ಹಸೆಮಣೆ ಮೇಲೆ ಹೊಸ ವಧುನಾಚುತ
ಕುಳಿತಿಹಳು ಸೌಂದರ್ಯವತಿ
ಪಕ್ಕದಲಿ ಬೀಗುತ ಕುಳಿತಿಹ
ವರನು ಹೊಸ ಜೀವನದ ಸಂಭ್ರಮದಿ ||
ಮನೆಯ ಮುಂದೆ ಆಕಾಶವೆತ್ತರ
ಚಪ್ಪರ ಹಾಕಿದೆ ನೋಡವ್ವ
ಬಾಳೆ ಕಂಬಗಳು ತಳಿರು ತೋರಣವು
ಹೂಗಳ ಮಾಲೆಯು ಕಾಣಿರೇ ||
ಸುತ್ತ ಪ್ರಕೃತಿ ಹಚ್ಚನೆ ಹಸಿರು
ಹಕ್ಕಿಯ ಚಿಲಿಪಿಲಿ ರಾಗವೂ
ವಸಂತ ಸಂಭ್ರಮ ಎಲ್ಲೆಡೆ ಹಬ್ಬಿದೆ
ನಿಸರ್ಗ ಹೂಮಾಲೆ ಹಿಡಿದು ಕರದಿದೇ ||
ಧಾರೆ ಮುಹೂರ್ತಕೆ ಬಂದವರೆಲ್ಲರ
ಮನದೇ ಹರ್ಷ ತುಂಬಿದೇ
ಡೋಲು ಮೇಳಗಳ ವಾದ್ಯ ಮೊಳಗಿ
ವೇದ ಮಂತ್ರಗಳು ಕೇಳಿ ಬರುತಿದೇ ||
ಗಟ್ಟಿ ಮೇಳಗಳ ನಾದವು ಹೆಚ್ಚಲು
ವಧುವರರ ನವಜೀವನ ಲಗ್ಗೆಯು
ಬಾಗಿದ ತಲೆಯ ವಧುವಿನ ಕೊರಳಿಗೆ
ತಾಳಿಯ ಬಂಧವು ಬೀಳುವುದು ||
ಹೋಮಕುಂಡ ಸುತ್ತಲು
ಸಪ್ತಪದಿ ತುಳಿಯುವವರು
ಸತಿಪತಿಗಳಿಬ್ಬರ ಕೂರಿಸಿ ಆಡಿಸಿ
ಕಾಡಿಸಿ ಶಾಸ್ತವ ಮಾಡಿಸುವ ಹಿರಿಯರು ||
ಹೆಣ್ಣು ಇತ್ತವರ ಗಂಡು ಕೊಟ್ಟವರ
ಮನದಲಿ ಧನ್ಯತೆ ಮೂಡುವುದು
ಗಗನಕೆ ಏರಿದ ಮದುವೆಯ ಸಂಭ್ರಮ
ನಿಧಾನ ಭೂಮಿಗೆ ಇಳಿಯುವುದು ||
ಆರತಿ ಅಕ್ಷತೆ ಹಾಕಿ ತಂದಿರುವ
ಉಡುಗೊರೆ ನೀಡುವ ಸಂಭ್ರಮ
ನೀಡದೇ ನಡೆದಿದೆ ಅಡುಗೆಯ ರುಚಿಯು
ಫಲತಾಂಬೂಲ ಬಣ್ಣನೆಯೂ ||
ಮದುವೆಯೆಂಬ ಬಂಧನದಲ್ಲಿ
ಸತಿಪತಿಯಾಗಿ ಕೈ ಹಿಡಿದು
ಬಾಳಿನ ನೌಕೆಯ ಏರುತ ಇಬ್ಬರು
ಬಾಳಿಗೆ ನಾಂದಿಯ ಹಾಡುವರು ||
*****