ಬೇಸರವಾಗಿದೆ ನಗರದಲಾಟ
ಧೂಸರ ಧೂಳಿನ ಜೀವನವು
ಆಶಿಸಿ ಚಿಗುರೊಳಗಾಡಿತು ಗಾಳಿ
ಭಾಷೆಗೆ ನಿಲುಕದ ಭಾವಕೆ ಬೆಂದು.
ಬೇಗ ನಡೀ ಹೊರಡೇಳು ನಡೀ
ಕೂಗಿದಳಾವಳೊ ಕಾಡಕಿನ್ನರಿಯು
ಸೂಟಿಯು ಸಂದರೆ ನಂದಿಯ ಕೂಟ
ನೋಟಕೆ ಹಬ್ಬವು ಜೋಗದ ಪಾತ
ಮಾಟದ ಪುತ್ಥಳಿ ಬೇಲೂರ ನೋಟ
ಆಟದಲೇರಲು ದತ್ತನ ಪೀಟ.
ಬೇಗನಡೀ ನಡಿ ಬೇಗನಡೀ
ಕೂಗಿತು ಕಾಡಿಸಿ ನಾಡವೈತಾಳಿ!
ಆ ಯತಿ ಪರ್ವತ ಕಳೆಗಳ ಸುಟ್ಟು
ಕಾಯುತಲಿಹುದಿನ್ನು ಜೀವನ ಘನಗೆ
ಬಾಯಾರಿದೀಪಕ್ಕಿ ಬೇಯುತಲಿಹುದು
ಆಯತದಿಂಬಹ ಮುಂಗಾರ ಹನಿಗೆ,
ಬೇಗನಡೀ ಹೊರಡೇಳುನಡೀ
ಕೂಗಿದಳಾವಳೊ ಕಾಡಕಿನ್ನರಿಯು!
ಪಡವಣ ಮಣಲೆದ್ದು ಹೂಣಿದೆ ಲಿಂಗ
ಅಡಿಯಿಡು ಅಲ್ಲಿಗೆ ಬಗೆದು ನೋಡುವಣ
ಮುಡಿಯೆಲ್ಲ ಸಡಲಿದೆ ವನದೇವಿಗೇಕೊ
ನಡಿನಡಿ! ಯಾತಂಕವೇನೆಂದು ಬಗೆವೆ.
ಬೇಗನಡೀ ನಡಿ ಏಳುನಡೀ
ಕೂಗಿತು ಕಾತರಗೊಂಡಿಹ ನಾಡು!
ಕೋಗಿಲೆ ಪಾಡಲು ಕೇಕೆಯು ಕುಣಿಯೆ
ಕೂಗಲು ನಿರ್ಝರಿ ತೂಗೆ ಮಂಜರಿಯು
ಬಾಗಲು ತನೆಗಳು ರೇಗಲು ವೀಚಿ
ಈಗೆದ್ದು ಬಂದರೆ ಬಾರೆನೆ ವನವು.
ಬೇಗನಡೀ ಹೊರಡೇಳು ನಡಿ!
ಕೂಗಿತು ನಾಳಿನ ಕೇದಿಗೆ ಸುಳಿದು.
ಪೂವು ಪೂವಾಡಲು ಕಂಬನಿದುಂಬಿ
ಆವರಿಸುತಲಿಹುದಾರ್ಯರ ಕಂಪು
ಭಾವದ ಗರಿಯೇರು ಜಾಗರ ಮನವೆ
ಜೀವನದರಳನು ಅರುಣಗೊಪ್ಪಿಸುವೆ.
ಬೇಗನಡೀ ಮನ ಓಡುನಡೀ
ಕೂಗಿತು ಕಾಹಳೆ ನಾಳೆಯ ನೆನೆದು!
ಕಾವೇರಿ! ಎಚ್ಚತ್ತು ಪಾಡುತಲಿಹಳು
ಸಾವೇರಿ ರಾಗದ ಗಾನ ಗೀತೆಗಳ
ನಾವೇರಿ ಪೋಗುವ ಜಾಗರದವರು
ಭಾವ ವಿಮಾನದೊಳರುಣ ದಿಬ್ಬಣಕೆ.
ಬೇಗನಡೀ ಹೊರಡೇಳು ನಡೀ
ಕೂಗಿತು ಖಂಡಿತ ನಾಡವೈತಾಳಿ!
*****