ಎಲ್ಲರೂ ದಡ ಸೇರಿದರು
ನಾನು ಮಾತ್ರ ನಡು ನೀರಿನಲ್ಲಿ
ಎಲ್ಲರೂ ಹೊಳದಾಟಿದರು
ನಾನು ಮಾತ್ರ ಮುರುಕು ದೋಣಿಯಲ್ಲಿ
ಕತ್ತರಿಸುತ್ತಿದೆ ಚಳಿ
ತತ್ತರಿಸುತ್ತಿದೆ ಎದೆ ನಡುಗಿ
ಅಲೆಯೊಳಗೆ ತೇಲಿ ಬಿಟ್ಟಿರುವೆ
ಕಂಬನಿಯ ಮಾಲೆ
ಇರುವುದೊ ಇಲ್ಲವೊ
ನಾನರಿಯೆ ನನ್ನ ಪಾಲಿಗೆ ನಾಳೆ
ಎಲವೊ ಚಂದಿರನೆ
ನೀನಾದರೂ ಇಳಿ ಬಿಡಬಾರದೆ
ನೂಲ ಏಣಿ
ಅಗಣಿತ ತಾರಾ ಗಣಿಗಳೇ
ಈ ಕಂಗೆಟ್ಟ ಕೆಳದಿಯನು
ಕರುಣೆಯಿಂದಲೇ ಕಾಣಿ
ಏನಚ್ಚರಿ!
ನರನಾಡಿಯಲಿ ಧುಮ್ಮಿಕ್ಕಿ ಹರಿದು
ಬೆಚ್ಚಗೆ ಇಟ್ಟಿದ್ದಾಳೆ ರಕ್ತದೇವತೆ
ಪುಪ್ಪುಸದಲಿ ನೆಲೆಗೊಂಡು
ಹುರಿದುಂಬಿಸುತ್ತಿದ್ದಾನೆ ಪ್ರಾಣವಾಯು
ಒಂದಿನಿತೂ ಕೊಂಕಿಲ್ಲ ಬಾಡಿಲ್ಲ
ಎದೆಯೊಳಗಣ ಸಹಸ್ರ ದಳದ ಕಮಲ
ಎಣ್ಣೆ ತೀರಿದೆ ಎಂದು
ತೋರಿದರೂ
ಜೀವದೀಪ ಭರವಸೆಯಲಿ
ಉರಿಯುವುದು
ನಂಬುಗೆಯೇ ಅಂಬಿಗನು
ಹರಿಗೋಲ ಅಪ್ಪುವೆನು
ಎಲ್ಲರೂ ದಡ ಸೇರಿದರು
ನಾನೂ ಸೇರುವೆನು
ಎಲ್ಲರೂ ಹೊಳೆ ದಾಟಿದರು
ನಾನೂ ದಾಟದೆ ಇರೆನು.
*****