನ್ನ ಗೆಣೆಕಾರನ್ನೇ ಕೇಳು. ಎಲ್ಲಾ ಹೇಳ್ತಾನೆ.’

‘ಯಾರು? ಶಿವಕುಮಾರನ್ನ?’

‘ಆಹಹ! ಗೆಣೆಕಾರ ಅಂದ್ಕೂಡ್ಲೆ ಶಿವಕುಮಾರ ಅಂಬ್ತ ಎಷ್ಟು ಚಂದಾಗೇಳ್ತೀಯ ನೋಡು’- ಆಕೆ ಅಣಕಿಸಿದಳು.

ಮಂಜುಳ ಮೌನವಾದಳು.

ಮತ್ತೆ ಆಕೆಯೇ ಮಾತನಾಡಿದಳು.

‘ಅವ್ನನ್ನ ನಂಬ್ ಬ್ಯಾಡ. ಅವ್ನಿಗೆ ಅವನ್ದು ಅಂಬ್ತ ಒಂದು ಮನಸ್ಸಿಲ್ಲ. ಮೆದುಳೂ ಇಲ್ಲ. ಎಲ್ಲಾ ಅವ್ರಿವ್ರ ಮಾತ್ನ ತುಂಬ್ಕಂಡು ಹುಚ್ಚುನ್ ಥರಾ ಆಡ್ತಾನೆ. ಇಲ್ದಿದ್ರೆ ನಾನ್ಯಾಕ್ ಹಿಂಗ್ ಇರ್‍ತಿದ್ದೆ;’

‘ಅಂದ್ರೆ ನಂಗೊಂದೂ ಅರ್ಥ ಆಗ್ತಿಲ್ಲ?’ – ಮಂಜುಳ ಕುತೂಹಲದಿಂದ ಕೇಳಿದಳು.

‘ಅರ್ಥ ಆಗಿದ್ರೆ ನನ್ ಯಾಕ್ ಹುಚ್ಚಿ ಅಂಬ್ತಿದ್ದ. ಮದ್ಲೇ ರಾಜಕುಮಾರಿ ಅಂಬ್ತ ಕರ್‍ದು ಗೌರವ ಕೊಡ್ತಿದ್ದೆ.’

‘ನಿಜ, ನೀನ್ ಹೇಳಿದ್ದು ಖಂಡಿತ ನಿಜ ರಾಜಕುಮಾರಿ. ಈಗ ಹೇಳು ನಿನ್ನ ಮಾತಿನ ಅರ್ಥ ಏನು?’

‘ಏನ್ ಮಾತಾಡ್ತ ಇದ್ದೀಯ ನೀನು?’ – ಆಕೆ ಸಿಡಿದಳು – ‘ನಿನ್ನಗಿನ್ನ ಅಂಬ್ತ ಮಾತಾಡ್ತೀಯಲ್ಲ?’ ‘ನಿಮ್ಮ’ ಅಂಬ್ತ ಮಾತಾಡು – ಎಂದು ಎಚ್ಚರಿಸಿದಳು.

‘ಹಾಗೆ ಆಗಲಿ ರಾಜಕುಮಾರಿಯವರೆ, ಈಗ ಹೇಳಿ, ನಿಮ್ಮ ಮಾತಿನ ಅರ್ಥ ಏನು?’

‘ಹೋಗಿ, ಅವ್ನಿದಾನಲ್ಲ ಅವ್ನನ್ನೇ ಕೇಳು. ಎಲ್ಲಾ ಹೇಳ್ತಾನೆ.’

‘ಆತನನ್ನೇ ಯಾಕ್ ಕೇಳ್ಬೇಕು? ಅವ್ನು ಎಷ್ಟಾದ್ರು ಹುಚ್ಚ. ನೀವಾದ್ರೆ ಈ ಕೋಟೆಕೊತ್ತಲದ ರಾಜಕುಮಾರಿ! ನೀವೇ ಹೇಳಬಹುದಲ್ಲ?’

‘ನಾನ್ ಹೇಳೇ ಹೇಳ್ತೀನಿ. ನಾನು ಸತ್ಯ ಹೇಳ್ತೀನಿ. ಅದಕ್ಕೆ ಮುಂಚೆ ಅವ್ನನ್ನ ಕೇಳ್ಕೊಂಡ್ ಬಾ. ಆಮೇಲ್ ನಾನ್ ಹೇಳೋದು ಇದ್ದೇ ಇರ್‍ತೈತೆ.’

‘ಆತ ಹೇಳಿದ್ರೆ ನೀವ್ ಹೇಳ್ದಂತೆ ಆಗೋದಿಲ್ವಲ್ಲ ರಾಜಕುಮಾರಿ?’

‘ಊರಿಂದೆಲ್ಲ ಮಾತಾಡ್ತಾನೆ, ನನ್ ವಿಷ್ಯ ಗೊತ್ತಿರಲ್ವ ಅವ್ನಿಗೆ? ನೀನು ಸರ್‍ಯಾಗ್ ಕೇಳು. ಆಗ ಸತ್ಯ ಗೊತ್ತಾಗುತ್ತೆ.’

‘ಹೋಗ್ಲಿ, ಇನ್ನೊಂದ್ ವಿಷ್ಯ ಕೇಳ್ತೀನಿ. ದಯವಿಟ್ಟು ಹೇಳಿ ರಾಜಕುಮಾರಿ.’

‘ಏನದು ಬೇಗ ಹೇಳು. ನಾನು ಸ್ವಪ್ನ ಮಂಟಪಕ್ಕೆ ಹೋಗಬೇಕು.’

‘ನಿಮ್ಮ ಕಂಕುಳಲ್ಲಿ ಆ ಗಂಟು ಇದೆಯಲ್ಲ, ಅದ್ರಲ್ಲೇನಿದೆ?’

‘ನನ್ನ ಕನಸು! ಒಂದೇ ಒಂದು ಕನಸು! ಗುಟ್ಟಾಗ್ ಬಚ್ಚಿಟ್ಕಂಡಿದ್ದೀನಿ. ನೋಡು, ಒಂದ್ ಮಾತೇಳ್ತೀನಿ ಸರ್‍ಯಾಗ್ ಕೇಳಿಸ್ಕ. ಇನ್ನೊಂದ್ಸಾರಿ ನನ್ನ ಪ್ರಶ್ನೆ ಮಾಡಿದ್ರೆ ನಿನ್ ತಲೆ ಸಿಡಿದು ಎರಡು ಹೋಳಾಗುತ್ತೆ.’

-ಎಂದು ಜಪ್ಪಿಸಿ ಹೇಳಿದವಳೆ ಆಕೆ ಹೊರಟುಬಿಟ್ಟಳು. ರಭಸವಾಗಿ ಹೋಗುತ್ತ ಏನೋ ಸದ್ದು ಕೇಳಿದಂತಾಗಿ ನಿಂತಳು. ಆಲಿಸಿದಳು. ಮಂಜುಳಾ ಕಡೆ ತಿರುಗಿ ‘ಬಾ ಇಲ್ಲಿ’ ಎಂದಳು. ‘ಸರ್‍ಯಾಗ್ ಕೇಳಿಸ್ಕ, ಯಾವ್ದೊ ಕಾರೊ ಬಸ್ಸೋ ಬಂದಂಗೈತೆ ಅಲ್ವಾ?’ ಎಂದು ಹೇಳಿದಳು. ಮಂಜುಳ ಕೇಳಿಸಿಕೊಂಡಾಗ ನಿಜ ಎನ್ನಿಸಿತು, ವಾಹನಗಳ ಸದ್ದು ಕೇಳಿಸುತ್ತಿತ್ತು. ‘ಹೌದೌದು. ಎರಡು ಮೂರು ಕಾರುಗಳು ಬಂದಂಗಿವೆ.’ ಎಂದು ಮಂಜುಳ ಹೇಳಿದ್ದೇ ತಡ ಆಕೆ ಎಗರುತ್ತ ಎತ್ತರಕ್ಕೆ ಹೋದಳು. ಕೆಳಗೆ ನೋಡಿ ಅಲ್ಲಿಂದಲೇ ಕೂಗಿದಳು.

‘ಸ್ವಪ್ನ ಮಂಟಪತ್ತಾವ ಕಾರುಗಳು ನಿಂತ್ಕಂಡವೆ. ನಾನು ನೋಡಾಕೋಯ್ತಿನಿ. ನಿಂಗೂ ಇಷ್ಟ ಇದ್ರೆ ಬಾ?’ ಎಂದಳು.

ಮಂಜುಳ ‘ನೀನ್ ಹೋಗು’ ಎಂದು ಹೇಳಿದಾಗ ಆಕೆ ಸಿಟ್ಟಿನಿಂದ ನೋಡಿ ‘ಏನ್ ಮಾತಾಡ್ತಾ ಇದ್ದೀಯ ನೀನು’ ಎಂದು ಗದರಿದಳು. ಆಗ ಮಂಜುಳ ‘ತಪ್ಪಾಯ್ತು ರಾಜಕುಮಾರಿಯವರೆ, ಏಕವಚನದಲ್ಲಿ ಕರೆದದ್ದು ತಪ್ಪಾಯ್ತು. ತಾವು ದಯವಿಟ್ಟು ಹೋಗ್ಬನ್ನಿ’ ಎಂದು ಕೇಳಿಕೊಂಡಳು. ‘ಹಾಗ್ ದಾರೀಗ್ ಬಾ’ ಎನ್ನುತ್ತಾ ಆಕೆ ರಭಸವಾಗಿ ಇಳಿಯತೊಡಗಿದಳು.

ಆನಂತರ ಮಂಜುಳ ಎತ್ತರಕ್ಕೆ ಹೋಗಿ ನೋಡಿದಳು. ಸ್ವಪ್ನ ಮಂಟಪದ ಬಳಿ ಮೂರು ಕಾರುಗಳು ನಿಂತಿದ್ದವು. ಒಂದು ಜೀಪು! ಒಂದು ಕಾಂಟೆಸಾ! ಇನ್ನೊಂದು ಯಾವುದೋ ಹೊಸ ರೀತಿಯ ಕಾರು! ಯಾಕೆ ಈ ಕಾರುಗಳು ಬಂದಿವೆ, ಯಾರು ಬಂದಿದ್ದಾರೆ ಎಂದು ಕುತೂಹಲವಾದರೂ ಅಲ್ಲಿಗೆ ಹೋಗುವುದು ಸರಿಯಲ್ಲವೆಂದು ಕೊಂಡಳು. ಆಕೆ-‘ಹುಚ್ಚಿ’ ಓಡಿ ಹೋಗುತ್ತಿರುವುದು ಕಾಣಿಸಿತು.

ಮಂಜುಳಾಗೆ ‘ಆಕೆ’ ಒಂದು ಒಗಟಾದಳು. ಶಿವಕುಮಾರನನ್ನೇ ಕೇಳೆಂದು ಯಾಕೆ ಹೇಳುತ್ತಿದ್ದಾಳೆ? ಅಂದು ಆತನನ್ನು ಕೇಳಿದಾಗ ತನ್ನ ತಾಯಿಯನ್ನು ಕೇಳೆಂದು ಆತ ಯಾಕೆ ಹೇಳಿದ? ಹೀಗೆ ಎಲ್ಲಿಲ್ಲದ ಪ್ರಶ್ನೆಗಳ ಭಾರದಲ್ಲಿ ಮಂಜುಳ ಬೆಟ್ಟದಿಂದ ಕೆಳಗಿಳಿಯತೊಡಗಿದಳು. ಒಳಗೆ ಒತ್ತಿ ಬರುವ ಕುತೂಹಲವನ್ನು ಹತ್ತಿಕ್ಕಲಾಗದೆ ಈಗಲೇ ಹೋಗಿ ಕರಿಯಮ್ಮನನ್ನು ಕೇಳಲೆ ಎನ್ನಿಸಿತು. ಕರಿಯಮ್ಮ ಸಾಮಾನ್ಯವಾಗಿ ಸಾಯಂಕಾಲದ ಹೊತ್ತು ಕಣಕ್ಕೆ ಹೋಗಿ ಹುಲ್ಲು ಹೊತ್ತು ತರುವುದು ರೂಢಿ. ಹೇಗಿದ್ದರೂ ಅವರ ಕಣ ದಾರಿಯಲ್ಲೇ ಸಿಗುತ್ತದೆ, ಬಣವೆ ಹುಲ್ಲು ಇರಿದು ಕಟ್ಟಿಕೊಂಡು ಹೋಗಲು ಬಂದಿದ್ದರೆ ಕೇಳಿಯೇ ಬಿಡೋಣ ಎಂದು ಬಿರುಸಾಗಿ ಕಾಲು ಹಾಕತೊಡಗಿದಳು.

ಇತ್ತ ಆಕೆ – ‘ಹುಚ್ಚಿ’ – ಸ್ವಪ್ನ ಮಂಟಪದ ಬಳಿಗೆ ಓಡೋಡಿ ಬಂದಾಗ, ಅಲ್ಲಿ ಸುತ್ತಮುತ್ತಲ ಜಮೀನನ್ನು ವೀಕ್ಷಿಸುತ್ತಿದ್ದರು. ಮಂತ್ರಿ, ಶಾಸಕ ಮತ್ತು ಮೂರ್‍ನಾಲ್ಕು ಜನ ವಿದೇಶಿಯರು ಇದ್ದರು. ಪಟೇಲ ಮತ್ತು ಊರಿನ ಇತರರು ನೆರೆದಿದ್ದರು. ಪೋಲೀಸರೂ ಬಂದಿದ್ದರು. ಎಲ್ಲವೂ ಈಕೆಗೆ ವಿಚಿತ್ರವಾಗಿ ಕಂಡಿತು. ಅವರ ಆಗಮನದ ಉದ್ದೇಶ ಮತ್ತು ಮಾತುಕತೆ ಈಕೆಗೆ ಅಷ್ಟೇನೂ ಅರ್ಥವಾಗದಿದ್ದರೂ ಗುಂಪಿನ ಬಳಿ ನಿಂತು ನೋಡುತ್ತಿದ್ದಳು; ಕೇಳಿಸಿಕೊಳ್ಳುತ್ತಿದ್ದಳು.

’`This is one of the finest places we have seen’ ಎಂದು ವಿದೇಶಿಯೊಬ್ಬ ಹೇಳಿದ.

`That is why I selected this’ ಎಂದು ಮಂತ್ರಿ ಹೆಮ್ಮೆಯಿಂದ ಹೇಳಿಕೊಂಡ. ಆನಂತರ ಶಾಸಕರ ಕಡೆ ತಿರುಗಿ ‘ಈ ಸುತ್ತಮುತ್ತ ಜಮೀನ್ ಕೊಡ್ತಾರೆ ತಾನೆ?’ ಎಂದು ಕೇಳಿದ. ಶಾಸಕ ‘ಅಷ್ಟು ಗ್ಯಾರಂಟಿ ಇಲ್ದೆ ನಾನು ಕರ್‍ಕೆಂಡ್ ಬತ್ತೀನಾ ಸಾರ್ ನಾನು ಈ ಕ್ಷೇತ್ರದ ಶಾಸಕನಾಗಿ ಎಂಥ ಕೆಲ್ಸ ಮಾಡ್ತಿದ್ದೇನೆ ಅಂತ ಮಂತ್ರಿಗಳಾದ ನಿಮಗೆ ಗೊತ್ತೇ ಇದೆ.’ ಎಂದು ಹಲ್ಲುಗಿರಿದ. ‘ಎಲ್ರೂ ನಿಮ್ಮಥರಾ ಸಲೀಸಾಗಿ ಕೆಲ್ಸ ಮಾಡಿದ್ರೆ ವಿದೇಶಿ ಬಂಡವಾಳಗಾರರು ಎಷ್ಟೊಂದ್ ಹಣ ತೊಡಗುಸ್ತಾರೆ ಗೊತ್ತೇ? ಆದ್ರೆ ಏನ್ ಮಾಡೋದು, ನಮ್ಮ ಜನಕ್ಕಿನ್ನೂ ಬುದ್ಧಿಬರ್‍ಲಿಲ್ಲ’ ಎಂದು ಮಂತ್ರಿ ಹೇಳಿದಾಗ ಶಾಸಕ ಹಿಗ್ಗಿ ಹಿರೇಕಾಯಿ ಆಗಿ ‘ಏನೋ ಬೇಗ ಇಲ್ಲಿ ವಿದೇಶಿ ಹಣ ಹರಿದು ಅವರೊಂದು ಕಾರ್ಖಾನೆ ಮಾಡಿದ್ರೆ ನಂಗೂ ನಿಮ್ಮ ಇಬ್ರಿಗೂ ಹೆಸರಲ್ವ ಸಾರ್’ ಎಂದ ‘ಆದೇ ಆಗುತ್ತೇರಿ. ಈ ಕಂಪನಿಯವರು ಒಪ್ಪಿದ್ರೆ ಎಷ್ಟು ಹಣ ಸುರೀತಾರೆ ಗೊತ್ತೇ? ಜಮೀನು ಅಕ್ವೈರ್ ಮಾಡ್ಕೊಂಡಿದ್ದಕ್ಕೂ ಅವ್ರೇ ಕೊಡಬೇಕೂಂತ ಕೇಳ್ತಿದ್ದೀವಿ. ಅವರು ಇಲ್ಲಿ ತಳ ಊರ್‍ತಾರೆ ಅಂದ್ರೆ ಒಂದೊಂದು ಅಡಿ ನೆಲಕ್ಕೂ ಲೆಕ್ಕವಿಲ್ಲದಷ್ಟು ಬೆಲೆ ಬರುತ್ತೇರಿ. ಗೊತ್ತಾ’ ಎಂದು ಮಂತ್ರಿಗಳು ಮನದುಂಬಿ ಮಾತನಾಡುತ್ತಿದ್ದಾಗ ವಿದೇಶಿಯೊಬ್ಬ ಸ್ವಪ್ನ ಮಂಟಪದ ಕಡೆ ತೋರಿಸಿ, ಅದರ ಬಗ್ಗೆ ಕೇಳಿದ. ಪಟೇಲ ಕನ್ನಡದಲ್ಲಿ ಹೇಳಿದ್ದನ್ನು ಮಂತ್ರಿ, ಶಾಸಕರು ಅಷ್ಟಿಷ್ಟು ವಿವರಿಸಿದರು. ಶಾಸಕ ‘ಇದು ಪುರಾತತ್ವ ಇಲಾಖೆಗೆ ಸೇರಿಲ್ಲ. ಅದೇನೊ ಜನರ ನಂಬಿಕೆ. ಏನೇನೋ ಹೇಳ್ತಾರೆ. ಅಷ್ಟು ಬಿಟ್ಟರೆ ಬೇರೆ ಮಹತ್ವ-ಇಲ್ಲ’ ಎಂದು ಹರಕುಮುರುಕು ಇಂಗ್ಲೀಷಿನಲ್ಲಿ ನಿವೇದಿಸಿದ. ಸ್ವಲ್ಪ ಕಾಲ ಅದರ ಬಗ್ಗೆಯೇ ಮಾತುಕತೆ ನಡೆಯಿತು.

ವಿದೇಶಿ ಬಂಡವಾಳಗಾರರು ಹೇಳುತ್ತಿದ್ದ ಪ್ರಕಾರ ಸ್ವಪ್ನ ಮಂಟಪವನ್ನು ಹಾಗೇ ಉಳಿಸಿಕೊಳ್ಳುವುದು ಕಷ್ಟವೆಂಬ ಭಾವನೆ ಬೆಳೆಯುತ್ತಿತ್ತು. ‘ನಾವೆಲ್ಲ ಬದುಕ್ತೀವಿ ಅನ್ನಾದಾದ್ರೆ ಅದನ್ನು ಕೆಡವಿದ್ರಾಯ್ತು ಬಿಡಿಸಾರ್’ ಎಂದು ಪಟೇಲ ಶಾಸಕನಿಗೆ ಹೇಳಿದ.

ಕೂಡಲೇ ಆಕೆ ನಿಂತಲ್ಲಿಂದ ಕೂಗಿ ಹೇಳಿದಳು.

‘ಇಲ್ಲ, ನಾನ್ ಬಿಡಾಕಿಲ್ಲ ಅದನ್ನ ಕೆಡವಾಕ್ ಬಿಡಾಕಿಲ್ಲ. ಅದನ್ ಕೆಡವಾಕ್ ಬಂದೋರ್ ಕತ್ತು ಹಿಸುಕ್ ಬಿಡ್ತೀನಿ.’

ಎಲ್ಲರ ಗಮನ ಆ ಕಡೆ ಹರಿಯಿತು. ವಿದೇಶಿ ಮಂತ್ರಿಯನ್ನು ಕೇಳಿದ

’What is the problem with her?’

ಆಗ ಮಂತ್ರಿ ಶಾಸಕನನ್ನು ಕೇಳಿದ.

‘ಏನ್ ಅವಳ ಗಲಾಟೆ? ಯಾರ್ ಅವಳು?’ ಕೂಡಲೇ ಶಾಸಕ ಪಟೇಲನನ್ನು ಕೇಳಿದ.

‘ಯಾರಯ್ಯ ಅವಳು? ಏನಯ್ಯಾ ಅವಳ ಗಲಾಟೆ?’

ಪಟೇಲ ಉತ್ತರಿಸಿದ.

‘ಅವಳೊಬ್ಬ ಹುಚ್ಚಿ.’

ಅದನ್ನೇ ಶಾಸಕ ಮಂತ್ರಿಗೆ ಹೇಳಿದ. ಮಂತ್ರಿ ವಿದೇಶಿಗೆ ಹೇಳಿದ. ಆಕೆ ಅಷ್ಟಕ್ಕೆ ಸುಮ್ಮನಾಗಲಿಲ್ಲ.

‘ಏನ್ರಯ್ಯ ಹಂಗ್ ನೀವ್ ನೀವೇ ಮಾತಾಡ್ಕಂಬ್ತಿದ್ದೀರ? ನೀವ್ ಬೇಕಾದಾಗ ಕೆಡವಾಕೆ ಈ ಸ್ವಪ್ನ ಮಂಟಪ ನಿಮ್ಮನೆ ಆಸ್ತಿ ಅಲ್ಲ. ನನ್ನೊಂಥೋರ್ ಆಸೆ ಎಲ್ಲಾ ಆ ಮಂಟಪದಾಗೇ ತುಂಬ್ಕಾಂಡೈತೆ ಗೊತ್ತಾ?’

ಪಟೇಲನಿಗೆ ಸಿಟ್ಟು ಬಂತು. ಯಾಕೆಂದರೆ ಶಾಸಕ ಮತ್ತು ಮಂತ್ರಿಗಳಿಗೆ ಕಸಿವಿಸಿಯಾಗಿತ್ತು. ಮಂತ್ರಿಯಂತೂ ‘ವಿದೇಸಿ ಕಂಪನಿಯೋರ್ ಬಂದಾಗ ಇದೇನ್ರಿ ಈ ಹುಚ್ಚಾಟ’ ಎಂದು ಸಿಡುಕಿದರು. ಪಟೇಲ ಸಿಟ್ಟಿನಿಂದ ಆಕೆಯ ಬಳಿ ಬಂದ.

‘ಸುಮ್ಕೆ ಹೊಲ್ಟೋಗು ಇಲ್ಲಿಂದ’ ಎಂದು ಗದರಿದ.

ಅಷ್ಟರಲ್ಲಿ ಪೋಲೀಸ್ ಇನ್ಸ್‌ಪೆಕ್ಟರ್‌ ಬಂದು ‘ಸುಮ್ಕೆ ಹೋಗ್ತಾಳೊ ನಾವೇ ಕಳುಸ್ಬೇಕೊ ಕೇಳಿ ಪಟೇಲ್ರೆ’ ಎಂದರೂ ಆಕೆ ಜಪ್ಪೆನ್ನಲಿಲ್ಲ.

‘ನಾನ್ಯಾಕಯ್ಯ ಹೋಗ್ಲಿ. ಇದು ನನ್ನ ರಾಜ್ಯ! ನಾನು ರಾಜಕುಮಾರಿ! ನೀವೆಲ್ಲ ಮೊದ್ಲು ಇಲ್ಲಿಂದ ಜಾಗ ಖಾಲಿ ಮಾಡ್ರಿ?’ ಎಂದು ದೊಡ್ಡ ಕಂಠದಲ್ಲಿ ಹೇಳಿದಳು.

ಪೋಲೀಸ್ ಇನ್ಸ್‌ಪೆಕ್ಟರ್ ಕೂಡಲೇ ಅವಳ ರಟ್ಟೆ ಹಿಡಿದು ಎಳೆದೊಯ್ಯ ತೊಡಗಿದ. ಆಕೆ ‘ನಾನು ರಾಜಕುಮಾರಿ ಕಣಯ್ಯ, ಆ ಮಂಟಪಾನ ಏನೂ ಮಾಡ್ ಬ್ಯಾಡ್ರಯ್ಯ. ನಿಮ್ಮ ದಮ್ಮಯ್ಯ ಆದನ್ನ ಅಲ್ಲೇ ಬಿಡ್ರಯ್ಯ’ ಎಂದು ದುಃಖಿತಳಾಗಿ ಹೇಳುತ್ತಿದ್ದರೂ ಆತ ಬಲವಂತವಾಗಿ ಎಳದೊಯ್ದು ನೂಕಿ ಬಂದ.

ನೆಲಕ್ಕೆ ಬಿದ್ದ ಅವಳ ಕಣ್ಣೆದುರಿಗೆ ಧೂಳೆಬ್ಬಿಸಿಕೊಂಡು ಜೀಪು ಕಾರುಗಳು ಹೋದವು. ಧೂಳಿನ ನಡುವೆಯೂ ಅವಳ ದೃಷ್ಟಿ ಸ್ವಪ್ನ ಮಂಟಪದ ಕಡೆಗಿತ್ತು. ಅದು ನಿಚ್ಚಳವಾಗಿ ಕಾಣುತ್ತಿತ್ತು.
* * ೮

ಮಂಜುಳ, ಕರಿಯಮ್ಮ ಸಿಗಬಹುದೆಂದು ಕಣದ ಕಡೆಗೆ ಬಂದದ್ದು ಹುಸಿಯಾಗಲಿಲ್ಲ. ಎಂದಿನಂತೆ ಸಾಯಂಕಾಲ ಹುಲ್ಲಿನ ಹೊರೆ ಕಟ್ಟಿ ಕೊಂಡು ಹೋಗಲು ಬಂದಿದ್ದ ಕರಿಯಮ್ಮ ಮಂಜುಳಾಳನ್ನು ನೋಡಿ ಚಕಿತಗೊಂಡಳು.

‘ಏನಮ್ಮ ಈಟ್ ದೂರ?’ ಎಂದು ಕೇಳುತ್ತಾ ‘ಬರ್ರಿ ಬರ್ರಿ ಬಡವರ ಬವಣೆ, ಈ ಬಣವೆನಾಗೆ ಒಟ್ಟು ಕಂಡೈತೆ’ ಎಂದು ಕರೆದು ನೆಲದ ಮೇಲಿದ್ದ ಅಗಲವಾದ ಕಲ್ಲನ್ನು ತೋರಿಸಿ ಕೂತುಕೊಳ್ಳಲು ಹೇಳಿದಳು.

ಮಂಜುಳ ಕೂತ ಮೇಲೆ ಕರಿಯಮ್ಮ ಸ್ವಲ್ಪ ಹೊತ್ತು ಹುಲ್ಲು ಮೆದೆಗಳನ್ನು ಹೆಕ್ಕಿ ತೆಗೆದು ಹೊರೆ ಕಟ್ಟಲು ಜೋಡಿಸುತ್ತ ಮೌನವಾಗಿದ್ದಳು. ಮೌನವನ್ನು ಮುರಿಯಲೇಬೇಕಾಗಿತ್ತು. ಮಂಜುಳ ‘ನಾನ್ ಸಹಾಯ ಮಾಡ್ಲ?’ ಎಂದು ಕೇಳಿದಳು.

‘ಬ್ಯಾಡಮ್ಮ ಸದ್ಯ. ಇನ್ನು ಆ ಕಷ್ಟನೂ ಕೊಟ್ರೆ, ನೋಡ್ದೋರು, ಸೊಸೆ ಮಾಡ್ಕಂಡೇ ಬಿಟ್ರು ಅನ್ತ ಗುಲ್ಲೆಬ್ಬುಸ್ತಾರೆ. ನಮ್ಮೂರೇನ್ ಸಾಮಾನ್ಯ ಅಲ್ಲ’ ಎಂದಳು ಕರಿಯಮ್ಮ.

ಮಂಜುಳಾಗೆ ಮುಜುಗರವಾಯಿತು. ಸುಮ್ಮನಾದಳು. ಆದರೆ ಕರಿಯಮ್ಮ ಸುಮ್ಮನಾಗಲಿಲ್ಲ.

‘ಹಳ್ಳೀನೆ ಹಂಗೇ ಕಣಮ್ಮ, ಪಟ್ಟಣದಾಗಾದ್ರೆ ಅವ್ರವ್ ಪಾಡು ಅವ್ರದು. ಇಲ್ಲಿ ಹಂಗಲ್ಲ, ಇಲಿ ಹೋಯ್ತು ಅಂದ್ರೆ ಹುಲಿ ಹೋಯ್ತು ಅಂಬ್ತಾರೆ.’ ಎಂದು ಹೇಳಿದಳು.

‘ಇದೆಲ್ಲ ಇದ್ದದ್ದೇ ಬಿಡಿ’ ಎಂದಳು ಮಂಜುಳ.

‘ಅರೆ! ಆಟಂದ್ ಸಲೀಸಾಗ್ ಹೇಳ್ಬಿಟ್ಟೆ! ಎಲ್ಲಾನ ಉಂಟಾ? ಅಕ್ಕಪಕ್ಕದೋರ್ ಆಡ್ಕಂಡ್ರೆ ನಾವ್ ನೆಮ್ದಿನಾಗ್ ಬದ್ಕಕಾಗ್ತೈತ? ನಿನ್ದೂ ಒಳ್ಳೆ ಕತೆ ಆತಲ್ಲ!’

‘ಹಾಗಲ್ಲಮ್ಮ ನಾನು ಹೇಳಿದ್ದು. ಲೋಕ ಅಂದ್ಮೇಲೆ ಇವೆಲ್ಲ ಇದ್ದದ್ದೇ ಅಂತ ನಿಮಗೆ ಸಮಾಧಾನ ಹೇಳ್ದೆ ಅಷ್ಟೆ.’

‘ನಂಗೇನಾಗೈತೆ ಸಮಾಧಾನ ಹೇಳೋ ಅಂತಾದ್ದು. ನಾನ್ ಜಪ್ಪಯ್ಯ ಅಂದ್ರೂ ಜಗ್ಗಾಕಿಲ್ಲ. ನಾನ್ ಬಾಯ್ ಮಾಡಿದ್ರೆ ಯಾರೂ ಎದ್ರಿಗ್ ನಿಂತ್ಕಳಂಗಿಲ್ಲ. ನಿಂಗಿನ್ನೂ ನನ್ ವಿಷ್ಯ ಸರ್‍ಯಾಗ್ ಗೊತ್ತಿಲ್ಲ.’

ಕರಿಯಮ್ಮ ತನ್ನ ಪ್ರತಾಪದ ಬಗ್ಗೆ ಕೊಚ್ಚಿಕೊಳ್ಳುತ್ತಿರುವಾಗ ಮಂಜುಳಾಗೆ ಮಾತನಾಡಲಾಗಲಿಲ್ಲ. ಕರಿಯಮ್ಮ ಮಾತು ನಿಲ್ಲಿಸಲಿಲ್ಲ.

‘ಹಿಂಗೇ ವಿಷ್ಯಕ್ಕೆ ಅಂಬ್ತ ಹೇಳ್ತೀನಿ. ಏನೂ ಅಂದ್ಕ ಬ್ಯಾಡ ಕಣಮ್ಮ. ನನ್ ಮಗ ಅಂದ್ರೆ ನಂಗೆ ಪಂಚ ಪ್ರಾಣ. ಏನೋ ಕಷ್ಟಪಟ್ಟು ಓದಿ ಈಟೊಂದ್ ಬೆಳ್ಸಿದ್ದೀವಿ ಅವ್ನೆಲ್ಲಾರ ಹಾದಿ ತಪ್ಪಿದ್ರೆ ಅಂಬ್ತ ನಂಗ್ ಭಯ. ಆಟೇ ಕಣಮ್ಮ.’

‘ಈಗೇನ್ ಅಂಥಾದ್ದಾಗಿದೆ ಹೇಳಿ ಮತ್ತೆ.’

‘ಇಲ್ಲೀವರ್‍ಗೂ ಅಂಥಾದ್ದೇನೂ ಆಗಿಲ್ಲ ಅಂದ್ಕಂಡಿವ್ನಿ. ಯಾರಿಗೊತ್ತು ಮುಂದೆ ಹೆಂಗೊ ಏನ್ಕತೆಯೊ?’

‘ನಿಮ್ಮ ಮಗ ಯಾವತ್ತೂ ಹಾದಿ ತಪ್ಪೋದಿಲ್ಲ ಬಿಡಿ.’

‘ಅದೇನೊ ಸರಿ ಆದ್ರೆ ನೀನ್ ಬ್ಯಾರೆ ಇದ್ದೀಯಲ್ಲಮ್ಮ?’

ಕರಿಯಮ್ಮ ನೇರವಾಗಿ ಹೇಳಿದಾಗ ಮಂಜುಳಾ ದಂಗಾದಳು. ಆದರೆ ಕರಿಯಮ್ಮ ಹೇಳಬೇಕಾದ್ದನ್ನು ಪೂರ್ತಿ ಮಾಡಿದಳು.

‘ನೋಡಮ್ಮ, ನೀನು ಅಂದ್ರೆ ನಮ್ಮ ಶಿವಕುಮಾರ ಇಷ್ಟಪಡ್ತಾನೆ. ಅದ್ ಯಾವ್‌ಥರಾ ಇಷ್ಟಾನೊ ನಂಗಂತೂ ಇನ್ನೂ ಗೊತ್ತಾಗಿಲ್ಲ. ಏನೋ ಓದು ಬರಾ ಕಲ್ತೋರು, ನಾಚಿಕೆ ಗೀಚಿಕೆ ಇಲ್ದೆ ಮಾತಾಡ್ಕಂಬ್ತೀರ ಅಂಬ್ತ ನಾನೂ ತಿಳ್ಕೊಂಡ್ ಸುಮ್ಕಿರಾನ ಅಂದ್ರೆ ಮನ್ಸು ಕೇಳಾಕಿಲ್ಲ. ಒಳಗೇ ಚುರ್ ಚುರ್ ಅಂಬ್ತೈತೆ. ಅದ್ಕೇ ಹೇಳ್ತಾ ಇವ್ನಿ, ನೀನ್ ಮಾತ್ರ ಒಸಿ ಹುಸಾರಾಗಿರಮ್ಮ.’

ಮಂಜುಳ ಮನಸ್ಸು ನಲುಗತೊಡಗಿತು. ಆದರೂ ಚೈತನ್ಯ ತಂದುಕೊಳ್ಳಲು ಪ್ರಯತ್ನಿಸಿದಳು.

‘ಹಾಗೆಲ್ಲ ಏನೂ ಆಗೋದಿಲ್ಲಮ್ಮ. ಚಿಂತೆ ಮಾಡ್ ಬೇಡಿ’ ಎಂದಳು.

‘ನೀನಂತೋಳಲ್ಲ ಅಂಬ್ತ ಗೊತ್ತು ಕಣಮ್ಮ. ಆದ್ರೂ ಆ ಸ್ವಪ್ನ ಮಂಟಪದ ಒಳೀಕೆ ನೀವಿಬ್ರು ಹೋಗ್ಬಿಟ್ಟೀರ! ನೀವು ಈ ಕಾಲ್ದೋರು! ಏನೂ ನಂಬಾಕಿಲ್ಲ, ಅದುಕ್ಕೆ ಹೇಳ್ತಾ ಇವ್ನಿ. ಇಷ್ಟರ ಮೇಲೆ ಋಣಾನು ಸಂಬಂಧ ಇದ್ರೆ ಯಾರ್ ತಾನೆ ತಪ್ಸಾಕಾಗ್ತೈತೆ. ಎಲ್ಲಾ ಹಣೆಮೇಲ್ ಬರ್‍ದಂಗ್ ಆಗ್ತೈತೆ ಬಿಡು.’ ಎಂದು ಕರಿಯಮ್ಮ ತನಗೆ ತಾನೇ ಸಮಾಧಾನ ಮಾಡಿಕೊಳ್ಳುವಂತೆ ಹೇಳಿದಾಗ ಮಂಜುಳಾಗೂ ಸಮಾಧಾನವಾಯಿತು. ಒಂದು ವೇಳೆ ತಾನು ಮತ್ತು ಶಿವಕುಮಾರ್ ಮದುವೆಯಾಗುವ ಸಂದರ್ಭ ಬಂದರೂ ನಿಭಾಯಿಸಬಹುದು ಎಂದುಕೊಂಡಳು. ಮರುಕ್ಷಣವೇ ಈಗಲೇ ಇದೆಲ್ಲ ಯಾಕೆ ಯೋಚಿಸುತ್ತಿದ್ದೇನೆ ಎಂದು ಕೇಳಿಕೊಂಡಳು. ಅಷ್ಟರಲ್ಲಿ ಕರಿಯಮ್ಮ ಮಾತನಾಡಿದಳು.

‘ನೀನೇನೋ ಒಳ್ಳೆ ಹುಡ್ಗಿ ಥರಾನೇ ಇದ್ದೀಯ; ನೋಡಾಕೂ ಚಂದಾಗಿದ್ದೀಯ. ಆದ್ರೆ ಯಾವ ಜಾತೀನೋ ಏನೊ ನಾನಂತೂ ಕೇಳ್‌ಲಿಲ್ಲ.’

ಮಂಜುಳ ಮಾತಾಡಲಿಲ್ಲ. ಸುಮ್ಮನೆ ನೋಡಿದಳು. ಕರಿಯಮ್ಮನೇ ಮುಂದವರೆಸಿದಳು.

‘ಒಂದೊಂದ್ ಸಾರಿ ಅನ್ನುಸ್ತೈತೆ, ಈ ಜಾತಿ ಗೀತಿ ಕಟ್ಕಂಡ್ ಏನಾಗ್ಬೇಕು? ಮನುಸ್ರು ಮನುಸ್ರು ಥರಾ ನಡ್ಕಂಡ್ರೆ ಸಾಕು. ಏನಂತೀಯ?’

‘ನೀವು ಹೇಳೋದು ಸರಿ ಅಂತೀನಿ’ -ಮಂಜುಳ ದನಿಗೂಡಿಸಿದಳು.

‘ನೀನೇನೊ ಸರಿ ಅಂತೀಯ; ಆದ್ರೆ ಈ ಮೊಂಡುಜನ ಹಂಗೇ ತಿಳ್ಕಬೇಕಲ್ಲ.’

‘ನಿಧಾನವಾಗಿ ತಿಳ್ಕೋತಾರೆ ಬಿಡಿ.’

‘ಅದೇನ್ ತಿಳ್ಕಂತಾರೊ ಏನ್ಕತೆಯೊ, ಒಟ್ನಲ್ಲಿ ನೀನ್ ಮಾತ್ರ ಒಬ್ಬಳೇ ಹಿಂಗೆಲ್ಲ ಓಡಾಡ್ ಬ್ಯಾಡ. ಒಸಿ ನಮ್ಮನೆ ಹುಡ್ಗಿಥರಾ ಇರೋದ ಕಲಿ.’-ಕರಿಯಮ್ಮ ಬುದ್ದಿ ಹೇಳಿದಳು. ಮಂಜುಳ ಮರು ಮಾತಾಡದೆ ‘ಸರಿ’ ಎಂದಳು.

ತಾನು ಆ ಹುಚ್ಚಿಯ ವಿಷಯ ಕೇಳಲು ಬಂದರೆ ಮಾತು ಎಲ್ಲೆಲ್ಲಿ ಹೋಗುತ್ತಿದೆ ಎನ್ನಿಸಿ ಚಡಪಡಿಸಿದಳು. ಕಡೆಗೆ ಧೈರ್ಯ ಮಾಡಿ ಕೇಳಿಯೇ ಬಿಟ್ಟಳು.

‘ಆ ಹುಚ್ಚಿ ಇದಾಳಲ್ಲ, ಅದೇ ಕೋಟೆ, ಬೆಟ್ಟ, ಮಂಟಪ ಅಂತ ಓಡಾಡ್ತಾಳಲ್ಲ ಅವಳ ವಿಷಯ ಏನು? ನಿಮ್ಗೇನಾದ್ರು ಗೊತ್ತ?’

ಕರಿಯಮ್ಮನ ಮುಖ ಬಿಗಿಯಾಯಿತು.

‘ಗೊತ್ತು, ಇವಾಗೇನಾಗ್ಬೇಕು.’

‘ಏನೂ ಆಗ್ಬೇಕಾಗಿಲ್ಲ. ಸುಮ್ನೆ ತಿಳ್ಕೊಬೇಕು ಅನ್ನಿಸ್ತು… ಅದಕ್ಕೆ…’

‘ಯಾಕೆ? ನೀನು ಅವಳಂಗೇ ಆಗ್ಬೇಕ?’

‘ಛೇ! ಛೇ! ಹಾಗಲ್ಲ. ಹೀಗೇ ಕುತೂಹಲ ಕೇಳಿದೆ.’

‘ಅವಳ ಕತೆ ಕೇಳ್ದಿದ್ರೆ ಕೋಟೆ ಬಿದ್ದು ಭೂಮಿ ಬಿರುಕು ಬಿಡೊಲ್ಲ. ಸುಮ್ಕೆ ನಡಿ ಹೋಗಾನ.’ ಎಂದು ಕರಿಯಮ್ಮ ಹುಲ್ಲಿನ ಹೊರೆಯನ್ನು ತಾನೇ ಹೊತ್ತುಕೊಳ್ಳಲು ಹೋದಳು. ಮಂಜುಳ ತಾನೂ ಹೊರೆಹೊರಿಸಲು ಸಹಾಯ ಮಾಡುತ್ತ ಮತ್ತೆ ಹೇಳಿದಳು.

‘ಅವತ್ತು ಕುಮಾರ್ ಹೇಳಿದ್ರು – ನಿಮ್ಮನ್ನ ಕೇಳಿದ್ರೆ ಗೊತ್ತಾಗುತ್ತೆ ಅಂತ. ಅದುಕ್ಕೆ ಕೇಳ್ದೆ.’

‘ಅವ್ನಿಗೇನು ಹೇಳ್ತಾನೆ. ಹೇಳ್ ಬೇಕಾದೋಳ್ ನಾನ್ ತಾನೆ? ಅವಳ ವಿಷ್ಯ ಜ್ಞಪ್ತಿ ಮಾಡ್ಕಳ್ಳಾಕೂ ನಂಗಿಷ್ಟ ಇಲ್ಲ. ನಡ್ ನಡಿ ಹೋಗಾನ.’ ಎಂದು ಕರಿಯಮ್ಮ ಮುಂದಡಿಯಿಟ್ಟಳು.

ಅಷ್ಟರಲ್ಲಿ ಪಕ್ಕದ ಮನೆ ಪುಟ್ಟಕ್ಕಯ್ಯ ಓಡೋಡಿ ಬರುತ್ತಿರುವುದು ಕಾಣಿಸಿತು. ಆಕೆ ಬಂದವಳೇ ‘ಇನ್ನೂ ಇಲ್ಲೇ ಇದ್ದೀಯಲ್ಲ, ಇವಾಗ್ ತಾನೆ ನಿಮ್ ಲಕ್ಷ್ಮಿಗೆ ಕಾರ್ ಡಿಕ್ಕಿ ಹೊಡೀತು. ಯಾರ್‍ಗೂ ದಿಕ್ಕೇ ತೋಚ್ತಿಲ್ಲ. ಬಾ ಜಲ್ದು’ ಎಂದು ಸುದ್ದಿಕೊಟ್ಟಳು.

ಕರಿಯಮ್ಮ ‘ಹ್ಞಾ!’ ಎಂದು ಹೌಹಾರಿ ಹುಲ್ಲಿನ ಹೊರೆಯನ್ನು ಎಸೆದು ಓಡತೊಡಗಿದಳು. ಮಂಜುಳ ಹಿಂಬಾಲಿಸಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಡ
Next post ನನ್ನ ಕವಿತೆಗಳಲ್ಲಿ ನಿನ್ನ ಗುಣಗಳ ತಂದು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…