ನಮ್ಮೂರ ಚಂದ್ರನ ಕಂಡೀರೆ ನೀವು
ನಿಮ್ಮೂರ ಬಾನಿನಲಿ
ಒಮ್ಮೊಮ್ಮೆ ತೋರುವನು ಒಮ್ಮೊಮ್ಮೆ ಮಾಯುವನು
ಮಣ್ಣಿನ ಮುದ್ದು ಮಗನಿವನು
ಒಮ್ಮೊಮ್ಮೆ ತೊಳೆದ ಬಿಂದಿಗೆಯಂತವನು
ಕೇರಿಕೇರಿಗೆ ಹಾಲ ಸುರಿಯುವನು
ಒಮ್ಮೊಮ್ಮೆ ಬೆಳ್ಳಿ ಬಟ್ಟಲಂತವನು
ಮನೆ ಮನೆಗೆ ಮಲ್ಲಿಗೆ ಚೆಲ್ಲುವನು
ಒಮ್ಮೊಮ್ಮೆ ತೂಗು ತೊಟ್ಟಿಲಂತವನು
ಊರ ಮಕ್ಕಳನೆಲ್ಲ ತೂಗುವನು
ಒಮ್ಮೊಮ್ಮೆ ಕಂಡೂ ಕಾಣದಂತವನು
ಕರೆ ಕರೆದು ಕಂಡವರ ಕಾಡುವನು
ಒಮ್ಮೊಮ್ಮೆ ಮಾಯಾ ಕನ್ನಡಿಯಂತವನು
ಸ್ವಪ್ನ ಲೋಕದ ಬೀಗ ತೆರೆಯುವನು
ಒಮ್ಮೊಮ್ಮೆ ಏನೋ ಕದ್ದವನಂತವನು
ಮರಗಳ ಹಿಂದೆ ಮರೆಯಾಗುವನು
ಒಮ್ಮೊಮ್ಮೆ ನಮ್ಮ ದುಃಖದಂತವನು
ಇಬ್ಬನಿ ಕಂಬನಿ ಸುರಿಸುವನು
ಒಮ್ಮೊಮ್ಮೆ ನಮ್ಮ ದೇವರಂತವನು
ಭೂಮಿಗೆ ಸ್ವರ್ಗವ ಹರಿಸುವನು
ಒಮ್ಮೊಮ್ಮೆ ಕಿಟಿಕಿಯ ತೆರೆದೊಳ ಬರುವನು
ಕದ್ದು ಚುಂಬಿಸಿಬಿಟ್ಟು ಎದ್ದು ಹೋಗುವನು
ಬಾಗಿಲ ಬಳಿ ನಿಂತು ಬಾ ಎಂದು ಕರೆವನು
ಹೋದಾರೆ ಕೈಗೆ ಸಿಗದವನು
ರಾತ್ರಿ ರಾಣಿಯರ ರಾಜನಂತಿರುವನು
ಬಾನಲ್ಲಿ ಕವಡೆಗಳ ಆಡುವನು
ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ
ಅಪೂರ್ವ ರಾಗಗಳ ಹಾಡುವನು
*****