ನಾನಲ್ಲ ನೀನಲ್ಲ
ಇವನಲ್ಲ ಅವನಲ್ಲ
ಆತ್ಮ ನೀನೇ ನೀನು
ಇದು ಸತ್ಯಾವತಾರ
ನಿತ್ಯಾವತಾರ ||
ಅವನಲ್ಲ ಇವನಲ್ಲ
ಅವನ ಇವನ
ಬೆರೆತ ಭಾವ ನೂರು ||
ಸ್ವರ ಏಳು ಕೇಳು
ನಾದ ನಾಕು ತಂತಿ
ನುಡಿಸುವ ವೈಣಿಕನಾರು ||
ಸಾವು ಒಂಭತ್ತು
ಜನುಮವು ಒಂದು
ಸಂತೆಗೆ ಮಾಳಿಗೆ ಸಾವಿರ ||
ದಾರದ ಎಳೆ ಒಂದು
ತರತರ ಹೂ ಬಂಧ
ಬಣ್ಣ ಭೇದ ಬೇರಿಲ್ಲವೋ ||
ಹರಿದ ಸೆಲೆಗೆ
ಕೆಳೆಯೆ ಉಸಿರು
ಅಲೆ ತೆರೆಯ ಅಂಬಿಗ… ||
ಐದರ ಕೊಡಕ್ಕೆ
ಬೆಳ್ಳಿ ಚಿನ್ನದ ತಗಡು
ಗುರು ಒಬ್ಬನೆ ಮೋಕ್ಷಕೆ… ||
ಮನವೆಂಬ ಹಕ್ಕಿ
ನಂಟಿನ ತಾರೆಗೆ
ಬಹುದೂರ ಬಿಟ್ಟು ಬಂದೆ ||
ಹದಿನಾರ ಇಪ್ಪತ್ತು
ಇಪ್ಪತ್ತ ಮೂರು ಕೇಳೆ
ನೂರೊಂದು ಶಿಶು ಹಾಡೆವೆ ||
ಏಳರ ಒಂಭತ್ತು
ಐದರ ಗಿಲಕಿ ಕಾಯಕ
ನಾರಾಯಣ ಶಿಶು ಹಂಸಾ ಕೇಳೆ ||
ಜೋಳಿಗೆ ತುಂಬಿ
ನಾಲ್ಕರ ಕಟ್ಟಿಗೆ
ತಾಂಬೂಲ ಇರಿಸಿ ಕಳುಹಿಸಿದೆ ||
ಅವನಿಗಿವನ ಇವನಿಗವನ
ಬಾಡಿಗೆ ತೆರಬೇಕು
ಇವನವನ ಋಣವು.. ||
*****