ಹೊಲದಲ್ಲಿ ನಿಂತು ನಕ್ಷತ್ರಗಳನ್ನು ಕೈ ಬೀಸಿ
ಕರೆಯುತ್ತಾಳೆ ತನ್ನೊಲುಮೆಯ ಹೂವಿಗಾಗಿ,
ಬಿಸಿರಕ್ತದ ಪರಿಮಳಕ್ಕಾಗಿ ಕ್ರೂರ ಪ್ರೀತಿಗಾಗಿ.
ಬೇಡ ಗೆಳತಿ,
ಇನ್ನೆಷ್ಟು ದಿನ ಉಳಿದೀತು ಈ ಅಸಹಾಯಕ ಜಗತ್ತು?
ಹಗಲಿನ ವೇಷದಲ್ಲಿ ರಾತ್ರೆಗಳನ್ನು ಹೊದೆಯಬಲ್ಲ
ಕಾಲ ನಿನ್ನನ್ನು ಬೆತ್ತಲಾಗಿಸಬಲ್ಲದು.
ಅಷ್ಟು ದೂರದ ಜೋಳದ ತೆನೆಗಳು,
ಹಕ್ಕಿ ನಿಲುವಿನ ನೀಲಿ ಹೂವುಗಳು ಗಾಳಿಯಲೆಗಳಿಗೆ
ನಲಿಯುವುದನ್ನು ನೋಡು-
ಎಚ್ಚರಗೊಳ್ಳದೇ ನಿನ್ನ ಗೊಡ್ಡು ಮನಸ್ಸು?
ಇನ್ನಿಲ್ಲದವನ ದುರಾಶೆ ಬಿಡು,
ಸದಾ ಬೆತ್ತಲೆಯಲ್ಲಿನ ಕೀಳು ನಿಂದನೆಗೊಳಗಾಗುವ
ಪಾಪಿ ಮದ್ಯವನ್ನು ಹೀರು;
ಅವನು ನಿನ್ನನ್ನು ಹೀರಿ ಹಾಕಲೆತ್ನಿಸಿದಂತೆ.
ಅದೂಂದು ಕಾಳ ರಾತ್ರೆ-
ಜೊಂಡುಹುಲ್ಲಿನ ಚಾವಣಿಯೊಳಕ್ಕೆ ತೂರಿಬರುವ
ಹೊಸ ಕನಸುಗಳಿಗೆ ನಿಂತ ನೀರಿನ
ಪ್ರತಿರೂಪದಲಿ ಮೈಯೊಡ್ಡು;
ಕಲಕಿದೊಡನೆ ಕಲರವದ ಹಕ್ಕಿಯಾಗಿ
ನೀಲಮೇಘಗಳನ್ನು ದಾಟಿಹೋಗುವೆ.
*****