‘ಬಿಡಿ ಬಿಡಿ, ಎಲ್ಲ ಬರಿ ಉಡಾಫೆ’ ಎಂದೆ,
ನಕ್ಕರು.
‘ನೋಡು ಮರಿ, ಹತ್ತಾರು ಬಾರಿ
ಹೋಗಿ ಬಂದಿರುವ ದಾರಿ,
ಹೆಜ್ಜೆ ಗುರುತಿರುವ ಕಾಡು
ಬೇಕಾದರೆ ಬಂಡವಾಳ ಹೂಡು.
ಆದರೆ ಒಂದು ವಿಷಯ
ಊರಿರುವದೇ ಆಚೆ
ಹೋಗಿ ಸೇರಲೇ ಬೇಕು,
ದಾರಿ ಸಾಗಲೇ ಬೇಕು,
ತಕ್ಕ ಆಸಕ್ತಿಗೆ ಕಾಯಲೇಬೇಕು’
ಎಂದರು.
‘ಹೇಳಿಬಿಡಿ’ ಎಂದೆ
ಹಾಳಾಗಲಿ
ಕೇಳಿ ಕಳಿಸಿಬಿಡೋಣ
ಪ್ರಾರಬ್ಧ ಅಂತ.
ಅಸಹನೆ ಅರ್ಥವಾಗಿ ನಕ್ಕರು.
‘ಗಡಿಯೊಳಗೇ ಇರುವವನಿಗೆ’ ಗೋಡೆ ಅಡ್ಡವಾಗಿ
ಥಿಯೇಟರಿನೊಳಗಿನ ಚಿತ್ರದ ಸತ್ಯ ಇದೆಲ್ಲ.
ಮೈ ಅಲುಗದಂತೆ ಕುರ್ಚಿಯಲ್ಲಿಯೇ ಇದ್ದು
ಮನಸ್ಸು ಮಾತ್ರ ಅದರಿಂದ ಎದ್ದು
ಶಕುಂತಳೆ ರೇಖಾಳನ್ನು ದುಶ್ಯಂತ ಅಮಿತಾಭನಾಗಿ ತಬ್ಬುವ,
ಯಾರ ಒಡಲಲ್ಲೋ ಇಳಿದು
ತನ್ನಾಸೆಗಳನ್ನು ಆಡಿ ಕಳೆದು
ಕಡೆಗೆ ಕೊಳಬಿಟ್ಟು ಬರುವ ಅನುಭವ-
ಹೇಳು ನಾವು ಯಾರು?’ ಎಂದರು.
‘ಇದೆಲ್ಲ ಕಲೆ ನಾಟಕ ಚಿತ್ರದ ವಿಷಯ
ಉಳಿದದ್ದು ಹೇಳಿ ಈ ಗಟ್ಟಿಲೋಕ ಸುಳ್ಳಾ?’ ಎಂದೆ.
‘ಇಲ್ಲ.
ಬಾಳುತ್ತಿರುವ ಸುಳ್ಳು
ಸಾಯುವ ತನಕದ ಸತ್ಯ,
ಕನಸಿನಲ್ಲಿ ಅಸಂಬದ್ಧವೆಲ್ಲ ನಡೆಯೋಲ್ಲವಾ?’ ಎಂದರು.
ಕುತೂಹಲ ಚಿಗುರಿ
‘ಹೌದು ಹೌದು ಹೇಳಿ’ ಎಂದೆ
‘ಅಸಂಬದ್ಧ ಆಡಿಲ್ಲವಾ
ಅಸಂಬದ್ಧ ಕೇಳಿಲ್ಲವಾ?
ಕಂಡಿದ್ದ ಮೈಗೆ
ಕಾಣದ ಮುಖ ಹುಟ್ಟಿ
ಕೈಯನ್ನೇ ರೆಕ್ಕೆ ಹಾಗೆ ಬೀಸಿ ಗಾಳಿಯಲ್ಲಿ ಈಜಲ್ಲವಾ?
ನದಿತಳದಲ್ಲಿ ಮನೆ,
ಜಲಕನ್ಯೆಯ ಜೊತ ಭೋಗ,
ಅರ್ಧಗಂಟೆಯಲ್ಲೇ ಐವತ್ತು ವರುಷ ಬಾಳಿಲ್ಲವಾ?
ಬಗೆ ಬಗೆ ಸತ್ಯ,
ಎಲ್ಲಕ್ಕೂ ಅದರದ್ದೇ ಗಣಿತ ಕುಣಿತ
ಯಾರು ಪ್ರಶ್ನಿಸಿದ್ದರು ಅವನ್ನು ಗಡಿಯೊಳಗೆ
ಯಾವತ್ತು?’ ಎಂದರು.
ಎಲಾ! ಎನಿಸಿತು.
ನಿಜವೆನಿಸಿದರೂ ಒಪ್ಪಲು ಬಾರದೆ ಕೇಳಿದೆ
‘ಇದೆಲ್ಲ ಕನಸು ಕುಡಿಯುವ ಮನಸಿನ ಅಮಲು ಅಲ್ಲವೆ?
ಹುಲ್ಲಿನ ಮಾತು ಹೇಳಿ
ಕಂಪಿಸಲೂ ಬಾರದ ಕಲ್ಲಿನ ಮಾತು ಹೇಳಿ
ಕುಡಿಯಲು ಬಾರದ ಬೆಟ್ಟ ನದಿ ಜಡಗಳ ಸತ್ಯಕ್ಕೆ
ಎಲ್ಲಿದೆ ದಾಳಿ ?’ ಎಂದು
ಕಡೆಗೊಮ್ಮೆ ಹೆಡತಲೆಗೇ ಕೊಡಲಿ ಬೀಸಿದೆ!
‘ಹೌದಾ’ ಎಂದವರೇ ನಗುತ್ತ ಕೇಳಿದರು;
‘ಭೂಮಿಯ ಸೆಳೆತ ಮೀರಿದ ಮೇಲೆ
ಮಣಕ್ಕೆ ಎಷ್ಟು ತೂಕ, ತೃಣಕ್ಕೆ ಎಷ್ಟು ತೂಕ?
ನದಿ ಅಲ್ಲಿ ಹರಿಯುತ್ತದೆಯೆ?
ಕಾಮನ ಬಿಲ್ಲಿನ ಬಣ್ಣಗಳಲ್ಲಿ
ಯಾವುದು ಸುಳ್ಳು, ಯಾವುದು ಸಾಚಾ,
ಸತ್ಯಕ್ಕೆ ತಡೆಯುತ್ತದೆಯೆ?
ಬೆಳಕಿನ ವೇಗದಲ್ಲಿ ಎಸೆದರು ಎನ್ನು
ವಸ್ತು ಉಳಿಯುತ್ತದೆಯೆ?
ಹೇಳು ಹೇಳು,
ಸತ್ಯ ಎಂದರೆ ಯಾವುದು ಹೇಳೋ’ ಎಂದರು.
ಕಂಗಾಲಾದೆ
ಕುತ್ತಿಗೆಗೆ ಗುರಿಯಿಟ್ಟಂತೆ
ಹಿಂದಕ್ಕೆ ಬೀಸಿ ಬರುತ್ತಿರುವುದು
ನಾನೇ ಬೀಸಿದ ಕೂಡಲಿ ಎನಿಸಿತು.
ಗುರಿಗೆ ಸರಿಯಾಗಿ ತಲೆಕೊಡುತ್ತ ಹೇಳಿದೆ:
‘ಹೌದು ಹೌದು,
ಗಡಿ ದಾಟಿದ ಮೇಲೆ ಎಲ್ಲ ಬರಿ ಜಳ್ಳು,
ನಮ್ಮ ಸತ್ಯ ಕೂಡ ಗಡಿಯಾಚೆಗೆ ಸುಳ್ಳು.’
*****