ಕರಿ ಇರುಳ ಬದುಕು
ದೀಪಽದ ಮಿಣಿಕು
ಒಳ ಉರಿಯ ಹಿರಿಯಾಸೆ ಬಿರಿದೋಯಿತೊ
ನರನರದ ಸರದಾಗೆ
ಉರಿಉರಿಯ ದಳ ಅರಳಿ
ಹೂವಾಯಿತೊ-ಬೆಂಕಿ-ಹೆಡೆಯಾಯಿತೊ.
ಆಲದಾ ಬಿಳಲು
ಕರಿಬಾಳ ಸರಳು-
ನೆಲದ ನಗೆ ನುಂಗುವ ಹಗೆಯಾಯಿತೊ
ಬೇರುಗಳು ಬರಸೆಳೆದು
ಕಾರಿರುಳ ವಿಷ ಸುರಿದು
ಬರಡಾಯಿತೊ-ಬಾಳು-ಉರುಳಾಯಿತೊ.
ಗೂಡು ಕಟ್ಟಿದ ಮನಸು
ಅದರಾಗೆ ಸಿರಿಕನಸು
ಗರಿಗೆದರಿದಾ ಹಕ್ಕಿ ನಲಿದಾಡಿತೊ
ಬಾಳಿನ ಬಿಸಿಯಾಗೆ
ಗರಿಗರಿಗೆ ಉರಿ ಹತ್ತಿ
ಹಾರಾಡಿತೊ-ಸುಟ್ಟು-ಹೊರಳಾಡಿತೊ.
*****