ಪ್ರಾಣ ಇದ್ದವು
ಅದನ್ನು
ಕಳೆದುಕೊಂಡಾಗ
ಸಂಭವಿಸುವುದು
ಸಾವು.
ಸೂಕ್ಷ್ಮಾತಿ ಸೂಕ್ಷ್ಮಜೀವಿ,
ಜಲಚರ, ಪಶು, ಪಕ್ಷಿ
ಸಕಲ ಸಸ್ಯ, ವೃಕ್ಷ
ದೈತ್ಯ ಕಾಯ ಎಲ್ಲಕೂ
ನಿಶ್ಚಿತ.. ಸಾವು.
‘ಜಾತಸ್ಯ ಮರಣಂ ಧೃವಂ’.
ಮಾನವನ ಮಾತೇ ಬೇರೆ.
ಅವನ ಅಂತ್ಯಕ್ಕೆ
ಬರಬೇಕಿಲ್ಲ ಮರಣ.
ಸ್ವಲ್ಪವೂ ಇಲ್ಲದಾಗ ಹಣ
ಆಸ್ತಿಪಾಸ್ತಿಯ ಜೊತೆಗೆ
ಮಾನ ಮರ್ಯಾದೆ
ಎಲ್ಲವೂ ಹರಾಜಾದಾಗ
ಸುಖದ ಸೌಧ ಕುಸಿದಾಗ
ಬಂತವನ ‘ಆರ್ಥಿಕ ಮರಣ’.
ಅವನಾಗ ಸಜೀವ ಶವ!
ಮಾನ ಉಳ್ಳವ ‘ಮಾನವ’
ಹೋದರವನ ಮಾನ
ಬಂತವನ ಮರಣ.
ಪರಸ್ಪರ ದ್ವೇಷ-ಅಸೂಯೆ
ಶೀತಲ ಯುದ್ಧ,
ಹೊಲಸು ರಾಜಕೀಯ –
ವಿಷ ವರ್ತುಲದಲ್ಲಿ
ಸಿಲುಕಿ, ತೇಜೋವಧೆ
ಗೊಂಡವನ ಸ್ಥಿತಿ
“ಬೌದ್ಧಿಕ ಮರಣ”.
ತಲೆ ಕೆಟ್ಟು, ಕಳೆದು
ಚಿತ್ತ ಸ್ವಾಸ್ಥ್ಯ
ಹುಚ್ಚು ಹಿಡಿದು
ನಗ್ನನಾಗಿ ಸುತ್ತಿ ಅಲೆದು
ಯಾರಿಗೂ ಬೇಡವಾಗಿ
ಅರ್ಥವಿಲ್ಲದ ರಾಶಿ ಕಸ ಹೊತ್ತು
ಕಿರುಚಿ, ಕುಣಿದು, ನಕ್ಕು, ಅತ್ತು
ರಸ್ತೆಯ ಮೇಲೆ ಬಿದ್ದು
ಹೊರಳಿ, ಹೊರಳಿ, ಸಾಯಲಾರದೆ
ಕರ್ಮ ಕಳೆಯಲಾಗದೆ
ಕ್ರಿಮಿಯ ಬಾಳು ನಡೆಸಿ
‘ಜೀವನ್ಮರಣ’ ಪಡೆದವಗೆ
ಸಾವು…ಮೋಕ್ಷ.
ಸತ್ತು ಬದುಕಿದ!
*****
೧೪-೦೬-೧೯೯೨