ನವಿಲುಗರಿ – ೬

ನವಿಲುಗರಿ – ೬

ರಂಗ ಕುಸ್ತಿಯಲ್ಲಿ ಗೆದ್ದರೂ ಅಂತಹ ಸಂತೋಷವಾಗಲಿ ಪುಳಕವಾಗಲಿ ಉಂಟಾಗಿರಲಿಲ್ಲ. ಯಾರಿಂದಲೂ ಆಗದ್ದನ್ನು ಸಾಧಿಸಿದೆ. ಹಳ್ಳಿಮಾನವನ್ನು ಕಾಪಾಡಿದೆನೆಂಬ ಭ್ರಮೆಯೂ ಅವನನ್ನಾವರಿಸಿರಲಿಲ್ಲ. ಕಾಲೆಳೆದುಕೊಂಡೆ ಮನೆಗೆ ಬಂದ. ಅವನು ನಿರೀಕ್ಷಿಸಿದಂತೆಯೇ ಮನೆಯಲ್ಲಿ ಸಭೆ ಸೇರಿತ್ತು. ಮನೆಯೊಳಗೆ ಹೆಜ್ಜೆ ಇರಿಸಿದಾಗ ಗೃಧ್‍ನೋಟಕ್ಕೆ ಬಲಿಯಾದ. ಅಡಿಗೆಮನೆ ಬಾಗಿಲಲ್ಲಿ ತಾಯಿ-ತಂಗಿ ನಿಂತಿದ್ದರಾದರೂ ಅವರದ್ದೂ ಕಳಾಹೀನ ಮುಖವೆ. ಎಲ್ಲರ ಮೌನ ಅವನನ್ನು ಇರಿಯಿತು. ಬಳಲಿದ್ದ ಅವನಿಗೆ ನೀರು ಬೇಕಿತ್ತು. ತಾನೇ ಅಡಿಗೆ ಕೋಣೆಗೆ ನಿಧಾನವಾಗಿ ನಡೆದು ಹೋಗಿ ತಂಬಿಗೆ ನೀರು ಕುಡಿದು ಚೇತರಿಸಿಕೊಂಡು ಈಚೆ ಬಂದ.

‘ನಿನಗೆ ಮನೇಲಿ ಯಾರೂ ಹೇಳೋರು ಕೇಳೋರು ಇಲ್ಲ ಅಂದ್ಕೊಂಡಿದಿಯೇನೋ ಈಡಿಯೆಟ್’ ಲಾಯರ್ ಅಣ್ಣನ ಪಾಟೀಸವಾಲು.

‘ಇದ್ದೀರಲ್ಲ ನೀವು’ ತಣ್ಣಗೆ ಪ್ರತಿಕ್ರಿಯಿಸಿ ಎಲ್ಲರನ್ನೂ ರೇಗಿಸಿದ.

‘ನಿನ್ನ ಯಾವನೋ ಕುಸ್ತಿ ಆಡೋಕೆ ಹೇಳಿದೋನು?’ ಲೆಕ್ಚರರ್ ಲೆಕ್ಚರ್ ಶುರುಮಾಡಿದ.

‘ಉಸ್ತಾದ್ ಹೇಳಿದರು. ಹಳ್ಳಿಮಾನ ಉಳಿಸು ಅಂದ್ರು… ರಂಗನ ಮಾತಿನ್ನೂ ಮುಗಿದಿರಲೇಯಿಲ್ಲ, ಫ್ಯಾಕ್ಟರಿ ಪರಮೇಶಿ ಎಗರಿಬಿದ್ದ.

‘ಹಳ್ಳಿಮಾನ ಉಳಿಸೋಕೆ ನೀನೇ ಆಗಬೇಕಿತ್ತಾ? ಹೊಡೆದಾಡೋದು ಬಡಿದಾಡೋದು ನಿನ್ಗೆ ಚಟವಾಗಿ ಹೋಗಿಬಿಟ್ಟಿದೆ. ಸಿಕ್ಕಿದ್ರೆ ಸಾಕು ಅಂತ ನುಗ್ಗಿದಿಯಾ. ಮನೆಮಾನ ತೆಗೆದು ಬಿಟ್ಟೆಯಲ್ಲೋ, ಗರಡಿಗೆ ಹೋಗೋದು ಬೇಡ ಅಂದ್ವಿ, ಆದರೂ ಹೋದೆ. ಕುಸ್ತಿಗಿಸ್ತಿ ಅಂತ ಹುಚ್ಚು ಹಚ್ಕೊಬೇಡ ದುಡಿಯೋ ದಾರಿ ನೋಡೋ ಅಂದ್ವಿ, ಈವತ್ತು ಕುಸ್ತಿ ಆಡಿ ಬಂದಿದಿಯಾ. ಇದೆಲ್ಲಾ ನಮ್ಮ ಮನೆತನಕ್ಕೆ ಆಗಿಬರೋದಿಲ್ಲವಲೆ. ಇದೆಲ್ಲಾ ಪೊಲಿಪಟಾಲಮ್ಮುಗಳಿಗೇ ಸರಿ. ಓದೋ ಹುಡುಗರು ಓದಬೇಕು. ಕುಸ್ತಿನೂ ಒಂದು ಗೇಮ್ ಅಂದುಕೊಂಡರೂ ಈವತ್ತು ಅದಕ್ಕೇನು ಕಿಮ್ಮತ್ತಿದೆ?’ ಗದರಿಕೊಂಡ ಪರಮೇಶಿ.

ಅದೂ ಅಂತರಾಷ್ಟ್ರೀಯ ಮಟ್ಟದ ಆಟ, ವಿಂಬಲ್ಡನ್ ಅಂತೆಲ್ಲಾ ಏನೇನೋ ಹೇಳಬೇಕೆನಿಸಿದರೂ ರಂಗ ಮೌನವಾಗಿ ನಿಂತ.

‘ಕುಸ್ತಿಪಸ್ತಿ ಎಲ್ಲಾ ಓದು ಬರಹ ತಲೆಗೆ ಹತ್ತದೋರ ಕಸರತ್ತು ಕಣೋ. ಈ ಹುಚ್ಚು ಬಿಟ್ಟುಬಿಡು. ಇದೇ ಮೊದಲು ಇದೇ ಕೊನೆ ಕುಸ್ತಿಗಿಸ್ತಿ ಅಂತ ಹೋದೆಯೋ ಈ ಮನೆಯಿಂದ ಗೇಟ್‌ಪಾಸ್ ನಿನ್ಗೆ… ಅಂಡರ್‌ಸ್ಟಾಂಡ್’ ಲಾಯರ್‌ ತೀರ್ಪಿಗೆ ಎಲ್ಲರೂ ಗೋಣು ಆಡಿಸಿದರು.

‘ಆಯಿತು ಬಿಡಣ್ಣ. ನಾಳೆ ಬಂಗಾರದ ತೋಡಾ ಬಹುಮಾನ ಕೊಡ್ತಾರಂತೆ. ಅದಕ್ಕೂ ಹೋಗೋದೋ ಬೇಡ್ವ ಹೇಳಿಬಿಡಿ’ ರಂಗ ವ್ಯಂಗವಾಗಿ ನಕ್ಕ.

‘ಹೋಗಯ್ಯ ಹೋಗು. ಬಂಗಾರದ ರೇಟು ಯದ್ವಾತದ್ವಾ ಏರ್ತಾ‌ಇದೆ. ಅವರೇನ್ ಪುಗಸಟ್ಟೆ ಕೊಡ್ತಾರಾ? ತಗೊಂಡು ಬಾ ಕಷ್ಟಕಾಲದಲ್ಲಿ ಮಾರಿದರೆ ಕೈತುಂಬಾ ದುಡ್ಡು ಬರುತ್ತೆ’ ಮಾಧುರಿ ಅಪ್ಪಣೆ ಕೊಟ್ಟಾಗ ಉಳಿದವರಾರು ಅಡ್ಡ ಮಾತಾಡಲಿಲ್ಲ. ವಿಚಾರಣೆ ಮುಗಿಯಿತೆಂದು ಭಾವಿಸಿದ ಕಮಲಮ್ಮ ರಂಗನನ್ನು ಊಟಕ್ಕೆ ಕರೆದಳು. ತಾಯಿ-ತಂಗಿ ಪ್ರೀತಿಯಿಂದ ಬಡಿಸುವಾಗ ಹಬ್ಬದ ಅಡಿಗೆ ರುಚಿ ದ್ವಿಗುಣಿಸಿತು.

‘ಅಮ್ಮಾ, ನಾನೇನು ಕುಸ್ತಿ ಮಾಡೋಕೆ ಹೋಗಿರಲಿಲ್ಲ. ಸಂದರ್ಭ ಹಾಗೆ ಬಂತಮ್ಮ… ಸಾರಿ ಅಮ್ಮ’ ರಂಗ ಅಂದ.

ಕಮಲಮ್ಮ ವಿಷಾದದ ನಗೆ ಚೆಲ್ಲಿದಳು. ‘ಕುಸ್ತಿ ಮಾಡೋದು ಕೆಟ್ಟದ್ದು ಅಂತ ನಾನು ಅನ್ನಲ್ಲಪ್ಪ, ಅದರಲ್ಲಿ ಇರೋ ಉತ್ಸಾಹ ಓದಿನಲ್ಲೂ ಇರ್‍ಲಿ ಅಂತ ನನ್ನಾಶೆ. ನಾಳೆ ನೀನು ಸರಿಯಾಗಿ ಓದದೆ ಕೆಲಸ ಸಿಗ್ದೆ ಹೋದ್ರೆ ನಿನ್ನ ಅಣ್ಣಂದಿರು ನಿನ್ನ ನೋಡ್ಕೊತಾರಾ ಹೇಳು? ಅವರು ಹೆಂಡ್ತಿ ದಾಸರು ಕಣಪ್ಪ. ಈ ಮನೆ ನಮಗೆ ಸ್ಥಿರವಲ್ಲ ಕಣೋ ರಂಗ’ ಅಂದಳು.

ಸುಮ್ನಿರಮ್ಮ ಅಪ್ಪ ಕಟ್ಟಿಸಿದ ಮನೆ. ನಮಗೂ ಇರೋ ಹಕ್ಕಿದೆ. ನನ್ನ ಒಬ್ಬನ ಹೊಟ್ಟೆ ಹೊರೆದುಕೊಳ್ಳೋದಾದ್ರೆ ಈಗ್ಲೂ ಈ ಮನೆಗೆ ಗುಡ್‌ಬಾಯ್ ಹೇಳಿ ಕೂಲಿನಾಲಿ ಮಾಡಿ ಬದುಕೋತೀನಿ. ಆದ್ರೆ ನಿನ್ನನ್ನು ಕಾವೇರಿನೂ ನೋಡೋಳ್ಳೋ ಭಾರ ನನ್ನ ಮೇಲಿದೆ. ಕಾವೇರಿಗೆ ಮದುವೆ ಮಾಡಬೇಕಲ್ಲಮ್ಮ’ ಹೋಳಿಗೆ ಸವಿಯುತ್ತಲೇ ಚಿಂತಿಸಿದ ರಂಗ. ತಾಯಿ-ತಂಗಿ ಮನಸ್ಸೂ ಸಿಹಿಯಾಯಿತು.

‘ನನಗೆ ಲೆಕ್ಕ ತಲೆಗೆ ಹತ್ತಲ್ಲ ಅಂದ್ರೂ ಬೇಕಂತಲೆ ಅಣ್ಣ ಸೈನ್ಸ್‍ಗೆ ಹಾಕಿದ. ಹೆಂಗೋ ಮೂರು ಸಲ ಡುಂಕಿ ಹೊಡೆದರೂ ಪಿಯು ಮುಗಿಸಿ ಬಿಕಾಮ್ ಸೇರ್‍ದೆ. ಅಲ್ಲೂ ಅದೇ ಲೆಕ್ಕದ ಭೂತ. ಅದರ ಮೇಲೆ ನನ್ನ ಕುಸ್ತಿ… ಗೆಲ್ಲೋದು ಮಾತ್ರ ಅದೆ…’ ನಕ್ಕು.

‘ಪಾಠಕ್ಕೆ ಹಾಕ್ರಿ ಅಂತ ಕೇಳೋ. ಈಗ ಎಲ್ಲರೂ ಟ್ಯೂಶನ್ ಹೋಗೋರೇ’ ಕಾವೇರಿ ಬೆಂಬಲಿಸಿದಳು.

‘ಫೀಜುಗೆ ಕಾಸು ಕೊಡೋಕೇ ಏಳು ಹನ್ನೊಂದು… ಇನ್ನು ಈ ಸೋದರರು ಟ್ಯೂಶನ್ಸ್ ಹಾಕ್ತಾರೆ. ಮನೇಲೇ ಇದಾನೆ ಲೆಕ್ಚರರ್. ಒಂದಿಷ್ಟು ತಿಳಿದದ್ದು ಹೇಳಿಕೊಡೋ ಅಂದ್ರೆ ಪಾಠ ಮಾಡೋವಾಗ ಸರಿಯಾಗಿ ಕೇಳಯ್ಯ ಅಂತಾನೆ. ನಮ್ಮ ಕಾಲೇಜ್ ಸಿಲಬಸ್ಸೇ ಬೇರೆ ಅಂತ ಭೋಂಗು ಬಿಡ್ತಾನೆ… ಯಾವಾಗ್ಲ ಹೆಂಡ್ತಿ ಜೊತೆ ರೂಮಲ್ಲಿರೋ ಅವನ ಹತ್ತಿರ ಹೋಗೋಕೆ ನನಗೆ ಮುಜುಗರವಾಗುತ್ತೆ. ಇವರನ್ನ ನಂಬಿ ಏನಮ್ಮ ಪ್ರಯೋಜನ, ಎಸ್‌ಎಸ್‌ಎಲ್‌ಸಿ, ಪಿಯುಸಿ ಫಸ್ಟ್ ಕ್ಲಾಸಲ್ಲಿ ಮಾಡಿದ ಕಾವೇರಿನೇ ಮುಂದೆ ಓದಿಸ್ದೆ ಮನೇಲಿ ಇಟ್ಕೊಂಡಿದಾರೆ ಕೆಲಸಕ್ಕೆ… ಪಾಪಿಗಳು’ ರಂಗ ನೊಂದುಕೊಂಡ.

‘ರಂಗಣ್ಣಾ, ನಾನು ಹೆಚ್ಚಿಗೆ ಓದಿಬಿಟ್ರೆ ನಿನಗೆಲ್ಲೆ ನಿನಗಿಂತ ಹೆಚ್ಚು ಓದ್ದೋನ್ನ ತರೋದು ? ಹೆಚ್ಚಿಗೆ ಓದೋನಿಗೆ ಕೊಡೋಕೆ ದುಡ್ಡೆಲ್ಲಿಂದ ತರೋದು ? ಅಂತ ನನ್ನೇ ಕೇಳ್ತಾರೆ’ ಕಾವೇರಿ ತನಗಾದ ನೋವನ್ನು ಮರೆಮಾಡಿ ನಕ್ಕಳು.

‘ನೀನು ಕುಸ್ತಿನಲ್ಲಿ ಗೆದ್ದಿದ್ದು ತುಂಬಾ ಸಂತೋಷವಾಯ್ತಪ್ಪ, ಅದನ್ನು ಸಹ ಇವರ ಮುಂದೆ ಹೇಳೋ ಸ್ವಾತಂತ್ರ್ಯ ನಮಗಿಲ್ಲ’ ಕಮಲಮ್ಮ ಅಂದಾಗ,

‘ಹೌದಣ್ಣಾ’ ಅಂತ ಹಿಗ್ಗಿನಿಂದ ಕಾವೇರಿ ರಂಗನ ತೋಳಿಗೆ ಗುದ್ದಿದಳು. ರಂಗನ ಮುಖದಲ್ಲೀಗ ಗೆದ್ದ ಕಳೆ, ಅದರ ಖುಷಿಯ ಮಿಂಚು ಮೂಡಿತು.

ಮರುದಿನ ಅಮ್ಮನೋರ ರಥೋತ್ಸವ, ಸಹಸ್ರಾರು ಭಕ್ತರು ಜಮಾಯಿಸಿದ್ದರು. ರಥಬೀದಿ ಶೃಂಗಾರಗೊಂಡಿತು. ಊರಿನವರ ಸಡಗರಕ್ಕಿಂತ ಪಾಳೇಗಾರರ ಮನೆಯವರದ್ದೇ ಹೆಚ್ಚು ಸಡಗರ ಸಂಭ್ರಮ. ರಥದ ಹಗ್ಗ ಹಿಡಿದೆಳೆದು ಜಾತ್ರೆಗೆ ಹೊಸಶೋಭೆ ತರೋರು ಅವರೆ, ಚಿನ್ನುವಂತೂ ಚಿಗರೆಯಂತೆ ಜಿಗಿಯುತ್ತಾ ತನ್ನ ಗೆಳತಿಯರೊಂದಿಗೆ ಪ್ಯಾಟೆಸಾಲು, ಅಂಗಡಿ ಸಾಲುಗಳಲ್ಲಿ ತಿರುಗಿದ್ದೇ ತಿರುಗಿದ್ದು. ಸಿಟಿಯಿಂದ ಅವಳ ಕಾಲೇಜು ಗೆಳತಿಯರನ್ನೂ ಕಾರು ಕಳಿಸಿ ಕರೆಸಿಕೊಂಡಿದ್ದಳು. ಜಾತ್ರೆಯಲ್ಲಿ ಗಿಲೀಟಿನ ಒಡವೆ ವಸ್ತಗಳ ಅಂಗಡಿಯಲ್ಲಿ ಹುಡುಗಿಯರೇ ತುಂಬಿದ್ದರು. ಗಂಡಸರಿಗೆ ‘ಬಾಂಬೆ ಷೋ’ ಕುಣಿತ ನೋಡೋ ಖಯಾಲಿ. ಟೆಂಪರರಿ ಫೋಟೋ ತೆಗೆವವನ ಸ್ಟಾಲ್‌ಗೂ ರಶ್. ಯಾಕೆಂದರೆ ಆಗಲೇ ಫೋಟೋ ತೆಗೆದು ಆಗಲೇ ಕೊಡುವನೆಂಬ ಸುದ್ದಿಗೆ ಬೆರಗಾದ ಮುದುಕ ಮುದುಕಿಯರಿಗೂ ಫೋಟೋ ಹಿಡಿಸುವ ಉಮೇದು, ಕಳಸ ಕನ್ನಡಿ ಹಿಡಿದ ಪಾಳೆಗಾರರ ಮನೆ ಸೊಸೆಯರೂ ಬೀಗುತ್ತಿದ್ದರು. ಉಗ್ರಪ್ಪ ಭರಮಪ್ಪರಲ್ಲಿ ನಿನ್ನಿನ ಟೆನ್ಶನ್ ಇರಲಿಲ್ಲ. ಮೀಸೆ ಮಣ್ಣಾಗಲಿಲ್ಲವೆಂಬ ಸಮಾಧಾನ. ಆದರೆ ಅತೃಪ್ತ ಆತ್ಮನಂತಾಗಿದ್ದ ಸೋಲುಂಡ ಮೈಲಾರಿ ಮಾತ್ರ ನಿಗಿನಿಗಿ ಕೆಂಡ, ವೃಥಾ ಯಾರೆಂದರೆ ಅವರ ಮೇಲೆ ರೇಗುತ್ತಾ ಅಡ್ಡ ಬಂದವರನ್ನು ತಳ್ಳಿ ಒದೆಯುತ್ತಾ ಬರುವ ಅವನ ರಭಸವನ್ನು ನೋಡಿಯೇ ನೆರೆದ ಜನ ತಾವಾಗಿಯೇ ಹಿಂದೆಹಿಂದೆ ಸರಿಯುತ್ತಿದ್ದರು. ಮದವೇರಿದ ಮದಗಜದಂತೆ ಕಂಡಾಬಟ್ಟೆ ವರ್ತಿಸುವ ಅವನನ್ನು ಕಂಡು ಭರಮಪ್ಪನವರೇ ಕನಲಿದರು.

‘ಸೋತ ನೋವು ಇನ್ನೂ ಆರಿಲ್ಲ ಕಣಪ್ಪಾ ಹಂಗಾಡ್ತಾನೆ. ಸರಿ ಹೋಗ್ತಾನೆ ಸುಮ್ಗಿರು’ ಉಗ್ರಪ್ಪನೇ ಭರಮಪ್ಪನವರನ್ನು ಸಂತೈಸಿದ. ಅವನು ಸೋತದ್ದು, ಯಾವನೋ ಪತ್ರವಾಳೆನನ್ಮಗ ಗೆದ್ದಿದ್ದು ಯಾವುದೋ ಸೀಮೆಯೋನು ಬಂದು ತನ್ನ ವಂಶದ ಕುಡಿಗೇ ಕಣ್ಣು ಹಾಕಿದ್ದು ನೆನೆವಾಗ ಜಾತ್ರೆಯಲ್ಲಿ ತೋರುತ್ತಿದ್ದ ಅವರುಗಳ ಹಿಗ್ಗಿನಲ್ಲೂ ಯಾಂತ್ರಿಕತೆಯನ್ನು ಕಂಡ ಮಗ ಉಗ್ರಪ್ಪ ಒಳಗೇ ಕುಗ್ಗಿಹೋದ. ರಂಗನೂ ತನ್ನ ಗೆಳೆಯರೊಡನೆ ಜಾತ್ರೆಯಲ್ಲಿ ಠಳಾಯಿಸುತ್ತಿದ್ದ. ರಥೋತ್ಸವದ ನಂತರ ಬಹುಮಾನ ವಿತರಣೆಯ ಸಮಾರಂಭ ಬೇರೆ. ಅವನಿಗೆ ಚಿನ್ನು ಗೆಳತಿಯರೊಂದಿಗೆ ಎದುರಾದಾಗ ಮುಗುಳ್ನಕ್ಕಳು. ಅವನು ಅವಳತ್ತ ನೋಡಲೇಯಿಲ್ಲ.

‘ಅಲೆ ನಿನ್ನ ನೋಡಿ ನಗ್ತಾಳಲೆ ಪಾಳೆಗಾರ್ರ ಹುಡ್ಗಿ’ ಎಂದು ಗೆಳೆಯರು ಪಿಸುಗಿದಾಗಲೂ ನಿರ್ಲಕ್ಷಿಸಿದ. ಹುಡುಗಿರೆಲ್ಲಾ ದಿಢೀರ್ ಫೋಟೋ ತೆಗೆಯುವಲ್ಲಿಗೆ ಸಾಗುವಾಗ ಹುಡುಗರ ಗುಂಪೂ ಹಿಂಬಾಲಿಸಿ ಹೋಯಿತು. ದೂರದಲ್ಲಿ ಒಂದು ಪೋಲೀಸ್ ಜೀಪು, ಒಂದಿಬ್ಬರು ಪೋಲೀಸರು ಲಟ್ಟ ಹಿಡಿದು ಜಾತ್ರೆಯ ಮೋಜು ಸವಿದಾಡುತ್ತಿದ್ದರು. ರಥದ ಸನಿಯ ಸಬ್‌ಇನ್ಸ್‌ಪೆಕ್ಟರ್ ಪಾಳೇಗಾರರ ಮನೆಯವರ ಹಿಂದೆಯೇ ನಿಂತಿದ್ದ ಅಂಗರಕ್ಷಕನಂತೆ. ಚಿನ್ನು ತನ್ನ ಗೆಳತಿಯರೊಂದಿಗೆ ಫೋಟೋ ಸ್ಟುಡಿಯೋಗೆ ನುಗ್ಗಿದಳು. ಅವಳು ನುಗ್ಗಿ ಬಂದಾಗ ನೆರೆದಿದ್ದ ಅಬಾಲವೃದ್ಧರಾದಿಯಾಗಿ ಸರಿದು ಜಾಗಮಾಡಿಕೊಟ್ಟರು. ‘ನಮ್ಮ ಪಾಳೆಗಾರರ ಮಗಾ’ ಎಂದು ಹೆಮ್ಮೆ ಪಟ್ಟರು. ಅವಳ ರೂಪ, ಯೌವನ ನೋಡಿಯೇ ಫೋಟೋಗ್ರಾಫರ್ ದಂಗಾದ. ದೊಡ್ವರ ಮನೆತನದ ಮಗಳೆಂದು ಗೌರವ ತೋರಿದ. ‘ಮೊದಲು ನನ್ನ ಸಿಂಗಲ್ ಫೋಟೋ ತೆಗಿ… ಆಮೇಲೆ ನನ್ನ ಫ್ರೆಂಡ್ಸ್ ಜೊತೆ. ಫೋಟೋ ಚೆನ್ನಾಗಿರ್‍ಬೇಕು ನೋಡು’ ಚಿನ್ನು ತಾಕೀತು ಮಾಡಿದಳು.

‘ಚೆನ್ನಾಗಿರೋರ ಫೋಟೋ ಚೆಂದಾಗೆ ಬರ್‍ತದೆ… ನಿಲ್ಲಿ’ ಅಂದ ಫೋಟೋದವನು ಅವಳನ್ನು ನಿಲ್ಲಿಸಿ, ತನ್ನ ಕ್ಯಾಮರಾ ನೋಡಬೇಡಿ… ಇಲ್ಲಿ ನೋಡಿ ಸ್ವಲ್ಪ ಮುಖ ಎತ್ತಿ… ಜಾಸ್ತಿ ಆಯಿತು. ಈಗ ಸ್ವಲ್ಪ ಸ್ಮೈಲ್ ಮಾಡಿ. ಯಸ್ಯಸ್… ನೋ ನೋ ತಲೆ ಎತ್ತಬೇಕ್ರಿ’ ಹತ್ತಾರು ತರಾ ಸೂಚನೆ. ಸಾವಿರಾರು ಕ್ಯಾಂಡಲ್ ಬಲ್ಲುಗಳ ಬೆಳಕಿನ ಶಾಖಕ್ಕೆ ಚಿನ್ನು ಬೆವತು ಹೋದಳು. ತೃಪ್ತನಾಗದ ಫೋಟೋಗ್ರಾಫರ್ ತಾನೇ ಅವಳ ಬಳಿ ಬಂದು ನಿಂತ.

‘ನೋಡಿ ಹೀಗೆ ಫೋಸ್ ಕೊಡ್ಬೇಕು… ಸ್ವಲ್ಪ ಗಲ್ಲ ಎತ್ತಿ, ಅವಳ ಗಲ್ಲವನ್ನು ಹಿಡಿದು ಎತ್ತಿದ. ಭುಜ ಹಿಡಿದು ತಿರುಗಿಸಿದ. ‘ಚೆಂದವಾಗಿ ಬರಬೇಕ್‌ನೋಡು ಫೋಟೋ’ ಅನ್ನುತ್ತ ಅವನು ಹೇಳಿದಂತೆಲ್ಲಾ ಮಾಡಿದಳು. ನೆರೆದವರೂ ನಿಬ್ಬೆರಗಾಗಿ ನೋಡುತ್ತಾ ನಿಂತಿದ್ದರು.

‘ಏನ್ ಮಸ್ತ್ ಅದಾಳಲೆ, ಫೋಟೋದವನಿಗೆ ಇರೋ ಪುಣ್ಯ ನಮಗಿಲ್ವೆ’ ಪಡ್ಡೆಗಳು ನಿರಾಶೆಯ ನಿಟ್ಟುಸಿರ್‍ಗರೆದವು. ಅದೆಲ್ಲಿದ್ದನೋ ಬಿರುಗಾಳಿಯಂತೆ ಬಂದ ಮೈಲಾರಿ,

‘ಮಗ್ನೆ, ಪಾಳೆಗಾರರ ಮನೆ ಮಗೀನ ಮೈ ಮುಟ್ಟೋವಷ್ಟೋ ಕೊಬ್ಬೇನೋ ನಿನಗೆ ಕಂತ್ರಿನಾಯಿ’ ಅಂದವನೆ ತನ್ನ ಸೊಂಟದಲ್ಲಿ ಸಿಕ್ಕಿಸಿದ ಮಚ್ಚನ್ನು ಎತ್ತಿ ಬೀಸಿದ ರಭಸಕ್ಕೆ ಆ ಫೋಟೋಗ್ರಾಫರನ ಕೈ ತುಂಡಾಗಿ ನೆಲಕ್ಕೆ ಬಿದ್ದು ನೆಗೆದಾಡಿತು.

ಚಿನ್ನು ಗೆಳತಿಯರೊಂದಿಗೆ ಚೀರುತ್ತಾ ಈಚೆ ಬಂದಳು. ಫೋಟೋಗ್ರಾಫರ್ ಶಾಕ್‌ನಿಂದಾಗಿ ಚೀರಲೂ ಆಗದೆ ಮತ್ತೆಲ್ಲಿ ಮಚ್ಚು ಬೀಸುವನೋ ಎಂದು ಕುಸಿದು ಬಿದ್ದುಬಿಟ್ಟ.

‘ನನ್ನ ಮಕ್ಕಳಿಗೆ ಪಾಳೆಗಾರರ ಮನೆ ಹೆಂಗಸರು ಅಂದ್ರೆ ಅಷ್ಟು ಸದರವಾಗೋಯ್ತೇನು? ಒಬ್ಬೊಬ್ಬರನ್ನು ಸೀಳಿಬಿಡ್ತೀನಿ’ ಎಲ್ಲರತ್ತ ಮಚ್ಚು ತೋರುವಾಗ ಅನೇಕರು ಅಲ್ಲಿಂದ ಕಂಬಿಕಿತ್ತರು. ಆಗಲೇ ಅಲ್ಲಿಗೆ ಬಂದ ರಂಗ ಅವನ ಗೆಳೆಯರನ್ನು ನೋಡಿದೊಡನೆ ಮೈಲಾರಿ ಜಾಗ ಖಾಲಿ ಮಾಡಿದ. ಪೊಲೀಸರು ಬಂದರು. ದೂರದಲ್ಲೆಲ್ಲೋ ನಿಂತಿದ್ದ ಆಂಬ್ಯುಲೆನ್ಸ್ ವಾಹನ ಬಂತು. ಫೋಟೋಗ್ರಾಫರ್‌ನನ್ನು ವಾಹನಕ್ಕೆ ಸಾಗಿಸಿದರು.

‘ಏನಾಯಿತು! ಇಲ್ಲಿ ಏನು ನಡೀತು? ಯಾರು ಫೋಟೋಗ್ರಾಫರ್‌ನ ಕೈ ಕತ್ತರಿಸಿದೋರು?’ ಸಬ್ ಇನ್ಸ್‌ಪೆಕ್ಟರ ಯಾವ ಪ್ರಶ್ನೆಗೂ ಯಾರೂ ಉತ್ತರಿಸುವ ಧೈರ್ಯ ತೋರಲಿಲ್ಲ. ಎಲ್ಲಾ ಪಿಳಿಪಿಳಿಸುವವರೆ. ಕಡೆಗೆ ಫೋಟೋಗ್ರಾಫರ್ ಸಹ ‘ನಾನೂ ನೋಡಲಿಲ್ಲ ಸಾರ್ ಯಾರು ಕತ್ತರಿಸಿದ್ರೋ ಗಲಾಟೆಯಲ್ಲಿ ತಿಳೀಲಿಲ್ಲ’ ಎಂದು ನರಳುವಾಗ ಇನ್ಸ್‍ಪೆಕ್ಟರ್ ಜನರತ್ತ ನೋಡಿ ಹುಬ್ಬೇರಿಸಿದ.

‘ನಾವೂ ಈಗ ಬಂದ್ವಿ ಮಾಸ್ವಾಮಿ’ ಅಂದಿತು ಮಹಾ ಜನತೆ!

‘ಈ ಕೆಲಸ ಮೈಲಾರಿದೇ ಕಣೋ’ ಅಂದಾಜಿಸಿದ ರಂಗ. ಅದು ಇನ್ಸ್‍ಪೆಕ್ಟರಿಗೂ ಗೊತ್ತು.

‘ಈತನ್ನ ಆಸ್ಪತ್ರೆಗೆ ಇಮ್ಮಿಡಿಯೆಟ್‌ಆಗಿ ತಗೊಂಡು ಹೋಗಿ… ಕ್ವಿಕ್’ ಸಬ್ ಇನ್ಸ್‌ಪೆಕ್ಟರ್‌ ಆಜ್ಞಾಪಿಸಿದ.
ವಾಹನದಲ್ಲಿದ್ದ ನರ್ಸ್ ಒಬ್ಬ ಡಾಕ್ಟರ್ ಪ್ರಥಮ ಚಿಕಿತ್ಸೆ ಮಾಡುವಾಗಲೇ ಆಂಬುಲೆನ್ಸ್ ತನ್ನ ಗಂಟೆ ಬಾರಿಸುತ್ತ ನಡೆದು ಹೋದ ಮೇಲೆಯೇ ಪಾಳೇಗಾರರ ಮನೆಯವರಿಗೂ ಅಸಲಿ ವಿಷಯ ತಿಳಿದಿದ್ದು, ಗಾಬರಿಗೊಂಡಿದ್ದ ಚಿನ್ನುವನ್ನು ಹೆಂಗಸರು ಸಂಭಾಳಿಸಿದರು. ಇನ್ಸ್‌ಪೆಕ್ಟರ್ ಇವರ ಬಳಿ ಬಂದು ಸೆಲ್ಯೂಟ್ ಹೊಡೆದು ಏನೋ ಹೇಳಲೆಂದು ಬಾಯಿ ತೆರೆದ. ಅದಕ್ಕೆ ಮೊದಲೇ ಉಗ್ರಪ್ಪ ತನ್ನ ಮಾತಿನ ವರಸೆ ತೋರಿದ.

‘ಎಲ್ಲಾ ತಿಳೀತಯ್ಯ ಇನ್ಸ್‌ಪೆಕ್ಟ್ರೆ, ಯಾವೋನೋ ಫೋಟೋದವನ ಕೈ ತೆಗ್ದ. ಅದು ಅವನಿಗೇ ಗೊತ್ತಿಲ್ಲ ಅಂದ್ಮೇಲೆ ನೀನಾರ ಯಾವನ್ನ ಅರೆಸ್ಟ್ ಮಾಡ್ತಿಯಾ ಪಾಪ! ಎಂಥ ವಿಚಿತ್ರ ಐತೆ ನೋಡು ಕಾಲ, ಹೋಗು ಹೋಗು ಡ್ಯೂಟಿ ಮಾಡು’ ಉಗ್ರಪ್ಪ ಮಾತು ಮುಗಿಸಿದಾಗ ಮೈಲಾರಿ ಪಕ್ಕದಲ್ಲೇ ನಿಂತಿದ್ದ. ರಕ್ತ ಸಿಕ್ತ ಮಚ್ಚು ಅವನ ಸೊಂಟದಲ್ಲೇ ನೇತಾಡುತ್ತಲಿತ್ತು. ಇನ್ಸ್‌ಪೆಕ್ಟರ್‌ ಅಲ್ಲಿಂದ ಕದಲಿದ.

ಇಷ್ಟೆಲ್ಲಾ ಗಲಾಟೆ ನಡೀತಿರಬೇಕಾರೆ ನೀವೇನ್ಲಾ ಮಾಡ್ತಾ ಇದ್ದಿರಿ? ಕಾಕಿ ಬಟ್ಟೆ ಏನು ಶೋಕಿಗೆ ಹಾಕಿದಿರಾ?’ ಇದ್ದಕ್ಕಿದ್ದಂತೆ ರೇಗಿದ ಉಗ್ರಪ್ಪ ಬಳಿಯಲ್ಲಿದ್ದ ಪೇದೆಗಳಿಗೆ ರಪರಪನೆ ಬಾರಿಸಹತ್ತಿದ. ಬೀಳುವ ಏಟುಗಳಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಪೇದೆಗಳನ್ನು ಇನ್ಸ್‌ಪೆಕ್ಟರನೇ ಅಡ್ಡ ನಿಂತು ಪಾರು ಮಾಡಿದ.

‘ನಾನು ವಿಚಾರಿಸ್ಕೋತೀನಿ ಬಿಡಿ ಸಾಹೇಬರೆ’ ಅಂಗಲಾಚುತ್ತಾ ಪೇದೆಗಳನ್ನು ಓಡಿಸಿದ. ‘ದೊಡ್ಡವರಿಗೊಂದು ರೂಲ್ಸು ನಮಗೊಂದು ರೂಲ್ಸು’ – ಇನ್ಸ್‌ಪೆಕ್ಟರ್‍ಗೆ ಕೇಳುವಂತೆಯೇ ಹೇಳಿ ನಕ್ಕ ರಂಗ.

ಗೌಜು ಗದ್ದಲಗಳ ನಡುವೆಯೇ ರಥೋತ್ಸವವನ್ನು ಭರಮಪ್ಪ ನಡೆಸಿಕೊಟ್ಟರು. ಹಣ್ಣು, ಕಾಯಿ ನೈವೇದ್ಯ ಮಾಡಿಸೋರ ಗದ್ದಲ. ದೇವರ ಪ್ರಸಾದಕ್ಕಾಗಿ ಕಾದಾಟಕ್ಕೆ ನಿಂತ ಭಕ್ತರ ಸಮೂಹದ್ದೂ ಒಂತರಾ ಜಂಗಿ ಕುಸ್ತಿಯೆ. ‘ಇದೀಗ ಜಾತ್ರೆಯ ಆಟಪಾಟಗಳಲ್ಲಿ ಕುಸ್ತಿಯಲ್ಲಿ ಗೆದ್ದವರಿಗೆ ಬಹುಮಾನ ವಿನಿಯೋಗ ಸಮಾರಂಭ’ ಎಂದು ಧ್ವನಿವರ್ಧಕಗಳಲ್ಲಿ ಸಾರುವಾಗ ಜನ ವೇದಿಕೆಯತ್ತ ದೌಡಾಯಿಸಿತು. ತಮ್ಮ ಮಕ್ಕಳು ಮರಿ ಸೋದರರು ಅಕ್ಕಪಕ್ಕದ ಮನೆಯೋರಿಗೆ ಪಡ್ಡೆಗಳು ಬಹುಮಾನ ಪಡೆವುದನ್ನು ನೋಡುವ ಸಂತಸ. ವೇದಿಕೆಯ ಮೇಲೆ ಪಾಳೇಗಾರರ ಮನೆಯವರೂ ಆಸೀನರಾಗಿದ್ದರು. ಪೋಲಿಸರ ಸರ್ಪಗಾವಲು ಬೇರೆ. ಮೊದಲು ಕೊಕ್ಕೊ, ಕಬ್ಬಡಿ, ರನ್ನಿಂಗ್‌ರೇಸ್, ಸ್ಕಿಪ್ಪಿಂಗ್, ಲಾಂಗ್ಜಂಪ್ ಇತ್ಯಾದಿ ಆಟಗಳಲ್ಲಿ ಗೆದ್ದ ಪಟುಗಳಿಗೆ ಸ್ವಯಂ ಭರಮಪ್ಪನವರೇ ‘ಶೀಲ್ಡ್’ ಗಳನ್ನಿತ್ತು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ರಂಗನ ಸರದಿ ಬರುವಾಗ ಅವನು ತನ್ನ ತಾಯಿ-ತಂಗಿ ಬಂದಿದ್ದಾರೆಯೇ ಎಂದು ಕಣ್ಣುಗಳಲ್ಲೇ ಹುಡುಕಾಡಿದ. ಕಂಡದ್ದು ಅಣ್ಣ-ಅತ್ತಿಗೆಯರು. ಒಂದಿಷ್ಟು ಸಖೇದಾಶ್ಚರ್ಯ ಒಂದಿಷ್ಟು ಸಮಾಧಾನವೆನಿಸಿತು. ಪಾಪ ತಾಯಿ-ತಂಗಿ ಹಬ್ಬದ ಊಟದ ತಯಾರಿ ಮಾಡುತ್ತಾ ಒಲೆಯ ಮುಂದೆ ಬೇಯುತ್ತಿರಬಹುದೆಂದು ನೊಂದುಕೊಂಡ. ಬಹುಮಾನ ಪಡೆವ ಸಂತಸವೇ ಕುಂದಿತು. ಬೆನ್ನಿಗೆ ಯಾರೋ ಗುದ್ದಿದಾಗ ಗಕ್ಕನೆ ತಿರುಗಿ ನೋಡಿದ. ತಂಗಿ ಗುದ್ದು ಹಾಕಿ ನಗುತ್ತಿದ್ದಾಳೆ! ಜೊತೆಗೆ ತಾಯಿಯೂ ಇದ್ದಾಳೆ. ಹಿಗ್ಗಿ ಹೋದ ರಂಗ.

ಮಹಾರಾಷ್ಟ್ರದ ಭಾರಿ ಉಸ್ತಾದ್ ರಾಮೋಜಿಯನ್ನು ಗೆದ್ದು ಸಂಪಿಗೆಹಳ್ಳಿ ಮಾನ ಉಳಿಸಿದ ರಂಗ ದಯಮಾಡಿ ವೇದಿಕೆಗೆ ಬಂದು ಬಹುಮಾನ ಸ್ವೀಕರಿಸಬೇಕು’ ಶಾನುಭೋಗರು ಮೈಕಲ್ಲಿ ಆಹ್ವಾನಿಸಿದರು. ಎಲ್ಲೆಲ್ಲೂ ಶೀಟಿ-ಚಪ್ಪಾಳೆಗಳ ಸುರಿಮಳೆ ಬಿತ್ತು. ರಂಗ ವೇದಿಕೆ ಏರುವಾಗ ಅಲ್ಲಿ ಮೈಲಾರಿ ಇಲ್ಲದ್ದನ್ನು ಗಮನಿಸಿದ! ಎಲ್ಲರೂ ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಿದರೂ ಚಪ್ಪಾಳೆ ತಟ್ಟುತ್ತಾ ಇಷ್ಟಗಲ ನಗುತ್ತಿದ್ದ ಚಿನ್ನು ಗೆಳತಿಯರ ಮಧ್ಯೆ ಕಂಡಳು. ಯಾವುದೇ ಹಿಗ್ಗು ಎಕ್ಸ್‍ಟ್ರಾ ಅಭಿಮಾನ ಆನಂದ ಏನನ್ನೂ ಹೊರತೋರದೆ ಗಂಭೀರ ಮುಖಮುದ್ರೆಯಲ್ಲಿದ್ದ ಭರಮಪ್ಪ, ರಂಗನ ಬಲಗೈಗೆ ಬಂಗಾರದ ತೋಡಾ ತೊಡಿಸಿದಾಗ ಮತ್ತೆ ಗದ್ದಲವೋ ಗದ್ದಲ. ರಂಗ ಭರಮಪ್ಪನವರ ಪಾದಮುಟ್ಟಿ ನಮಸ್ಕರಿಸಿದಾಗ ಭರಮಪ್ಪನವರ ಗಾಂಭೀರ್ಯ, ರಂಗನ ಭುಜಗಳನ್ನು ಹಿಡಿದು ಮೇಲೇಳಿಸುವಷ್ಟು ರಾಜಿಯಾಯಿತು. ಅವನು ತನ್ನ ಚಿನ್ನುವೇ ಬೇಕೆಂದು ಹಠ ಹಿಡಿದಿದ್ದರೆ, ಆಮಾತ್ರಕ್ಕೆ ಒಪ್ಪಿಕೊಳ್ಳುವುದು ಸುಲಭಸಾಧ್ಯವಾಗುತ್ತಿರಲಿಲ್ಲ. ತಮ್ಮ ಹಳ್ಳಿಯವನಾದ್ದರಿಂದ ತನಗೆ ಅಂಜಿದನೋ ಸಂಸ್ಕಾರವಂತನೋ ಅಂದಾಜು ಮಾಡಲಾಗುತ್ತಿಲ್ಲ. ಅವನು ಚಿನ್ನುವೇ ಬೇಕೆಂದಿದ್ದರೆ ಅದು ಅವನ ಜೀವಕ್ಕೇ ಮುಳುವಾಗುವುದರಲ್ಲಿ ಮುಕ್ತಾಯವಾಗುತ್ತಿತ್ತೇನೋ. ಅಂವಾ ತನ್ನ ಪ್ರಾಣ ಉಳಿಸಿಕೊಂಡನಷ್ಟೇ ಅಲ್ಲ ನಮ್ಮಿಂದಾಗುವ ಅನಾಹುತಗಳನ್ನೂ ತಪ್ಪಿಸಿದನೆಂಬುದನ್ನವರ ಮನ ಒಪ್ಪಿಕೊಂಡಾಗ ಅವನ ಬಗ್ಗೆ ಅಭಿಮಾನ ಮೂಡಿತು. ಬಂಗಾರದ ತೋಡಾ ತೊಟ್ಟು ಎಲ್ಲರಿಗೂ ವಂದಿಸಿ ಹೊರಟ ಅವನನ್ನು ತಡೆದು ನಿಲ್ಲಿಸಿದಾಗ ನೆರೆದ ಸಹಸ್ರಾರು ಜನ ಬೆರಗುಗಣ್ಣಾದರು.

‘ನಿನ್ನ ಹೆಸರೇನೋ ಹುಡ್ಗಾ?’ ಕರ್ಜುಕಂಠ ಕೇಳಿತು.

‘ರಂಗ… ಉಡುಮರಡಿರಂಗ ಅಂತಾರೆ’ ವಿನಯವಾಗಿ ಉತ್ತರಿಸಿದ.

‘ನೀನು ಈ ಹಳ್ಳಿ ಗೌರವ ಹೆಚ್ಚಿಸಿದಿಯಲೆ ತಮಾ… ನಿನಗೆ ಬಂಗಾರದ ತೋಡಾ ತೊಡಿಸಿದ ಮಾತ್ರಕ್ಕೆ ನನಗೆ ತೃಪ್ತಿ ಆಗ್ತಿಲ್ಲ. ನೀನು ಬೇಕಾದ್ದು ಕೇಳು ಕೊಡ್ತೀನಿ…’ ಕ್ಷಣ ಮಾತು ನಿಲ್ಲಿಸಿ ಭರಮಪ್ಪ ಅವನತ್ತ ದಿಟ್ಟಿಸಿದರು. ರಂಗ ಏನು ಕೇಳಿಯಾನಂತ ಜನ ಸಮೂಹ ಉಸಿರು ಬಿಗಿಹಿಡಿಯಿತು. ಅವನು ಸಣ್ಣಗೆ ನಕ್ಕ.

‘ಸಂಕೋಚ ಮಾಡ್ಕೋ ಬ್ಯಾಡ್ಲೆ ಹೈವಾನ್. ಕೇಳು ತೋಟ, ತುಡಿಕೆ, ಗದ್ದೆ, ಜಮೀನು? ಕ್ಯಾಷ್ ಬೇಕಾ ಕ್ಯಾಷ್? ಎಷ್ಟು ಬೇಕು ಕೇಳು ಮಗಾ’ ಆಹ್ವಾನ ನೀಡಿದರು.

‘ಬೇಡ್ರಿ. ನನ್ನ ಹಳ್ಳಿ ಗೌರವ ಉಳಿಸಿ ಕೂಲಿ ಕೇಳೋನಲ್ರಿ ನಾನು. ತಾವು ದೊಡ್ಡೋರು. ತಮ್ಮ ಆಶೀರ್ವಾದ ಇದ್ದರೆ ಸಾಕು’ ಭರಮಪ್ಪನವರಿಗೂ ಮುಂದೆ ಆಡಲೂ ಅವಕಾಶ ನೀಡದೆ ಸರಸರನೆ ವೇದಿಕೆ ಇಳಿದು ಬಂದ ರಂಗ ತೋಡಾ ತೆಗೆದು ತನ್ನ ತಾಯಿಯ ಕೈಗೆ ತೊಡಿಸಿ ಬೀಗಿದ. ಆಕೆ ಮಾತು ಮರೆತು ಅವನ ಹರವಾದ ತಲೆಗೂದಲಲ್ಲಿ ಬೆರಳಾಡಿಸಿದಳು. ಕಾವೇರಿಯ ಹಿಗ್ಗಿಗೆಲ್ಲಿಯ ಉಪಮಾನ. ಚಮನ್‌ಸಾಬು, ರಾಜಯ್ಯ ಮೇಷ್ಟರ ಬಳಿ ಹೋಗಿ ಪಾದ ಮುಟ್ಟಿದ. ಅವರ ಹೃದಯ ತುಂಬಿ ಬಂತು. ಪಾಳೇಗಾರರ ಮನೆಯವರು ವೇದಿಕೆ ಇಳಿವಾಗ ಗದ್ದಲವೇನು ಕಡಿಮೆಯಾಗಿರಲಿಲ್ಲ. ಎಲ್ಲರೂ ರಂಗನನ್ನು ಅಪ್ಪಿ ಕೈ ಕುಲುಕಿ ಮೈದಡವುವರೆ.

‘ಚಿಗಮ್ಮ, ಏನ್ ಬೇಕಾದ್ರೂ ಕೇಳು ಕೊಡ್ತೀನಿ ಅಂತ ತಾತ ಅಂದಾಗ ಅವನು… ಅದೇ ರಂಗ ನನ್ನನ್ನೇ ಎಲ್ಲಿ ಕೇಳಿಬಿಡ್ತಾನೋ ಅಂತ ದುಗ್ಗಮ್ಮನಾಣೆಗೂ ಅಂದ್ಕೊಂಡಿದ್ದೆ, ಚಿನ್ನು ಉಸುರಿ ನಕ್ಕಳು.

‘ನಿರಾಶೆಯಾತೇನ್ ನಿನಗೆ?’ ಎಂದವಳ ಕೆನ್ನೆ ಹಿಂಡಿದಳು ಕೆಂಚಮ್ಮ ಅಲಿಯಾಸ್ ಸುಮ.

‘ನಿಜವಾದ ಗಂಡು ಬೇಡಿಪಡೆಯೋಲ್ಲ. ಕಾಡಿಪಡಿತಾನೆ, ಕಾದಾಡಿ ಪಡಿತಾನೆ ಕಣೆ’ ಅಂದಳು. ಚಿಗಮ್ಮನ ಮಾತು ಅರ್ಥವಾಗದೆ ಪಿಳಿಪಿಳಿಸಿದಳು ಚಿನ್ನು.

‘ಸುಮ್ಮೆ ನಡಿಯೆ ತಲೆಹಲ್ಟೆ’ ಅದೆಲ್ಲಿದ್ದನೋ ಮೈಲಾರಿ ಗಕ್ಕನೆ ಗದರಿದಾಗ ಕೆಂಚಮ್ಮ, ಚಿನ್ನೂ ಇಬ್ಬರೂ ಬೆಚ್ಚಿಬಿದ್ದರಾದರೂ ನಂತರ ಮುಸಿಮುಸಿ ನಕ್ಕರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದಯ ರಾಗ
Next post ಎಲ್ಲರೂ ದಡ ಸೇರಿದರು

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…