ಭ್ರಮಣ – ೧೨

ಭ್ರಮಣ – ೧೨

ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. ಆರಾಗುತ್ತಿದ್ದಂತೆ ಎಸ್.ಐ. ಮತ್ತು ಎಚ್.ಸಿ. ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. ಏಳಾಗುತ್ತಿದ್ದಾಗ ಪೇದೆಯವರನ್ನು ಕರೆದು ತಾನು ಸುತ್ತಲಿನ ಹಳ್ಳಿಗಳಲ್ಲೆಲ್ಲಾ ಒಂದು ರೌಂಡು ಸುತ್ತಿ ಬರುವುದಾಗಿ ಯಾವಾಗ ಬರುತ್ತೇನೆಂಬುವುದು ಹೇಳಲಾಗುವುದಿಲ್ಲವೆಂದು ಹೇಳಿದ. ಏಳುಕಾಲು ಆಗುತ್ತಿದ್ದಾಗ ಜೀಪ್ ಹತ್ತಿದ ತೇಜಾ ನಿಧಾನವಾಗಿ ವಾಹನವನ್ನು ಮುಂದೆ ಬಿಟ್ಟ. ಆಗಿನಿಂದಲೇ ಅವನಿಗರಿವಿಲ್ಲದಂತೆ ಅವನ ಹೃದಯ ಬಡಿತ ಜೋರಾಗಿತ್ತು.

ತಾನು ಪೇದೆಗೆ ಹೇಳಿದ್ದು ನಿಜವೆಂಬುದನ್ನು ನಿರೂಪಿಸಲು ದಾರಿಯಲ್ಲಿ ಬಂದ ಹಳ್ಳಿಗಳ ಬಳಿ ವಾಹನ ನಿಲ್ಲಿಸಿ ಅಲ್ಲಿದ್ದ ಒಬ್ಬರಿಬ್ಬರನ್ನು ಕರೆದು ಕಲ್ಲಕ್ಕನ ಬಗ್ಗೆ ವಿಚಾರಿಸಿದ. ಪೋಲಿಸು ವಾಹನ ಮತ್ತು ಕಲ್ಲಕ್ಕನ ಹೆಸರು ಕೇಳುತ್ತಲೇ ಅವರುಗಳು ಅವನನ್ನು ಒಂದು ಹುಳುವನ್ನು ನೋಡುವಂತೆ ನೋಡಿ ಹೊರಟುಹೋಗಿದ್ದರು. ಒಂದು ಹಳ್ಳಿಯಲ್ಲಿ ಒಬ್ಬ ಹಿರಿಯನನ್ನು ಕರೆದು ಆ ಕಲ್ಲಕ್ಕ ಒಳ್ಳೆಯವಳೇ ಕೆಟ್ಟವಳೇ ಎಂದು ಕೇಳಿದ. ಆ ವಿಷಯವೇ ಬೇಕಾಗಿದ್ದಂತೆ ಆತ ಅವಳ ಹೊಗಳುವಿಕೆ ಆರಂಭಿಸಿದ. ಮಾತಿಗೆ ಮಾತು ಬೆಳೆಯುತ್ತಾ ಹೋಯಿತು. ಕೊನೆಗೆ ಯಾರಾದರೂ ಪೋಲಿಸಿನವರು ಅವಳನ್ನು ಹಿಡಿಯಲು ಬಂದರೆ ಅವರನ್ನು ಕೊಂದುಹಾಕುತ್ತೇವೆಂದ ಆ ಮಾತುಗಾರನಿಂದ ಅವನ ಮನ ನೋಯಿಸದಂತೆ ತಪ್ಪಿಸಿಕೊಳ್ಳಲು ತೇಜಾನಿಗೆ ಬಹಳ ಕಷ್ಟವಾಯಿತು. ಕೊನೆಗೂ ಅವನಿಂದ ಪಾರಾಗಿ ದೇವನಹಳ್ಳಿಯ ಕಡೆ ವಾಹನವನ್ನು ಓಡಿಸಿದ.

ಪಟ್‌ವಾರಿಯವರ ಮನೆ ಎದುರು ಜೀಪು ನಿಂತಾಗ ಕೈಗಡಿಯಾರ ನೋಡಿಕೊಂಡ ಐದು ನಿಮಿಷ ತಡವಾಗಿತ್ತು. ಕಾಡಿನ ಕಠಿಣ ದಾರಿಯಿಂದ ಬರಬೇಕಾದ ಅವಳು ಇನ್ನೂ ಬಂದಿರಲಿಕ್ಕಿಲ್ಲ ಎಂದುಕೊಳ್ಳುತ್ತಲೇ ಬಾಗಿಲು ಬಡಿದ. ಕೆಲ ಕ್ಷಣಗಳನಂತರ ಬಾಗಿಲು ತೆಗೆದುಕೊಂಡಿತ್ತು. ಗಂಟಿಕ್ಕಿದ ಮುಖದ ಆಳು ಏನು ಬೇಕೆಂಬಂತೆ ತೇಜಾನ ಕಡೆ ನೋಡಿದ.

“ಪಟ್‌ವಾರಿ ಸಾಹೇಬರನ್ನು ಕಾಣಬೇಕಾಗಿತ್ತು” ಹೇಳಿದ ತೇಜಾ.

“ನಿಮ್ಮ ಹೆಸರು?” ಒರಟು ದನಿಯಲ್ಲಿಯೇ ಪ್ರಶ್ನಿಸಿದ ಆಳು.

“ತೇಜಾ… ಇನ್ಸ್‌ಪೆಕ್ಟರ್‌ ಉತೇಜ್” ಪೋಲಿಸಿನ ಗಡಸುತನವಿರಲಿಲ್ಲ. ಅವನ ಮಾತಿನಲ್ಲಿ ಒಮ್ಮೆಲೆ ಅವನ ಮುಖದ ಗಂಟುಗಳು ಸಡಿಲಾದವು. ಬಹು ವಿನಯದ ದನಿಯಲ್ಲಿ ಹೇಳಿದ.

“ಬನ್ನಿ ಸ್ವಾಮಿ! ಬನ್ನಿ! ಧಣಿ ಇಲ್ಲ. ನೀವು ಮೇಲೆ ಹೋಗಿ”

ಆಶ್ಚರ್ಯವಾಯಿತು. ತೇಜಾನಿಗೆ ಏನು ಹೇಳಬೇಕೋ ತೋಚದೇ ಅಟ್ಟದ ಮೇಲೇರಿದ. ಒಂದು ಕೋಣೆಯ ಬಾಗಿಲೆದುರು ನಿಂತವಳನ್ನು ಹಾಗೇ ನೋಡುತ್ತಾ ನಿಂತುಬಿಟ್ಟ. ಅವಳನ್ನು ಗುರಿತಿಸಲೂ ಅವನಿಗೆ ಕನಿಷ್ಠ ಒಂದು ನಿಮಿಷ ಹಿಡಿಯಿತು. ಹಸಿರು ಬಣ್ಣದ ಸೀರೆ ಅದೇ ಬಣ್ಣದ ರವಿಕೆ ತೊಟ್ಟ ಕಲ್ಯಾಣಿ. ಅಪ್ಸರೆಯಂತೆ ಕಾಣುತ್ತಿದ್ದಳು. ಅವಳ ಮುಖದಲ್ಲೂ ಸಂತಸ ತುಂಬಿಬಂತು ಮುಗುಳ್ನಕ್ಕು ಕೋಣೆಯೊಳಗೆ ಹೋದಳು. ಒಮ್ಮೆಲೆ ಎಚ್ಚೆತ್ತವನಂತೆ ಉದ್ದನೆ ಹೆಜ್ಜೆ ಹಾಕುತ್ತಾ ಆ ಕೋಣೆ ಪ್ರವೇಶಿಸಿದ ತೇಜಾ ಅವಳನ್ನು ಬಿಗಿದಪ್ಪಿದ. ಅವಳೂ ಅವನ ಮೇಲೆ ತನ್ನ ಹಿಡಿತವನ್ನು ಬಲಪಡಿಸಿದಳು. ಎಷ್ಟೋ ಕಾಲದನಂತರ ಭೇಟಿಯಾದಂತಿತ್ತು ಆಲಿಂಗನ. ತುಟಿಗೆ ತುಟಿಗಳು ಕಲೆತವು ಎಲ್ಲಿ ಉಸಿರುಗಟ್ಟುವುದೋ ಎನಿಸಿದಾಗ ತನ್ನ ಬಾಯನ್ನು ಸರಿಸಿ ಕೇಳಿದ

“ಪಟ್‌ವಾರಿ ಸಾಹೇಬರೆಲ್ಲಿ?”

“ಅವರು ತಮ್ಮ ಕೋಣೆಯಲ್ಲಿ ಓದಿಕೊಳ್ಳುತ್ತಿದ್ದಾರೆ. ಯಾವ ಭಯವೂ ಬೇಡ ಇದು ನಮ್ಮ ಮನೆ” ಅವನ ಗಂಟಲು ಎದೆಗಳ ಮೇಲೆ ಕೈಸವರುತ್ತಾ ಹೇಳಿದಳು ಕಲ್ಯಾಣಿ.

“ನಿನ್ನ ಬಿಟ್ಟು ನನಗಿರಲಾಗುವುದಿಲ್ಲ ಕಲ್ಯಾಣಿ! ಇನ್ನೂ ಕೆಲದಿನ ಹೀಗೆ ಆದರೆ ನನಗೆ ಹುಚ್ಚು ಹಿಡಿದುಬಿಡುತ್ತದೆಯೇನೋ?” ಅವಳ ತುಟಿಗಳನ್ನು ತನ್ನ ತುಟಿಗಳಿಂದ ಸವರುತ್ತಾ ಹೇಳಿದ ತೇಜಾ

“ನನ್ನದೂ ಅದೇ ಗತಿಯಾಗಿದೆ. ಯಾವ ಕೆಲಸದಲ್ಲೂ ಮನಸ್ಸು ನಿಲ್ಲುತ್ತಿಲ್ಲ. ಯಾವಾಗಲೂ ನಿನ್ನದೇ ಯೋಚನೆ”

ಅವಳ ಮಾತು ಮುಗಿಯುತ್ತಿದ್ದಂತೆ ದೇಹದ ಮೇಲೆಲ್ಲಾ ಆಡತೊಡಗಿದ ತೇಜಾ. ಅವನಿಂದ ದೂರ ಸರಿದು ಹೇಳಿದಳು ಕಲ್ಯಾಣಿ

“ಇದು ನಮ್ಮ ಮನೆ ಎಂದೆನಲ್ಲ. ಇನ್ನೂ ಊಟದ ಸಮಯವಾಗಿಲ್ಲ. ಏನು ತರಲಿ ಕಾಫಿ…”

“ನನಗೇನೂ ಬೇಡ ನೀನು ಬೇಕು” ಅವಳ ಕೈಹಿಡಿದು ತನ್ನ ಹತ್ತಿರ ಎಳೆದುಕೊಳ್ಳುತ್ತಾ ಹೇಳಿದ.

“ನಾನು ನಿನ್ನವಳೇ! ಅದನ್ಯಾರಿಲ್ಲ ಅಂದಿದ್ದಾರೆ. ಹೀಗ್ಯಾಕೆ ಮಾಡುತ್ತಿದ್ದಿ?” ನಯವಾಗಿ ಅವನ ಹಿಡಿತದಿಂದ ಮುಕ್ತಳಾಗುತ್ತಾ ಕೇಳಿದಳು ಕಲ್ಯಾಣಿ. ಅದಕ್ಕವನು ಉನ್ಮಾದದ ದನಿಯಲ್ಲಿ ಹೇಳಿದ.

“ಮದುವೆಯಾದ ಹೊಸತರಲ್ಲಿ ಹೀಗೆ ಆಗುತ್ತದೆ.”

“ಈಗ ಕಾಫಿ ತರುತ್ತೇನೆ” ಎಂದ ಕಲ್ಯಾಣಿ ಅವನಿಗೆ ಮಾತಾಡುವ ಅವಕಾಶ ಕೊಡದೇ ಆ ಕೋಣೆಯಿಂದ ಹೊರಹೋದಳು. ಆಗ ಎಚ್ಚೆತ್ತವನಂತೆ ಸುತ್ತೂ ನೋಡಿದ. ಸಿರಿವಂತಿಕೆಯಿಂದ ಅಲಂಕರಿಸಲಾದ ದೊಡ್ಡ ಕೋಣೆ. ನಡುವೆ ಇಬ್ಬರು ಮಲಗುವಂತಹ ಹಳೆಯ ಕಾಲದ ಮಂಚ, ಮಂಚವನ್ನು ನವವಧು-ವರರಿಗೆ ಅಲಂಕರಿಸುವಂತೆ ಅಲಂಕರಿಸಲಾಗಿತ್ತು. ಮಲ್ಲಿಗೆ ಹೂವಿನ ವಾಸನೆ ಕೋಣೆಯಲ್ಲೆಲ್ಲಾ ತುಂಬಿತ್ತು. ಕೋಣೆಯ ಒಂದು ಕಡೆ ಪುರಾತನ ಆರಾಮ ಕುರ್ಚಿ, ಮತ್ತೆರಡು ಸಾಮಾನ್ಯ ಕುರ್ಚಿಗಳು. ತಾವು ಬಾಂಬು ಸ್ಫೋಟವಾಗಿ ದೇವಿಯಾದವನ ಕಾರು ನಾಶನವಾದಾಗ ಕುಳಿತ ಕೋಣೆ ಇದಲ್ಲ.

ತೇಜಾನ ಪೊಲೀಸ್‌ ಬುದ್ಧಿ ಕೆಲಸವಾರಂಭಿಸಿತು. ಈ ಪಟ್‌ವಾರಿ ಸಾಹೇಬರು ಯಾರು? ಇವರೂ ಕ್ರಾಂತಿಕಾರಿಯರೇ. ಇಷ್ಟು ಧನವಂತರಾದ ಅವರು ಕ್ರಾಂತಿಕಾರಿಯಾಕಾಗಬೇಕು. ಕಲ್ಯಾಣಿ ಇದೇ ಕೋಣೆಯಿಂದ ರಿಮೋಟ್ ಅದುಮಿ ಬಾಂಬು ಸ್ಫೋಟಿಸಿರಬಹುದೇ ಅಥವಾ ಆ ಕೆಲಸವನ್ನು ಪಟ್‌ವಾರಿಯವರು ಮಾಡಿರಬಹುದೇ. ಇಂತಹದೇ ಯೋಚನೆಯಲ್ಲಿ ಅವನು ತಲ್ಲೀನನಾದಾಗ ಕಾಫಿಯ ಎರಡು ಲೋಟಗಳನ್ನು ಹಿಡಿದು ಬಂದ ಕಲ್ಯಾಣಿ ಅವನ ಬದಲಾದ ಮುಖಭಾವ ಕಂಡು ವ್ಯಂಗ್ಯದನಿಯಲ್ಲಿ ಹೇಳಿದಳು

“ನಿನ್ನ ಪೋಲೀಸ್ ಬುದ್ಧಿ ಮತ್ತೆ ಕೆಲಸ ಮಾಡಲಾರಂಭಿಸಿದ್ದ ಹಾಗಿದೆ.

ಅವಳ ಕೈಯಿಂದ ಒಂದು ಲೋಟವನ್ನು ತೆಗೆದುಕೊಂಡು, ಕೊರಳಲ್ಲಿ ಕೈಹಾಕಿ ಮಂಚದ ಕಡೆ ನಡೆಯುತ್ತಾ ಹೇಳಿದ

“ಪೋಲೀಸಿನವನಿಗಲ್ಲಾ ಅದು ಯಾರಿಗಾದರು ಸ್ವಾಭಾವಿಕವಲ್ಲವೇ”

ಮಂಚದ ಮೇಲೆ ಅವನ ಬದಿಯಲ್ಲೇ ಕುಳಿತು ಕೇಳಿದಳು ಕಲ್ಯಾಣಿ

“ಅದು ಅಂದರೆ ಯಾವುದು?”

“ನಿನ್ನಿಂತಹವಳು ಈ ಧನವಂತನ ಮನೆಯಲ್ಲಿ ಇಷ್ಟು ಸ್ಟೇಚ್ಛೆಯಾಗಿರುವುದು” ತನ್ನಲ್ಲೇ ಯೋಚಿಸಿಕೊಳ್ಳುತ್ತಿರುವಂತೆ ಮಾತಾಡಿದ ತೇಜಾ.

“ಇವರನ್ನು ದೇಶದ್ರೋಹಿ ಕ್ರಾಂತಿಕಾರಿ ಎಂದುಕೊಂಡೆಯಾ?” ವ್ಯಂಗ್ಯದ ದನಿಯಲ್ಲಿ ಕೇಳಿದಳು ಕಲ್ಯಾಣಿ. ಅದಕ್ಕವನಿಂದ ಕೂಡಲೇ ಯಾವ ಉತ್ತರವೂ ಬರದಾಗ ಅಕ್ಕರೆಯ ದನಿಯಲ್ಲಿ ಹೇಳಿದಳವಳು.

“ಕಾಫಿ ಕುಡಿ! ತಣ್ಣಗಾಗುತ್ತದೆ”

ಅವಳ ತಲೆ ಕೂದಲಲ್ಲಿ ಬೆರಳಾಡುತ್ತಾ ಕಾಫಿ ಕುಡಿದು ಮುಗಿಸಿದ ತೇಜ ಕಲ್ಯಾಣಿಯು ಕಾಫಿ ಕುಡಿದಾಯಿತು. ತೇಜಾನ ಯೋಚನೆ ಆಗಲೇ ಪಟ್ವಾರಿ ಯವರಿಂದ ದೂರ ಸರಿದಿತ್ತು. ಕಲ್ಯಾಣಿಯ ತಲೆಯಿಂದ ಸರಿದ ಅವನ ಕೈ ಕೆಳಗಿಳಿಯತೊಡಗಿದಾಗ ಅದನ್ನು ಅಲ್ಲೇ ತಡೆದು ಹೇಳಿದಳವಳು.

“ಅವಸರ ಬೇಡ! ಮೊದಲು ನಿನ್ನ ಅನುಮಾನ ತಿರಿಸಿಕೋ, ನಡಿ ಅವರ ಕೋಣೆಗೆ ಹೋಗುವ”

“ಅದೆಲ್ಲಾ ಆಮೇಲೆ! ನನಗ್ಯಾರ ಮೇಲೂ ಎಂತಹ ಅನುಮಾನವೂ ಇಲ್ಲ” ಅವಳನ್ನಪ್ಪಿ ಹೇಳಿದ ತೇಜಾ.

“ಚಿಕ್ಕ ಮಕ್ಕಳ ಹಾಗೆ ಹಟ ಮಾಡಬಾರದು ನಡಿ, ನಿನ್ನ ಬುದ್ಧಿಯೂ ಚುರುಕಾಗುತ್ತದೆ” ಎಂದ ಅವಳು ಏಳಲು ಹೋದಾಗ ಏಳದಂತೆ ಎರಡೂ ಕೈಗಳಿಂದ ಅಪ್ಪಿ ಹಿಡಿದು ಹೇಳಿದ ತೇಜಾ.

“ಅವರೊಡನೆ ನಾನು ಮಾತಾಡಲು ಸಾಕಷ್ಟು ಸಮಯವಿರುತ್ತದೆ. ನಮಗೆ…”

“ಈ ರಾತ್ರಿಯೆಲ್ಲಾ ನಮ್ಮದೇ! ಅದೂ ಅಲ್ಲದೇ ಇದು ನಮ್ಮ ಮನೆಯೇ ಎಂದು ಹೇಳಿದೆನಲ್ಲಾ ನಡಿ” ಮಕ್ಕಳಿಗೆ ಸಮಾಧಾನ ಹೇಳುವಂತಹ ದನಿಯಲ್ಲಿ ಮಾತಾಡಿದಳು ಕಲ್ಯಾಣಿ.

ಅವನಿಂದ ಬಿಡಿಸಿಕೊಂಡು ಅವಳು ಏಳುತ್ತಿದ್ದಂತೆ ವಿಧಿ ಇಲ್ಲದವನಂತೆ ಎದ್ದ ತೇಜಾ. ಇಬ್ಬರೂ ಆ ಮಹಡಿಯಲ್ಲಿರುವ ಇನ್ನೊಂದು ದೊಡ್ಡ ಕೋಣೆಗೆ ಹೋದರು ಅಲ್ಲಿ ಪಟುವಾರಿ ಸಾಹೇಬರು ಮತ್ತವರ ಮಡದಿ ಕುಳಿತಿದ್ದರು. ಆ ಕೋಣೆಯ ಗೋಡೆ ಕಾಣದಂತೆ ನಾಲ್ಕೂ ಕಡೆ ಶಲ್ಫುಗಳು. ಅದರಲ್ಲಿ ತುಂಬಿದ ಪುಸ್ತಕಗಳು. ಒಂದು ಮೂಲೆಗೆ ಟೇಬಲ್ ಅದರೆದುರು ಕುರ್ಚಿ, ಆ ಟೇಬಲಿನ ಮೇಲೂ ಪುಸ್ತಕಗಳು, ಪೆನ್ನು ಕಾಗದ. ಅದು ಬರೆಯಲು, ಓದಲು ಉಪಯೋಗಿಸುತ್ತಾರೆಂಬುವುದು ಸ್ಪಷ್ಟಪಡಿಸುತ್ತಿತ್ತು.

“ನಮಸ್ಕಾರ ಸರ್! ನನ್ನ ಪರಿಚಯವಿರಬಹುದು” ಅವರ ಹತ್ತಿರ ಬರುತ್ತಾ ಹೇಳಿದ ತೇಜಾ.

“ಬಾ… ಬಾ… ಕಲ್ಯಾಣಿ ಹೇಳಿದ ಮೇಲೆ ಚೆನ್ನಾಗಿ ಪರಿಚಯವಾಯಿತು. ಇವರು ನನ್ನ ಮಡದಿ ಲಕ್ಷ್ಮಿ, ಇವನು ತೇಜಾ” ಎಂದು ಅವರು ಮಡದಿಯನ್ನೂ ಪರಿಚಯಿಸಿದರು. ಕೈ ಜೋಡಿಸಿ ಅವರಿಗೂ ನಮಸ್ಕರಿಸಿದ ತೇಜಾ ಪಟ್‌ವಾರಿಯವರ ಬದಿಯಲ್ಲಿ ಕುಳಿತ. ಮೆತ್ತನೆಯ ಆಧುನಿಕ ಮಾದರಿಯ ಸೋಫಾ. ಕಲ್ಯಾಣಿ ಅವರ ಮಡದಿಯ ಬದಿಯಲ್ಲಿ ಕುಳಿತಳು. ಏನು ಮಾತಾಡಬೇಕು, ಮಾತು ಹೇಗೆ ಆರಂಭಿಸಬೇಕೆನ್ನುವುದು ತೋಚಲಿಲ್ಲ. ಅವನ ಮೌನ ಕಂಡು ತಾವೇ ಮಾತಾಡಿದರು ಪಟ್‌ವಾರಿಯವರು.

“ಏನೂ ಕೇಳುವುದಿಲ್ಲವೇ?”

“ಏನು ಕೇಳಲಿ ಸರ್! ಕಲ್ಯಾಣಿಯನ್ನು ಮದುವೆಯಾದಾಗಿನಿಂದ ಯಾರನ್ನು ಏನು ಕೇಳಲೂ ಭಯವಾಗುತ್ತದೆ.” ಕಲ್ಯಾಣಿಯ ಕಡೆ ನೋಡುತ್ತಾ ಹೇಳಿದ ತೇಚಾ

“ಭಯಪಡಬಾರದು. ಭಯದ ಕಾರಣವಾಗೇ ಇಲ್ಲದ ರೋಗಗಳು ಹುಟ್ಟಿಕೊಳ್ಳುತ್ತವೆ. ಕಲ್ಯಾಣಿಯನ್ನು ಮದುವೆಯಾಗುವಾಗ ಭಯವಾಗಲಿಲ್ಲವೇ?”

“ನಾ ಹೇಳಿದ್ದು ಅಂತಹ ಭಯವಲ್ಲ ಸರ್! ನಿಮ್ಮ ಮನಸ್ಸು ಎಲ್ಲಿ ನೋಯಿಸಬೇಕಾಗುತ್ತದೆ ಎಂಬ ಭಯವಷ್ಟೆ” ಅವರ ಮಾತು ಮುಗಿದ ಕೂಡಲೇ ಸ್ಪಷ್ಟಿಕರಣ ನೀಡಿದ ತೇಜಾ.

“ನನ್ನ ಮನ ನೊಂದು ನೊಂದು ಜಡ್ಡು ಬಿದ್ದು ಬಿಟ್ಟಿದೆ. ಅದಕ್ಕೀಗ ಏನಾದರೂ ನೋವಾಗುವುದಿಲ್ಲ. ನಾಳೆ ಕಲೆಕ್ಟರ್ ಬಂದು ಈ ಮನೆ ನನ್ನದೆ ಅಂದು ನನ್ನ, ನನ್ನ ಹೆಂಡತಿಯನ್ನು ಹೊರ ಹಾಕಿದರೂ ನೋವಾಗುವುದಿಲ್ಲ. ಅರ್ಥವಾಯಿತೆ ನನ್ನ ನೋವು ಎಂತಹದೆಂದು” ನಿರ್ಭಾವ ದನಿಯಲ್ಲಿ ಹೇಳಿದರು ಪಟ್‍ವಾರಿ.

“ಸ್ವಲ್ಪ, ಸ್ವಲ್ಪ ಅರ್ಥವಾಯಿತು ಸರ್!… ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೀವು ಕ್ರಾಂತಿಕಾರಿಯರಿಗೆ ಸಹಾಯ ಮಾಡುತ್ತಿದ್ದೀರಾ” ಅನುಮಾನದ ದನಿಯಲ್ಲಿ ತನ್ನ ಮಾತು ಮುಗಿಸಿದ ತೇಜಾ.

“ಇವರು ಒಂದು ಕಾಲದಲ್ಲಿ ಬಹಳ ಹೆಸರು ಮಾಡಿದ ಕ್ರಾಂತಿಕಾರಿ ಆಗಿದ್ದರಪ್ಪಾ! ಬಿಳಿಯರ್ ಹಂಟರ್ ಏಟುಗಳ ಛಾಪು ಇನ್ನೂ ಅವರ ಬೆನ್ನ ಮೇಲಿದೆ…”

“ನೀವು ಫ್ರೀಡಂಫೈಟರ್ ಆಗಿದ್ದಿರಾ ಸರ್!” ಅವರ ಮಡದಿ ಮಾತು ಮುಗಿಸುವ ಮುನ್ನ ಕೆಳಿದ ತೇಜಾ.

“ಫ್ರೀಡಂಫೈಟರ್” ವ್ಯಂಗ್ಯ, ಸಿಟ್ಟುಗಳು ತುಂಬಿದ ದನಿಯಲ್ಲಿ ಹೇಳಿ ಮಾತು ಮುಂದುವರಿಸಿದರು ಪಟ್‌ವಾರಿ “ಈಗ ಬ್ರಿಟಿಶರ ಕಾಲದಲ್ಲಿ ಜೇಬುಕಳ್ಳನಾದವನು, ದರೋಡೆ ಮಾಡಿದವನು, ವ್ಯಭಿಚಾರ ಮಾಡಿ ಜೈಲಿಗೆ ಹೋದವನೂ ಫ್ರಿಡಂಫೈಟರ್ ಆಗಿಬಿಟ್ಟಿದ್ದಾನೆ. ಆ ಶಬ್ದ ಕೇಳೇ ನನಗೆ ಹೇಸಿಗೆಯಾಗುವಂತಾಗಿದೆ. ಈಗ ಅವರ ಮಕ್ಕಳೂ ತಮ್ಮ ಎಲ್ಲಾ ಸವಲತ್ತುಗಳು ಬೇಕೆಂದು ಮೆರವಣಿಗೆ ತೆಗೆಯುತ್ತಾರೆ. ಎಂತಹ ನಾಚಿಕೆಗೇಡು” ಭಾವುಕ ದನಿಯಲ್ಲಿ ಅವರ ಮಾತು ನಿಂತಾಗ ಕೇಳಿದ ತೇಜಾ.

“ಯಾಕೆ ಸರ್! ಫ್ರೀಡಂ ಫೈಟರ್‌ಗೆ ಪೆನ್‌ಶನ್‌ ಇನ್ನಿತರ ಸವಲತ್ತು ಕೊಡಬಾರದೆ?”

ಅವರನ್ನು ಕೆಣಕಲೆಂಬಂತ್ತಿತ್ತು ಅವನ ಮಾತು. ಕೂಡಲೇ ಅದಕ್ಕೆ ಇನ್ನೂ ಭಾವುಕ ದನಿಯಲ್ಲಿ ಪ್ರಶ್ನಿಸಿದರು ಪಟ್‌ವಾರಿ.

“ನಿನ್ನ ತಾಯಿಯನ್ನೂ ಮಾನಭಂಗದಿಂದ ಕಾಪಾಡಿದ್ದಕ್ಕೆ ನೀ ಪಾರಿತೋಷಕ ಕೇಳುತ್ತೀಯಾ?”

ಅದಕ್ಕೇನೂ ಹೇಳಲಿಲ್ಲ. ತೇಜಾ, ಇವರು ಪೆನ್‌ಶನ್ ತೆಗೆದುಕೊಳ್ಳುತ್ತಿಲ್ಲವೆಂಬುವುದು ಸ್ಪಷ್ಟವಾಯಿತು. ತಮ್ಮ ಕೋಪವನ್ನು ತಡೆಯಲಾರದವರಂತೆ ಮತ್ತೆ ಅವರೇ ಮಾತನ್ನು ಮುಂದುವರೆಸಿದರು.

“ಬಿಳಿಯರು ಹೋದರು ದೇಶ ಸ್ವತಂತ್ರವಾಯಿತು. ಇವರುಗಳೀಗ ದೇಶವನ್ನು ಲೂಟಿ ಮಾಡಲು ಹೊರಟಿದ್ದಾರೆ! ಕಳ್ಳಕಾಕರು, ಭಂಡರೂ ದೇಶವನ್ನಾಳುತ್ತಿದ್ದಾರೆ” ಕೆಮ್ಮು ಬಂದ ಕಾರಣ ಮಾತು ನಿಲ್ಲಿಸಿದರು. ಓಡಿ ಹೋದ ಕಲ್ಯಾಣಿ ಗ್ಲಾಸಿನಲ್ಲಿ ನೀರು ತಂದಳು. ಕೆಮ್ಮು ನಿಂತ ಮೇಲೆ ಹೇಳಿದಳು ಕಲ್ಯಾಣಿ.

“ನೀವು ಸುಮ್ಮನಿರಿ! ನಾನಿವನಿಗೆ ಹೇಳಿದ ಮೇಲೆ ನೀವು ಮಾತಾಡುವಿರಂತೆ” ಎಂದ ಕಲ್ಯಾಣಿ ತೇಜಾನ ಕಡೆ ತಿರುಗಿ ತನ್ನ ಮಾತನ್ನು ಮುಂದುವರೆಸಿದಳು. “ಭಗತಸಿಂಗ್, ಚಂದ್ರಶೇಖರ ಅಜಾದ್ ನಂತಹವರಿಂದ ಪ್ರೇರೇಪಿತರಾಗಿ ಈ ಜಿಲ್ಲೆಯಲ್ಲಿ ವೈಸರಾಯ್ ಮೀಟಿಂಗ್ ಏರ್ಪಡಿಸಿದಾಗ ನಮ್ಮ ಜನರ ಗುಂಪನ್ನು ಚದುರಿಸಲು ಇವರು ಮತ್ತು ಇವರ ಸ್ನೇಹಿತರು ಮೂರು ಮೂಲೆಗಳಿಂದ ಭಯಂಕರ ಶಬ್ದವಾಗುವಂತಹ ಬಾಂಬುಗಳನ್ನು ಸ್ಫೋಟಿಸಿದ್ದರು. ಆ ಶಬ್ದದ ಭಯದಿಂದ ಜನ ದಿಕ್ಕಾಪಾಲಾಗಿ ಓಡಿಹೋಗಿದ್ದರು. ದೇಶದ ಸ್ವಾತಂತ್ರ್ಯಕ್ಕೆ ಹೋರಾಡುವ ಯಾರೇ ಬಂದರೂ ಇವರ ಮನೆಯಲ್ಲೇ ಊಟ, ವಸತಿ. ಅದಕ್ಕಾಗಿ ಐವತ್ತು ಎಕರೆ ಜಮೀನು ಮಾರಿಕೊಂಡರು. ನಮ್ಮ ಹೇಡಿ ದೇಶ ದ್ರೋಹಿಗಳ ಕಾರಣವಾಗೇ ಇವರು ಮೂರು ಸಲ ಜೈಲಿನ ವಾಸ ಅನುಭವಿಸಿದರಲ್ಲದೇ ಆ ಬಿಳಿಯರ ಒದೆತ, ಹೊಡೆತಗಳನ್ನು ತಿಂದಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ ಎಂದೂ ತಾನು ಸ್ವಾತಂತ್ರ್ಯ ಹೋರಾಟಗಾರನೆಂದು ಡಂಗುರ ಸಾರಿಕೊಳ್ಳಲಿಲ್ಲ”

ಕಲ್ಯಾಣಿ ಮಾತು ಮುಗಿಸಿದ ಮೇಲೆ ತನ್ನ ಅನುಮಾನ ನಿವಾರಿಸಿಕೊಳ್ಳುವಂತೆ ಕೇಳಿದ ತೇಜಾ.

“ದೇವಿಯಾದವ ಬಾಂಬು ಸ್ಫೋಟದಲ್ಲಿ ನಾಶವಾದ ದಿನ ನಾವೆಲ್ಲಾ ನಿಮ್ಮ ಮನೆಗೆ ಬಂದಿದ್ದೆವು ಆಗ ಎಸ್.ಪಿ., ಕಲೆಕ್ಟರ್ ನಿಮ್ಮ ಪ್ರಾಣಮಿತ್ರ…”

“ಅದೆಲ್ಲಾ ನಟನೆ, ಕಲ್ಯಾಣಿಯನ್ನು ಕಾಪಾಡಲು ನಟನೆ, ಅದು ಆ ದರಿದ್ರರಿಗೆ ಗೊತ್ತಾಗುವುದಿಲ್ಲ. ಆಗಾಗ ಅವರ ಮುಖಕ್ಕೆ ಭಿಕ್ಷೆಯನ್ನು ಎಸೆಯುತ್ತೇನೆ. ಅದೂ ಕಲ್ಯಾಣಿಗಾಗಿ. ಅವರುಗಳು ತಮ್ಮ ಅಧಿಕಾರ ಚಲಾಯಿಸುವುದರಲ್ಲಿ ಲೋಲುಪರಾಗಿದ್ದಾರೆ ಅದನ್ನು ಅರಿಯುವಷ್ಟು ಬಿಡುವಿಲ್ಲ ಅವರ ಬಳಿ” ಅವನ ಮಾತು ಮುಗಿಯುವ ಮುನ್ನ ಉದ್ದನೆಯ ವಿವರಣೆ ನೀಡಿದರವರು.

“ಅಂದರೆ ಇಲ್ಲಿಂದಲೇ ರಿಮೋಟ್…”

“ಇಲ್ಲ. ನಾನೇನು, ಯಾವಾಗ ಮಾಡುತ್ತೇನೆಂಬುವುದು ಅವರಿಗೆ ಗೊತ್ತಿಲ್ಲ… ನಿನ್ನ ಹಾಗೆ” ಅವನು ಮಾತು ಪೂರ್ತಿ ಮಾಡುವ ಮುನ್ನ ಹೇಳಿದಳು ಕಲ್ಯಾಣಿ.

“ಈಗ ಇವಳನ್ನು ಕ್ರಾಂತಿಕಾರಿ ಎಂದು ಬೇಟೆ ಆಡುತ್ತಿದೆ ಸರಕಾರ. ಅದೇ ಚಂಡಾಲರನ್ನು, ದೇಶದ್ರೋಹಿಯರನ್ನು ಏನೂ ಮಾಡುವುದಿಲ್ಲ. ನಿಯತ್ತಿನ ಸರಕಾರವಾಗಿದ್ದರೆ ಆ ದಾವುದ್ ಇಬ್ರಾಹಿಂ, ಆರುನಗೌಳಿ, ವೀರಪ್ಪನ್ ಇಂತಹ ಎಷ್ಟೋ ಜನರಿದ್ದಾರೆ ಅವರನ್ನು ಕೊಂದು ಎನ್‌ಕೌಂಟರ್‌ ಅನ್ನಬೇಕು. ಅದನ್ನು ಬಿಟ್ಟು ದೇಶ ನಾಶಮಾಡಲು ಹೊರಟಿರುವ ಕ್ರಿಮಿಗಳನ್ನು ಇವರು ಹೊಸಕಿಹಾಕುತ್ತಿದ್ದಾರೆ. ಇವಳನ್ನು ಮುಗಿಸಲು ಯತ್ನಿಸುತ್ತದೆ ಈ ಸರಕಾರ. ಈಗಲಾದರೂ ಎಚ್ಚರಗೊಳ್ಳದಿದ್ದರೆ ದೇಶ ನಾಶವಾಗಿ ಹೋಗುತ್ತದೆ. ತಮ್ಮ ಕೋಪವನ್ನು ತಡೆಯಲಾರದವನಂತೆ ಹೇಳಿದರು ಪಟ್‌ವಾರಿ

“ನಿಮ್ಮ ಊಟ….”

“ಆಯಿತು. ಸರಿಯಾಗಿ ಏಳೂವರೆಗೆ ಎರಡು ಚಪಾತಿಯನ್ನು ತಿನ್ನುತ್ತಾರೆ ಅದೇ ಅವರ ಊಟ” ಮತ್ತೆ ತೇಜಾ ಮಾತಾಡುತ್ತಿದ್ದಂತೆ ಉತ್ತರಿಸಿದಳು ಕಲ್ಯಾಣಿ ತನ್ನ ಮನದ ಗೊಂದಲಕ್ಕೆ ಅರ್ಥ ಹುಡುಕುವಂತೆ ಕೇಳಿದ ತೇಜಾ.

“ಈಗ ದೇಶವನ್ನು ಮುಂದೆ ತರಲು ಏನು ಮಾಡಬೇಕು ಸರ್?”

“ಮೊದಲು ಒಗ್ಗಟ್ಟು, ಬೇಕು. ಅಂತರಾಷ್ಟ್ರೀಯ ಸ್ಥರದಲ್ಲಿ ಮಾತಾಡುವಾಗ ಪಾರ್ಟಿಗಳೂ ತಮ್ಮ ಮತ ಭೇದವನ್ನು ಮರೆತು ಏಕಕಂಠದಿಂದ ಮಾತಾಡಬೇಕು. ಮೊನ್ನೆ ಪೋಖರಾನ್‌ನಲ್ಲಿ ಅಣುಬಾಂಬನ್ನು ಸ್ಫೋಟಿಸಿದಾಗ, ನಮ್ಮ ಶಕ್ತಿಯನ್ನು ಲೋಕಕ್ಕೆಲ್ಲಾ ತೋರಿದಾಗಲೂ ಎಲ್ಲಾ ಪಾರ್ಟಿಗಳು ನಾವು ಮಾಡಿದ್ದು ಸರಿ ಎಂದು ಕೂಗಿ ಹೇಳಲಿಲ್ಲ. ಈ ಬಲಿಷ್ಟ ರಾಷ್ಟ್ರಗಳ ಬಾಲ ಹಿಡಿದು ತೇಕುವುದು ಬಿಡಬೇಕು” ಅವರು ಲಹರಿಯಲ್ಲಿ ಬೇರೆಲ್ಲೊ, ಹೋಗುತ್ತಿದ್ದನೆನಿಸಿ ಅವರು ಮಾತು ನಿಲ್ಲಿಸಿದಾಗ ಕೇಳಿದ ತೇಜಾ.

“ನಮ್ಮ ದೇಶ ಮುಂದೆ ಬರಬೇಕಾದರೆ, ನಮ್ಮ ಕಾಲ ಮೇಲೆ ನಾವು ನಿಲ್ಲುವಂತಾಗಬೇಕಾದರೆ ಏನು ಮಾಡಬೇಕು”

ಸೋಫಾದಲ್ಲಿ ಕಾಲು ಚಾಚಿ ಕೂಡುತ್ತಾ ಹೇಳಿದರು ಪಟ್‌ವಾರಿ

“ಮೊದಲು ಹಂದಿಯ ಸಂತಾನದಂತೆ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸ ಬೇಕು. ಎಲ್ಲ ಹಂತಗಳಲ್ಲೂ ಭ್ರಷ್ಟಚಾರ ಲಂಚಕೋರತನ ನಿಲ್ಲಬೇಕು. ಅದು ಕಷ್ಟದ ಕೆಲಸವೆಂದು ನೀ ಹೇಳಬಹುದು. ಆದರೆ ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ. ಪೊಲೆಟಿಕಲ್ ವಿಲ್ ಬೇಕು. ಒಂದು ಮಗುವಾಗುತ್ತಲೇ ಕೇಳದಿದ್ದರೆ ಬಲವಂತವಾಗಿಯಾದರೂ ಮುಖ್ಯವಾಗಿ ಒಂದು ಮಗುವಿಗೆ ಜನ್ಮವಿತ್ತ ಹೆಣ್ಣಿಗೆ ಆಪರೇಶನ್ ಮಾಡಿಬಿಡಬೇಕು. ಯಾವ ಪಾರ್ಟಿ ಸರಕಾರಕ್ಕೆ ಬಂದರೂ ಇದನ್ನು ಮಾಡುವುದಿಲ್ಲ. ಯಾಕೆಂದರೆ ಅವರುಗಳಿಗೆ ಓಟಿನ ಚಿಂತೆ. ಈಗಂತೂ ರಾಜಕೀಯ ಒಂದು ದೊಡ್ಡ ವ್ಯಾಪಾರವಾಗಿಬಿಟ್ಟಿದೆ. ಅದು ನಿಲ್ಲಬೇಕು. ಭ್ರಷ್ಟಾಚಾರದಲ್ಲಿ ಸಿಲುಕಿರುವವರನ್ನು ಕಲ್ಯಾಣಿ ಮುಗಿಸುತ್ತಿರುವ ಹಾಗೆ ಮುಗಿಸಿಬಿಡಬೇಕು. ಎಲ್ಲರಿಗೂ ಶಿಕ್ಷಣ ದೊರೆತರ ಇದನ್ನು ಮಾಡುವುದು ಸುಲಭ. ಆದರೆ ಈಗ ಅದು ಕೂಡ ಬೃಹತ್ ವ್ಯಾಪಾರವಾಗಿ ಬೆಳೆದುಬಿಟ್ಟಿದೆ.

ಈಗಿನ ನಮ್ಮ ರಾಜಕಾರಣಿಯರನ್ನು ನೋಡು ಪ್ರಧಾನಮಂತ್ರಿಯರೂ ಕೋಟ್ಯಾನುಗಟ್ಟಲೆ ತಿಂದಿದ್ದಾರೆಂದರೆ ಈ ದೇಶದ ಗತಿ ಏನು? ಮಣ್ಣಿನಮಗನೆಂದು ಒಬ್ಬ ಪ್ರಧಾನ ಮಂತ್ರಿಯವರ ಹಳ್ಳಿಯ ಹಾಳಾದ ಮನೆಯನ್ನು ಟಿ.ವಿಯಲ್ಲಿ ತೋರಿಸುತ್ತಾರೆ. ಅವರಿಗೀಗ ಪಟ್ಟಣದಲ್ಲಿ ಎಷ್ಟು ಬಂಗಲೆಗಳಿವೆ. ಹೆಂಡತಿ ಮಕ್ಕಳು ಅಳಿಯಂದಿರ ಹೆಸರಿನಲ್ಲಿ ಎಷ್ಟು ಆಸ್ತಿ ಇದೆ ತೋರಿಸುತ್ತಾರೆಯೇ! ಇಲ್ಲ. ಮಾಫಿಯಾ ಗ್ಯಾಂಗಿಗೆ ಸೇರಿದವರು ಮುಖ್ಯಮಂತ್ರಿಯಗಳಾಗಿದ್ದಾರೆ, ಮುದುಕರಾದರೂ ಇನ್ನೂ ಹೆಣ್ಣು, ಹೆಂಡದ ರುಚಿಯನ್ನು ತಾವು ಬಿಟ್ಟಿಲ್ಲ ಎಂಬುವವರು ಮುಖ್ಯಮಂತ್ರಿಗಳಾಗಿದ್ದಾರೆ. ಇವರುಗಳನ್ನು ಕೋರ್ಟು ಕಚೇರಿಗಳಿಗೆ ತಿರುಗಿಸಬಾರದು ಒಂದೇ ಸಲ ಮುಗಿಸಿ…” ಮತ್ತೆ ಅವರಿಗೆ ಕೆಮ್ಮು ಆರಂಭವಾಯಿತು. ಕಲ್ಯಾಣಿ ಅವರ ಇನ್ನೊಂದು ಬದಿಗೆ ಕುಳಿತು ಬೆನ್ನು ನೀವತೊಡಗಿದಳು. ಕೆಮ್ಮು ನಿಂತ ಮೇಲೇ ಅವರೇ ಟೇಬಲಿನ ಮೇಲಿದ್ದ ಗ್ಲಾಸಿನಿಂದ ಎರಡು ಗುಟುಕು ನೀರು ಕುಡಿದರು.

“ನಿಮಗಿನ್ನು ಮಲಗುವ ಸಮಯವಾಯಿತು ಮಲಗಿ” ಹೇಳಿದಳು ಕಲ್ಯಾಣಿ.

“ನೋಡು ತೇಜಾ ನನಗೆ ಗಂಡುಮಗನಿಲ್ಲ. ನಿನ್ನನ್ನೇ ನನ್ನ ಮಗನೆಂದುಕೊಳ್ಳುತ್ತೇನೆ. ಕಲ್ಯಾಣಿಯಂತಹ ಹುಡುಗಿ ನಿನ್ನ ಮದುವೆಯಾದದ್ದು ನಿನ್ನ ಪುಣ್ಯ. ಯಾರಿಗೂ ಭಯಪಡದೇ ಸುಖವಾಗಿರಿ. ಮುಂದೇನು ಆಗಲಿದೆಯೋ ಅದು ಅಗುತ್ತದೆ”

ಅವನ ಬೆನ್ನು ತಟ್ಟುತ್ತಾ ಹೇಳಿದರು ಪಟ್‍ವಾರಿ. ಅವನಿಗರಿವಿಲ್ಲದಂತೆ ಬಗ್ಗಿ ಅವರ ಕಾಲುಗಳಿಗೆ ನಮಸ್ಕರಿಸಿ ಕೇಳಿದ ತೇಜಾ.

“ನನಗೆ ತಂದೆ ಇಲ್ಲ. ನಿಮ್ಮನ್ನು ಅಪ್ಪಾ ಎಂದು ಕರೆಯಬಹುದೇ?”

“ಅದಕ್ಕಿಂತ ಸಂತೋಷದ ವಿಷಯ ನಮಗ್ಯಾವುದಪ್ಪಾ, ನಾವೇ ನಿನಗೆ ತಾಯಿ ಎಂದು ತಿಳಿ. ಕಲ್ಯಾಣಿ, ನಿನ್ನ ಬಗ್ಗೆ ಎಲ್ಲಾ ಹೇಳಿದ್ದಾಳೆ” ತುಂಬು ಮನಸ್ಸಿನಿಂದ ಹೇಳಿದರು ಅವರ ಮಡದಿ. ಎದ್ದ ತೇಜಾ ಅವರ ಕಾಲಿಗೂ ನಮಸ್ಕರಿಸಿದ. ಸೋಫಾದಿಂದೆದ್ದು ನಗುತ್ತಾ ಹೇಳಿದರು ಪಟ್‌ವಾರಿ ಸಾಹೇಬರು.

“ನೀನೊಂದು ಒಳ್ಳೆಯ ಕೆಲಸ ಮಾಡಿರುವೆ. ಮನುಷ್ಯರ ಭಾವನೆಗಳನ್ನು ಅಣಗಿಸಿ ಅವರನ್ನು ಯಂತ್ರಗಳಂತೆ ರೂಪಿಸಬೇಕೆಂದುಕೊಂಡಿದ್ದಳು ಕಲ್ಯಾಣಿ. ನಿನ್ನ ಮದುವೆಯಾದಾಗಿನಿಂದ ಅದು ಸಾಧ್ಯವಿಲ್ಲವೆಂದು ಗೊತ್ತಾಗಿದೆ ಅವಳಿಗೆ”

“ಹೌದು! ಆ ವಿಷಯದಲ್ಲಿ ತೇಜಾ ನನಗೆ ತನ್ನದೇ ರೀತಿಯಲ್ಲಿ ಪಾಠ ಕಲಿಸಿದ” ಒಪ್ಪಿಕೊಂಡಳು ಕಲ್ಯಾಣಿ.

“ನೀವು ಹೋಗಿ ಊಟ ಮಾಡಿ ಸುಖವಾಗಿ ಯಾರ ಭಯವೂ ಇಲ್ಲದೇ ಮಲಗಿ” ಹೇಳಿದರು ಪಟ್‌ವಾರಿ.

“ನೀವಿಬ್ಬರೂ ಒಂದು ಕಡೆ ನಿಲ್ಲಿ ನಾವು ಆಶೀರ್ವಾದ ಪಡೆದು ಹೋಗುತ್ತೇವೆ” ಎಂದಳು ಕಲ್ಯಾಣಿ.

“ಈಗೀಗ ಇದನ್ನೂ ಕಲಿತಿದ್ದಾಳೆ. ನಮ್ಮ ಕೆಲ ಸಂಪ್ರದಾಯಗಳನ್ನು ನಾವು ಬಿಡಬಾರದು. ಅದು ಬಿಟ್ಟರೆ ನಮ್ಮ ಅಸ್ತಿತ್ವವೇ ಇರುವುದಿಲ್ಲ” ಎಂದ ಪಟ್‌ವಾರಿಯವರು ತಮ್ಮ ಮಡದಿಯ ಬದಿ ಬಂದು ನಿಂತರು. ತೇಜಾ ಮತ್ತು ಕಲ್ಯಾಣಿ ಅವರಿಬ್ಬರ ಕಾಲಿಗೆ ನಮಸ್ಕರಿಸಿದರು.

“ಮತ್ತೊಬ್ಬ ಭಗತಸಿಂಗ ಈ ಮನೆಯಲ್ಲೇ ಹುಟ್ಟಲಿ ಹೋಗಿ” ಎಂದು ಆಶೀರ್ವದಿಸಿದರವರು. ಅವರಿಬ್ಬರೂ ತಮ್ಮ ಮಲಗುವ ಕೋಣೆಯ ಒಳಗೆ ಹೋಗುವವರೆಗೂ ನೋಡುತ್ತಲಿದ್ದ ಕಲ್ಯಾಣಿ ಮತ್ತು ತೇಜಾ ಮುಂದೆ ನಡೆದರು. ಅವನನ್ನು ಅಡುಗೆಯ ಮನೆಗೆ ಕರೆದೊಯ್ದಳು ಕಲ್ಯಾಣಿ. ಅಲ್ಲಿ ಹೋದ ಮೇಲೆ ಕೇಳಿದಳವಳು.

“ನಿನ್ನ ಅನುಮಾನ ನೀಗಿತೆ?”

“ಇಂತಹ ಮಹಾಪುರುಷರ ಭೇಟಿಯಾಗಿದ್ದು ನನ್ನ ಪುಣ್ಯವೆನಿಸುತ್ತದೆ” ಇನ್ನೂ ಅವರ ಮಾತಿನ ಗುಂಗಿನಲ್ಲೇ ಇದ್ದ ತೇಜಾ ಹೇಳಿದ.

“ಇನ್ನೊಮ್ಮೆ ತೋರಿಸುತ್ತೇನೆ. ನೆಹರು, ಗಾಂಧಿ, ಪಟೇಲ್‌ರ ಜತೆ ಅವರ ಹಳೇ ಫೋಟೋಗಳಿವೆ. ಸ್ವಾತಂತ್ರ್ಯ ಬಂದನಂತರ ನೆಹರು ಇವರನ್ನು ಎಲೆಕ್ಷನ್‌ಗೆ ನಿಲ್ಲಿ ಎಂದರಂತೆ. ಇವರು ನನ್ನ ಕೆಲಸ ಮುಗಿಯಿತು ಮುಂದಿನದೆಲ್ಲಾ ನೀವೇ ನೋಡಿಕೊಳ್ಳಿ ಎಂದರಂತೆ” ಹೇಳಿದಳು ಕಲ್ಯಾಣಿ.

ದೊಡ್ಡ ಅಡುಗೆಮನೆ. ಅದರಲ್ಲಿ ಹೊಸದಾಗಿ ಹಾಕಿಸಿದಂತಹ ಡೈನಿಂಗ್ ಟೇಬಲ್ ವಯಸ್ಸಾದುದರಿಂದ ಅವರಿಗೆ ಕೆಳೆಗ ಕೂಡಲು ಕಷ್ಟವಾಗಬಹುದೆಂದು ಅದನ್ನು ತಾನೇ ಅವರಿಗೆ ಬಲವಂತ ಮಾಡಿ ತರಿಸಿರುವದಾಗಿ ಹೇಳಿದಳು ಕಲ್ಯಾಣಿ. ಅವತ್ತು ಪಟ್‌ವಾರಿ ಮತ್ತು ಅವರ ಮಡದಿ ಸೇರಿ ಹಬ್ಬದ ಅಡುಗೆ ಮಾಡಿಸಿದ್ದರು. ಇಬ್ಬರೂ ಊಟ ಆರಂಭಿಸಿದಾಗ ಕೇಳಿದ ತೇಜಾ.

“ಇಲ್ಲಿ ಎಷ್ಟು ಜನ ಆಳುಗಳಿದ್ದಾರೆ?”.

“ಹೊಲದಲ್ಲಿ ಕೆಲಸ ಮಾಡಿಹೋಗುವವರು ಬಹಳ ಜನರಿರಬಹುದು. ನಾನು ಬಂದಾಗ ಮನೆ ಕಾವಲಿಗೆ ಮೂವರಿರುತ್ತಾರೆ. ನಿಜ ಹೇಳಬೇಕೆಂದರೆ ಅದರ ಅವಶ್ಯಕತೆ ಇಲ್ಲ. ಯಾಕೆಂದರೆ ಇಡೀ ಊರೇ ಇವರು ಹೇಳಿದಂತೆ ಕೇಳುತ್ತದೆ. ನಾನಿಲ್ಲಿ ಬಂದದ್ದು ನಂತರ ನೀನು ಬಂದದ್ದು ಬಹು ಜನ ನೋಡಿರಬಹುದು. ಆದರೆ ಅದರ ಬಗ್ಗೆ ಯಾರೂ ಮಾತಾಡುವುದಿಲ್ಲ. ಅದು ಪೋಲಿಸಿನವರಿಗೇ ಆಗಲಿ ಅವರಿಗೆ ಮಾಹಿತಿ ಕೊಡುವವರಿಗೇ ಆಗಲಿ ಗೊತ್ತಾಗುವುದಿಲ್ಲ” ಪೂರ್ತಿ ಆತ್ಮವಿಶ್ವಾಸದ ದನಿಯಲ್ಲಿ ಹೇಳಿದಳು ಕಲ್ಯಾಣಿ.

ಊಟ ಮಾಡುತ್ತಲೇ ಅವರು ಪಟವಾರಿಯವರ ಸಂಸಾರದ ಬಗ್ಗೆ ಮಾತಾಡಿದರು. ಅವರಿಗೆ ಒಬ್ಬಳೇ ಮಗಳು. ಮಗ ಸೊಸೆ ಅಮೆರಿಕಾದಲ್ಲಿದ್ದಾರೆ. ವರ್ಷಕ್ಕೆ, ಎರಡು ವರ್ಷಕ್ಕೆ ಒಂದು ಸಲ ತಂದೆಯನ್ನು ಭೇಟಿಯಾಗಲು ಬರುತ್ತಾಳೆ ಮಗಳು. ಮಗಳೊಡನೆ ಮಾತಾಡಲೇ ಫೋನು ಇರಿಸಿಕೊಂಡಿದ್ದಾರೆ. ಅದರ ನಂಬರ್ ಆಮೇಲೆ ಬರೆದುಕೊಳ್ಳುತ್ತೇನೆಂದ ತೇಜ. ಅವರ ಮಾತಿಗೆ ದೇವನಹಳ್ಳಿಯಲ್ಲೇ ಅಲ್ಲ ಅಕ್ಕಪಕ್ಕ ಹಳ್ಳಿಗಳಲ್ಲೂ ಗೌರವವಿದೆ. ತಾನು ಅವರ ಮನೆಗೆ ಬರುವುದು ಹೋಗುವುದು ಬಹಳ ಜನರಿಗೆ ಗೊತ್ತು. ಆದರೂ ಈವರೆಗೆ ಪೋಲಿಸರ ಇಂಟೆಲಿಜೆನ್ಸ್ ಶಾಖೆಯಾಗಲಿ, ಸ್ಕ್ವಾಡಿನ ಮುಖ್ಯಸ್ಥರು ಶ್ರೀವಾಸ್ತವರಾಗಲಿ ಅದನ್ನು ಕಂಡುಹಿಡಿಯಲಾಗಿಲ್ಲ. ವಿವರಗಳು ಅವಳಿಂದ ಬರುತ್ತಿರುವುದರಲ್ಲಿ ಊಟ ಮುಗಿಯಿತು.

ಮಲಗುವ ಕೋಣೆಯಲ್ಲಿ ಒಂದು ಮಂಚದಲ್ಲಿ ಉರುಳಿದರೂ ಪಟವಾರಿಯವರ ಮಾತುಗಳೇ ತೇಜಾನ ತಲೆಯಲ್ಲಿ ಸುತ್ತುತ್ತಿದ್ದವು. ತನ್ನದು ಯಾವ ದಾರಿ ಎಂದವನು ಈಗಲೂ ನಿಶ್ಚಯಿಸಲು ಸಾಧ್ಯವಾಗಿರಲಿಲ್ಲ.

ಬಾಗಿಲಿಗೆ ಬೋಲ್ಟು, ಎಳೆದುಬಂದು ಅವನ ಬದಿಯಲ್ಲಿ ಮಲಗಿದ ಕಲ್ಯಾಣಿ ಎದೆಕೂದಲಲ್ಲಿ ಕೈಯಾಡುತ್ತಾ ಕೇಳಿದಳು.

“ಏನು ಯೋಚಿಸುತ್ತಿದ್ದಿ?”

“ನಾನ್ಯಾವ ಮಾರ್ಗವನ್ನು ಅನುಸರಿಸಬೇಕೋ ನನಗಿನ್ನೂ ಗೊತ್ತಾಗುತ್ತಿಲ್ಲ.” ಅವಳ ಕಡೆ ನೋಡದೆ ಹೇಳಿದ ತೇಜಾ.

“ಅದರಲ್ಲಿ ಯೋಚಿಸುವುದು ಏನೂ ಇಲ್ಲ ತೇಜಾ, ನಿನ್ನ ಕೆಲಸ ನೀನು ಮುಂದುವರೆಸು ಮುಂದೆ ಏನಾಗುವುದಿದೆಯೋ ಅದೇ ಆಗುತ್ತದೆ. ನಮ್ಮ ಕೈಯಲ್ಲಿ ಏನೂ ಇಲ್ಲ” ಅವನಿಗೆ ಸಮಾಧಾನ ಹೇಳುವಂತಹ ದನಿಯಲ್ಲಿ ಮಾತಾಡಿದಳು ಕಲ್ಯಾಣಿ.

“ಎಷ್ಟು ದಿನ ನಾನು ಸರಕಾರಕ್ಕೆ ಸುಳ್ಳುಗಳು ಹೇಳಿ ಮೋಸಮಾಡಲಿ” ತನ್ನನ್ನು ತಾನೇ ಕೇಳಿಕೊಳ್ಳುವಂತೆ ಮಾತಾಡಿದ ತೇಜಾ.

“ನೀನು ಸುಳ್ಳು ಹೇಳುತ್ತಿಲ್ಲ ತೇಜಾ. ಕಲ್ಯಾಣಿ ಎಲ್ಲಿದ್ದಾಳೆಂದು ಯಾರೂ ಕಂಡು ಹಿಡಿಯಲಾರರು. ನೀನು ಇಲ್ಲಿ ಈಗ ಮನಸ್ಸು ಮಾಡಿದರೂ ನನ್ನ ಬಂಧಿಸಲಾರೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊ, ಆಗ ನೀನು ಸುಳ್ಳು ಹೇಳುತ್ತಿಲ್ಲವೆಂಬುವುದು ನಿನಗೇ ಗೊತ್ತಾಗುತ್ತದೆ.” ಮತ್ತೆ ಅವನಿಗೆ ತಿಳಿಹೇಳುವಂತಹ ದನಿಯಲ್ಲಿಯೇ ಮಾತಾಡಿದಳು ಕಲ್ಯಾಣಿ.

“ಈ ಅನಿಶ್ಚಿತ ಬದುಕು ಎಷ್ಟು ದಿನ ಬದುಕುವದು” ನಿಸ್ಸಹಾಯಕನಂತೆ ಹೇಳಿದ.

“ಎಷ್ಟು ದಿನ ಉಸಿರಾಡುತ್ತಿರುತ್ತೇವೋ, ಎಷ್ಟು ದಿನ ಬದುಕಿರುತ್ತೇವೋ ಹೀಗೇ ಬದುಕಬೇಕು ಬೇರೆ ಮಾರ್ಗವಿಲ್ಲ.” ವೇದಾಂತಿಯಂತೆ ಹೇಳಿದಳು ಕಲ್ಯಾಣಿ ಯಾವುದೋ ಯೋಚನೆಯಲ್ಲಿ ಮುಳುಗಿಹೋದವನಂತೆ ಮಾತಾಡಿದ ತೇಜ.

“ನೀನು ಈ ನಿನ್ನ ದಾರಿಯನ್ನು ಬಿಡಲು ಸಾಧ್ಯವಿಲ್ಲವೆ?”

ವ್ಯಂಗ್ಯದ ನಗೆ ನಕ್ಕು ಮಾತಾಡಿದಳು ಕಲ್ಯಾಣಿ.

“ನಾನೀ ಮಾರ್ಗವನ್ನು ಬಿಟ್ಟು ಮುಖ್ಯ ಧಾರೆಯಲ್ಲಿ ಸೇರುತ್ತೇನೆಂದರು ಪೋಲೀಸಿನವರು ನನ್ನ ಬಂಧಿಸಿ ಕಾಡಿನಲ್ಲಿ ಕೊಂದುಹಾಕುತ್ತಾರೆ. ಅಂತಹ ನಿಷ್ಕ್ರಿಯ, ಹೇಡಿಯ ಸಾವು ನನಗೆ ಬೇಡ.”

ಏನು ಮಾಡಬೇಕೋ ತೋಚದವನಂತೆ ಅವಳ ಕಡೆ ತಿರುಗಿದ. ಅವನನ್ನೇ ನೋಡುತ್ತಿದ್ದ ಅವಳು ಉಕ್ಕಿಬಂದ ಪ್ರೀತಿಯಿಂದ ಅವನನ್ನು ಮುದ್ದಿಸಿ ಹೇಳಿದಳು.

“ನಿನ್ನ ಬಿಟ್ಟು ನನ್ನಿಂದ ಬದುಕಿರಲು ಸಾಧ್ಯವಿಲ್ಲ. ದಯವಿಟ್ಟು ನಾ ಬದುಕಿರುವವರೆಗಾದರು ನನ್ನ ಬಿಟ್ಟು ಹೋಗಬೇಡ ತೇಜಾ”

“ಇಲ್ಲಾ! ನಿನ್ನ ಬಿಟ್ಟು ನಾ ಹೋಗುವುದಿಲ್ಲ. ನೀನೇ ಜತೆಗಿಲ್ಲದಿದ್ದರೆ ನಾನ್ಯಾರು”

ಭಾವುಕವಾಗಿದ್ದವು. ಅವನ ಮಾತುಗಳು, ಆ ಎರಡೂ ದೇಹಗಳು ಒಂದಾಗುವಂತೆ ಒಬ್ಬರನ್ನೊಬ್ಬರು ಅಪ್ಪಿದರು. ಕಲ್ಯಾಣಿಯ ಕಿವಿಯ ಬಳಿ ಉಸುರಿದ ತೇಜಾ.

“ಭಗತ್‌ಸಿಂಗ್‌ನನ್ನು ರೂಪಿಸುವ ಕೆಲಸ ಆರಂಭವಾಯಿತು”

ಅವನ ಕಪೋಲಕ್ಕೆ ತನ್ನ ಕಪೋಲ ಉಜ್ಜುತ್ತಾ ಉನ್ಮಾದ ದನಿಯಲ್ಲಿ ಹೇಳಿದಳು ಕಲ್ಯಾಣಿ

“ಅವರ ಮಾತು ನಿಜವಾಗಲಿ.”

ಆ ರಾತ್ರೀ ಅವರಿಬ್ಬರೂ ಬಿಡುವಾಗಿ ಒಬ್ಬರ ಅವಯವಗಳನ್ನೊಬ್ಬರು ಅರ್ಥ ಮಾಡಿಕೊಳ್ಳುವ ಕೆಲಸದಲ್ಲಿ ತೊಡಗಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗರುಡ ಗಂಭ
Next post ಕನಕ-ಕೃಷ್ಣ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…