ಕಾಳಚಕ್ರ ಉರುಳುತ್ತಿದೆ.
ಹಗಲು ಸರಿದು ಕರಾಳ
ರಾತ್ರಿಯಲ್ಲಿ ನಕ್ಷತ್ರಗಳ
ಕಣ್ಣುಮುಚ್ಚಾಲೆ.
ಆಕಾಶ ನೋಡುತ್ತ
ಅಳುತ್ತಿರುವ ನಾಯಿಗಳು
ದಟ್ಟ ದರಿದ್ರರ
ಕೊಂಪೆ ಗುಡಿಸಲುಗಳು
ಸಿಡಿದೇ ಕರೇ
ಕ್ಷೀಣ ಧ್ವನಿಯಲ್ಲಿ
ಗುಣುಗುಟ್ಟುತ್ತಿವೆ,
ಸಾಲದಿರುವ ಸಂಬಳ
ಏರುತ್ತಿರುವ ದರಗಳ ಕುರಿತು
ನಾವು ಕುಡಿಯುವ
ನೀರನ್ನು ಕೊಳಕಾಗಿಸುವ
ಬಿರ್‍ಲಾನ ಕುರಿತು
ಉಸಿರುಗಟ್ಟಿಸುವ
ವಿಷಗಾಳಿ ಬಿಡುತ್ತಿರುವ
ಕಾರ್ಖಾನೆಗಳ ಕುರಿತು
ನಾನು ಮಾತನಾಡಿದರೆ
ರಾಜಕೀಯವಾಗುತ್ತದಂತೆ.
ರಾಜಕೀಯ ನಿಗೂಢಗಳು
ಶುದ್ಧಗಾಳಿ, ನೀರು ಆಹಾರಗಳು
ಹಸಿರು ಬದುಕುಗಳನ್ನು
ನಮಗೆ ದೊರಕದಂತೆ ಮಾಡಿದ
ಕರಾಳ ಕೈಗಳು-
ಪಂಜಾಬಿನ ಕೊಲೆಗಳು,
ಕಾಶ್ಮೀರ ಕಣಿವೆಗಳಲ್ಲಿ
ಕೊಳೆಯುತ್ತಿರುವ ಹೆಣಗಳು
ಇರಾಕ್‌ನಲ್ಲಿ ಮಾಸಣ ಕಾಣದೇ
ಬಿದ್ದಿರುವ ರಾಶಿ ಹೆಣಗಳು
ಸಾಮ್ರಾಜ್ಯಶಾಹಿ ಪಿತೂರಿಗಳೂ
ವಾಶಿಂಗ್‌ಟನ್ನಿನ ಕ್ರೂರ ಕೈಗಳು.
ನನ್ನ ಆಳದಲ್ಲಿ ನಾನು
ಇಣುಕಿ ನೋಡಿದಾಗ –
ನಾನು ಸತ್ಯವಾಗಿದ್ದೆ.
ಆ ಕ್ರೂರ ಕೈಗಳನ್ನು ಕುಲಕದೇ
ಹೋರಾಟದ ದಾರಿ ಹುಡುಕಿಕೊಂಡಿದ್ದೆ.
ಅದಕ್ಕೀಗ ಸಾಮ್ರಾಜ್ಯಶಾಹಿ ಪಿತೂರಿಗಳು
ತುತ್ತೂರಿ ಊದುತ್ತಿವೆ.
ಬದುಕಿನ ಬಗ್ಗೆ ಮಾತನಾಡದಿರಿ,
ಇಲ್ಲದಿರೆ ಅದು
ರಾಜಕೀಯವಾಗುತ್ತದೆಂದು.
*****