ಕ್ಯಾಲಿಫೋರ್ನಿಯಾದ ಸಂಶೋಧಕರೊಬ್ಬರು ನಿದ್ರೆ ಬರಿಸುವ ಯಂತ್ರವೊಂದನ್ನು ಕಂಡುಹಿಡಿದಿದ್ದಾರೆ. ಅದು ಈಗಾಗಲೇ ಅಮೆರಿಕೆಯ ಮಾರುಕಟ್ಟೆಯಲ್ಲಿದೆ. ಟ್ರಾನ್ಸಿಸ್ಟರ್ ನಂತೆ ಕಾಣುವ ಆ ಯಂತ್ರ ಒಂದು ಆಂಟಿನ ಹೊಂದಿದೆ. ಆಂಟೆನಾ ಮೂಲಕ ಹೊರಹೊಮ್ಮುವ ರೇಡಿಯೋ ತರಂಗಗಳು ಮಿದುಳನ್ನು ಪ್ರವೇಶಿಸಿ ನಿದ್ರೆ ಬರಿಸುವ ಯಂತ್ರಗಳನ್ನು ಉತ್ತೇಜಿಸಿ ಮಲಗುವಂತೆ ಮಾಡುತ್ತವೆ. ನಿದ್ರೆಯಿಲ್ಲದೆ ಪರಿತಪಿಸುತ್ತಿದ್ದ ೬೦ ರೋಗಿಗಳ ಮೇಲೆ ಪರೀಕ್ಷಣ ಪ್ರಯೋಗ ನಡೆಸಿದಾಗ ಬಹುಪಾಲು ಮಂದಿ ಆಕಳಿಸಿ ನಿದ್ರೆ ಹೋದರಂತೆ!
ಈ ಭೂಮಂಡಲದಲ್ಲಿ ನಿದ್ರೆ ಮಾಡದಿರುವ ಮನುಷ್ಯರಾಗಲೀ ಅಥವಾ ಪ್ರಾಣಿಗಳಾಗಲೀ ದೊರೆಯುವುದಿಲ್ಲ. ಏಕೆಂದರೆ ನಿದ್ರೆ ಎಲ್ಲರಿಗೂ ಅತ್ಯಗತ್ಯ. ನಮ್ಮ ದಿನನಿತ್ಯದ ಕೆಲಸಗಳಿಂದ ಮನಸ್ಸು ಹಾಗೂ ಕರ್ಮೇಂದ್ರಿಯಗಳು ಬಳಲಿ ಸೋತಾಗ ಅವುಗಳಿಗೆ ವಿಶ್ರಾಂತಿ ದೊರಕಲೆಂದು ಪ್ರಕೃತಿಯು ನಿದ್ರೆಯನ್ನು ತರುವುದು. ಕ್ರಮಬದ್ಧವಾಗಿ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಉಂಟಾಗುವ ಎಚ್ಚರ ರಹಿತ ತಿಥಿಗೆ “ನಿದ್ರೆ” ಎಂದು ಹೇಳಬಹುದು.
ಒಬ್ಬ ಮನುಷ್ಯನ ನಿದ್ರೆಯ ಅವಧಿಯು ಅವನ ವಯಸ್ಸು ಮತ್ತು ಅಭ್ಯಾಸಗಳನ್ನು ಅವಲಂಬಿಸಿರುತ್ತದೆ. ಹಸು ಮಗುವಿಗೆ ಅಧಿಕ ಅವಧಿಯ ಅಂದರೆ ೧೮ ರಿಂದ ೨೦ ಗಂಟೆಗಳ ಕಾಲ ನಿದ್ರೆ ಬೇಕು. ಮಗುವು ಬೆಳೆಯುತ್ತಾ ಹೋದಂತೆ ಅವಧಿಯು ಕಡಿಮೆಯಾಗುತ್ತಾ ಹೋಗುತ್ತದೆ. ಸಣ್ಣ ಮಕ್ಕಳು ೧೧ ರಿಂದ ೧೨ ಗಂಟೆಗಳ ಕಾಲ ನಿದ್ರಿಸಿದರೆ, ಪ್ರೌಢ ವಯಸ್ಕರಿಗೆ ೭ ರಿಂದ ೧೦ ಗಂಟೆಗಳ ಕಾಲ ನಿದ್ರೆ ಸಾಕು. ವಯಸ್ಸಾದವರಿಗೆ ೪ ರಿಂದ ೫ ಗಂಟೆಗಳ ಕಾಲ ನಿದ್ರೆ ಹೆಚ್ಚಾಯಿತು. ವೃದ್ಧಾಪ್ಯ ಸಮೀಪಿಸಿದಂತೆಲ್ಲ ನಿದ್ರೆಯ ಅವಧಿ ಕಡಿಮೆಯಾಗುತ್ತ ಹೋಗುತ್ತದೆ. ಆದ್ದರಿಂದಲೇ ಮುದಿ ವಯಸ್ಸಿನವರು (ಹೆಚ್ಚಿನ ಜನರು) ಬಹಳ ಕಡಿಮೆ ನಿದ್ರೆ ಮಾಡುತ್ತಾರೆ.
ಕೆಲಸ ಮಾಡಿದ ದೇಹ ದಣಿದಾಗ ನರಗಳು ಬಳಲುತ್ತವೆ, ಆಯಾಸವಾಗುತ್ತದೆ. ಆಗ ಸುಖವಾದ ನಿದ್ರೆ ಬರುತ್ತದೆ. ಆದ್ದರಿಂದಲೇ ಮೈಮುರಿದು ಕೆಲಸ ಮಾಡುವವರು ಗಾಢವಾದ ಸುಖನಿದ್ರೆ ಮಾಡುತ್ತಾರೆ. ನಿದ್ರೆಯು ದೇಹಕ್ಕೆ ನೆಮ್ಮದಿ ಒದಗಿಸಿ ಬಳಲಿಕೆಯನ್ನು ನಿವಾರಿಸುತ್ತದೆ. ಆದ್ದರಿಂದಲೇ ನಿದ್ರೆಯಾದ ಮೇಲೆ ಉಲ್ಲಾಸ ವಿರುತ್ತದೆ ಮತ್ತು ಮೈಕೈ ನೋವು ಕಳೆದು ಮೈ ಹಗುರವಾಗುತ್ತದೆ.
ನಿದ್ರೆ ಮಾನವನ ಕ್ರಿಯೆಗಳ ಮೇಲೆ ಸಮನಾಗಿ ಪ್ರಭಾವ ಬೀರುವುದಿಲ್ಲ. ನಿದ್ರೆಯಲ್ಲಿದ್ದಾಗ ಶರೀರದ ಬಗೆಗಾಗಲಿ, ಅಲ್ಲಿನ ವಾತಾವರಣದ ಬಗೆಗಾಗಲಿ ಅರಿವಿರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಮಿದುಳು ನೆಮ್ಮದಿಯ ಸ್ಥಿತಿಯಲ್ಲಿರುತ್ತದೆ. ನಿದ್ರೆಯಲ್ಲಿದ್ದಾಗ ಗ್ರಹಣಶಕ್ತಿ ಮತ್ತು ಸವಿಯುವ ಶಕ್ತಿಯು ಕೂಡ ದುರ್ಬಲವಾಗಿರುತ್ತದೆ. ಆದುದರಿಂದಲೇ ನಿದ್ರೆಯಲ್ಲಿರುವ ವ್ಯಕ್ತಿಯು ತನ್ನ ಬಳಿಯಿರಬಹುದಾದ ಯಾವುದೇ ವಾಸನೆಯನ್ನು ಪತ್ತೆ ಮಾಡಲಾರೆ. ಅಲ್ಲದೆ, ಅವನ ಬಾಯಿಗೆ ಏನಾದರೂ ತಿಂಡಿ ಹಾಕಿದಾಗ ಅದರ ರುಚಿ ತಿಳಿಯುವುದಿಲ್ಲ. ನಿದ್ರೆಯಲ್ಲಿ ನಾಡಿ ಬಡಿತಗಳು ಕಡಿಮೆಯಾಗುವುವು, ರಕ್ತದ ಒತ್ತಡವು ಇಳಿಯುವುದು, ಜಠರದಲ್ಲಿ ಪಾಚಕ ರಸಗಳ ಸ್ರಾವವು ಅಲ್ಪವಾಗಿರುವುದು. ಸ್ನಾಯುಗಳು ಪ್ರಸರಣ ಹೊಂದುವುವು, ಕಣ್ಣುಗುಡ್ಡೆಗಳು ಚಿಕ್ಕವಾಗುವುವು ಹಾಗೂ ಐಚ್ಛಿಕವಾದ ಕ್ರಿಯೆಗಳನ್ನು ಮಾಡುವ ಶಕ್ತಿಯು ಇಲ್ಲವಾಗುವುದು. ನಿದ್ರೆಯಲ್ಲಿದ್ದಾಗ ಹೃದಯ, ಮಿದುಳು ಮತ್ತು ಮೂತ್ರಪಿಂಡ ಈ ಮೂರನ್ನು ಹೊರತುಪಡಿಸಿ ಉಳಿದೆಲ್ಲ ಅಂಗಗಳು ನೆಮ್ಮದಿಯ ಸ್ಥಿತಿಯಲ್ಲಿರುವುದು.
ನೆನಪಿರಲಿ
ಆಹಾರ ಮತ್ತು ನಿದ್ರೆ ಪ್ರಮುಖ ಜೀವನಾವಶ್ಯಕಗಳು. ಒಳ್ಳೆಯ ನಿದ್ರೆಗೆ ಒಳ್ಳೆಯ ಆಹಾರ ಪೂರಕ. ಮಲಗುವ ಮುಂಚೆ ಸೇವಿಸುವ ಆಹಾರ ನಿದ್ರೆ ಮೇಲೆ ಪ್ರಭಾವ ಬೀರುತ್ತದೆ. ಹಾಲು, ಮೊಟ್ಟೆ, ಮೀನು ನಿದ್ರೆಗೆ ಒಳ್ಳೆಯ ಪ್ರಚೋದನೆ ನೀಡುತ್ತದೆ. ಆಹಾರದಂತೆ ನಿದ್ರೆಯ ಮೇಲೆ ಹಾಸಿಗೆ ಹಾಗೂ ಮಲಗುವ ಸ್ಥಳಗಳು ಕೂಡ ಪ್ರಭಾವ ಬೀರುತ್ತವೆ. ಹಾಸಿಗೆ ಸ್ವಚ್ಛವಾಗಿರಬೇಕು. ಮಲಗುವ ಸ್ಥಳದಲ್ಲಿ ಗಾಳಿ, ಬೆಳಕು ಚೆನ್ನಾಗಿ ಬರುತ್ತಿರಬೇಕು. ಸೊಳ್ಳೆಗಳು ಕಡಿಯುತ್ತವೆಂದು ಮುಸುಕು ಹಾಕಿ ಮಲಗಬಾರದು. ಸೊಳ್ಳೆಗಳಿದ್ದರೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಚಳಿ ಇದ್ದರೂ ಕೂಡ ಕುತ್ತಿಗೆ ವರೆಗೆ ಹೊದ್ದುಕೊಂಡು ಮುಖ ತೆರೆದಿಟ್ಟಿರಬೇಕು. ಎಡಕ್ಕೆ ಮಗ್ಗುಲಾಗಿ ಮಲಗುವುದು ಎಲ್ಲಕ್ಕಿಂತ ಉತ್ತಮ ಪದ್ಧತಿ ಎಂದು ವೈಜ್ಞಾನಿಕ ದೃಷ್ಟಿಯಿಂದ ಸಾಬೀತಾಗಿದೆ. ೨೦ನೇ ಶತಮಾನದಲ್ಲಿ ವೈದ್ಯರು ಸಂಗತಿಯನ್ನು ಸಾಬೀತುಪಡಿಸಿದ್ದರೂ ಶತಮಾನಗಳ ಹಿಂದೆಯೇ ಮೆರೆದಿದ್ದ ತ್ರಿಪದಿ ರತ್ನನೆಂದೇ ಲೋಕ ವಿಖ್ಯಾತ ನಾಗಿದ್ದ ಸರ್ವಜ್ಞನು ತ್ರಿಪದಿ ಯೊಂದರ ಮೂಲಕ “ಉಂಡು ನೂರಡಿಯಿಟ್ಟು ಕೆಂಡಕ್ಕೆ ಕೈಕಾಸಿ ಬಂದು ಬಲಭುಜ ಮೇಲ್ ಮಾಡಿ ಮಲಗಿದವ ವೈದ್ಯನ ಮಿಂಡನ ಮಿಂಡನಕ್ಕು ಸರ್ವಜ್ಞ!” ಎಂದು ಇದೇ ವಿಷಯವನ್ನು ಒತ್ತಿ ಹೇಳಿದ್ದಾನೆ.
ಮಲಗುವ ಮುಂಚೆ ಕಾಫಿ ಅಥವಾ ಚಹಾ ಕುಡಿದರೆ ಎಚ್ಚರವಿರಬಹುದೆಂಬ ವಾಡಿಕೆಯಿದೆ. ಇವುಗಳಿಂದ ಸ್ವಲ್ಪಮಟ್ಟಿಗೆ ನಿದ್ರೆಯನ್ನು ತಡೆಯಬಹುದು. ಏಕೆಂದರೆ ಇವುಗಳಲ್ಲಿರುವ “ಕೆಫೀನ್” ವಸ್ತುವು ನರಗಳನ್ನು ಉದ್ರೇಕಿಸುತ್ತದೆ. ಆದರೆ ನಿದ್ರೆ ಈ ವಿಷವನ್ನೂ ತುಳಿದು ಆವರಿಸುತ್ತದೆ. ಹೆಚ್ಚು ನಿದ್ರೆ ಕೆಟ್ಟಾಗ ಇಷ್ಟ ಬಂದಂತೆ ಕೊಡುವುದಾಗಲಿ ಅಥವಾ ಕೆಲಸ ಮಾಡುವುದಾಗಲಿ ಆಗುವುದಿಲ್ಲ. ಮಾಂಸಖಂಡಗಳಲ್ಲಿ ದಣಿವು ಕಾಣಿಸಿಕೊಳ್ಳುತ್ತದೆ. ಆಗ ಮಿದುಳು ಸ್ಥಿರವಿಲ್ಲದೇ ಬಳಲುವುದರಿಂದ ಏನು ಮಾಡುತ್ತಿರುವೆ? ಏನು ಮಾಡಬೇಕು? ಏನು ಮಾಡಬಾರದು? ಎಂಬುದು ಅರ್ಥವಾಗುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ರಾತ್ರಿಯೆಲ್ಲಾ ನಿದ್ರೆಗೆಟ್ಟು ಓದಿ ಏನು ಬರೆಯಲು ಹೊಳೆಯದೆ ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳನ್ನು ಇಲ್ಲಿ ಉದಾಹರಿಸಬಹುದು.
ಮನಸ್ಸಿನಲ್ಲಿ ಚಿಂತೆ, ಆತಂಕ, ಭೀತಿ, ಉದ್ವೇಗಗಳಿದ್ದರೆ ಅವು ನಿದ್ರೆಗೆ ಅವಕಾಶ ಕೊಡುವುದಿಲ್ಲ. ಶರೀರದಲ್ಲಿನ ನೋವು, ಉರಿ, ಜ್ವರ ಮುಂತಾದುವುಗಳಿಂದಲೂ ಕೂಡ ನಿದ್ರೆಗೆ ತೊಂದರೆಯಾಗುತ್ತದೆ. ಅತಿಯಾದ ಬೆಳಕು, ಶಬ್ದ ಮತ್ತು ಗಾಳಿಯ ಅಭಾವ (ಶಕೆ) ಕೂಡ ನಿದ್ರೆಗೆ ಕಡಿವಾಣ ಹಾಕಬಲ್ಲವು. ಗಾಳಿ, ಬೆಳಕು ಹಿತವಾಗಿರುವ ಸ್ಥಳದಲ್ಲಿ ನಿದ್ರೆ ಚೆನ್ನಾಗಿ ಬರುತ್ತದೆ. ಎಲ್ಲಕ್ಕಿಂತಲೂ ಸುಖನಿದ್ರೆಯ ಪ್ರಮುಖ ಅಗತ್ಯವೆಂದರೆ ನಿಶ್ಚಿಂತ ಮನಸ್ಸು. ಪ್ರಚಲಿತವಿರುವ “ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ಸುಖನಿದ್ರೆ” ಎಂಬ ಗಾದೆ ಇದನ್ನೇ ವಿವರಿಸುತ್ತದೆ.
ನಿದ್ರೆಯ ಉಪಯೋಗ ಮತ್ತು ನಿದ್ರಾಹೀನತೆ
ಸುಖವಾದ ನಿದ್ರೆಯಿಂದ ಆರೋಗ್ಯ, ಶಕ್ತಿ, ಪುಷ್ಟಿ, ಜ್ಞಾನ, ವೀರ್ಯವಂತಿಕೆಗಳು ಲಭಿಸುವುವು. ನಿದ್ರಾನಾಶದಿಂದ ದುಃಖ, ಸೊರಗುವಿಕೆ, ದೌರ್ಬಲ್ಯ, ವೀರ್ಯ ಹೀನತೆ, ಅಜ್ಞಾನಗಳುಂಟಾಗುವುವು. ಮುಖ್ಯವಾಗಿ ಪೂರ್ಣ ಆರೋಗ್ಯದ ಸುಖ ಅನುಭವವು ಸುಖವಾದ ನಿದ್ರೆಯಿಂದಲೇ ಲಭಿಸಬಲ್ಲದು. ನಿದ್ರೆಯಲ್ಲಿ ದೇಹದ ಶಕ್ತಿಯು ಉಳಿತಾಯವಾಗುವುದಲ್ಲದೆ ದೇಹದ ಅಂಗಾಂಗಗಳು ರಿಪೇರಿಯಾಗಲು ಸಹಾಯವಾಗುತ್ತದೆ. ಬಾಲ್ಯ, ಹದಿವಯಸ್ಸಿನಲ್ಲಿ ಬೆಳವಣಿಗೆ ರಸದೂತವು ನಿದ್ರೆಯಲ್ಲಿ ಉತ್ಪತ್ತಿಯಾಗಿ ವ್ಯಕ್ತಿಯ ಬೆಳವಣಿಗೆಗೆ ನೆರವಾಗುತ್ತದೆ. ಒಬ್ಬ ವ್ಯಕ್ತಿಯನ್ನು ಊಟವಿಲ್ಲದೆ ಇರಲು ಹೇಳಿ, ಇನ್ನೊಬ್ಬನನ್ನು ನಿದ್ರೆಯಿಲ್ಲದೆ ಇರಲು ಹೇಳಿ, ಇಬ್ಬರಲ್ಲಿ ಯಾವನು ಮೊದಲು ಸಾಯುತ್ತಾನೆ? ನಿದ್ರೆಯಿಲ್ಲದವನೇ ಮೊದಲು ಸಾಯುತ್ತಾನೆ! ಮನುಷ್ಯನಿಗೆ ಊಟಕ್ಕಿಂತ ನಿದ್ರೆ ಎಷ್ಟು ಅವಶ್ಯಕ ಎಂಬುದನ್ನಿಲ್ಲಿ ತಿಳಿಯಬಹುದು.
ಕೆಲವರಲ್ಲಿ ನಿದ್ರೆ ಬಾರದಿರುವುದೇ ರೋಗವಾಗಿ ಪರಿಣಮಿಸುವುದುಂಟು. ಇಂತಹ ಸ್ಥಿತಿಗೆ ನಿದ್ರಾಹೀನತೆ (ಇನ್ಸೋಮ್ನಿಯಾ) ಎನ್ನುತ್ತಾರೆ. ನಿದ್ರೆ ಬರದಿದ್ದರೆ ಹಾಸಿಗೆಯ ಮೇಲೆ ಸುಮ್ಮನೆ ಹೊರಳಾಡಿದೆ ಎದ್ದು ಏನಾದರೂ ಚಟುವಟಿಕೆ ಅಂದರೆ ಪುಸ್ತಕ ಓದುವುದು, ಸಂಗೀತ ಕೇಳುವುದು ಇತ್ಯಾದಿ ಮಾಡಬೇಕು. ಈ ಕೆಳಗಿನ ಅಂಶಗಳು ನಿದ್ರೆ ಬರುವಂತೆ ನಿಮಗೆ ಸಹಾಯ ಮಾಡುವುದರಲ್ಲಿ ಸಂದೇಹವಿಲ್ಲ.
* ದಿನಾಲು ಸರಿಯಾದ ಸಮಯಕ್ಕೆ ಮಲಗಿ ಮತ್ತು ಏಳಿ.
* ಹಾಸಿಗೆ ಆರಾಮವಾಗಿ ಮಲಗಲು ಸಾಕಾಗುವಂತೆ ಇರಲಿ.
* ಮಲಗುವ ಕೋಣೆಯಲ್ಲಿ ಅವಶ್ಯವಿದ್ದಷ್ಟು ಗಾಳಿ, ಬೆಳಕು ಬರುತ್ತಿರಲಿ.
* ಕಾಫಿ, ಚಹಾ, ಮದ್ಯಪಾನ, ಧೂಮಪಾನ ಗಳಿಂದ ದೂರವಿರಿ
* ದಿನದ ಸಮಯದಲ್ಲಿ ಮಲಗಬೇಡಿ.
* ಬಿಸಿ ನೀರಿನಿಂದ ಸ್ನಾನ ಮಾಡಿ, ಸಂಗೀತದಿಂದ ಆನಂದಿಸಿ.
* ನಿದ್ರಾ ಗುಳಿಗೆಗಳ ಮೊರೆ ಹೋಗದಿರಿ.
* ಮಲಗುವ ಮುಂಚೆ ಹಾಲು ಕುಡಿ ಎನ್ನುವ ಅಜ್ಜಿಯ ಉಪದೇಶ ನೆನಪಿರಲಿ. ಇದು ಬರೀ ಪೊಳ್ಳು ಮಾತಲ್ಲ. ಇದರಲ್ಲಿ ವೈಜ್ಞಾನಿಕ ಸತ್ಯವೂ ಅಡಗಿದೆ.
ಗೊರಕೆ ಹೊಡೆಯುವುದು
ಉಸಿರಾಟಕ್ಕೆ ಗಾಳಿಯನ್ನು ಮೂಗಿನ ಹೊಳ್ಳೆಯಿಂದ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಕೆಲವರು ಅಂದರೆ ಬಾಯಿ ತೆರೆದು ಮಲಗುವವರು ಬಾಯಿಂದ ಉಸಿರಾಡುವುದುಂಟು. ಇದಕ್ಕೆ ಕಾರಣ ಅವರ ಮೂಗಿನ ಹೊಳ್ಳೆಗಳು ಭಾಗಶಃ ಮುಚ್ಚಿರಬಹುದು ಅಥವಾ ಬಾಯಿ ಭಾಗಶಃ ತೆರೆದುಕೊಂಡಿರಬಹುದು. ಎಚ್ಚರದಿಂದಿದ್ದಾಗ ಬಾಯಿಯ ಮೇಲ್ಭಾಗದ ಕೆಳಮೈ ಬಿಗಿಯಾಗಿರುತ್ತದೆ. ಇದು ನಿದ್ರೆಯಲ್ಲಿದ್ದಾಗ ಸ್ವಲ್ಪ ಸಡಿಲವಾಗಿ, ಗಾಳಿಯು ಬಾಯಿಯ ಒಳಗೂ ಹೊರಕ್ಕೂ ಚಲಿಸಿದಾಗ ಸಡಿಲವಾದ ಚರ್ಮವು ಕಂಪಿಸಿ ಒಂದು ಬಗೆಯ ಶಬ್ದಕ್ಕೆ ಕಾರಣವಾಗುತ್ತದೆ. ಅದೇ ಗೊರಕೆ. ನಿದ್ರಿಸುವವರೆಲ್ಲರೂ ಗೊರಕೆ ಹೊಡೆಯುತ್ತಾರೆ ಎನ್ನುವುದು ತಪ್ಪು.
ಗೊರಕೆಯೇನು ಸಾಮಾನ್ಯ ಸಂಗತಿ ಎಂಬ ನಿರ್ಲಕ್ಷ್ಯ ಬೇಡ. ಏಕೆಂದರೆ ಇತ್ತೀಚಿನ ವೈದ್ಯಕೀಯ ವರದಿಯ ಗೊರಕೆಯಿಂದ ರಕ್ತದ ಒತ್ತಡ ಏರುವುದಲ್ಲದೆ ಹೃದಯಾಘಾತದ ಸಂಭವವೂ ಹೆಚ್ಚು ಎಂದು ತಿಳಿಸಿದೆ! ಗಾಬರಿ ಬೇಡ. ಗೊರಕೆ ತಪ್ಪಿಸುವ ವಿಧಾನಗಳೂ ತಿಳಿದುದ್ದಾಗಿದೆ. ಅವು ಹೀಗಿವೆ: ಗೊರಕೆ ಕಡಿಮೆ ಮಾಡಬೇಕಾದರೆ ಮಲಗುವ ಮುನ್ನ ಮೂಗನ್ನು ಚೆನ್ನಾಗಿ ತೊಳೆದುಕೊಂಡು, ಬಾಯಿಯನ್ನು ಮುಚ್ಚಿಕೊಂಡಿರಲು ಪ್ರಯತ್ನಿಸಿ. ಆಗ ಗೊರಕೆ ನಿವಾರಿಸಲು ಸಾಧ್ಯ. ಇದರಿಂದ ಸಫಲವಾಗದ ದಿದ್ದರೆ ಹೊಟ್ಟೆಯ ಮೇಲೆ ಮಲಗಿ ನೋಡಿ. ತಲೆದಿಂಬಿನ ಪ್ರಮಾಣ ತಗ್ಗಿಸಿ. ಪ್ರತಿದಿನ ಪ್ರಾಣಾಯಾಮ (ಉಸಿರು ನಿಧಾನವಾಗಿ ಮತ್ತು ಆಳವಾಗಿ ತೆಗೆದುಕೊಂಡು ಹಾಗೆಯೇ ನಿಧಾನವಾಗಿ ಬಿಡುವ ವ್ಯಾಯಾಮ) ಮಾಡಿ.
ಎಲ್ಲ ಉಪಾಯ ಗಳಿಂದಲೂ ಗೊರಕೆ ನಿಲ್ಲದಿದ್ದರೆ ಗಾಬರಿಯಾಗದಿರಿ. ಇಲ್ಲಿದೆ ಉಪಾಯ. ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಿ. ಏಕೆಂದರೆ ದಪ್ಪವಿರುವ ವ್ಯಕ್ತಿಗಳೇ ಗೊರಕೆ ಹೊಡೆಯುವುದರಲ್ಲಿ ನಿಸ್ಸೀಮರು! ಕುಡಿಯಬೇಡಿ (ಸಾರಾಯಿ, ಬಿಯರ್, ಇತ್ಯಾದಿ). ನಿದ್ರೆಮಾತ್ರೆ ಮತ್ತು ಆಂಟಿಹಿಸ್ಟಮೈನ್ ಮಾತ್ರೆಗಳನೆಂದು ನಂಗದಿರಿ. ಆಗ ಗೊರಕೆಯನ್ನು ಬಹುಮಟ್ಟಿಗೆ ನಿವಾರಿಸಲು ಸಾಧ್ಯ. ಮೇಲಿನೆಲ್ಲಾ ಉಪಾಯಗಳನ್ನು ಮಾಡಿಯಾದ ಮೇಲೆಯೂ ಕೂಡ ಗೊರಕೆ ನಿಲ್ಲದಿದ್ದರೆ ಆತಂಕಬೇಡ, ಏಕೆಂದರೆ ಶಸ್ತ್ರಚಿಕಿತ್ಸೆಯಿಂದ ಗೊರಕೆಯನ್ನು ಸಂಪೂರ್ಣವಾಗಿ ತಪ್ಪಿಸಬಹುದು.
ಸಿಹಿ ಸುದ್ದಿ
ಗೊರಕೆಯಿಂದಾಗುವ ಅಪಾಯವನ್ನು ಓದಿದ ಮೇಲೆ ನೀವು ಗಾಬರಿಯಾಗಿರಬಹುದು. ನಿದ್ರೆಗೆಟ್ಟು ನಿದ್ರೆಯ ಬಗೆಗಿನ ಈ ಲೇಖನ ಓದುತ್ತಿರುವವರಿಗೆ ಹೀಗೊಂದು ಸಿಹಿ ಸುದ್ದಿ ಕಾದಿದೆ!
ನಿದ್ರೆ… ಪ್ರಾಣಿ-ಪಕ್ಷಿಗಳಿಗೆ ಸಂಬಂಧಿಸಿದಂತೆ
* ಎಲ್ಲ ಪ್ರಾಣಿ ಪಕ್ಷಿಗಳು ಕೂಡ ಕೆಲಸಮಯ ನಿದ್ರೆಯಲ್ಲಿ ಕಳೆಯುತ್ತವೆ.
* ಹೆಚ್ಚಿನ ಪಕ್ಷಿಗಳು ಹಗಲಿನಲ್ಲಿ ಎಚ್ಚರವಿದ್ದು ರಾತ್ರಿ ಮಲಗುತ್ತವೆ.
* ಬೆಕ್ಕು ತನ್ನ ಮೈಯನ್ನು ದುಂಡಗೆ ಬಾಗಿಸಿ ಮಲಗುತ್ತದೆ. ನಾಯಿ ಮತ್ತಿತರ ಪ್ರಾಣಿಗಳು ಮನುಷ್ಯನಂತೆ ಒರಗುತ್ತದೆ.
* ಕುದುರೆ ನಿಂತೆ ನಿದ್ರಿಸುತ್ತದೆ. ಸಮುದ್ರದ ಡಾಲ್ಫಿನ್ ಎಂಬ ದೈತ್ಯ ಮೀನು ಈಜುತ್ತಲೇ ನಿದ್ರಿಸುತ್ತದೆ! ಒಂದೊಂದು ಸೆಕೆಂಡಿಗೆ ಒಂದೊಂದು ಜೊಂಪಿನಂತೆ.
* ಬಾವಲಿಗಳು ಗವಿಯ ಗೋಡೆಗೋ, ಹಳೆಯ ಕಟ್ಟಡದಲ್ಲಿಯೋ ಅಥವಾ ಗಿಡದ ರೆಂಬೆಗೋ ತಳ ಕೆಳಕಾಗಿ ನಿದ್ರಿಸುತ್ತವೆ. ಕೋಳಿಗಳು ಗೂಡಿನಲ್ಲಿ ಕುಂತೇ ನಿದ್ರಿಸುವುವು.
* ಎಚ್ಚರವಿದ್ದಾಗಲಿ ಅಥವಾ ನಿದ್ರೆಯಲ್ಲಾಗಲೀ ಹಾವು ಮತ್ತು ಮೀನುಗಳು ಕಣ್ಣು ಮುಚ್ಚುವುದಿಲ್ಲ!
* ಅಂಗಾತ ಮಲಗುವ ಏಕೈಕ ಪ್ರಾಣಿಯೆಂದರೆ |ಮನುಷ್ಯ”!
ಆಯುರ್ವೇದದಲ್ಲಿ ಸೂಚಿಸಿರುವ ನಿದ್ರೆಯ ವಿಧಗಳು
೧. ತಮೋಭವಾ ನಿದ್ರೆ – ಮನಸ್ಸಿನಲ್ಲಿ ತಮೋಗುಣ ಅಧಿಕವಾದಾಗ
೨. ಶ್ಲೇಷ್ಮ ಸಮುದ್ಭವಾ ನಿದ್ರೆ – ಶರೀರದಲ್ಲಿ ಕಫೋಲ್ಬಣವಾದಾಗ
೩. ಶ್ರಮ ಸಂಭವಾ ನಿದ್ರೆ – ಮನಸ್ಸು ಶರೀರಗಳಿಗೆ ದಣಿವಾದಾಗ
೪. ಆಗಂತುಕೀ ನಿದ್ರೆ – ಅಪಘಾತ ಮೊದಲಾದವುಗಳು ಸಂಭವಿಸಿದಾಗ
೫. ವ್ಯಾಸ್ಯನುವರ್‍ತಿನೀ ನಿದ್ರೆ – ವಿಶಿಷ್ಟ ವ್ಯಾಧಿಗಳಿದ್ದಾಗ
೬. ರಾತ್ರಿ ಸ್ವಭಾವ ಪ್ರಭಾವಾ ನಿದ್ರೆ – ನಿತ್ಯ ಸಹಜವಾಗಿ ಬರುವ ನಿದ್ದೆ.
ಮಧ್ಯಾಹ್ನ ತುಸು ಹೊತ್ತು ಮಲಗುವುದು ವೃಥಾ ಕಾಲಹರಣ ಎಂದು ಕೆಲವರ ಅಂಬೋಣ. ಆದರೆ ಇದು ತಪ್ಪು! ಇತ್ತೀಚಿನ ಒಂದು ವೈದ್ಯಕೀಯ ವರದಿಯು ಮಧ್ಯಾಹ್ನ ನಿದ್ರಿಸಿದರೆ ಹೃದಯಾಘಾತದ ಅಪಾಯ ಕಡಿಮೆಯೆಂದು ತಿಳಿಸಿದೆ! ಹುಂ! ವೃಥಾ ಕಾಲಹರಣ ಅನ್ನದೇ ಮಧ್ಯಾಹ್ನ ತುಸು ಹೊತ್ತೇಕೆ ದೀರ್ಘಕಾಲ ನಿದ್ರಿಸಿರಲ್ಲ! ಆದರೆ ಒಂದ್ನಿಮಿಷ…! ಮತ್ತೆಕೆ ತೆಡೆಯುತ್ತಿದ್ದೇನೆಂದು ಹೀಯಾಳಿಸಬೇಡಿ. ನನ್ನ ಸಲಹೆ ಇಷ್ಟೇ, ಗೊರಕೆ ಹೊಡೆಯುವುದನ್ನು ಮಾತ್ರ ಕಡಿಮೆ ಮಾಡಿ!
ನಿಲ್ಲಿ…! ನೀವು ಆ ಸಮಯದಲ್ಲಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಮುಂದುವರೆಸಿ, ನಿದ್ರೆಯಲ್ಲ…. ಕಚೇರಿ ಕೆಲಸ!
*****