ತಿಮ್ಮರಾಯಪ್ಪನ ಬುದ್ಧಿವಾದ
ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ ತಿಮ್ಮರಾಯಪ್ಪ ಮುಂಚಿತವಾಗಿಯೇ ಮನೆಗೆ ಬಂದಿದ್ದನು. ಸ್ನೇಹಿತರ ಪರಸ್ಪರ ಭೇಟಿ ಆಯಿತು.
‘ನನ್ನ ಕಾಗದ ಬಂದು ಸೇರಿತೋ ?’
‘ಸೇರಿತು ಮಹಾರಾಯ ! ಅದಕ್ಕಾಗಿಯೇ ಈ ದಿನ ಮುಂಚಿತವಾಗಿ ಕಚೇರಿಯಿಂದ ಬಂದೆ. ನೀನು ಬರುತ್ತೀಯೆಂದು ತಿಳಿದು ಮುಂಚಿತವಾಗಿ ಊಟಮಾಡಿ ನಿರೀಕ್ಷಿಸುತ್ತಾ ಕುಳಿತೆ.’
“ನನಗೇನನ್ನೂ ಮಿಗಿಸಲಿಲ್ಲವೆ? ಎಲ್ಲವನ್ನೂ ನೀನೇ ಕಬಳಿಸಿ ಬಿಟ್ಟೆಯಾ?”
‘ಅಯ್ಯೋ ಶಿವನೆ ! ಎಲ್ಲವನ್ನೂ ನಾನು ಕಬಳಿಸುತ್ತೇನೆಯೆ ? ನಿನಗೂ ಮಡಗಿದ್ದೇನೆ. ಇನ್‍ಸ್ಪೆಕ್ಟರ್ ಗಿರಿ ರುಚಿ ಕಂಡವರು ತಿಂಡಿ ಪೋತರಾಗುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲವೆ?’ ಎಂದು ತಿಮ್ಮರಾಯಪ್ಪ ನಗುತ್ತಾ ಹೇಳಿ ಒಳಕ್ಕೆ ಎದ್ದು ಹೋದನು. ತಟ್ಟೆಯಲ್ಲಿ ಒಳ್ಳೆಯ ಬಾಳೆಯ ಹಣ್ಣುಗಳು, ಬಿಸ್ಕತ್ತುಗಳು ಲೋಟಾದಲ್ಲಿ ಹಾಲು ತಂದು ಮುಂದಿಟ್ಟು, ಊಟ ಮಾಡು ರಂಗಣ್ಣ ! ಈಗ ನೀನು ಎರಡು ಸುತ್ತು ದುಂಡಗಾಗಿದ್ದೀಯೆ, ಸರ್ಕಿಟು ಗಿರ್ಕಿಟು ಚೆನ್ನಾಗಿ ನಡೀತಿರಬೇಕು!’ ಎಂದನು.
ಫಲಾಹಾರ ಸ್ವೀಕಾರ ಮಾಡುತ್ತ ರಂಗಣ್ಣ ತನ್ನ ಅನುಭವಗಳನ್ನೆಲ್ಲ ಹೇಳಿದನು. ತಿಮ್ಮರಾಯಪ್ಪನಿಗೆ ಬೋರ್ಡು ಒರೆಸುವ ಬಟ್ಟೆ ಮತ್ತು ಮೇಷ್ಟ್ರು ಮುನಿಸಾಮಿ-ಅವರ ಕಥೆಗಳನ್ನು ಕೇಳಿ ಬಹಳವಾಗಿ ನಗು ಬಂತು.
‘ಈ ದಿನ ಬೆಂಗಳೂರಲ್ಲಿ ಏನು ಮೀಟಿಂಗು?’ ಎಂದು ಕೇಳಿದನು.
‘ತಿಮ್ಮರಾಯಪ್ಪ! ಏನೋ ಹಾಳು ಮೀಟಿಂಗು-ಅನ್ನು, ನಮ್ಮ ಇಲಾಖೆಯ ಜನವೋ-ಆ ಕಮಿಟಿಯ ಮೆಂಬರುಗಳೋ! ಸಾಕಪ್ಪ ಅವರ ಸಹವಾಸ!’
‘ಅದೇಕೆ ಹಾಗೆ ಹೇಳುತ್ತೀಯೆ?’
‘ಇನ್ನೇನು ಮಾಡಲಿ ಹೇಳದೆ ? ಉಪಾಧ್ಯಾಯರಿಗೆ ಸರಿಯಾದ ತಿಳಿವಳಿಕೆಯಿಲ್ಲ; ಪಠ್ಯ ಪುಸ್ತಕಗಳಿಗೆಲ್ಲ ಒಂದೊಂದು ಕೈಪಿಡಿಯನ್ನು ತಯಾರಿಸಿ ಕೊಡಬೇಕು ; ಪ್ರತಿ ಪಾಠ ಹಾಕಿಕೊಳ್ಳಬೇಕಾದ ಪೀಠಿಕೆ, ಉಪಯೋಗಿಸಬೇಕಾದ ಉಪಕರಣಗಳು, ಬೋಧನಕ್ರಮ, ಕೇಳಬೇಕಾದ ಪ್ರಶ್ನೆಗಳು, ಮಂದಿಟ್ಟು ಮಾಡಿಸಬೇಕಾದ ವಿಷಯ- ಇವುಗಳನೆಲ್ಲ ತಿಳಿಸುವ ಸೂಚನೆಗಳಿರಬೇಕು-ಎಂದು ನಾನು ಹೇಳಿದರೆ, ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹರಟಿದರು. ಉಪಾಧ್ಯಾಯರ ಸ್ವಾತಂತ್ರಕ್ಕೆ ಭಂಗ ತರಬಾರದು, ಅವರ ಮೇಧಾಶಕ್ತಿಗೆ ಸಂಪೂರ್ಣ ಅವಕಾಶ ಕೊಡಬೇಕು, ಒಂದೇ ಅಚ್ಚಿನಲ್ಲಿ ಎರಕ ಹೊಯ್ದ೦ತೆ ಈ ಕೈಪಿಡಿಯ ಸಲಹೆಗಳು ಬೇಡ ಎಂದು ಒಬ್ಬ ಮಹಾರಾಯ ! ಇಂಗ್ಲೆಂಡಿನಲ್ಲಿ ಉಪಾಧ್ಯಾಯರೆಲ್ಲ ಬಹಳ ಚಾಕಚಕ್ಯದಿಂದ ತಂತಮ್ಮ ಕೈಪಿಡಿಗಳನ್ನು ತಾವೇ ಸಿದ್ಧಗೊಳಿಸಿಕೊಳ್ಳುತ್ತಾರೆ ; ನಮ್ಮ ದೇಶದ ಉಪ್ಯಾಧ್ಯಾಯರೂ ಹಾಗೆಯೇ ರಚಿಸಿಕೊಳ್ಳಲಿ ; ನಾವು ಕೈಪಿಡಿ ಮಾಡಿ ಕೊಟ್ಟರೆ ಉಪಾಧ್ಯಾಯರ ಬುದ್ಧಿ ಮದಡಾಗುತ್ತದೆ – ಎಂದು ಮತ್ತೊಬ್ಬ ಹ್ಯಾಟಿನ ದೊಡ್ಡ ಮನುಷ್ಯ ! ಕೈಪಿಡಿಗಳು ಬೇಕಾಗಿದ್ದರೆ ಖಾಸಗಿ ಸಂಸ್ಥೆಗಳು ತಯಾರಿಸಿ ಕೊಡುತ್ತವೆ. ನಮಗೇಕೆ ಆ ಜವಾಬ್ದಾರಿ ? ಎಂದು ಮಗುದೊಬ್ಬ ಬೃಹಸ್ಪತಿ ! ಅವರ ಪೈಕಿ ಒಬ್ಬರಾದರೂ ನಮ್ಮ ಮೇಷ್ಟರ ಮುಖ ನೋಡಿದವರಲ್ಲ. ನಾನು ಪುನಃ, ‘ಕನಿಷ್ಠತಮವಾದ ಸಲಹೆಗಳನ್ನು ನಾವು ಕೊಡೋಣ; ಹೆಚ್ಚಿನ ವಿಷಯಗಳನ್ನು ಉಪಾಧ್ಯಾಯರು ತಮ್ಮ ಕಲ್ಪನಾಶಕ್ತಿಯನ್ನುಪಯೋಗಿಸಿ ತಿಳಿಸಲಿ. ಈಗ ಹಲವರು ಉಪಾಧ್ಯಾಯರು ತಪ್ಪು ತಪ್ಪಾಗಿ ಹೇಳಿಕೊಡುತ್ತಿದ್ದಾರೆ. ನಮ್ಮಲ್ಲಿ ಟ್ರೈನಿಂಗ್ ಆಗಿಲ್ಲದ ಉಪಾಧ್ಯಾಯರು ಹಲವರಿದ್ದಾರೆ. ಟ್ರೈನಿಂಗ್ ಆಗಿಲ್ಲದವರನ್ನೇ ಮೊದಮೊದಲು ನೇಮಕ ಮಾಡುತ್ತೀರಿ. ಆಮೇಲೆ ಯಾವಾಗಲೋ ಟ್ರೈನಿಂಗಿಗೆ ಕಳಿಸಿಕೊಡುತ್ತೀರಿ, ಟ್ರೈನಿಂಗ್ ಸಹ ಸಮರ್ಪಕವಾಗಿಲ್ಲ. ಆದ್ದರಿಂದ ಇಂಗ್ಲೆಂಡನ್ನೂ ನಮ್ಮ ದೇಶವನ್ನೂ ಹೋಲಿಸುವುದು ಬೇಡ’- ಎಂದು ಹೇಳಿದರೂ ಅವರು ಕೇಳಲಿಲ್ಲ ‘ಸಿಟ್ ಡೌನ್- ಕುಳಿತುಕೊಳ್ಳಿ’ ಎಂದು ಹೇಳಿ ನನ್ನನ್ನು ಕೂಡಿಸಿಬಿಟ್ಟರು. ಇಂಗ್ಲೆಂಡ್ ಮೊದಲಾದ ಕಡೆಗಳಲ್ಲಿ ಉಪಾಧ್ಯಾಯರ ಮಾತೃಭಾಷೆಯಲ್ಲೇ ಸಾವಿರಾರು ಪುಸ್ತಕಗಳು ದೊರೆಯುತ್ತವೆ. ಅವರಿಗೆ ಇತರ ಸೌಕರ್ಯಗಳೂ ಇವೆ. ನಮ್ಮಲ್ಲಿ ಮೇಷ್ಟರಿಗೆ ಇಂಗ್ಲೀಷು ಬರುವುದಿಲ್ಲ; ಕನ್ನಡದಲ್ಲಿ ತಕ್ಕಷ್ಟು ಪುಸ್ತಕಗಳಿಲ್ಲ, ಇರುವ ಸ್ಥಿತಿಯನ್ನು ನಾವು ಹೇಳಲು ಹೋದರೆ ಆ ದೊಡ್ಡ ದೊಡ್ಡ ಸಾಹೇಬರುಗಳು ನಮ್ಮನ್ನು ಬಹಳ ಕೀಳಾಗಿ ಕಾಣುತ್ತಾರೆ. ನನಗೇಕೋ ಬಹಳ ಬೇಜಾರಾಗಿ ಹೋಯಿತು ತಿಮ್ಮರಾಯಪ್ಪ!’
‘ರಂಗಣ್ಣ ! ನನಗೆ ಇದೆಲ್ಲ ಗೊತ್ತು ಕಾಣಪ್ಪ , ಅದಕ್ಕೇನೇ ನಾನು ನಿನಗೆ ಹೇಳಿದ್ದು : ಯಾವುದನ್ನೂ ಹೆಚ್ಚಾಗಿ ಮನಸ್ಸಿಗೆ ಹಚ್ಚಿಸಿ ಕೊಂಡು ಹೋಗಬೇಡ ಎಂದು. ಶಿವನಾಣೆ! ನಿನಗೆ ಹೇಳುತ್ತೇನೆ, ಕೇಳು, ದೇಶ ಉದ್ಧಾರವಾಗಬೇಕು, ಜನ ಮುಂದಕ್ಕೆ ಬರಬೇಕು ಎಂದು ಯಾವ ಮಹಾರಾಯನಿಗೂ ಮನಸ್ಸಿನಲ್ಲಿಲ್ಲ. ತಾವು ತಾವು ನಾಲ್ಕು ಜನರ ಹತ್ತಿರ ಒಳ್ಳೆಯವರು ಎಂದು ಅನ್ನಿಸಿಕೊಂಡು, ಬೋರೇಗೌಡನ ಹಣವನ್ನು ದಾಮಾಷಾ ಪ್ರಕಾರ ಹಂಚಿಕೊಂಡು ಕಾಲ ಕಳೆಯಬೇಕು ಎಂಬುವುದೇ ಅವರ ಹಂಚಿಕೆ.’
‘ಅದು ಹೇಗೆ ಮನಸ್ಸಿಗೆ ಹಚ್ಚಿಸಿಕೊಳ್ಳದೇ ಇರುವುದು ? ಹೇಳು ತಿಮ್ಮರಾಯಪ್ಪ, ನಿನ್ನೆಯ ದಿನ ರೈಲಿನಲ್ಲಿ ನಿಮ್ಮ ಜನರ ಮುಖಂಡ ರೊಬ್ಬರು-ಕಲ್ಲೇಗೌಡರು- ಕಾಲು ಕೆರೆದುಕೊಂಡು ಜಗಳಕ್ಕೆ ನಿಂತರು. ಅವರ ಕಟ್ಟಡವೊಂದನ್ನು ಸ್ಕೂಲಿಗೆ ಹತ್ತು ರುಪಾಯಿ ಬಾಡಿಗೆಗೆ ತೆಗೆದುಕೊಂಡಿದ್ದೇವೆ. ಕಟ್ಟಡ ಯುಗಾಂತರದ್ದು ; ರಿಪೇರಿ ಆದದ್ದು ಕ್ರಿಸ್ತ ಪೂರ್ವದಲ್ಲೋ ಏನೋ ! ಸ್ವಲ್ಪ ರಿಪೇರಿ ಮಾಡಿಸಿಕೊಡಿ ಎಂದರೆ ನನ್ನ ಮೇಲೆ ಬೀಳೋದಕ್ಕೆ ಬಂದರು. ನಮಗೋ ಮೇಲಿಂದ ತಗಾದೆ ಆ ಮನುಷ್ಯ ಮಾಡಿಕೊಡೋದಿಲ್ಲ. ಏನು ಮಾಡಬೇಕು ? ಹೇಳು. ಆ ಕಟ್ಟಡವನ್ನು ಬಿಟ್ಟು ಬಿಟ್ಟು ಬೇರೊಂದನ್ನು ಬಾಡಿಗೆಗೆ ಗೊತ್ತು ಮಾಡ ಬೇಕೆಂದಿದ್ದೇನೆ.’
‘ಸರಿ, ಆ ಮಾರಾಯ ನಿನಗೆ ಎದುರು ಬಿದ್ದಿದ್ದಾನೋ ! ಅವನ ತಂಟೆಗೆ ಹೋಗಬೇಡ ರಂಗಣ್ಣ, ಇಷ್ಟು ವರ್ಷವೂ ನಡೆದುಕೊಂಡು ಹೋದಂತೆ ಮುಂದಕ್ಕೂ ಹೋಗಲಿ.’
‘ಈಗೆಲ್ಲ ಸಾಹೇಬರುಗಳು ಹೊಸಬರು ಬಂದಿದ್ದಾರೆ ತಿಮ್ಮರಾಯಪ್ಪ, ನಾನು ಮುಟ್ಟಾಳ ಪಟ್ಟ ಕಟ್ಟಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ. ದೊಡ್ಡ ರಸ್ತೆಯಲ್ಲಿರುವ ಕಟ್ಟಡ. ದಿನ ಬೆಳಗಾದರೆ ಯಾರಾದರೂ ದೊಡ್ಡ ಅಧಿಕಾರಿಗಳು ಭೇಟಿ ಕೊಡುತ್ತಾರೆ.’
‘ನಿನಗೆ ಆ ಊರಲ್ಲಿ ಬೇರೆ ಕಟ್ಟಡ ಯಾರೂ ಕೊಡುವುದಿಲ್ಲ. ಕಲ್ಲೇಗೌಡನಿಗೆ ವಿರುದ್ಧವಾಗಿ ನಿಲ್ಲೊ ಗಂಡಸು ಆ ಊರಲ್ಲಿಲ್ಲ. ನೀನು ಲೌಕಿಕ ತಿಳಿಯದ ಸಾಚಾ ಮನುಷ್ಯ ; ಬೆಂಗಳೂರು ಮೈಸೂರುಗಳಲ್ಲೇ ಬೆಳೆದ ಪ್ರಾಣಿ. ಹಳ್ಳಿಯ ಹುಲಿಗಳ ಪ್ರಭಾವ ನಿನಗೆ ತಿಳಿಯದು.’
‘ಹಾಗಾದರೆ ಅಸಮಾನ ಪಟ್ಟುಕೊಂಡು, ಆತ ಹಂಗಿಸಿದರೆ ಸೈರಿಸಿಕೊಂಡು ನಾನು ಅಲ್ಲಿರಲೋ?’
‘ಹಾಗಾದರೆ ಒಂದು ಕೆಲಸ ಮಾಡು, ಕಲ್ಲೇಗೌಡನಿಗೆ ಮರ್‍ಯಾದೆಯಾಗಿ ಒಂದು ಕಾಗದ ಬರೆ. ಅವನನ್ನು ಚೆನ್ನಾಗಿ ಹೊಗಳು. ಕಡೆಯಲ್ಲಿ ಕಟ್ಟಡದ ರಿಪೇರಿ ಮಾಡಿಸಿಕೊಟ್ಟು ಉಪಕಾರ ಮಾಡಿದರೆ ಬಹಳ ಕೃತಜ್ಞ ನಾಗಿರುತ್ತೇನೆ ಎಂದು ವಿನಯದಿಂದ ತಿಳಿಸು.’
‘ಒಳ್ಳೆಯದಪ್ಪ! ಅವನ ಕಾಲಿಗೆ ಹೋಗಿ ಬೀಳು, ದಮ್ಮಯ್ಯ ಗುಡ್ಡೆ ಹಾಕು ಎಂದು ಹೇಳುತ್ತೀಯೋ ನನಗೆ ?’
‘ಅಯ್ಯೋ ಶಿವನೆ! ಅದೇಕೆ ಹಾಗೆ ರೇಗಾಡ್ತೀ. ಕೆಲಸ ಆಗಬೇಕಾದರೆ ಕತ್ತೆಯ ಕಾಲಾದರೂ ಕಟ್ಟಬೇಕು. ಸ್ವಲ್ಪ ನಿಧಾನವಾಡಿ ಕೇಳು ರಂಗಣ್ಣ! ಹಾರಾಡಬೇಡ. ಹಾಗೆ ಮೊದಲು ಒಂದು ಕಾಗದ ಬರೆದು ಹಾಕು, ಅವನು ಮಹಾ ಜಂಬದ ಮನುಷ್ಯ. ಅವನಿಗೆ ಈ ಭೂಲೋಕದಲ್ಲಿ ಕಾಣಿಸುವವರು ಇಬ್ಬರೇ-ದಿವಾನರೊಬ್ಬರು, ಮಹಾರಾಜರೊಬ್ಬರು. ಉಳಿದವರು ಅವನ ಗಣನೆಯಲ್ಲೇ ಇಲ್ಲ. ನಿನ್ನನ್ನು ಅವನು ಲಕ್ಷದಲ್ಲಿಡುತ್ತಾನೆಯೇ ? ನಿನ್ನ ಕಾಗದಕ್ಕೆ ಅವನು ಉತ್ತರವನ್ನೆನೂ ಕೊಡುವುದಿಲ್ಲ. ಒಂದು ವಾರ ಬಿಟ್ಟು ಕೊಂಡು ಮರ್ಯಾದೆಯಾಗಿ ಒಂದು ಜ್ಞಾಪಕ ಕೊಡು. ಅದಕ್ಕೂ ಅವನು ಲಕ್ಷ ಕೊಡುವುದಿಲ್ಲ. ಒಂದು ವಾರ ಪುನಃ ಬಿಟ್ಟು ಕೊಂಡು- ಈ ಬಾರಿ ರಿಜಿಸ್ಟರ್ ಮಾಡಿ- ಕಾಗದ ಹಾಕು. ಮೊದಲೆರಡು ಕಾಗದಗಳ ನಕಲನ್ನು ಒಳಗಿಡು, ಅದಕ್ಕೆ ಜವಾಬ್‍ನಾದರೂ ಬರುತ್ತದೆಯೋ, ಯಾರ ಹತ್ತಿರವಾದರೂ ಹೇಳಿ ಕಳಿಸುತಾನೆಯೋ ನೋಡು. ಏನೂ ಫಲ ಕಾಣದಿದ್ದರೆ ಮತ್ತೊಂದು ರಿಜಿಸ್ಟರ್ಡ್ ಕಾಗದ ಹಾಕು. ಆಮೇಲೆ ನನ್ನ ಹತ್ತಿರ ಬಾ, ಮುಂದೆ ಮಾಡಬೇಕಾದ್ದನ್ನು ಹೇಳಿಕೊಡುತ್ತೇನೆ. ಈ ಮಧ್ಯೆ ಆ ಮನುಷ್ಯ ಎದುರು ಬಿದ್ದರೆ ನಿನ್ನ ಕೋಪಗೀಪ ತೋರಿಸಿಕೊಳ್ಳಬೇಡ ನಗು ನಗುತಾ ಯೋಗಕ್ಷೇಮ ವಿಚಾರಿಸು. ದಿವಾನರ ಹತ್ತಿರ ಏನಾದರೂ ಶಿಫಾರಸು ಮಾಡಬೇಕೆಂದು ಹೇಳು’
‘ನನಗೆ ಅವನ ಶಿಫಾರಸು ಗಿಫಾರಸು ಬೇಕಿಲ್ಲ. ಉಳಿದ ಸಲಹೆ ಗಳಂತೆ ನಡೆಯುತ್ತೇನೆ. ಇನ್ನೊಂದು ವಿಷಯವನ್ನು ನಿನ್ನೊಡನೆ ನಾನು ಪ್ರಸ್ತಾಪ ಮಾಡಬೇಕು’
‘ಏನದು ? ಹೇಳು. ಬಹಳ ಫಜೀತಿಯಲ್ಲಿ ಸಿಕ್ಕಿಕೊಂಡಿರುವ ಹಾಗೆ ಕಾಣುತ್ತದೆಯಲ್ಲ.’
‘ಫಜೀತಿ ಏನೂ ಅಲ್ಲ. ನಾನಾಗಿ ಮಾಡಿಕೊಂಡದ್ದೂ ಅಲ್ಲ. ಆ ಮುಖಂಡರು ಅಂತ ಇರುತ್ತಾರಲ್ಲ ! ಅವರ ಅಪ್ರಾಮಾಣಿಕತೆಯಿಂದ ನಮಗೆ ಗಂಟುಬೀಳುವ ಪ್ರಸಂಗಗಳು.’
‘ಮತ್ತಾವ ಮುಖಂಡ ? ಒಬ್ಬನದಂತೂ ಆಯಿತು. ಆ ಕರಿಯಪ್ಪನೂ ನಿನಗೆ ಎದುರು ಬಿದ್ದಿದ್ದಾನೆಯೋ’
‘ಈಗ ನನಗೆ ಎದುರೇನೂ ಬಿದ್ದಿಲ್ಲ. ಮುಂದೆ ಬೀಳುತ್ತಾನೋ ಏನೋ ತಿಳಿಯದು.’
‘ನೀನು ಅವರ ವಿರೋಧಗಳನ್ನೆಲ್ಲ ಕಟ್ಟಿ ಕೊಳ್ಳ ಬಾರದು ರಂಗಣ್ಣ! ಅವರು ಯಾವುದಕ್ಕೂ ಹೇಸುವವರಲ್ಲ. ನಿನಗೆ ಪ್ರಪಂಚ ಇನ್ನೂ ತಿಳಿಯದು.’
‘ನಾನು ವಿರೋಧ ಕಟ್ಟಿ ಕೊಳ್ಳುವುದಕ್ಕೆ ಹಾತೊರೆಯುತ್ತಿದೇನೆಯೇ? ಇದೇನು ನಿನಗೆ ಹುಚ್ಚು ತಿಮ್ಮರಾಯಪ್ಪ ? ಕೇಳು. ಮಿಡಲ್ ಸ್ಕೂಲಿನಲ್ಲಿ ಸ್ಕಾಲರ್‍ಷಿಪ್ಪುಗಳ ಹಂಚಿಕೆ ಹಿಂದುಳಿದ ಪಂಗಡಗಳಿಗೆ ಇವೆಯಲ್ಲ. ಹಿಂದಿನ ಇನ್ಸ್‍ಪೆಕ್ಟರ ಕಾಲದಲ್ಲಿ ಅವುಗಳ ಹಂಚಿಕೆ ಆಯಿತು. ಆ ಕಮಿಟಿಯಲ್ಲಿ ಕರಿಯಪ್ಪನೂ ಒಬ್ಬ ಸದಸ್ಯ. ಸ್ಕಾಲರ್‍ಷಿಪ್ಪು ಕೊಟ್ಟಿರುವ ವಿಚಾರದಲ್ಲಿ ತಕರಾರು ಅರ್ಜಿಗಳು ಬಂದಿವೆ. ನನಗೆ ಬಂದಿವೆ ಎಂದು ತಿಳಿಯಬೇಡ, ಡೈರಕ್ಟರಿಗೆ, ದಿವಾನರಿಗೆ, ಎಲ್ಲರಿಗೂ ಅರ್ಜಿಗಳು ಹೋಗಿ ತನಿಖೆ ಬಗ್ಗೆ ನನ್ನ ಹತ್ತಿರ ಬಂದಿವೆ. ಒಬ್ಬ ಹುಡುಗ ಬಡವ ; ಅವನು ಎರಡನೆಯ ತರಗತಿಯಿಂದ ಮೂರನೆಯ ತರಗತಿಗೆ ತೇರ್ಗಡೆ ಪಡೆದಿದ್ದಾನೆ. ನಂಬರುಗಳು ಚೆನ್ನಾಗಿ ಬಂದಿವೆ. ಹಿಂದೆ ಅವನಿಗೆ ಸ್ಕಾಲರ್‍ಷಿಪ್ಪು ಬರುತ್ತಿತ್ತು. ಮೂರನೆಯ ತರಗತಿಯಲ್ಲಿ ಅವನಿಗೆ ಸ್ಕಾಲರ್‍ಷಿಪ್ಪು ಕೊಟ್ಟಿಲ್ಲ. ಅದಕ್ಕೆ ಬದಲು ಫೈಲಾಗಿ ಅದೇ ಮೂರನೆಯ ತರಗತಿಯಲ್ಲಿರುವ ಹುಡುಗನೊಬ್ಬನಿಗೆ ಸ್ಕಾಲರ್‍ಷಿಪ್ಪು ಕೊಟ್ಟಿದ್ದಾರೆ ಹೀಗೆ ಅನ್ಯಾಯ ನಡೆದಿದೆ ಸ್ವಾಮಿ! ಆ ಫೈಲಾದ ಹುಡುಗ ನೆಮ್ಮದಿ ಕುಳ ; ಅವನ ತಂದೆ ಮುನ್ನೂರು ರೂಪಾಯಿ ಕಂದಾಯ ಕಟ್ಟುತಾನೆ ; ಮತ್ತು ಕರಿಯಪ್ಪ ನವರ ಖಾಸಾ ಅಣ್ಣನ ಮಗ ಆ ಹುಡುಗ ! ನಮ್ಮ ಹುಡುಗನಿಗೆ ಸ್ಕಾಲರ್‍ಷಿಪ್ ತಪ್ಪಿಸಿಬಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಬೊಬ್ಬೆ ಹಾಕಿದ್ದಾನೆ ಆ ತಂದೆ!’
‘ಶಿವನೇ ! ಎಂಥಾ ಜನ ನಮ್ಮವರು!’
‘ಸುಮ್ಮನೆ ನಮ್ಮವರು ಎಂದು ಎಲ್ಲರನ್ನೂ ಏತಕ್ಕೆ ದೂರುತ್ತೀಯೆ? ಮುಖಂಡರು ಎಂದು ಹೇಳಿಕೊಳ್ಳುತ್ತ ಸಭೆಗಳಲ್ಲಿ ಬಂದು ಮಾತನಾಡುತ್ತಾರಲ್ಲ, ದಿವಾನರಿಗೆ ಔತಣಗಳನ್ನು ಕೊಡುತ್ತಾರಲ್ಲ-ಅವರನ್ನು ದೂರು. ಹಳ್ಳಿಗಳ ಕಡೆ ನಾನೇ ನೋಡಿದ್ದೇನಲ್ಲ. ಚಿನ್ನದಂಥ ಜನ ! ಏನೊಂದೂ ಕೋಮುವಾರು ಭಾವನೆ ಇಲ್ಲ. ಎಂತಹ ಸರಳ ಪ್ರಕೃತಿ, ಎಂತಹ ಪ್ರೀತಿ ಅವರದು!’
‘ಸರಿ ರಂಗಣ್ಣ! ಕರಿಯಪ್ಪನ ವಿಚಾರ ತಿಳಿಸು ನೋಡೋಣ.’
‘ಹೇಳುವುದನ್ನು ಕೇಳು, ಆ ಅರ್ಜಿಗಳ ಮೇಲೆ ತನಿಖೆ ನಡೆಸಬೇಕಾಗಿ ಬಂತು. ಮಿಡಲ್ ಸ್ಕೂಲ್ ಹೆಡ್ ಮಾಸ್ಟರಿಗೆ ಕಾಗದ ಬರೆದು ದಾಖಲೆ ಪತ್ರಗಳನ್ನೆಲ್ಲ ತರಿಸಿದೆ. ಆ ಕರಿಯಪ್ಪ – ತನ್ನ ಅಣ್ಣನ ಮಗ ಬಹಳ ಬಡವನೆಂದು ತಾನೇ ಸರ್ಟಿಫಿಕೇಟು ಬರೆದು ರುಜುಮಾಡಿದ್ದಾನೆ. ಮತ್ತು ಆ ಹುಡುಗನ ತಂದೆ ರೈಲ್ವೆಯ ಗ್ಯಾಂಗ್ ಕೂಲಿ, ತಿಂಗಳಿಗೆ ಆರು ರೂಪಾಯಿ ಸಂಬಳ- ಎಂದು ಅರ್ಜಿಯಲ್ಲಿ ನಮೂದಿಸಿದೆ. ಈಗ
ನಾನೇನು ಮಾಡಬೇಕು? ಹೇಳು.’
‘ಇನ್ನೊಂದು ಲೋಟ ಹಾಲು ಕುಡಿ ರಂಗಣ್ಣ ! ತಂದು ಕೊಡುತ್ತೇನೆ. ಉದ್ವೇಗ ಬೇಡ, ಸಮಾಧಾನ ಮಾಡಿಕೊ!’ ಎಂದು ತಿಮ್ಮರಾಯಪ್ಪ ಎದ್ದು ಹೋಗಿ ಮತ್ತಷ್ಟು ಬಾಳೆಯ ಹಣ್ಣು, ಬಿಸ್ಕತ್ತುಗಳು ಮತ್ತು ಹಾಲನ್ನು ತಂದು ಮುಂದಿಟ್ಟನು.
‘ಒಳ್ಳೆಯ ಘಾಟಿ ಇಸಂ ಕರಿಯಪ್ಪ!’
‘ನೋಡಪ್ಪ ! ಇವರೇ ನಮ್ಮ ದೇಶವನ್ನು ಉದ್ದಾರ ಮಾಡುವ ಮುಖಂಡರು ! ಸತ್ಯ ಹರಿಶ್ಚಂದ್ರರು!’
‘ರಂಗಣ್ಣ! ನಮ್ಮವರ ಕೈಯಾಟಗಳನ್ನೆಲ್ಲ ನಾನು ನೋಡಿದ್ದೇನೆ ಬಿಡು. ಇದೇನೂ ಹೊಸದಲ್ಲ.’
‘ಈಗ ನಾನು ಮುಂದೆ ಏನನ್ನು ಮಾಡಬೇಕು ? ತಿಳಿಸು.’
‘ನೀನಾಗಿ ಏನನ್ನೂ ಮಾಡಬೇಡ. ಆ ಕಾಗದಪತ್ರಗಳನ್ನೆಲ್ಲ ಸಾಹೇಬರಿಗೆ ಹೊತ್ತು ಹಾಕು, ಅಪ್ಪಣೆ ಆದಂತೆ ನಡೆದುಕೊಳ್ಳುತ್ತೇನೆ- ಎಂದು ಸಲಹೆ ಕೇಳು, ತೆಪ್ಪಗೆ ಕುಳಿತುಕೋ. ಮೇಲಿಂದ ಏನು ಹುಕುಂ ಬರುತ್ತದೆಯೋ ನೋಡೋಣ. ಆಮೇಲೆ ಆಲೋಚನೆ ಮಾಡೋಣ.’
‘ಸರಿ, ನೋಡಿದೆಯಾ ನನ್ನ ಇನ್ಸ್‍ಪೆಕ್ಟರ್ ಗಿರಿ ! ನೀನು ಆ ದಿನ ಹೇಳಿದ ಉಪ್ಪಿಟ್ಟು ಮತ್ತು ದೋಸೆಗಳ ವರ್ಣನೆಗಳನ್ನು ಕೇಳಿ ಬಾಯಲ್ಲಿ ನೀರೂರಿತು. ಈಗ ನಾಲ್ಕು ಕಡೆಯಿಂದಲೂ ಗೂಟಗಳು, ಮಾತೆತ್ತಿದರೆ ಮೇಲಿನವರು, ‘ಟ್ಯಾಕ್ಟ್’ ಉಪಯೋಗಿಸಬೇಕು ಎಂದು ಬುದ್ಧಿವಾದ ಹೇಳುತ್ತಾರೆ.’
ಹೀಗೆ ಮಾತುಕತೆಗಳು ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ ಆಗಿ ಹೋಯಿತು. ‘ರಂಗಣ್ಣ! ಇಲ್ಲೇ ಬಿದ್ದುಕೋ, ಹಾಸಿಗೆ ಕೊಡುತ್ತೇನೆ’ ಎಂದು ತಿಮ್ಮರಾಯಪ್ಪ ಹೇಳಿ ಹಾಸಿಗೆಯನ್ನು ಹವಣಿಸಿ ಕೊಟ್ಟನು. ತಾನೂ ತನ್ನ ಹಾಸಿಗೆಯನ್ನು ಪಕ್ಕದಲೇ ತಂದು ಹಾಕಿ ಕೊಂಡನು. ನಿದ್ರೆ ಹತ್ತುವವರೆಗೂ ಇಬ್ಬರೂ ಹರಟೆ ಹೊಡೆಯುತ್ತಿದ್ದರು.
*****