ಈ ಮಹಾದೇವನ ಸ್ತೋತ್ರವ
ಮಾಡುವದಕ್ಕೆ ಜಿಹ್ವೆ ಮೆಟ್ಟದು.
ಆ ಮಹಾದೇವನ ಸ್ತೋತ್ರವ
ಕೇಳುವದಕ್ಕೆ ಕರ್ಣ ಮೆಟ್ಟದು.
ಮುಟ್ಟಿ ಪೂಜಿಸಿಹೆನೆಂದರೆ,
ಹಸ್ತ ಕೆಟ್ಟದು.
ನೋಡಿಹೆನೆಂದರೆ ನೋಟಕ್ಕೆ
ಅಗೋಚರ, ಅಪ್ರಮಾಣ.
ಇಂತು ನಿಶ್ಚಿಂತ ನಿರಾಳ ಬಯಲ ದೇಹ
ಎನ್ನಲ್ಲಿ ಅಚ್ಚೊತ್ತಿದಂತೆ ನಿಂದ
ಕಾರಣದಿಂದ ಬಟ್ಟಬಯಲನೆ ಕಂಡೆ.
ಮಹಾ ಬೆಳಗನೆ ಕೂಡಿದೆ.
ಚಿತ್ತದಲ್ಲಿ ಚನ್ನಮಲ್ಲೇಶ್ವರನು
ನೆಲೆಗೊಂಡ ಕಾರಣದಿಂದ ನಾನೆತ್ತ
ಹೋದೆನೆಂದರಿಯೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ