ನನ್ನ ಬಂಧುಗಳೇ,
ನಾನು ತಲೆಯೆತ್ತಿ ನಡೆದರೆ,
ನಿಮಗೆ ಅಹಂಕಾರಿಯಂತೆ ಕಾಣುವೆನು
ತಲೆ ಬಗ್ಗಿಸಿ ನಡೆದರೆ,
ಅಬಲೆ, ಅಪರಾಧಿಯಂತೆ ಕಾಣುವೆನು.
ಮೌನವಾಗಿದ್ದರೆ ಮೂಕಿ, ಎನ್ನುವಿರಿ.
ಮಾತನಾಡಿದರೆ ವಾಚಾಳಿ ಎನ್ನುವಿರಿ.
ಹೇಳಿ ನಾನು ಹೇಗೆ ನಡೆದುಕೊಳ್ಳಲಿ ?
ನಿಮ್ಮ ಈ ಅಪಮಾನವನ್ನು ನಾನು
ಎಲ್ಲಿಯವರಿಗೆ ಸಹಿಸಲಿ? ನೀವೇ ಹೇಳಿ.
ಎಲ್ಲಿಯವರೆಗೆ ಎದೆಯಲಿ ಸಹಿಸುವ
ಜ್ವಾಲೆಯನ್ನು ಸಹಿಸಿಕೊಂಡಿರಲಿ?
ಹೇಳಿ? ನೀವೇ ಹೇಳಿ ಬಂಧುಗಳೇ.
ಎಲ್ಲಿಯವರೆಗೆ ನಾನು ನಿಮ್ಮ
ಮಾರಾಟದ ಸರಕುಗಳಿಗೆ
ವಿಜ್ಞಾಪನಾ ವಸ್ತುವಾಗಿರಲಿ?
ಎಲ್ಲ ಸ್ತ್ರೀಯ ಸೌಂದರ್ಯದ ಹಿಂದೆ
ಒಂದಿಲ್ಲೊಂದು ರಹಸ್ಯವಿದೆಯೆಂದು ಹೇಳುವಿರಿ,
ಅದುವೇ ನಿಮ್ಮ “ಫೌಂಡೇಶನ್ ಕ್ರೀಮ್”
ಎಂದು ಪ್ರಚಾರ ಗಿಟ್ಟಿಸುವಿರಿ.
ಹೇಳಿ ನಾನು ಎಲ್ಲಿಯವರೆಗೆ
ಅಗ್ಗದ ಪ್ರಚಾರ ಮಾಧ್ಯಮವಾಗಿರಲಿ?
ಎಲ್ಲಿಯವರೆಗೆ ನೀವು ಸೃಷ್ಟಿಸಿದ
“ಮಿಥಿಕ್” ಬಂಧಿಯಾಗಿರಲಿ?
ಹೇಳಿ ಬಂಧುಗಳೇ ನೀವೇ ಹೇಳಿ.
ನಾನು ಎಲ್ಲಿಯವರೆಗೆ
ನಿಮ್ಮ ಮನೋರಂಜನೆಯ
ಮಾಧ್ಯಮವಾಗಿರಲಿ?
ಹೆಣ್ಣು ದೇವತೆಯೆಂದು ಹೇಳುವಿರಿ.
ಮತ್ತೇ ಅವಳ ವ್ಯಾಪಾರ ಮಾಡುವಿರಿ,
ಇಂತಹ ನಿಮ್ಮ ಭೋಗ ಸಂಸ್ಕೃತಿಯನ್ನು
ಕಂಡ ನಾನು ಇದನ್ನು
ಉಚ್ಚ ಸಂಸ್ಕೃತಿಯೆಂದು
ಹೇಗೆ ಹೇಳಲಿ?
ನೀವೇ ಹೇಳಿ ಬಂಧುಗಳೇ,
ನೀವೇ ಹೇಳಿ,
ಇಲ್ಲ ನೀವು, ಹೇಳುವದಿಲ್ಲ.
ಅದಕ್ಕೆ-
ನಾನೀಗ ಸುಮ್ಮನಿರಲಾರೆ,
ನನ್ನ ಬಾಯಿಯನ್ನು
ಸಂಪ್ರದಾಯಗಳ ಬೇಡಿಯಿಂದ
ಬಿಗಿಯಬೇಡಿ.
ನನಗೆ ಮಾತನಾಡಲು ಬಿಡಿ.
ಶತಮಾನಗಳ
ಭಯಂಕರ ಮೌನವನು
ಮುರಿದು ಮಾತನಾಡಲೇಬೇಕು.
ಬದುಕಿಯೂ ಸತ್ತಂತಿರುವ
ಕ್ರೂರ ಬದುಕನು ಬಹಿಷ್ಕರಿಸಿ
ಬಯಲಿಗೆ ಬರಲೇಬೇಕು.
ಬಿಟ್ಟುಬಿಡಿ ನನ್ನ ಬಂಧಿಸಬೇಡಿ
ನಿಮ್ಮ ಕ್ರೂರ ಕೈಗಳಿಂದ.
ಮೂಕ ಬದುಕನು ಬಿಟ್ಟು
ನಾನು ಮಾತನಾಡಲೇಬೇಕು.
ಸಂಘರ್ಷದ ಹಾದಿಯಲ್ಲಿ ಸಾಗಲೇಬೇಕು
ಬಿಟ್ಟುಬಿಡಿ ನನ್ನ ಬಂಧಿಸಬೇಡಿ
ಸಂಪ್ರದಾಯಗಳ ಶೈಯಿಲೆಯಿಂದ
ಬಿಟ್ಟು ಬಿಡಿ ನನ್ನ ಬಿಟ್ಟು ಬಿಡಿ
ನನಗೆ ವಾತನಾಡಲು ಬಿಡಿ.
*****