ಹುಲ್ಲುಗಾವಲ ಹುಡುಕಿ ಹೊರಟ ಪಶುಗಳ ಹಿಂಡು
ಮುಂದೆ ಮುಂದೆ
ಕಾಯುತ್ತ ಹೊರಟಿರುವ ಗಂಡು ಹೆಣ್ಣಿನ ದಂಡು
ಅದರ ಹಿಂದೆ
ಪಶುಗು ಪಶುಪತಿಗು ಇರುವೆಲ್ಲ ಅಂತರ ಪಾದಸಂಖ್ಯೆಯೊಂದೆ.
ಕಾಲೆರಡು ಕೈಯಾಗಿ
ಬಾಲ ಕ್ಷೀಣಿಸಿ ಅಡಗಿ
ತಲೆ ಬದಲು ಬುದ್ಧಿಗೇ ಕೊಂಬು ಮೂಡಿ
ಬೆಳೆದ ಹಮ್ಮಿಗೆ ಈ ದ್ವಿಪಾದಿ ತಂದೆ.
ಅಪ್ಪನೋ ಅಣ್ಣನೋ ಅತ್ತಿಗೆಯೊ ಸೊಸೆಯೊ
(ಭಾಷೆ ಯಾರಿಗೆ ಗೊತ್ತು?)
ಗಂಡು ಬಿತ್ತ
ತಿಳಿದ ಸಂಬಂಧ ಒಂದೇ
ಹೆಣ್ಣು ಕ್ಷೇತ್ರ.
ಎಲೆ ಚರ್‍ಮ ಬಟ್ಟೆ ಬರೆ
ಬೆದೆ ಕುದಿಯೆ ಗುಹೆಯೆ ಮರೆ,
ತಿಂದು ಮಲಗಿದ್ದೊಂದೆ, ಕೆರಳಿ ಹೊರಳಿದ್ದೊಂದೆ
ಪಶುವ ಬಳಸಿದ್ದೊಂದೆ ತಿಳಿದ ಸೂತ್ರ
ಕೊಳದಲ್ಲಿ ಕಂಡ ಮುಖ
ತಲೆಯ ಕಾಡಿರಲಿಲ್ಲ
ಒಳಗೆ ಮೂಡಿರಲಿಲ್ಲ ಸ್ವಗತ ಚಿತ್ರ
* * *
ಹಿಮದ ಕಣಿವೆಗಳಲ್ಲಿ ಹೊಕ್ಕು ತೂರಿ
ತಮದ ಸಾವಿರಭವದ ಎದೆಯ ಸೀಳಿ
ನೊಂದು ಕಡೆಗೂ ಬಂದ
ಅಲ್ಲಿಂದ ಇಲ್ಲಿಗೆ
ವೋಲ್ಗಾದಿಂದ ದಿಲ್ಲಿಗೆ,
ಕದಡು ನಿಜಗಳ ಕೊಳದ ತಟ್ಟತಳಕ್ಕೆ ತಳ್ಳಿ
ತಿನಿಂತ ಕಲಿಕೆಗೆ,
ಭಯದಿಂದ ಉಳಿಕೆಗೆ
ಸ್ವಂತ ವೃತ್ತದ ಆಚೆ ಮುಗಿಲ ಡಮರುಗ ಕೇಳಿ
ನವಿಲಿಡುವ ಕೇಕೆಗೆ.
ಬಂದ ರಭಸಕೆ ದಣಿದು
ಹುಟ್ಟು ಪಯಣವ ತಡೆದು
ಹಾಯೆನಿಸಿ ಉರುಳಿದ
ಹೊರಳಿದ ಅರಳಿದ
ಗಂಗೆ ಯಮುನೆಯರ ಸಿರಿದಡಗಳಲ್ಲಿ,
ಗ್ರಹ ತಾರೆಗಳು ಹೊಳೆವ, ನಭಕ್ಕೆ ಮುಗಿಲನು ಬೆಳೆವ
ಜೀವನದಿಗಳು ಕೊಟ್ಟ ಕನಸಿನಲ್ಲಿ
* * *
ಎದ್ದಾಗ ಕಣ್ಣಲ್ಲಿ ನಕ್ಷತ್ರಗಳ ಬೆಳಕು
ದನಿ ಹೊರಳಿ ನಡುನಡುವೆ ಸಣ್ಣ ಗುಡುಗು.
ಒದೆಯಲೆತ್ತಿದ ಕಾಲು ಗುರಿ ಮರೆತು ತೂಗಿ
ಹೊಡೆಯಲೆತ್ತಿದ ತೋಳು ಬಿನ್ನಾಣ ಬೀಗಿ
ಪ್ರಥಮ ಶ್ರೀನೃತ್ಯದ ಅಪೂರ್ವ ಭಂಗಿ;
ತರೆದೆದೆಯ ಮೇಲೆ ಏನೇನೊ ಬಣ್ಣದ ಗುರುತು
ಬರಿಯ ಸೊಂಟವ ಮರೆಸಿ ನೂಲು ಲುಂಗಿ.
ಎರಡೆರಡು ಏಳಾಗಿ ಗಣಿತವೇ ಆಳಾಗಿ
ಲೋಕ ವ್ಯವಹಾರಕ್ಕೆ ರೂಪಾಂತರ,
ಗಿರಿ ಕಾಡು ಕಡಲು ತುಂಬಿರುವ ಉಪಗ್ರಹ ಕೂಡ
ತಾಯಾಗಿ ಉಟ್ಟಿತ್ತು ಪೀತಾಂಬರ.
ಈಗ ಸಿಡಿಲಿನ ಮೊಳಗು ಇಂದ್ರರಥ ಚೀತ್ಕಾರ,
ಕರಿಮುಗಿಲಿನೋಳಿ ರಾಕ್ಷಸರ ದಾಳಿ,
ಸುರಿವ ಮಳೆ ಅರ್ಘ್ಯ ಹೋಮಕ್ಕೆ ಕರುಣಿಸಿ ಬಾನು
ಕಾಲಕಾಲಕ್ಕೆ ಸುರಿವ ಜಲದ ಪಾಳಿ;
ಕಾಡ ಬಿದಿರಿನ ಮೊಳೆಯ ಹಾದು ಊಳಿದ ಗಾಳಿ
ತೂರಿ ಕೊಳಲಿನಲಿ ಬಗೆ ಬಗೆಯ ರಾಗ
ಬರಲಿರುವ ಭಾರಿ ನೆರೆಯರಿವು ಯಾರಿಗೆ ಆಗ?
ಪುಂಗಿನಾದಕೆ ಹೆಡೆಯ ಆಡಿಸಲು ತೊಡಗಿತ್ತು ಕಾಳನಾಗ.
* * *
ಏನು ಗೊತ್ತಿತ್ತು
ಗುರುತು ಎಲ್ಲಿತ್ತು
ನವನವೋನ್ಮೇಷೆ ನೀನೊಲಿದು ಬಂದಾಗ?
ಹಕ್ಕಿಹೂವುಗಳೆಲ್ಲ ಮಾತಾಡಿಕೊಂಡರೂ,
ದಿಕ್ಕುಗಳ ಹಣೆಯಲ್ಲಿ ಚುಕ್ಕಿಗಳು ಹೂಳದರೂ,
ಸಂಜೆಹಣ್ಣಿನ ಸುತ್ತ ಚಲಿಸಿ ನೀರದಪತ್ರ
ಕನಕಾಂಬರಗಳಾಗಿ ಉರಿ ಮಿಂಚಿ ಹನಿದರೂ,
ಹರಿವ ತೊರೆಗಳ ತಳದ ಗುರುಜುಗಲ್ಲಿನ ದನಿಯ
ಶ್ರುತಿಮಾಡಿ ತನ್ನದನಿ ಅದರೊಡನೆ ಕುಣಿದರೂ
ತನ್ನನ್ನೆ ಬಳಸಿ
ನೀ ಬಂದೆ ಎಂದು
ಹೊಡೆದ ವ್ಯಾಧನು ಕೂಡ ಅರಿಯಲಿಲ್ಲ.
ಸೂರ್ಯಚಂದ್ರರ ಬಿಂಬ ನೆಲದಲ್ಲಿ ನೆಡಲು
ಮರ್‍ತ್ಯಚಿತ್ತದ ಹೊಲಕೆ ನಿನ್ನಿಳಿಸಿ ತರಲು
ತಲೆಗೊಟ್ಟು ನಿಂತಂಥ ತಾಪಸಿ ಜಟಾಧರಗೂ
ಶಾಪ ವರವಾದದ್ದು ತಿಳಿಯಲಿಲ್ಲ.
ಬದುಕನ್ನು ಬಳಸಿ ಮಲಗಿದ್ದ ಸಾವಿನ ಸರ್ಪ
ಹರಿದುಹೋದುದನವರು ಕಾಣಲಿಲ್ಲ.
* * *
ಮುತ್ತಜ್ಜ ಮುನಿಯ ಮನಕಿಳಿದ ಭಾಗೀರಥಿಯು
ಹರಿದು ಬಂದಿದ್ದಾಳೆ ಇಲ್ಲಿ ತನಕ,
ಮುಟ್ಟಿದ್ದೆ ತಡ ಮೃಗದ ಶಾಪವೂ ವರವಾಗಿ
ಕಳಚಿ ನೋಡಿದೆ ಕಣ್ಣು ತನ್ನ ಸ್ವಾರ್ಥ.
ಕೆಡೆದ ತರಗಲೆ ಎದ್ದು ಪರ್ಣಶಾಲೆ,
ಬಿದ್ದ ನೆಲವೇ ಎದ್ದು ಸೌಧಮಾಲೆ,
ಹೊದ್ದು ಹೊರಗಾದ ಅನುಭವ ನಿತ್ಯರತಿಯಾಗಿ
ಮೃಗವು ಮರೆಯಾಗುವುದು ಅನಂಗಲೀಲೆ.
*****