ಸಭಾದಾಗ ಕೂತುಕೊಂಡು ಇವರು
ನಮ್ಮ ಮೇಲೆ ಕಾನೂನು ಮಾಡ್ತಾರ,
ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು
ಓಟ ಕೇಳಲಿಕ್ಕೆ ಬರತಾರ.
ನಮ್ಮ ಉದ್ಧಾರವೇ ತಮ್ಮ ಧೈಯ
ಅಂತ ಹೇಳಿ ಘೋಷಣೆ ಕೊಡ್ತಾರ
ಆ ನನ್ಮಕ್ಕಳ ಚರ್ಮ ಸುಲೀಬೇಕನಸ್ತಾದ.
ನಾವು ಇವರಿಗೆ ಬ್ಯಾಡಂತ.
ನಮ್ಮ ಓಟ ಮಾತ್ರ ಬೇಕಂತ.
ಊರಾಗ ನಾವು ಇದ್ರ ಸರಿ
ಕಾಣೋದಿಲ್ಲಂತ ಬುಲ್ಡೊಜರ ಹಚ್ಚಿ
ನಮ್ಮ ಗುಡಿಸಲು ನೆಲಸಮ ಮಾಡ್ತಾರ.
ಆಗಾಗ ಅವಕ್ಕೆ ಬೆಂಕಿ ಇಟ್ಟು
ಹೋಳಿ ಆಡ್ತಾರ ಜೀವಂತ ಸುಡ್ತಾರ
ಆ ಪರದೇಶಿಗಳು ಬಂದಾಗ
ನಮ್ಮ ಜೋಪಡಿ ಅವರ ಕಣ್ಣಿಗೆ ಬೀಳದಂಗ
ಭಾಳ ಎಚ್ಚರಿಕೆ ವಹಿಸಿ,
ಅವರ ಜೊತೆಗೇನೆ ತಿರಗ್ತಾರ.
ಆಗಾಗ ನಮ್ಮ ಉದ್ಧಾರಕ್ಕೆ
ಸಭೆನೂ ಕರೀತಾರ
ಸನ್ಮಾನ ಮಾಡ್ಕೊತಾರ
ಎರ್‌ಕಂಡಿಷನ್ ಕಾರಿನ್ಯಾಗ ಕೂತು
ಹಾರ ಹಾಕ್ಕೋತಾರ.
ನಮ್ಮ ಉದ್ಧಾರಕ್ಕ ಹೊರಟಾರಿವರು.
ನಮ್ಮ ಮ್ಯಾಲೇನೇ ದೊಡ್ಡ ದೊಡ್ಡ
ಕಾನೂನಿನ ಪುಸ್ತಕನೂ ಬರ್‍ದಾರಿವರು
ಅಂದು ಗಾಂಧಿ ಮುದುಕ
ಅರ್ಧಕ್ಕೆ ಬಿಟ್ಟ ಕೆಲಸ ಪೂರ್ತಿ
ಮಾಡಾಕ ಹತ್ತಾರಂತ ಇವರು.
ಅವನ ಹೆಸರಿನ ಮಂತ್ರ
ಆಗ್ಯಾದ ಇವರ ರಾಜಕೀಯ ತಂತ್ರ
ಅವನ ಟೊಪ್ಪಿಗಿ ಹಾಕ್ಕೊಂಡು
ಓಟ ಕೇಳಲಿಕ್ಕೆ ಬರತಾರಿವರು.
ನಾವು ಹಸಿವಿನಿಂದ ಸಾಯ್ತಿದ್ದೀವಿ
ಹೊಟ್ಟೆ ಬಟ್ಟೆ ಕಟ್ಟಿ ಅಸಮತೆಯ
ತ್ಯಾಗ ಬೇಯಾಕತ್ತೀವಿ.
ತಣಯ ಕಾಲೀಗಿ ಬೂಟು ಮೆಟ್ಟು ಹೊಲಿದು
ಬರಿಗಾಲಿಂದು ತಿರುಗಾಕತ್ತೀವಿ
ನಮ್ಮ ಕೇಂಪನ್ನ ರಕ್ತ ಸುಟ್ಟು
ಕಪ್ಪನ ಹೊಗೆಯರಾಗಿ,
ಕಾರ್ಖಾನೆ ಕೊಳವೆಯಿಂದ
ಕರಿಮೋಡಾಗಿ ಹೊರಹೊಮ್ಮಲಿಕತ್ತ್ಯಾದ
ಸುತ್ತೆಲ್ಲಾ ಭೀಕರ ಕತ್ತಲ ಮುತ್ತ್ಯಾದ
ಅಲ್ಲಿ ನೋಡು ಮೋಡದಲ್ಲಿ.
ಬೆಳ್ಳಿಚುಕ್ಕಿಯೊಂದು ಹೊಳಿಲಿಕತ್ತ್ಯಾದ
ಅದರ ಬೆಳಕಿನ್ಯಾಗ
ಮುಂದಕ್ಕ ಸಾಗೋಣ ನಾವು.
*****