ಕವಿಯ ಮನ ಮಿಡಿಯುವುದು ದಿನ
ಹೊಸತನವ ಹುಡುಕುತ ಹೊಸ್ತಿಲಲಿ
ಕಲ್ಪನೆಯ ಭಾವನೆಗಳು ಚಿಗುರೊಡೆದು
ಹೊರ ಹೊಮ್ಮುತಿವೆ ಕಥೆ – ಕವನಗಳಾಗಿ
ತನುವು ಕುಗ್ಗಿ ಬಾಗಿ ಮುದಿಯಾದರೂ
ಮನಸ್ಸು ಚಿರ ಯೌವನದ ಚಿಲುಮೆಯಂತೆ
ಪುಟಿದೇಳುವುವು ಕನಸಿನ ಸಾಲುಗಳು
ಕರೆದೊಯ್ಯುವುವು ಭಾವನಾತ್ಮಕ ಲೋಕಕೆ
ಪ್ರಕೃತಿಯೊಡನೆ ಒಡನಾಟ ನಿತ್ಯದ ಪಾಠ
ನವರಸಗಳ ಹದವಾಗಿ ಬೆರೆಸಿ
ಪದಪುಂಜಗಳ ಒಕ್ಕಲು ಮಾಡಿ
ಭಾಷೆ-ಭಾವಗಳಿಗೆ ಜೀವ ತುಂಬುತ ನಡೆವ
ಒರತೆ ನೀರಂತೆ ಬತ್ತದಾ ಸೆಲೆಯಾಗಿ
ಹರಿಯುವುದು ಕವಿ ಕಲ್ಪನಾ ಲಹರಿ
ರವಿ ಕಾಣದ್ದನ್ನ ಕವಿ ತಂದುಕೊಡುವ
ಜನಮನಗಳಲ್ಲಿ ಸದಾ ಹಸಿರಾಗಿ ನಿಲ್ಲುವ
*****