ನಾವು ಕಟ್ಟಿದ ಗೆದ್ದಲಗೂಡು
ನಿಮಗಾಯಿತು ಹುತ್ತ.
ನಾವು ಹೊತ್ತ ಮಣ್ಣಿನ ಕನಸು
ನಿಮಗಾಯಿತು ನನಸು.
ನಾವು ನೀರೆರೆದ ಹೂವು ಹಣ್ಣು
ನಮಗಾದವು ಹುಣ್ಣು.
ಮೂಸಿ ನೋಡದ ಕಾಡು ಕಲ್ಗಳ
ಮುದ್ದಾಡಿದೆವು ನಾವು
ಕಲ್ಲು ಕಂದಗಳ ಹೊತ್ತು ತಂದೆವು
ಕೋಟೆ ಕೊತ್ತಲಕೆ ಕಾಯ ಕೊಟ್ಟೆವು
ಕೋಟಿ ಕೈಗಳ ಕೋಟೆಯ ಕೆಳಗೆ
ಲಯವಾಯಿತು ಉಸಿರು
ದಣಿಗಳದೇ ಹೆಸರು.
ಕಲ್ಲಿನಲಿ ನಾವ್ ಕಣ್ಣ ಕಂಡೆವು
ಮೈಯ ಮುಟ್ಟುತ ಮೋದವುಂಡೆವು
ಎಳೆ ಎಳೆ ಬಿಡಿಸುತ ಜೀವ ಕೊಟ್ಟೆವು
ಎದ್ದು ನಿಂತಿತು ದೇವಸ್ಥಾನ
ಕೆಸರು ಗದ್ದೆಯ ಕಾರಸ್ಥಾನ.
ನರನರದಲಿ ಹೆಡೆಯೆತ್ತುತ
ನೀವ್ ಹರಿದಾಡುತ
ಮನ ಮಾರಿದೆವು ನಾವು
ಕರುಳನು ಕಿತ್ತು
ಕೊರಳಲ್ಲಿ ಧರಿಸಿ
ಮೆರೆದಾಡಿದಿರಿ ನೀವು
ಕಂಡ ಕಂಡವರ ಕವಚವಾದವರು
ಸುಖ ತೆತ್ತವರು, ಸಾವ ಕಂಡವರು
ದಾರಿ ಕಾಣುವೆವು ನಾವು
ಗೋರಿಯೊಳಗಡೆಯೆ ಘೋಷಣೆ ಕೂಗಿ
ಸಿಡಿದೇಳುವೆವು ನಾವು.
*****