ಬಡತನವೆಂದು ಬೇಸರವೇ?
ಯಾರಿಗಿಲ್ಲ ಬಡತನ?
ಸುಖ ಕೊಡುವುದಿಲ್ಲ ಸಿರಿತನ
ಸಿರಿವಂತರ ಚಿಂತೆ ಹಲವು
ನಮಗಿಲ್ಲ ಅದರ ಗೊಡವು
ನಮಗೆ ಬರಿಯ ಹೊಟ್ಟೆ ಚಿಂತೆ
ಮಲಗಲಿದೆ ದೊಡ್ಡ ಸಂತೆ
ಯಾರೋ ಉಟ್ಟು ಬಿಟ್ಟ ಬಟ್ಟೆ
ನಮಗಿದ್ದೇ ಇದೆ ಎನ್ನಿ
ಪರರ ಕಷ್ಟ ಸ್ವಲ್ಪ ನೋಡ ಬನ್ನಿ.
ನಮ್ಮ ಭದ್ರ ಕೋಟೆ
ಬಡತನದ ರೇಖೆ
ದಾಟುವ ಸಾಹಸಿ
ಏರಿದ ಗೇಣು, ಜಾರಿದ ಮೊಳ
ಕೊನೆಗೂ ಏರಿದ. ಏರಿ… ಏರಿ… ನರಳಿದ
ಬೇಕು… ಬೇಕು… ಬೇಕು… ಎಂದು ಹಲುಬಿದ
ಕಂಡಲ್ಲೆಲ್ಲ ಕೊಳ್ಳೆ ಹೊಡೆದು ದಾರಿ ತಪ್ಪಿದ.
ಸೈಕಲ್ಕು ಸ್ಕೂಟರ್… ಕಾರು
ಸ್ವಂತ ಸೈಟು, ಮನೆ, ಒಡವೆ ಜೋರು
ಸೋಫ, ಟೀಪಾಯ್, ಡೈನಿಂಗ್ ಟೇಬಲ್
ರೇಡಿಯೋ, ಟೇಪು, ಟಿ.ವಿ., ಕೇಬಲ್
ಫೋನು, ಫ್ಯಾನು, ಫ್ರಿಜ್ಜು ಮಿಕ್ಸಿ
ಗೀಜರ್, ವ್ಯಾಕ್ಯೂಮ್ ಕ್ಲೀನರ್, ಏಸಿ
ವಾಷಿಂಗ್ ಮೆಷಿನ್, ಡಿಶ್ ವಾಷರ್
ಒಂದೇ… ಎರಡೇ… ಆಸೆ ನೂರು
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಉಂಡು ಹೋದ, ಕೊಂಡು ಹೋದ.
ತೆರಿಗೆ ಕಟ್ಟಿ, ಜೂಜು ಕಟ್ಟಿ
ಸಿರಿದೇವಿಗೆ ತಾಳಿ ಕಟ್ಟಿ, ಕೆಟ್ಟ…
ನಿದ್ದೆ ಕೆಡಿಸಿ ಹೊಟ್ಟೆ ಉರಿಸಿ
ಚಿಂತೆ ತುಂಬಿ ತಲೆಯ ಕೆಡಿಸಿ
ನಗಲಾಗದ, ಆಳಲಾಗದ
ನಾಗರಿಕ ಶಿಷ್ಟ ಸೋಗು
ಸಾಕು ಸಾಕು ಸಿರಿಯ ಹುಚ್ಚು.
ನಮಗೆಬೇಡ ಇಂಥ ನರಕ
ಬಡತನ ವಾದರೇನಂತೆ
ಶಾಂತಿ, ಪ್ರೀತಿ, ನೆಮ್ಮದಿಯ
ಬಾಳು ಸಾಕು ಕೊನೆಯವರೆಗೆ.
*****
೧೦-೦೪-೧೯೯೨