ನವಿಲುಗರಿ – ೧೬

ನವಿಲುಗರಿ – ೧೬

ರಂಗ ಮನೆಯಲ್ಲೇನು ಪ್ರಸ್ತಾಪ ಮಾಡದಿದ್ದರೂ ಪತ್ರಿಕೆಗಳಲ್ಲಿ ರಂಗನ ಪೋಟೋ ಸಮೇತ ಸರ್ಧೆಯ ವಿಷಯ ದಿನಾಂಕ ಬಹುಮಾನದ ಸ್ವರೂಪ ಎಲವೂ ಪ್ರಕಟವಾಗಿ ಇಡೀ ರಾಜ್ಯದ ಗಮನ ಸೆಳೆಯಿತು. ಸಂಪಿಗೆಹಳ್ಳಿಯಲ್ಲಂತೂ ಮನೆಮನೆಯ ಮಾತಾದ ರಂಗ, ಮನೆಯಲ್ಲಿ ಈ ಬಗ್ಗೆ ಮಾತುಗಳೂ ಆದವು. ‘ಮಾಡೋಕೆ ಬೇರೆ ಕೇಮಿಲ್ಲ ಮಗನಿಗೆ. ಇನ್ನು ಈ ನನ್ಮಗ ಕೈ ಕಾಲು ಮುರ್‍ಕೊಂಡ್ರೆ ಅದನ್ನ ರಿಪೇರಿ ಮಾಡಿಸೋಕೇನು ಇವರಪ್ಪ ಬ್ಯಾಂಕನಾಗೆ ದುಡ್ಡಿಟ್ಟಿದಾನಾ?’ ಅಣ್ಣಂದಿರ ಅಪಸ್ವರ.

‘ಪ್ರಾಣಾಪಾಯದ ಇದರ ಗೊಡವೆಯೇ ಬೇಡ, ಹಿಟ್ಟೋ ಗಂಜಿಯೋ ಕುಡ್ಕೊಂಡು ಇರೋಣ. ಘಟ ಇದ್ದರೆ ಒಂದು ಮಠ ಕಟ್ಟಿಸೋದಂತೆ’ ತಾಯಿ ತಿಳಿಹೇಳಿದಳು.

‘ಯಾರು ಏನು ಬೇಕಾದ್ರೂ ಅಂದ್ಕೊಳ್ಳಿ, ಗೆದ್ದರೆ ಎರಡು ಲಕ್ಷ ಬರುತ್ತೆ, ತಂಗಿಯ ಮದುವೆನಾ ಜಾಂ ಜಾಂ ಅಂತ ಮಾಡಬಹುದು. ಪೆಟ್ಟುಬಿದ್ದರೂ ಲಕ್ಷ ಗ್ಯಾರಂಟಿ… ಅವಳ ವರದಕ್ಷಿಣೆಗಾಯ್ತು’ ಎಂದು ಹಿಗ್ಗಿದ ರಂಗ.

‘ಹೌದು. ಪೆಟ್ಟು ಬಿದ್ದು ಮೂಳೆಗೀಳೆ ಮುರಿದ್ರೆ ಅದರ ರಿಪೇರಿಗೆ ದುಡ್ಡು ಹೆಂಗೆ ಅಂತ?’ ಲಾಯರ್ ಸಿಡುಕಿದ. ‘ಗೌರಮೆಂಟ್ ಆಸ್ಪತ್ರೆ ಏನು ಹಾಳಾಗೋಗೈತಾ? ಅಲ್ಲಿ ಹೋಗಿ ಅಡ್ಮಿಟ್ ಆಗ್ತೀನಿ. ನಿಮಗಂತೂ ದೇವರಾಣೆ ತೊಂದರೆ ಕೊಡಲ್ಪಪ್ಪಾ’ ಅಂದ. ಕಾವೇರಿ ಕೂಡ ಅಣ್ಣನ ತೀರ್ಮಾನವನ್ನು ಒಪ್ಪಲಿಲ್ಲ. ಬೇಡವೆಂದು ಹಠ ಹಿಡಿದಳು.

‘ನನ್ನ ಮದುವೆಯಾಗದಿದ್ದರೂ ಚಿಂತೆಯಿಲ್ಲ ಕಣೋ. ನೀನು ಮಾತ್ರ ಇಂಥ ಹುಚ್ಚು ಸಾಹಸಕ್ಕೆ ಬಲಿಯಾಗ್ಬೇಡಪ್ಪಾ’ ಅತ್ತು ಕರೆದು ರಂಪ ಮಾಡಿದಳು. ರಂಗ ಬಗ್ಗಲಿಲ್ಲ. ಮುನಿಸಿಕೊಂಡು ಮಾತೇಬಿಟ್ಟಳು ಅವನೂ ಮಾತನಾಡಿಸಲಿಲ್ಲ.

ಪತ್ರಿಕೆಗಳಿಂದಾಗಿ ವಿಷಯ ತಿಳಿದ ಚಿನ್ನು ಜೀವ ಬಾಯಿಗೆ ಬಂದಿತು. ‘ಎಂತ ಹುಚ್ಚಪ್ಯಾಲೆ ಅದಾನವ್ವ ಚಿಗವ್ವ ಇವ್ನು’ ಎಂದು ಕೆಂಚಮ್ಮನ ಬಳಿ ವಿಲಿವಿಲಿ ಒದ್ದಾಡಿದಳು. ‘ಮೊನ್ನೆ ಬಾವಿತಾವ ಸಿಕ್ಕಿದ್ದ ಕಣೆ ರಂಗ’ ಉತ್ಸಾಹದ ಬುಗ್ಗೆಯಾದಳು. ‘ಹೇಳ್ದ, ಈ ಕಾಂಪಿಟೇಶನ್‌ನಲ್ಲಿ ಗೆದ್ದರೆ ಬರೋ ಹಣದಲ್ಲಿ ತಂಗಿ ಲಗ್ನ ಮಾಡಿ ನಿನ್ನ ಸಮೇತ ಎಸ್ಕೇಪ್ ಆಗ್ತಾನಂತೆ’

‘ತಮಾಷೆ ಮಾಡಬ್ಯಾಡ ಚಿಗಮ್ಮ… ನಿಜ ಹೇಳು’ ಮುನಿದಳು ಚಿನ್ನು

‘ನರಸಿಂಹ ದೇವ್ರಾಣೆಗೂ ದಿಟ ಕಣೆ… ದೇವರ ತಾವ ಒಳ್ಳೇದಾಗ್ಲಿ ಅಂತ ಬೇಡಿಕೊಳ್ಳೋಕೆ ಹೇಳಿ ಅಂತ್ಲೂ ಅಂದ ಕಣೆ ಚಿನ್ನು’

‘ಹಂಗಂದ್ನ… ಹಂಗಾರೆ ಕಾಂಪಿಟ್ ಮಾಡ್ಲಿ ಬಿಡು. ಅವನಿಗೋಸ್ಕರ ದೇವರಿಗೆ ನಾನು ಉರುಳು ಸೇವೆ ಬೇಕಾದ್ರೂ ಮಾಡ್ತೀನಿ ಉಪವಾಸನೂ ಇರ್ತಿನಿ’ ಚಿನ್ನು ಗೆಲುವಾದಳು. ಅವಳ ಪ್ರೇಮದ ಬಗ್ಗೆ ಅದರ ತೀವ್ರತೆ ಬಗ್ಗೆ ಕೆಂಚಮ್ಮನಲ್ಲಿ ಗೌರವ ಮೂಡಿತು ‘ಆದ್ರೂ ಇದು ಜೀವಕ್ಕೆ ಅಪಾಯ ತಂದ್ರೆ ಚಿನ್ನು ಆಗೇನೇ ಮಾಡ್ತಿ… ಅವನೇನ್ ಎಕ್ಸ್‌ಪರ್ಟಾ, ಸೈಕಲ್ ಓಡಿಸೋನು?’ ಗಂಭೀರವಾಗಿಯೇ ಆಗುಹೋಗುಗಳ ಕುರಿತು ಚರ್ಚೆ ನಡೆಸಿದಳು.

‘ಆದ್ರೆ ಏನಾದೀತು ಚಿಗಮ್ಮ? ಒಂದು ಪಕ್ಷ ಸಾಯ್ತಾನಾ? ಸಾಯ್ಲಿ? ಬದುಕೋಕಿಂತ ಸಾಯ್ಲಿಬಿಡು. ಅವನು ಸತ್ತ ಸುದ್ದಿ ಕೇಳಿದ ತಕ್ಷಣ ನಾನೂ ಸಾಯ್ತಿನಿ ಬದುಕಿ ಒಂದಾಗದಿದ್ದರೇನಾತು ಸತ್ತಾರ ಒಂದಾಗ್ತಿವಿ’ ಮಾತಿನಲ್ಲಿ ಅಪಾರವಾದ ದೃಢತೆಯಿತ್ತು. ಕೆಂಚಮ್ಮ ಅವಳನ್ನು ಬಾಚಿ ತಬ್ಬಿಕೊಂಡಳು ‘ನಿನ್ನ ಇಷ್ಟಾರ್ಥ ನೆರವೇರಬೇಕವ್ವ ರಂಗ ಗೆಲ್ಲಬೇಕು. ನೀನೂ ಅವ್ನು ಚೆನ್ನಾಗಿರೋದ್ನ ನಾನು ನೋಡಬೇಕು ಕಣೆ ನೋಡಬೇಕು. ಅದೇ ದೇವರತಾವ ನನ್ನ ಪ್ರಾರ್ಥನೆ. ಈವತ್ತು ಮುಡಿಪು ಕಟ್ತೀನಿ ಮಂತ್ರಾಲಯದ ಗುರುಗಳಿಗೆ’ ಅಂದ ಕೆಂಚಮ್ಮ ನೆನಪಿಗೆ ಬಂದ ದೇವರುಗಳಿಗೆಲ್ಲಾ ಹರಕೆ ಹೊತ್ತಳು.

ಸುದ್ದಿ ರಾಜ್ಯಾದ್ಯಂತ ಪ್ರಚಾರವಾಗುತ್ತಲೇ ದೂರದರ್ಶನ ಮಾಧ್ಯಮದವರೂ ಕ್ಯಾಮರಾ ಸನ್‌ಗನ್‌ಗಳೊಡನೆ ಸಂಪಿಗೆಹಳ್ಳಿಗೆ ಮುತ್ತಿಗೆ ಹಾಕಿದರು. ರಂಗನ ಸಂದರ್ಶನ ಮಾಡಿದರು. ವಿವಿಧ ಭಂಗಿಗಳ ಫೋಟೋ ತೆಗೆದು ಅವನ ಬೊಂಬಾಟ್ ಬಾಡಿಯನ್ನು ಎಕ್ಸ್ಪೋಸ್ ಮಾಡಿದರು. ರಂಗನ ಮೈಕಟ್ಟಿಗೆ ಭಾವಭಂಗಿಗಳಿಗೆ ಸಾಹಸಕ್ಕೆ ಸಿದ್ಧವಾದ ಎದೆಗಾರಿಕೆಗೆ ಅನೇಕ ಆಡ್ ಕಂಪನಿಗಳು ಬೆರಗಾದವು. ಅವನ ಮೇಲೆ, ಸೋಲು ಗೆಲುವಿನ ಮೇಲೆ ಹೆಚ್ಚಿನ ನಿಗಾ ಇರಿಸಿದವು ಕುತೂಹಲ ತಾಳಿದವು. ಸಂಪಿಗೆಹಳ್ಳಿಯವರಿಗಂತೂ ಹಿಗ್ಗೋಹಿಗ್ಗು. ರಂಗ ಪ್ರಾಕ್ಟಿಸ್‌ಗೆಂದು ಅಣ್ಣನ ಬೈಕ್ ಕೇಳಿದ. ‘ಏನು ಕಿಸಿದು ಹಾಕ್ತೀಯಾ ಅಂತ ಬೈಕ್ ಕೊಡ್ಲಪ್ಪಾ ನಾನು. ಯಾವನಿಗಾದ್ರೂ ಎಟ್ಟಿದರೆ ಆಮೇಲೆ ಕೋರ್ಟಿಗೆ ಅಲಿಲಾ ನಾನು ಮುಖ ಮುರಿದಂತೆ ಮಾತನಾಡಿದ ಗಣೇಶ.

‘ನೋಡಯ್ಯಾ ನೀನು ಕೇಳೋದು ನಾವು ಕೊಡೋಲ್ಲ ಅನ್ನೋದು ನಿಷ್ಟೂರವಾಗೋದು. ಇದೆಲ್ಲಾ ಬೇಕಾ? ಬೀದಿನಲ್ಲಿ ಬೆಟ್ಟಗುಡ್ಡದಲ್ಲಿ ನೀನು ಬೈಕ್ ಓಡಿಸಿ ಪ್ರಾಕ್ಟಿಸ್ ಮಾಡಿದರೇನಯ್ಯ ಉಪಯೋಗ? ಮೃತ್ಯುಪಂಜರದಲ್ಲಿ ಕೊಡ್ತಾನಾ ಅವಕಾಶನಾ ಕೇಳು? ಅವನ್ಯಾಕೆ ಕೊಡ್ತಾನೆ? ಹೋಗ್ಲಿ ಲಕ್ಷಗಟ್ಟಲೆ ಕಳೆದು ಕೊಳ್ಳೋಕೆ ಅವನಿಗೇನ್ ಹುಚ್ಚಾ ಅಂತೀನಿ… ನೀನಂತೂ ಗೆಲ್ಲೋಲ್ಲ’ ಪರಮೇಶಿ ಪಾರಾಯಣ ಮಾಡಿದ.

‘ನೀನು ಹುಚ್ಚಾ’. ಇವನು ಗೆದ್ದರೂ ಲಾಭ ಸೋತರೂ ಲಾಭ ಅವನಿಗೆ. ಆವತ್ತು ಎಂಟ್ರಿ ಫೀಜು ಡಬ್ಬಲ್ ಇಟ್ಟವನೆ ಪರಮೇಶಿ, ಲಕ್ಷಾಂತರ ಜನ ಸೇರ್‍ತಾರೆ. ಅದಕ್ಕೇ ಆವತ್ತು ಬೇರೆ ಪ್ಲೇಸೇ ಸೆಲೆಕ್ಟ್ ಮಾಡವನೆ. ಲಾಭ ಇಲ್ಲದೆ ಯಾವನಯ್ಯಾ ಈವತ್ತು ದುಡ್ಡು ಹಾಕ್ತಾನೆ’ ಲಾಯರ್ ವಿವರಿಸಿದಾಗ ಯಾರೂ ಹೆಚ್ಚು ಚರ್ಚೆ ಮಾಡಲಿಲ್ಲ. ಅದವರಿಗೆ ಬೇಕೂ ಇರಲಿಲ್ಲ.

ಮಧ್ಯರಾತ್ರಿ ಯಾರೂ ಎಣಿಸದ ಘಟನೆಯೊಂದು ನಡೆಯಲು ಹೊಂಚು ಹಾಕಿದ್ದರ ಸುಳಿವು ಮನೆಯವರಾರಿಗೂ ಊಹಿಸಲಾಗಲೇಯಿಲ್ಲ. ಒಂದು ಜಾವಕ್ಕೆ ಎದ್ದ ಕಾವೇರಿ ದೇವರ ಪಟಕ್ಕೆ ಕೈ ಮುಗಿದಳು. ತನ್ನಿಂದಲೇ ತಾನೆ ಎಲ್ಲರಿಗೂ ಕಷ್ಟ ತಾನಿದ್ದರೆ ತಾನೆ ಎಂದು ಬಹುದಿನಗಳಿಂದ ಆಲೋಚನೆಯ ಸುಳಿಗೆ ಸಿಕ್ಕವಳು ಅದನ್ನು ಕಾರ್ಯಗತಗೊಳಿಸಲೆಂದೇ ಎಲ್ಲರೂ ಗಾಢನಿದ್ರೆಯಲ್ಲಿದ್ದಾಗ ಅಡಿಗೆ ಕೋಣೆ ಹೋಗಿ ಬಾಗಿಲು ಭದ್ರಪಡಿಸಿಕೊಂಡವಳೆ ಮೇಲಿನ ತೊಲೆಗೆ ಹಗ್ಗ ಎಸೆದು ನೇಣು ಬೀಳಲು ಸಜ್ಜಾದಳು. ರಂಗ ಇಂತದ್ದೇನಾದರೂ ಮಾಡಿಕೊಳ್ಳುವವಳೆ ಇವಳೆಂದು ಅವನೂ ಅವಳ ಮೇಲೆ ಹಗಲು ರಾತ್ರಿ ನಿಗಾಯಿಟ್ಟವನೆ. ಬಾಗಿಲು ಹಾಕಿದ ಶಬ್ದ ಮಾತ್ರದಿಂದಲೇ ಪಕ್ಕನೆ ಎದ್ದ ರಂಗ ಕೋಣೆಯಿಂದಾಚೆಗೆ ಬಂದ. ತಾಯಿಯ ಮಗ್ಗುಲಲ್ಲಿ ಕಾವೇರಿ ಇಲ್ಲ! ಮೊದಲೆಲ್ಲಾ ಅಡಿಗೆ ಕೋಣೆಯಲ್ಲೇ ಮುದುರಿಕೊಳ್ಳುತ್ತಿದ್ದವರು ಬೇಸಿಗೆಯ ಸೆಖೆಯನ್ನು ತಾಳಲಾಗದೆ ತಾಯಿಮಗಳು ಪಡಸಾಲೆಗೆ ಬಂದು ಮಲಗುತ್ತಿದ್ದರು. ತಡಮಾಡದೆ ಹೋಗಿ ಬಾಗಿಲು ಬಡಿದ. ‘ಕಾವೇರಿ… ಕಾವೇರಿ ಬಾಗಿಲು ತೆಗಿ’ ಬಡಿದ ಕೂಗಿದ. ಆ ಗದ್ದಲಕ್ಕೆ ಮನೆಯವರಿಗೆಲ್ಲಾ ನಿದ್ರಾಭಂಗವಾಗಿ ರಂಗನನ್ನು ಬಯ್ಯಲೆಂದೇ ರೂಮುಗಳಿಂದಾಚೆ ಬಂದರು ದಂಪತಿಗಳು. ತಡಮಾಡಬಾರದೆಂದುಕೊಂಡ ರಂಗ ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಬಾಗಿಲನ್ನು ಒದ್ದ ರಭಸಕ್ಕೆ ಬಾಗಿಲು ದಡಾರನೆ ಬಿದ್ದಿತು. ಒಳ ನುಗ್ಗಿ ನೇಣು ಹಗ್ಗದ ಕುಣಿಕೆಗೆ ಕೊರಳು ಕೊಟ್ಟ ಕಾವೇರಿಯನ್ನು ಅನಾಮತ್ತು ಎತ್ತಿ ಹಿಡಿದ. ಅಣ್ಣಂದಿರೂ ನೆರವಿಗೆ ಬಂದರು. ಕಾವೇರಿಗೆ ಒಂದೆಡೆ ಬದುಕಿಬಿಟ್ಟೆನಲ್ಲಾ ಎಂಬ ವೇದನೆ ಮತ್ತೊಂದೆಡೆ ಸಾವಿನಲ್ಲೂ ಸೋತೆನಲ್ಲ ಎಂಬ ಅಪಮಾನ. ‘ನನ್ನನ್ನು ಯಾಕೋ ಬದುಕಿಸಿದ್ದೆ ರಂಗ’ ಎಂದು ಅವನ ಕೆನ್ನೆಗೆ ರಪರಪನೆ ಹೊಡೆದು, ತನಗೆ ತಾನೇ ಹೊಡೆದುಕೊಳ್ಳುತ್ತಾ ತಲೆಗೂದಲನ್ನು ಹಿಡಿದು ಕಿತ್ತುಕೊಳ್ಳುತ್ತಾ ಆವೇಶದಲ್ಲಿ ಹುಚ್ಚಿಯಂತಾಡುವಾಗ ಅವಳನ್ನು ತಬ್ಬಿ ರಂಗ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ಅವನು ಅಳುವಾಗ ಅವಳಿಗೆ ಮೈ ಪರಚಿಕೊಳ್ಳುವಂತಾಯಿತು. ‘ಅಣ್ಣಾ ನೀನು ಅಳಬಾರ್‍ದು ಕಣೋ, ನಿನ್ನ ಕಣ್ಣಲ್ಲಿ ನೀರು ಬಂದ್ರೆ ನನಗೆ ಅವಮಾನವಾಗುತ್ತೆ ಕಣೋ’ ಎಂದು ಬಡಬಡಿಸುತ್ತಾ ಕಣ್ಣೂರೆಸಿದಳು.

‘ಈವತ್ತೇ ಕೊನೆ ಇನ್ನು ಯಾವತ್ತು ಹೀಗೆ ಮಾಡ್ಕೊಬಾರು ಕಾವೇರಿ… ನನ್ನಾಣೆ’ ಎಂದವಳ ಮೈದಡವಿ ಬಿಕ್ಕಿದ. ‘ಕೈ ಮೇಲೆ ಕೈಯಿಟ್ಟು ಮೊದಲು ಆಣೆ ತಗೊಳಪ್ಪಾ ರಂಗ… ಅಲ್ವೆ ನೀನು ಸತ್ತು ಹೋಗಿದ್ದರೆ ನಾವು ಮಾತ್ರ ಬದುಕ್ತಿದ್ವೇನೆ ಹುಚ್ಚಿ’ ಕಮಲಮ್ಮ ಮಗಳನ್ನು ತಬ್ಬಿ ಗೋಳಾಡಿದಳು.

‘ಕೈ ಮೇಲೆ ಕೈಯಿಟ್ಟು ಭಾಷೆ ಕೊಡು. ನಾನು ಪ್ರಾಣ ಕಳ್ಕೊಳೋದಿಲ್ಲ ಅಂತ… ಹುಂ’ ರಂಗ ಒತ್ತಾಯಪೂರ್ವಕವಾಗಿ ಕಾವೇರಿಯಿಂದ ಭಾಷೆ ಪಡೆದ.

‘ಅಣ್ಣಾ ನನ್ನಿಂದಾಗಿ ನಿನ್ನ ಪ್ರಾಣಕ್ಕೇ…’ ಮತ್ತೆ ಗಳಗಳನೆ ಅತ್ತಳು ಕಾವೇರಿ.

‘ನೀನು ಸತ್ತುಬಿಟ್ಟರೆ ನನ್ನ ಪ್ರಾಣ ಉಳಿಯುತ್ತಾ? ಕಾಂಪಿಟೇಶನ್‌ನಲ್ಲಿ ಗೆಲ್ತಿನಾ ಹೇಳು? ಸತ್ತೇನೆ ಸಾಧಿಸ್ತೀಯಾ? ನನ್ನ ಗೆಲುವಿಗಾಗಿ ದೇವರಲ್ಲಿ ಬೇಡ್ಕೋ ಕಾವೇರಿ. ಹೆಣ್ಣು ಮಕ್ಕಳು ಬೇಡಿಕೊಂಡ್ರೆ ದೇವರು ಬೇಗ ಕರಗ್ತಾನಂತೆ’ ರಂಗ ತಿಳಿಹೇಳಿದ. ನಗಿಸಿದ. ‘ನಡೀರಿ ಮಲ್ಕೊಳ್ಳಿ’ ಎಂದು ಕಂಗೆಟ್ಟ ತಾಯಿ, ಕಾವೇರಿಯನ್ನು ಹಾಸಿಗೆಗೆ ಕಳಿಸಿ ತನ್ನ ಕೋಣೆಯತ್ತ ನಡೆದ. ಅದುವರೆಗೂ ಅಣ್ಣಂದಿರು ಅತ್ತಿಗೆಯರು ಮೂಕ ಪ್ರೇಕ್ಷಕರಾಗಿದ್ದರು. ಇದೀಗ ಮಾತುಗಳು ತೂರಿ ಬಂದವು. ‘ಧಡಿಯ ನನ್ಮಗ… ಅಡಿಗೆ ಕೋಣೆ ಬಾಗಿಲನ್ನೇ ಒದ್ದು ಮುರಿದು ಬಿಡೋದೆ! ಇವರಪ್ಪ ತರ್ತಾನ ರಿಪೇರ್‍ಗೆ
ದುಡ್ಡನಾ?’

‘ಅದು ಹೋಗ್ಲಿರೀ. ಅವಳೆಲ್ಲಾದ್ರೂ ನೇಣು ಹಾಕ್ಕೊಂಡು ನೆಗೆದು ಬಿದ್ದು ಹೋಗಿದ್ದರೆ ನಾವು ಮುಸುರೆ ತೊಳಿಬೇಕಿತ್ತಲ್ಲಾ ದೇವರು ದೊಡ್ಡವನು ಕಣ್ರಿ’

‘ಈ ನನ್ಮಗ ಕಾಂಪಿಟೇಶನ್‌ನಲ್ಲಿ ಗೆಲ್ತಾನಾ? ಎರಡು ಲಕ್ಷ ತರ್ತಾನಾ?’

‘ಪೆಟ್ಟು ಬಿದ್ದು ನೆಗೆದೂ ಬಿದ್ದು ಹೋದ ಅಂದ್ಕೋ ಲಕ್ಷ ಬರೋದಂತೂ ಗ್ಯಾರಂಟಿ… ಅದನ್ನ ಎಗ್ಗಿಬಿಶನ್ ಮೇನೇಜರ್ ನಮಗೆ ತಾನೆ ಕೊಡೋದು?’ ನಗು ಹರಿಯಿತು

‘ಸಮವಾಗಿ ಹಂಚೋಬೇಕ್ ನೋಡ್ರಿ’

ಎಲ್ಲಾ ಮಾತುಗಳು ರಂಗನ ಕಿವಿಯ ಮೇಲೆ ಬಿದ್ದವು. ಕೋಪ ಬರುವ ಜಾಗದಲ್ಲಿ ನಗು ಬಂತು. ನಗುತ್ತಾ ಹೋಗಿ ಮುಸುಕು ಹೊದ್ದು ಮಲಗಿದ, ಮಲಗಿದೊಡನೆ ನಿದ್ರಾದೇವಿಯ ವಶನಾಗಿ ಮಗುವಿನಂತೆ ಸಣ್ಣಗೆ ಗೊರಕೆ ತೆಗೆದ.
* * *

ಎಂದಿನಂತೆ ಎಗ್ಸಿಬಿಶನ್ ಕಾರ್ಯಕ್ರಮಗಳು ರಸವತ್ತಾಗಿ ಮುಗಿಸದು ಮಂದಿ ಮನೆ ಸೇರಿದ್ದಾಯಿತು. ಕಾರ್ಯಕರ್ತರು ಉಂಡು ಮಲಗಿದ್ದಾಯಿತು. ನಿದ್ದೆ ಬಾರದವನೆಂದರೆ ಮೃತ್ಯುಪಂಜರದಲ್ಲಿ ಬೈಕ್ ಓಡಿಸುವ ಆಂಟನಿ. ನಿದ್ದೆ ಬಾರದೆ ಹೊರಳಾಡಿದ. ಹೊರಳಾಡಿ ಮೈಕೈ ನೋವಾಯಿತೇ ವಿನಹ ನಿದ್ರೆ ಅವನ ಆಸುಪಾಸೂ ಇಣುಕಲಿಲ್ಲ. ತಾನು, ತನ್ನವರು ಇಷ್ಟು ವರ್ಷದಿಂದ ಸೋಹನ್‌ಲಾಲ್‌ನ ಕಂಪನಿಯಲ್ಲಿ ಪ್ರಾಣ ಒತ್ತೆಯಿಟ್ಟು ಕತ್ತೆ ಚಾಕರಿ ಮಾಡುತ್ತಿದ್ದೇವೆ. ಪುಣ್ಯಾತ್ಮ ಹೊಟ್ಟೆ ತುಂಬ ಊಟ ಹಾಕ್ತಾನೆ ವಾರಕ್ಕೊಮ್ಮೆ ನಾನ್‌ವೆಜ್ಜ್ ಉಂಟು ಎಂಬುದನ್ನು ಬಿಟ್ಟರೆ ಸಂಬಳಕ್ಕೆ ಅನೇಕ ಸಲ ಪಂಗನಾಮ ಹಾಕೋದೇ ಹೆಚ್ಚು. ಕಲೆಕ್ಷನ್ ಮಜಬೂತಾಗಿ ನಡೀತೋ ನಗನಗ್ತಾ ಇರ್ತಾನೆ. ಇಲ್ಲವೆ ಸಿಡಿಮಿಡಿ, ಇಲ್ಲದ ಕೋಪ, ಸಣ್ಣಪುಟ್ಟ, ನೌಕರರ ಮೇಲೆ ಕೈಯೂ ಮಾಡುತ್ತಾನೆ. ಯಾವ ರೀತಿಯಿಂದ ನೋಡಿದರೂ ಧಾರಾಳಿಯಲ್ಲ ದಿಲ್‌ದಾರ್ ಆದ್ಮೀನೂ ಅಲ್ಲ. ಕಂಜೂಸ್ ಆದ್ಮೀನೇ ಇಂವಾ. ಅಂತವನು ಮೃತ್ಯುಪಂಜರದಲ್ಲಿ ಬೈಕ್ ಓಡಿಸಿದರೆ ಅದೂ ಹತ್ತು ನಿಮಿಷ! ಎರಡು ಲಕ್ಷದಷ್ಟು ಕೊಡ್ತಾನಂತೆ ಪೆಟ್ಟಾಗಿ ಸೋತರೆ ಒಂದು ಲಕ್ಷವಂತೆ. ನಮಗೇ ನೆಟ್ಟಗೆ ಸಂಬಳ ಕೊಡೋಕೇ ದುಸುಮುಸ ಮಾಡೋನು ಇಷ್ಟೊಂದು ಬಿಗ್ ಅಮೌಂಟನ್ನ ಹ್ಯಾಗೆ ಕೊಡ್ತಾನೆ? ಎಲ್ಲಿಂದ ತಂದುಕೊಡ್ತಾನೆ…! ದಿನಾ ಪ್ರಾಣವನ್ನ ಒತ್ತೆಯಿಟ್ಟು ಸಾಹಸ ತೋರೋದು ನಾನು. ನನ್ನ ಐಟಂಗೇ ಜನ ಹೆಚ್ಚು ಸೇರೋದು. ಇಡೀ ಎಕ್ಸಿಬಿಶನ್ ಮೇನ್ ಅಟ್ರಾಕ್ಷನ್ ನಾನು. ನನ್ನಂಥವನನ್ನೂ ಲೆಕ್ಕಕ್ಕೇ ಇಡದೆ, ಇಟ್ಟರೂ ತೋರಿಸಿಕೊಳ್ಳದೆ ಉಡಾಫೆಯಿಂದ ನೋಡಿಸಿಕೊಳ್ಳುವ ಲಾಲ್‌ಗೆ ಇದೆಂತಹ ಹುಚ್ಚು ಹಿಡಿಯಿತು. ಎಷ್ಟೇ ಡಬ್ಬಲ್ ರೇಟ್ ಇಟ್ಟರೂ ಸಾವಿರಾರು ಜನ ಸೇರಿದರೂ ಕಲಕ್ಷನ್ ಲಕ್ಷ ಮೀರೋಕೆ ಸಾಧ್ಯವಿಲ್ಲ. ಅದೂ ಈ ಹಳ್ಳಿನಲ್ಲಿ ಎಂದೂ ಸಾವಿರದಷ್ಟು ಜನ ಬಂದು ಹೋದ ದಾಖಲೆಯಿಲ್ಲ. ಆಂಟನಿಯ ಜೀವ ತಹತಹಿಸಿತು. ಎದ್ದು ಕೂತು ಸಿಗರೇಟ್ ಹಚ್ಚಿ ವಿಸ್ಕಿ ಬಾಟಲ್ ಖಾಲಿ ಮಾಡಿದ, ತಲೆ ಪರಪರನೆ ಕೆರೆದುಕೊಂಡ. ಏನು ಬೇಕಾದರೂ ಆಗ್ಲಿ ಬಾಸ್‌ನೇ ಕೇಳಿಯೇ ಬಿಡೋಣವೆಂದು ಲುಂಗಿ ಕಟ್ಟಿಕೊಂಡು ಟೆಂಟ್‌ನಿಂದ ಈಚೆ ಬಂದ, ಸೋಹನ್‌ಲಾಲ್ ಹೊರಗೆ ಟೇಬಲ್ ಕುರ್ಚಿ ಹಾಕಿಕೊಂಡು ಚಿಕನ್ ಜೊತೆ ವಿಸ್ಕಿ ಸವಿಯುತ್ತಿದ್ದ. ಬಂದು ನಿಂತ ಇವನನ್ನು ನೋಡಿದರೂ ಮೌನವಾಗಿದ್ದ ಕೂರಲೂ ಹೇಳಲಿಲ್ಲ. ಆಪ್ರಮೇಯವೇ ಬೇಡವೆಂದೇ ಆತ ಕುಡಿಯುವಾಗ ತಿನ್ನುವಾಗ ಒಂದೇ ಚೇರ್ ಹಾಕಿಕೊಂಡು ಕೂತುಬಿಡುತ್ತಾನೆ. ‘ಏನ್ ಬಾಸ್, ಸಮಾರಾದ್ನೆ ನಡೇ ಇದೆ… ಭಾಳ ಕುಡಿಬೇಡಿ ಬಾಸ್ ಹೆಲ್ತ್‌ಗೆ ಒಳ್ಳೇದಲ್ಲ’ ತಾನೇ ಮಾತನಾಡಿದ ಆಂಟನಿ.

‘ಕುಡಿದೇ ಬಂದಿದ್ದೀಯಲ್ಲೋ ಆಂಟನಿ, ನೀನು ಕುಡಿದೇ ತಾನೆ ಬೈಕ್ ಪರೇಡ್ ಮಾಡೋದು? ನನಗೆ ಬೇರೆ ನೀತಿ ಪಾಠ ಹೇಳೀಯಾ ಪ್ಯಾರೆ?’ ಗೇಲಿಮಾಡಿ ನಕ್ಕ.

‘ನೀವು ಆರೋಗ್ಯವಾಗಿದ್ದರೆ ನಾವೂ ಆರೋಗ್ಯವಾಗಿ ಇರ್ತಿವಿ ಅದಕ್ಕೆ ಹೇಳ್ದೆ ಬಾಸ್’ ಮಸ್ಕಾ ಹೊಡೆದ. ‘ಯಾಕೆ ನಿದ್ದೆ ಬರಲಿಲ್ವೇನೋ?’ ಕೇಳಿದ ಸೋಹನ್‌ಲಾಲ್

‘ಇಲ್ಲ ಬಾಸ್, ಅದೇ ನೀವು ಕಾಂಪಿಟೇಶನ್ ಇಟ್ಟು ಲಕ್ಷಗಟ್ಟಲೆ ಕೊಡ್ತೀನಿ ಅಂತ ಪ್ರಚಾರ ಮಾಡಿಸ್ತಾ ಇದೀರಾ… ಕಾಂಪಿಟೇಶನ್ ನಿಂತಿರೋದು ಇದೇ ಹಳ್ಳಿ ಪೈಲ್ವಾನ… ದುಡ್ಡು ಕೊಡ್ಡೆ ಗೋಲ್‌ಮಾಲ್ ಮಾಡಿದರೆ ನಾವು ನಮ್ಮ ‘ಶೋ’ ಉಳಿದಿತಾ ಅಂತ…’ ತಾನೂ ಹೆದರಿದವನಂತೆ ನಟಿಸುತ್ತಾ ಹೆದರಿಸಿದ.

‘ಗೋಲ್‌ಮಾಲ್ ಯಾಕ್ ಮಾಡ್ಲಿ! ಪೈಸೆ ವಿಚಾರದಲ್ಲಿ ಡೋಕಾ ಹೊಡದ್ರೆ ಜಾನ್‌ಗೇ ಖತ್ರ ಅಂತ ನಂಗೊತ್ತು…’

‘ಮತ್ತೆ ಅಷ್ಟೊಂದು ಕಲಕ್ಷನ್ ಆಗ್ತದಾ? ಪೈಸಾ ಎಲ್ಲಿಂದ ತರ್ತಿರಾ ಏನ್ ಕತೆ ನಿಮ್ದು? ನನಗೊಂಚೂರೂ ಅರ್ಥವಾಗ್ತಾನೇ ಇಲ್ಲ ಬಾಸ್’

‘ಪೈಸೆ ಎಲ್ಲಿಂದ ಬರಬೇಕೋ ಅಲ್ಲಿಂದ ಬರ್ತದೆ ತುಂ ಬಿಲ್ಕುಲ್ ಫಿಕರ್ ಮತ್ ಕರೋ ಪ್ಯಾರೆ…’

‘ಅದೇ ಅದು ಎಲ್ಲಿಂದ ಪೈಸಾ ವಸೂಲ್ ಆಗ್ತದೆ ಬಾಸ್?’ ಕುತೂಹಲವನ್ನು ತಾಳಲಾಗದೆ ಲಾಲನ ಕಾಲ ಬಳಿ ಕೂತು ಮಾಲೀಕನನ್ನು ನೋಡುವ ನಾಯಿಯ ಪರಿ ನೋಡಿದ. ‘ಅದು ಟಾಪ್ ಸಿಕ್ರೇಟ್ ಆಂಟನಿ, ನೀನು ನನ್ನ ಅಚ್ಚಾ ದೋಸ್ತ್, ಜಾನ್ಗೆ ಪಣಕ್ಕಿಟ್ಟು ಷೋ ಕೊಡೋ ನಮ್ಮಲ್ಲಿನ ಫಸ್ಟ್‍ಗ್ರೇಡ್ ವರ್ಕರ್ ಅಂತ ಹೇಳ್ತಿದೀನಿ. ವಿಷಯ ಇಬ್ಬರಲ್ಲೆ ಇರ್‍ಬೇಕು ಪ್ಯಾರೆ’ ಎಂದು ಊಟ ಮುಗಿಸಿ ಕೈ ತೊಳೆದು ಡರನೆ ತೇಗಿದ.

‘ಪೈಸಾ ಯಾರು ಕೊಡ್ತಾರೆ… ಅಲ್ಲಾ? ಈ ಊರಿನ ಬಡಾ ಆದ್ಮಿ ಪಾಳೇಗಾರರು ಐದಾರಲ್ಲ. ಉಗ್ರಪ್ಪ ಮೈಲಾರಪ್ಪ ಬಂದಿದ್ದರು. ಅವರು ಕೊಡ್ತೀವಿ ಅಂತ ಒಪ್ಪಿಕೊಂಡಿದ್ದಾರೆ’ ಲಾಲ್ ಹೇಳಿ ನರಿನಗೆ ನಕ್ಕ.

‘ಅಂದ್ರೆ ‘ಷೋ’ಗೆ ಅವರು ಪಾರ್ಟನರ್‍ಸಾ…?’

‘ನರ್ಸು ಇಲ್ಲ ಮಿಡ್ವೈಫೂ ಇಲ್ಲ. ಕಲಕ್ಶನ್ ಪೂರ ನಮ್ಮೆ, ಗೆದ್ದರೂ ಪೆಟ್ಟಾದ್ರೂ ಅಂದ್ರೆ ಕೈಕಾಲು ಮುರಿದರೂ ಪೈಸಾ ಅವರೇ ಕೊಡೋದು ಯಾಕೆ ಗೊತ್ತಾ?’ ಪಿಳಿಪಿಳಿ ಕಣ ಬಿಟ್ಟ ಆಂಟನಿ. ‘ಈಗ ಕಾಂಪಿಟ್ ಮಾಡ್ತಿರೋ ಹುಡ್ಗನಿಗೆ ಬೈಕ್ ನೆಟ್ಟಗೆ ಓಡಿಸಿಯೇ ಗೊತ್ತಿಲ್ಲ. ಪಂಜರದಲ್ಲಿ ಓಡಿಸಿದರೆ ಕೈ ಕಾಲಿರಲಿ ಅವನ ಜೀವನಾರ ಉಳಿದೀತಾ? ಅಲ್ಲೇ ಬಿದ್ದು ಒದ್ದಾಡಿ ಸಾಯ್ತಾನಷ್ಟೆ’ ಲಾಲ್ ಅಂದ.

‘ಯಾಕಂತೆ ಬಾಸ್…? ಇದ್ರಾಗೇನೋ ಷಡ್ಯಂತ್ರ ಇದೆ ಬಡಾಲೋಗ್ದು ಬಾಸ್’

‘ಅವರೆಲ್ಲಿ ಪಿಕ್ಚರ್‍ಗೆ ಬರ್ತಾರೋ ಆಂಟನಿ? ಅನೌನ್ಸ್ ಮಾಡಿರೋದು ನಾವು. ಪೈಸಾ ಕೊಡೋರು ನಾವು. ಅವರು ಪಿಕ್ಚರ್‍ಗೇ ಬರೋಲ್ಲ. ಸ್ಪಾಟ್ಗೂ ಬರೋಲ್ಲ ಪ್ಯಾರೆ’

‘ಇದರಿಂದ ನಿಮಗೇನಾರ ತೊಂದರೆಗಿಂದ್ರೆ ಆಯ್ತಪ್ಪಾ?’ ನಿಜಕ್ಕೂ ಆಂಟನಿ ಭಯಪಟ್ಟ

‘ಅವರು ತುಂಬಾ ಫವರ್‌ಫುಲ್ಲು. ಪೊಲಿಟಿಶಿಯನ್ನು ಪೊಲೀಸು ಅವರು ಹೇಳ್ದಂಗೆ ಕೇಳ್ತಾರೆ. ಅದೆಲ್ಲಾ ತಿಳ್ಕೊಳ್ದೆ ರಿಸ್ಕ್ ತಗೋತೀನಾ? ನಾನು ಏಳು ಕೆರೆ ನೀರು ಕುಡಿದು ಈ ಲೆವಲ್ ರೀಚ್ ಆಗಿರೋನು ಪ್ಯಾರೆ?’ ಗುಳುಗುಳು ನಕ್ಕ ಲಾಲ್.

‘ಆದ್ರೂ ಕೇಳ್ತೀನಿ ಬಾಸ್, ಆ ಹುಡುಗನ ಮೇಲೆ ಇವರಿಗೇನು ದ್ವೇಷ ಅಂತ?’

‘ಅದೆಲ್ಲಾ ನಮಗ್ಯಾಕೆ ಪ್ಯಾರೆ. ನೇರವಾಗಿ ಮರ್ಡರ್ ಮಾಡಿಸಿದ್ರೆ ಈವತ್ತಲ್ಲ ನಾಳೆ ಗೊತ್ತಾಗಿ ಸುಮ್ನೆ ಕೋರ್‍ಟು ಪೊಲೀಸು ಅಂತ ಟ್ರಬಲ್ ಯಾಕೆ ಅಂತ ಈ ಪ್ಲಾನ್ ಹುಡುಕಿದಾರೆ. ನಮ್ಮದು ಗೇಮ್ ಅಷ್ಟೆ, ಹುಡುಗ ಗೆದ್ದರೂ ಸೋತರೂ ನಮ್ಗೆಂತದೂ ಲುಕ್ಸಾನ್ ಇಲ್ಲ ಪ್ಯಾರೆ… ಜಾವ್ ಜಾವ್ ಆರಾಮ್ ನೀಂದ್ ಕರೋ’ ತೂರಾಡುತ್ತಾ ಮೇಲೆದ್ದ ಸೋಹನ್‌ಲಾಲ್.

‘ಇದನ್ನ ಏಸು ಮೆಚ್ಚುತಾನಾ ಬಾಸ್?’ ಪರಿತಪಿಸಿದ ಆಂಟನಿ.

‘ಆಮೇಲೆ ಹೋಗಿ ಕನ್‌ಫೆಸ್ ಮಾಡ್ಕೊಂಡ್ರಾತು’ ಗೊಳ್ಳನೆ ನಕ್ಕ ಲಾಲ್ ತನ್ನ ಮಾತನ್ನು ಮುಂದುವರೆಸಿದ, ‘ಈ ಜಮಾನದಾಗೆ ಪೈಸೆಗಿರೋ ಪವರ್ ಮುಂದೆ ಆ ನಿನ್ನ ಪರಮಾತ್ಮನೂ ವೀಕು ಕಣೋ ಆಂಟನಿ. ಮಾಡೋದು ನೀನಲ್ಲ ಮಾಡೋನು ನಾನು, ಪಾಪ ಪುಣ್ಯ ನನಗೆ ಬಿಡ ಅಂತಾನೆ ಗೀತೆ ಒಳ್ಗೆ ಭಗವಾನ್ ಕಿಶನ್, ನನಗೆ ನಿದ್ದೆ ಬರ್‍ತಾ ಅದೆ ಗುಡ್‌ನೈಟ್’ ಅಂದ ಲಾಲ್ ಟೆಂಟ್ ಒಳ ಸರಿದ. ಆಂಟನಿ ನಿಂತೇ ಇದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಲಗಿರಿ ಓಓಓ ಜಾಲಗಿರಿ
Next post ದುಃಖ

ಸಣ್ಣ ಕತೆ

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…