ಮುಗಿಯಿತು
ಬಾಳಿನ ಒಂದು ಮಜಲು
ಅವರು ಕರೆದೊಯ್ಯಲು ಬಂದಿಹರು
ಹೊರಡ ಬೇಕಾಗಿದೆ
ಹೊಸ ಜಾಗಕೆ
ಹೊಸ ಬಾಳನು ನಡೆಸಲು
ಕಸಿ ಮಾಡಿದ ಸಸಿ ತೆರದಿ
ಇಲ್ಲಿಗೆ, ಇನ್ನು ಮೇಲೆ
ನಾನೊಬ್ಬ ಅತಿಥಿಯಾದೆನೆಂದು ತಿಳಿದಾ ಇವಳಿಗೆ,
ತನ್ನೊಳಗೆ ಏನೋ ಆಗುತ್ತಿದೆ
ಏನೆಂದು ಹೇಳಲರಿಯಳು
ಘಳಿಗೆ ಘಳಿಗೆಗೂ ನಿಟ್ಟುಸಿರು, ನಿರಾಸಕ್ತಿ
ಮುಖ ಕಿತ್ತರಿಷ್ಟೂ ರಕ್ತ ಬರುವುದಿಲ್ಲ
ಶಕ್ತಿ ಸೋರಿ ಹೋದಂತೆನಿಸಿ
ಕೂತರೆ ಕೂತಲ್ಲೇ ಆಗಿ
ದೆವ್ವ ಬಡಿದವಳಾಗಿದ್ದಾಳೆ.
ನಿಟ್ತು ಗಣ್ಣಿಗೆ ಬಿದ್ದಿಹಳು
ಏನೋ ನೋಡುತ್ತಿರುವಳು, ಏನೋ ಕಾಣಿಸುವುದು
ಎಲ್ಲಾ ಹೊಸ ಹೊಸದೆನಿಸುವುದು
ಮತ್ತೆ ಮತ್ತೆ ನೋಡ ಬೇಕೆನಿಸುವುದು,
ಎದೆ, ಬಿಳಿ ಮೋಡಕ್ಕಿಟ್ಟು ಕೊಂಡಂತಾಗಿ
ನೋವಿನ ಜಡಿ ಹಿಡಿದಿದೆ….
ಅತ್ತ ಬಂದ ಹಾಗೂ ಅಲ್ಲ
ಇತ್ತ ಬಿಟ್ಟ ಹಾಗೂ ಅಲ್ಲ
ಹೆಜ್ಜೆ ಇಟ್ಟಲ್ಲಿ ಕೆಸರು ಪಿಚಕಾರಿಯಾಗಿ ಹಾರುವಂತೆ
ಏನು ನೋಡಿದರೂ….. ಇನ್ನೆಲ್ಲಿ ಇದೆಲ್ಲಾ
ಯಾರನ್ನು ನೋಡಿದರೂ….. ಇನ್ನೆಲ್ಲಿ ಇವರೆಲ್ಲಾ
ಎಂಬ ನೋವು
ಓಡುತ್ತಾ ಬಂದ
ಮುದ್ದಿನ ಬೆಕ್ಕು
‘ನನಗೆ ತಿಳಿದಿದೆ ನೀನು ಹೋಗುವೆ ’ ಯೆಂಬಂತೆ
‘ಮಿಯಾಂವ್ ಮಿಯಾಂವ್’ ಎಂದು ನರಳಿದರೆ
ಮೊದಲೆ ಏರಿಯ ಮೇಲೆ ಹೊರಳುವಂತೆ ತುಂಬಿ
ಜೀಕುತ್ತಿದ್ದು
ಹಿಡಿಸಲಾರದ ಹಾಗೆ ಕೋಡಿ ಹೋಗುತ್ತಿರಲು
ಮೇಲೆ ಹೊಸದಾಗಿ ಪ್ರವಾಹ ಬಂದು ಗುದ್ದಿದರೆ
ಫಕ್ಕನೆ ಕರಿಬಾನ ಸಾಲು ಉರುಳಿದಂತೆ
ಕೋಡಿ ಧಡ ಧಡ ಕಿತ್ತು ಹೋಗುವ ಹಾಗೆ
ಬಿಕ್ಕುಕ್ಕುವವು ಒಂದೇ ಸಮನೆ
ಹೆಜ್ಜೆ ಸಪ್ಪಳವಾಯಿತು
ಕಂಡರಿನ್ನು –
ಯಾಕಮ್ಮಣ್ಣಿ ಹೀಗಳುವೆ?
ನೀನು ಸೀಮೆಗಿಲ್ಲದವಳಾಗಿಬಿಟ್ಟೆ ಬಿಡು
ಶುಭವೆಂದು ಕಾಲಿಡುವಾಗ ಅಳುವರೇನು?
ಹೀಗಾದರಾಯಿತು ಹೆತ್ತವರಿಗೆ ಹೊತ್ತವರಿಗೆ
ಕೀರ್ತಿ ಬಂದ ಹಾಗೆಯೆ!
ಇಷ್ಟಕ್ಕೂ ಏನಾಗಿದೆಯೆಂದು ಅಳುವೆ
ಏನು ನಿನ್ನನ್ನು ಕೊಲೆ ಕೊಟ್ಟಿದ್ದೀವಾ?
ಸುಲಿಗೆ ಕೊಟ್ಟಿದ್ದೀವಾ?
ಏಳೇ ಬೆಳೆಕಾತಿ!
ಹೀಗಳುವವಳು ಮದುವೆ ಯಾಕೆ ಮಾಡಿಕೊಂಡೆ?
ನಿನಗಷ್ಟು ಸಂಕಟವಾದರೆ ಇಷ್ಟು ಮಾಡು!
ಇಲ್ಲೆ ಇದ್ದು ಬಿಡು ಹುಟ್ಟಿದ ಮನೆ ಹುಳುವಾಗಿ
ಕಟ್ಟಿ! ಕೆಟ್ಟಿ! ಏಳೇಳು
ನಿನಗ್ಯಾಕೆ ಬುದ್ದಿ ಇಲ್ಲ
ಮೊದ ಮೊದಲು ಎಲ್ಲರಿಗೂ ಹಾಗೇನೆ
ಏಳು! ಮೊದಲು ಹೋಗಿ ಮುಖ ತೊಳೆದುಕೊಂಡು ಬಾ
ನೋಡಿದವರೇನಾದರೂ ಅಂದಾರು
ಅಳುತ್ತಾ ಕುಳಿತಿಹಳೆಲ್ಲಮ್ಮಾ! ಎಂದೆಲ್ಲಿ ಘಾತಿಸುವರೋ ಎಂದು
ಅವಸರ, ಅವಸರವಾಗಿ
ಅಡಸಲ, ಪಡಸಲ ಕಣ್ಣೀರ ಒರೆಸಿಕೊಂಡು,
ಏನೂ ಆಗಿಲ್ಲವೆಂಬಂತಿರಲು ಹವಣಿಸುವಳು,
ಆಗತಾನೇ ಬಂದವರು
ಬಿದ್ದು ಬಿದ್ದು ಅಳುವಂತೆ
ಸಾಗ ಹಾಕಲು ಬಂದ ಅಜ್ಜಿ
ಮೊಮ್ಮಗಳನ್ನಪ್ಪಪ್ಪಿ ರೋದಿಸುವಳು
ಊರು, ಉದ್ವಾನ ಕಂಡಿಲ್ಲ
ಒಳ್ಳೆಯದು ಕೆಟ್ಟದ್ದೊಂದೂ ಗೊತ್ತಿಲ್ಲ
ಹೇಗೆ ಸಂಭಾಳಿಸುವಳೋ ನನ್ನ ಕಂದಾ
ಪ್ರೀತಿಯಲಿ ಬೆಳೆದವಳು
ಬೇಕಾದ್ದೆ ತಿಂದವಳು
ಯಾರು ನೋಡುವರಿನ್ನು
ನನ ಕಂದಾ ‘ಹ್ಹಾ!’ ಎಂದಳೇ ‘ಹ್ಹೋ!’ ಎಂದಳೆಯೆಂದು
ಇನ್ನು ಮುಂದ
ದೇವರೇ!
ನಾವೆಷ್ಟರವರು
ನೀನು ಕಾಪಾಡ ಬೇಕಾದನೆನ್ನುವಳು; ಬೋರಾಡುವಳು
ಕಣ್ಣಲ್ಲಿ ನೀರು ತರಿಸುವಳು
*****