ಹೋರಾಟದ ಹಾದಿಯನ್ನು
ನಂಬಿ ನಡೆದ ಶಕ್ತಿಯೇ
ಕಪ್ಪು ಜನರ ಕೆಂಪು ಕಥೆಗೆ
ನಾಂದಿಯನ್ನು ಹಾಡಿದವನೇ.
ಕುಡಿಯಲು ನೀರು ಕೊಡದ
ದೇವರ ನೋಡಲು ಬಿಡದ
ಮನುಜ ಮನುಜರ ಮಧ್ಯ
ವಿಷ ಬಿತ್ತುವ ಜನಕೆ ನೀನು.
ದುಡಿಮೆಯನ್ನು ದೋಚುತ್ತ
ಬಿಸಿ ರಕ್ತವ ಹೀರುತ್ತಾ
ನೀತಿ ಶಾಸ್ತ್ರಗಳ ರಕ್ಷೆಯಲ್ಲಿ
ಅಡಗಿ ಕುಳಿತ ಭಂಡರಿಗೆ-
ದುಃಸ್ವಪ್ನವಾಗಿ ನೀನು
ಮಹಾರಾಷ್ಟ್ರದ ಮಣ್ಣಿಂದ
ದಲಿತ ಜನಗಳ ಧ್ವನಿಯಾಗಿ
ಹುಟ್ಟಿ ಬಂದ ವ್ಯಕ್ತಿಯೇ.
ದಾಸ್ಯದ ಸಂಕೋಲೆ ಕಳಚಿ
ನೂತನ ಬದುಕು ನಡೆಸಿ,
ಸ್ವಾಭಿಮಾನದ ಮಂತ್ರ
ಹೇಳಿಕೊಟ್ಟ ಧೀರನೇ.
ನಿನ್ನ ಮನಸ್ಸಿನ ನೋವು
ಭುಗಿಲೆಂದು ಕೆರಳಿ ನಿಂತು
ಚರಿತ್ರೆಯ ಪುಟದಲ್ಲಿ ಮಿಂಚಿ
ಹೊಸ ತಿರುವು ಕೊಟ್ಟಿತಿಂದು.
ಹೆಣ್ಣಿಗೆ ಮುಕ್ತಿಯಿಲ್ಲವೆಂದ
ಬೌದ್ಧ ಧರ್ಮವ ಕೊನೆಗೆ
ಎತ್ತಿ ಹಿಡಿದು ನೀನು-
ಹೆಣ್ಣಿಗೆ ಮಾಡಿದೆ ಏನನ್ನು?
*****