ನಾನು ದರಿದ್ರನಾರಾಯಣನ ದತ್ತುಪುತ್ರ ಕಡ್ಡಿಗಾತ್ರ
ಕೋಳಿ ಕೂಗಿದ ಕೂಡಲೆ ಖೋಖೋ ಆಡುತ್ತ ಕೈಹಾಕಿ ನೂಕಿ
ಸಮಜಾಯಿಷಿ ಕೊಡದೆ ಗುರಿಗೂಟದ ಸುತ್ತ ಮಗ್ಗಿ ಗುಣಗುಣಿಸಿದರೂ
ಬಿದ್ದದ್ದು ನೆನಪುಂಟೇ ಹೊರತು ಗೆದ್ದದ್ದು ಗೊತ್ತಿಲ್ಲ.
ಮೊನ್ನೆ ಒಳಗೆಲ್ಲ ಒತ್ತಿಬಿಟ್ಟ ಸ್ಪ್ರಿಂಗಾಗಿ ನನ್ನ ಗದ್ದೆಯಲ್ಲಿ ಉದ್ದಾಗಿ ಬೆಳೆದ
ಕಬ್ಬನ್ನು ತಬ್ಬಿ ನಿಂತಾಗ ಗೆಣ್ಣುಗೆಣ್ಣಿನಲ್ಲೂ ಗೆಣೆಕಾರ ಎನ್ನುವ ಅವಳು! ಗರಿಯಲ್ಲಿ ದೂರದ ಗುರಿಯಲ್ಲಿ ಮರೀಚಿಕೆ ಮಿಂಚುವಳು; ಸಂಚು ಹೂಡುವಳು
ಜರ್ರನೆ ಬಂದು ಬೆನ್ನು ತಿಕ್ಕಿ ಮೈಮನಸ್ಸು ನೆಕ್ಕಿ
ನಕ್ಕಿನಗೆಯಲ್ಲಿ ನೇಗಿಲು ಹೂಡಲು ಹುರಿದುಂಬಿಸಿ
ಕನ್ನಡಿಗಣ್ಣಲಿ ಚಿಗರಿ ಚಿಗಿತ ಬಿಂಬಿಸಿ
ಭ್ರಮೆಬೆನ್ನು ತೋರಿಸಿ ಗುಂಡಿಬಿಚ್ಚೆಂದು ಹೇಳುವಳು
ಚಪಳೆ ಸೊಡರಕುಡಿಯಾಗಿ ಫಕ್ಕನೆ ಮಂಗಮಾಯವಾಗುವಳು
ಹಾಳಾದವಳು ದರಿದ್ರನಿಗೆ ದಕ್ಕದವಳು ಸೊಕ್ಕಿದವಳು
ಇವಳ ಸುದ್ದಿಯೇ ಬೇಡವೆಂದು ಸಿದ್ಧಿಯ ಗದ್ದುಗೆ ಹತ್ತಲು
ಕಿಟಕಿ ಬಾಗಿಲು ಬಂದು ಮಾಡಿದೆ; ಗೋಡೆ ಗೋಡೆಯ ಮುಟ್ಟಿ ಗ್ಯಾರಂಟಿ
ಮಾಡಿಕೊಂಡೆ.
ಇವಳ ಚಾಲೂಕಿಗಷ್ಟು ಬೆಂಕಿ ಬೀಳ ಎಂದು ಕುಳಿತೇ ಬಿಟ್ಟೆ ಸ್ಥಿತಪ್ರಜ್ಞ
ರಂಭೆ ಊರ್ವಶಿಯರ ತೆಕ್ಕೆಯಿಕ್ಕಳಕ್ಕೆ ಸಿಕ್ಕದೆ ಚಕ್ಕಳ ಶರೀರಿಯಾಗ ಹೊರಟ ಪ್ರಾಜ್ಞ
ಗೆದ್ದು ಬಿಡುತ್ತೇನೆ ಎಂದು ಮೌನ ಹೊದ್ದು ಚೂರೂ ಸದ್ದುಮಾಡದೆ ಇದ್ದೆ
ಇದ್ದಕ್ಕಿದ್ದಂತೆ ಏನಾಯಿತು ಗೊತ್ತ?
ಜಗ್ಗನೆ ನೆಲ ಒದ್ದಂತೆ ಎದ್ದೆ; ನೆಲ ಥಕಥಕ ಕುಣಿಯಿತು. ಗೋಡೆಕುದುರೆ
ಕೆನೆಯಿತು; ಕಿಟಕಿ ಬಾಗಿಲು ಬಿದ್ದುಬಿದ್ದು ನಗುತ್ತ ಚಪ್ಪಾಳೆ ತಟ್ಟಿತು.
ಹಟ್ಟಿಮುಂದೆ ಅಪ್ಪಾಳೆತಿಪ್ಪಾಳೆ ಆಡಿದಂತೆ ಎತ್ತೆಂದರತ್ತ ನನ್ನ ಚಿತ್ತ.
ಮಿಡಿನಾಗರಗಳ ದಂಡು ಬಂಡಾಯ ಹೂಡಿದಂತೆ
ನೆಲದ ಝಣ ಝಣ ಕೊಪ್ಪರಿಗೆ ಕುಣಿತಕ್ಕೆ ತಪ್ಪಿದ ಹಿಡಿತಕ್ಕೆ
ಕುಕ್ಕೆ ಕಟ್ಟಿದ ಕರುವಿನಂತೆ ಕಂಡಕಂಡ ಕಡೆ ಹರಿದ ಅಶ್ವತ್ಥಾಮ ಸ್ಥಿತಿ.
ರಸ್ತೆ ಪಾರ್ಕು ಹೋಟೆಲು ಸಿನಿಮಾ ನೋಡಿದ ನೋಡದ ಬಿಲಕ್ಕೆ ಹೊಲಕ್ಕೆ
ಕೊಳಕ್ಕೆ ಅದರ ತಳಕ್ಕೆ ನಡೆಸಿದ ಕುಂತಿ ಪ್ರಯತ್ನಕ್ಕೆ ಕುಂತಿ ಪ್ರಸವ ಆಗಲಿಲ್ಲ.
ಬಿದಿರುಮೆಳೆಯಲ್ಲಿ ಬರುವ ಮಳೆಯಲ್ಲೂ ಕಿಡಿಯೊಡೆದಳು
ಹತ್ತಿರ ಬರುತ್ತ ಕಿತ್ತಲೆ ಸುಲಿದಂತೆ ಕಳಚುತ್ತ ಕತ್ತಲೆಯಿಡಿಸಿದಳು ಕುಂತು ನಿಂತು ಮಾತನಾಡೋಣ ಎನ್ನುತ್ತ ತಲೆತುಂಬಿದಳು.
ಮತ್ತೆ ಮನೆಗೆ ದೌಡು ಬಂದೆ; ತಿಜೋರಿಯಲ್ಲಿ ಮನಸ್ಸು ಬಚ್ಚಿಡಲು
ಬೀಗದ ಕೈ ಹುಡುಕಿದೆ; ಮನಸ್ಸು ಇದ್ದಾಗಲೇ ಎಲ್ಲ ತಿರುಗಿದ ಎಲ್ಲೆ ಭೂ
ಗೋಳ ಜ್ಞಾಪಿಸಿಕೊಂಡು ನಕ್ಷೆ ಬಿಡಿಸುವ ದೀಕ್ಷೆಗೆ ಸಿಕ್ಕಿದೆ.
ಅಚ್ಚ ಬಿಳಿಹಾಳೆಯ ಮುಂದೆ ಅಚ್ಚುಕಟ್ಟಾಗಿ ಕೂತು
ಭೂಮಿ ಭೂಪಟಕ್ಕೆಂದು ಎರಡು ಸೊನ್ನೆ ಎಳೆದೆ.
ಎಳೆಯುತ್ತ ಹೋದಂತೆ ಬೆಳೆಯುತ್ತ ಬರುವ ಬಿರಿಯುತ್ತ ಕರೆವ
ಅವಳವೇ ಎರಡು ಮೊಲೆಯಾಗಿ, ಬೆಚ್ಚಿ ಬಾಯ್ಬಿಟ್ಟು ಒಳಗೆಲ್ಲ ಹೊರಗು
ಮಾಡಹೋದಂತೆಲ್ಲ ಹುತ್ತದೊಳಕ್ಕೆ ಹಾವು ಇಳಿದಂತೆ ಬಾಯಿಂದ
ಇಷ್ಟಿಷ್ಟೇ ಇಳಿದು ಒಳಗೆಲ್ಲ ಬೆಳೆದು ತುಂಬಿ ಬರುವ
ರೋಮಾಂಚನ ಸೆಲೆ;
ಗೆದ್ದಬಲೆ
ಗೆದ್ದ ಬಲೆ.
*****