ನಾವು, ನೀವು
ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ?
ನನಗೇನೋ ಪೂರ್ಣ ಅನುಮಾನಾ!
ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ
ಎಂಬುದೇ ನನ್ನ ಅಂಬೋಣ.
ಅವ, ಕೋಡೆರೆದು, ಕಳಸ ಇಟ್ಟು,
ಹೊತ್ತಿಗೆ ಹುಲ್ಲು, ನೀರು ನೋಡಿ,
ಮೈತಿಕ್ಕಿ ತೀಡಿ, ಸ್ವಚ್ಛ ಮಾಡಿ
ಲಕ್ಷಣವಾಗಿ ಇಟ್ಟು ಕೊಳ್ಳುವುದು ಯಾತಕ್ಕಾಗಿ
ಒಳ್ಳೆ ಬೆಲೆ ಬರುವುದೇ ತಡ ಮಾರೋ ಉದ್ದೇಶಕ್ಕಾಗಿ,
ಅವುಗಳಲ್ಲಿ ಪ್ರಾಣ ಇಟ್ಕೊಂಡು
ಎತ್ತಿಲ್ಲದವನಿಗೆ ಎದೆಯಿಲ್ಲ ಅಂದು
ಜಡ್ಡು ಜಾಡು ಬಂದು ಕೇಡಾಗದಂತೆ, ಕಾಡಾಗದಂತೆ
ಮೈಯೆಲ್ಲಾ ಕಣ್ಣಾಗಿ ನೋಡಿಕೊಳ್ಳುವನು.
ಏನೇ ಮಾಡುತ್ತಿದ್ದರು, ಎಲ್ಲಿಗೆ ಹೋದರೂ
ಮನಸೆಂಬ ಮನಸೆಲ್ಲಾ ಇತ್ತ ಕಡೆಗೇನೆ ಇಟ್ಟು ನಡೆಯುವನು
ಬಿಟ್ಟರೆ ಅವನಿಗೆ ಬೆಳೆಸಿರಿಯಲ್ಲಿ?
ಬಾಳೇ ಕೆಟ್ಟೋಗಿ ಆಟವೇ ಕಟ್ಟಾಗಿ ಹೋಗುವುದಲ್ಲ ಅಷ್ಟಕ್ಕಾಗಿ!
ಮತ್ತೇನು ಅವನ
ಹಿರಿಯ ಭೂತ ದಯೆಯ ಪ್ರೇರಣೆಯಿಂದ ಅಂತ ತಿಳಕೊಂಡಿರೇನು?
ಮುಂದೆ ಕೇಳಿ –
ಕೆಲ್ಸ ಕಾರ್ಯ ಬಿದ್ದಾಗ ಅವನು ಮುಖ ಮೋರೆ ನೋಡಲ್ಲ
ಎಂಥಾ ಹಿಂಸೆಗೂ ಹೇಸೋನಲ್ಲ
ಕೆಲ್ಸ ಆಗೋತನಕ ಮನುಷ್ಯನಾಗಿರಲ್ಲ.
ಅವನಿಗೆ-
ಸುಸ್ತು, ಸಾಕೆನ್ನದಂತ
ಸಾದೆತ್ತುವಾದರೆ ಅಚ್ಚು ಮೆಚ್ಚು.
ನಿಧಾನಕ್ಕೆ ಬಿದ್ದ, ಮೊಂಡಾಟ ಮಾಡೋ, ಹಾಯಲು ಬರುವ
ಪಟಿಂಗನಾದರೆ
ಸಾಯುತ್ತೋ ಬದುಕುತ್ತೋ ಎನ್ನದೆ ಚಚ್ಚಿ
ಬಗ್ಗಿಸಿಕೊಳ್ಳಲು ನೋಡುವನು.
ಬಗ್ಗದೆ ಹೋದರೆ
ಬಂದದ್ದು ಬರಲೆಂದು
ಮುಗಿಸಿ | ನಡಿ ಎನ್ನುವನು.
ಈಗ ಹೇಳಿ
ಇದೊಂದು ಪ್ರೇಮಾನಾ?
ಇವನೊಬ್ಬ ಪ್ರೇಮಿನಾ?
ನಮ್ದು ನಿಮ್ದು ಇದರಂತೆ ಅಲ್ಲವೇನಾ?
*****