ಅಧಾಯ ೧೩ ಈರಜ್ಜನ ಪುರಾಣ
ಬೆಳಗ್ಗೆ ಬೇಗನೇ ಬಂದಿದ್ದ ರಿತು ತೋಟದಲ್ಲಿ ಕೆಲಸ ಮಾಡುತ್ತಿದ್ದ ಈರಜ್ಜನನ್ನು ಕಂಡು, “ಏನು ಈರಪ್ಪ, ಊರಿಗೆ ಹೋಗಬೇಕು, ಎಂಟು ದಿನ ರಜೆ ಕೊಡಿ ಅಂತ ಜಗಳ ಮಾಡಿ ಹೋಗಿದ್ದೆ. ಅದೇನು ಎರಡೇ ದಿನಕ್ಕೆ ಬಂದುಬಿಟ್ಟಿದ್ದೀಯಾ?” ಎಂದು ಕೇಳಿದಳು.
ಬದನೆ ಗಿಡಗಳ ಸುತ್ತ ಪಾತಿ ಮಾಡುತ್ತಿದ್ದ ಈರಜ್ಜ, “ಹೂ ಕಣವ್ವ ಬ್ಯಾಗ್ ಬಂದುಬಿಟ್ಟೆ. ಈ ಕೆಲಸ ನನ್ನ ಕರೀತಾ ಇತ್ತಲ್ಲರವ್ವ. ಅದ್ಕೆ ಶ್ಯಾನೇ ಬ್ಯಾಗ ಬಂದುಬುಟ್ಟೆ” ಎಂದ ಮುಖ ಮರೆಸುತ್ತ. ಏಕೋ ಮುಖವೆಲ್ಲ ಸೋತು ಹೋಗಿತ್ತು. ಹೋಗುವಾಗಿನ ಉತ್ಸಾಹ, ಆ ಸಡಗರ ಈಗೆಲ್ಲಿ ಹೋಯಿತು ಎಂದುಕೊಂಡು,
“ಯಾಕಜ್ಜ ತುಂಬ ಬೇಸರಪಟ್ಟುಕೊಂಡಿದ್ದೀಯಾ? ಊರಿನಲ್ಲಿ ಮಗ-ಸೊಸೆ ಎಲ್ಲಾ ಚೆನ್ನಾಗಿದ್ದಾರಾ?”
“ಅವ್ರಿಗೆನವ್ವ ಸೆಂದಾಗಿದಾರೆ. ನಾನೇ ಸಂದಾಗಿಲ್ಲ ಅವರ್ಗೆ. ನಂಗೂ ವಯಸ್ಸಾಗೈತೆ ಅಲರಾ. ಆದ್ಕೆ ಈ ಮುದ್ಕನ ಮೇಲೆ ಎಲ್ಲರಿಗೂ ಕ್ವಾಪ” ಟವೆಲಿನಿಂದ ಕಣ್ಣೊರೆಸಿಕೊಂಡ.
“ನಿನ್ನಂಥವನ ಮೇಲೂ ಕೋಪನಾ ಈರಜ್ಜ? ಪಾಪ, ಅವರಿಗೇನು ಮಾಡ್ತೀಯಾ ನೀನು. ಇಲ್ಲಿ ದುಡಿದದ್ದನ್ನೆಲ್ಲ ನಿನ್ನ ಸ್ವಂತಕ್ಕೂ ಖರ್ಚುಮಾಡಿಕೊಳ್ಳದೆ ಎಲ್ಲಾ ಕೂಡಿ ಹಾಕಿಕೊಟ್ಟು ಬರ್ತಿಯಲ್ಲಾ. ಅದಕ್ಕಾ ಕೋಪ ಅವರಿಗೆ ನಿನ್ನ ಮೇಲೆ. ಏಕೆ ನಿನ್ನ ಮಗ-ಸೊಸೆಗೆ ನಿನ್ನ ಈ ವಯಸ್ಸಿನಲ್ಲಿ ದುಡಿಸಬೇಕಾ? ಒಂದಿಷ್ಟು ಅನ್ನ ಹಾಕೊ ಯೋಗ್ಯತೆ ಅವರಿಗಿಲ್ಲವಾ? ಮಗ-ಸೊಸೆ ತಾಲಕ್ಕೆ ಕುಣಿದು ಓಡುತ್ತಾನೇನೂ?”
“ಬಿಡ್ತು ಅನ್ರವ್ವ. ನನ್ನ ಸೊಸೆ ದ್ವಾವತೀ ಕಣವ್ವ. ಆ ಮಾತಾಯಿನಾ ತಂಪು ಹೊತ್ತಲ್ಲಿ ನೆನ್ಕೋಬೇಕು. ಆ ಮಗಿಂದೇನೂ ತಪ್ಪಿಲ್ಲ ಕಣವ್ವ. ಆ ಕಿರಾತ್ಕನದ್ದೇ ಕಣವ್ವ ಎಲ್ಲಾ ಹಿಕಮತ್ತು.”
“ಏನು, ನಿನ್ನ ಮಗನೇ ಸರಿ ಇಲ್ವಾ? ನಿಜಾನಾ? ಸೊಸೆ ಒಳ್ಳೆಯವಳು, ಮಗನೇ ಕೆಟ್ಟವನಾ? ಹೀಗೂ ಇರುತ್ತಾ ಪ್ರಪಂಚ? ನಿನ್ನ ಕತೀ ವಿಚಿತ್ರದಲ್ಲ ಈರಜ್ಜ” ಅಚ್ಚರಿಪಟ್ಟಳು.
“ಯಾಕಜ್ಜ, ನೀನೇ ಹೆತ್ತ ಮಗ ನಿನ್ನ ದ್ವೇಷಿಸುತ್ತಾನೆ? ಹೆತ್ತ ಅಪ್ಪ ಅನ್ನೋ ಪ್ರೀತಿ ಇಲ್ವಾ?”
“ಅಂಗಿದ್ದಿದ್ರೆ ನಾನ್ಯಾಕವ್ವ ಇಲ್ಲಿರುತ್ತಿದ್ದೆ? ಉಟ್ಟಿದ ಊರ್‍ನ ಬಿಟ್ಟು ಬಂದು ಒಂಟಿ ಬ್ಯಾತಾಳ್ನಂಗೆ ಅಗಲು-ರಾತ್ರಿ ಎತ್ತ ಕರುಳ್ನ ನೆನಸ್ಕತ ಸಂಕಟಪಡೋ ಗತಿ ಯಾಕವ್ವಾ ಬತ್ತಾ ಇತ್ತು? ಆ ಶಿವ ಒಳ್ಳೇದನ್ನ ನನ್ನ ಅಣೆ ಮ್ಯಾಲೇ ಬರಿಲಿಲ್ಲ ಕಣವ್ವ. ನಾನೊಬ್ಬ ಪಾಪಿ ಮುಂಡೆ ಮಗ ಕಣವ್ವ” ಕಣ್ಣೀರು ಹಾಕುತ್ತಿದ್ದ ಈರಜ್ಜನನ್ನು ನೋಡಿ ಖೇದವೆನಿಸಿ, ಛೇ, ತಾನೇಕೆ ಆತನ ದುಃಖವನ್ನು ಕೆದಕಿದೆನೋ ಎನಿಸಿ ಪಶ್ಚಾತ್ತಾಪಪಟ್ಟಳು.
“ಹೋಗ್ಲಿ ಬಿಡು ಈರಜ್ಜ, ಇಲ್ಲಿರುವವರೆಲ್ಲ ಸಮಾನ ದುಃಖಿಗಳೇ. ನೀನು ಕೂಡ ಅಂಥವರಲ್ಲಿ ಒಬ್ಬ. ಇಲ್ಲಿ ನಿನಗೇನು ಕಡಿಮೆ ಆಗಿದೆ? ಮೂರು ಮೂರು ದಿನಕ್ಕೂ ಅಲ್ಲಿಗೆ ಹೊಗೋದು ಯಾಕೆ? ಹೀಗೆ ಮನಸ್ಸು ಕೆಡಿಸಿಕೊಂಡು ಅಳುವುದು ಯಾಕೆ? ಗೊತ್ತಿದು ಗೊತ್ತಿದ್ದು ನೀನು ಹೋಗೋದೇ ತಪ್ಪು. ಒಬ್ಬ ವ್ಯಕ್ತಿ ಹೀಗೆ ಅಂತ ತಿಳ್ಕೊಂಡ ಮೇಲೂ ಪದೇ ಪದೇ ಪರೀಕ್ಷಿಸಬಾರದು ಈರಜ್ಜ, ಕಷ್ಟಪಟ್ಟು ಕೆಲ್ಸ ಮಾಡ್ತೀಯಾ. ದುಡಿದ ಹಣವೆಲ್ಲ ಮಗನಿಗೆ ಕೊಟ್ಟು ಬರ್ತಿಯಾ. ಇನ್ನಾದರೂ ಬುದ್ದಿ ಕಲ್ತ್ಕೊ, ನಿನ್ನ ಕಷ್ಟ-ಸುಖಕ್ಕೆ ಬೇಕಾದರೆ ಏನು ಮಾಡ್ತೀಯಾ? ಇವತ್ತೇ ಗಟ್ಟಿ ಮನಸ್ಸು ಮಾಡ್ಕೊಬೇಕು ತಿಳೀತಾ, ಇನ್ಯಾವತ್ತಾದ್ರೂ ಮಗನ ನೋಡೋಕೆ ಹೋಗ್ತಿನಿ ಅಂದ್ರೆ ನೋಡು. ನಿಂಗೆ ರಜಾನೇ ಕೊಡಲ್ಲ” ಗದರಿಸಿ, ಈರಜ್ಜನ ಮನಸ್ಸಿಗೆ ನಾಟುವಂತೆ ಹೇಳಿದಳು. ಮನಸ್ಸಿನಲ್ಲಿ ಪಾಪ, ಈರಜ್ಜನಿಗೆ ಕರುಳಿನ ಸೆಳೆತ, ಇರುವವನೊಬ್ಬ ಮಗ, ಈ ಮಗನೂ ಹೀಗಾಗಿ ಬಿಟ್ಟರೆ ಈರಜ್ಜನಿಗೆ ಯಾರಿದ್ದಾರೆ ಎಂದುಕೊಂಡಳು.
“ಇಲ್ಲಾ ಕಣವ್ವ, ಇನ್ಯಾವತ್ತೂ ಅತ್ತ ಕಡೆಗೂ ತಲೆ ಆಕಿ ಮಾಲ್ಗಾಕಿಲ್ಲ. ಆಟೇಲ್ಲ ಮಾತಾಡಿದ ಮ್ಯಾಕೂ ನಾ ಓದ್ರೆ ಮನಸ್ಯ ಆಕ್ತಿನೇನವ್ವ. ಅವನು ನನ್ನ ಮಗ ಅಲ್ಲಾ ಕಣವ್ವ, ನನ್ನ ಸತ್ರು. ಎತ್ತ ಹೊಟ್ಟೆ ಉರಿಸೋ ಸತ್ರು ಕಣವ್ವ.
ಅವನ ಬಾಯಲ್ಲಿ. ಇದನ್ನೆಲ್ಲ ಕ್ಯಾಳಿದ್ಯಾ ಮ್ಯಾಕೂ ಇನ್ನೂ ಆ ಸಿವ ನನ್ನ ಈ ಭೂಮಿ ಮ್ಯಾಲೆ ಬುಟ್ರವ್ವನಲ್ಲ. ನನ್ನಂಥೋರೆ ಬದ್ಕಿರಬಾರದು. ವಿಸ ತಗೊಂಡು ಪಿರಾಣ ಬುಟ್ಟುಬುಡೋಣ ಅನ್ಸುತ್ತೆ ರಿತವ್ವ.”
“ಛೇ ಛೇ ಅಂಥ ಮಾತ್ಯಾಕೆ ಆಡ್ತೀಯಾ ಈರಜ್ಜ, ಪ್ರಾಣ ತೆಕ್ಕೊಳೋವಂಥ ಗತಿ ಏನು ನಿಂಗೆ ಬಂದಿರೋದು? ಇಲ್ಲಿ ನಿನ್ನಂಥವರೆಲ್ಲ ನೆಮ್ಮದಿಯಾಗಿ ಬದುಕ್ತಾ ಇಲ್ವಾ? ಊರು, ಮಗ ಅನ್ನೋ ಸೆಳತನ ಬಿಟ್ಟುಬಿಡು. ಆ ದೇವರು ತಾನಾಗಿಯೇ ಕರ್ಕೊಳ್ಳತನಕ ಅಂಥ ಆಲೋಚನೆ ಮಾಡಬೇಡ. ನಿನ್ನಂಥ ಒಳ್ಳೆಯ ಮನಸ್ಸಿನವನಿಗೆ ಅಂಥ ಕೆಟ್ಟ ಮಗ ಹುಟ್ಟಬಾರದಿತ್ತು. ಹೋಗ್ಲಿ ಬಿಡು. ಮಗನೇ ಇಲ್ಲ ಅಂತ ತಿಳ್ಕೊ, ಇನ್ಯಾವತ್ತು ನನ್ನ ಮುಂದೆ ಕಣ್ಣೀರು ಹಾಕುವುದಾಗಲಿ, ನೊಂದುಕೊಳ್ಳುವುದಾಗಲಿ ಮಾಡಿದ್ರೆ ನೋಡು ಗೊತ್ತಾಯ್ತಾ?” ಅನುನಯದಿಂದ ರಿತು ಪ್ರೀತಿ ತುಂಬಿ ಹೇಳುತ್ತಿದ್ದರೆ, ಈರಜ್ಜನ ಕಣ್ಣುಗಳಲ್ಲಿ ಇಣುಕುತ್ತಿದ್ದ ಕಣ್ಣೀರು ಹಾಗೆಯೇ ಇಂಗಿ ಹೋಯಿತು. ತನ್ನ ಮೊಮ್ಮಗಳೇ ಸಮಾಧಾನಿಸುತ್ತಿರುವಂತೆ ಭಾಸವಾಗಿ, “ಆಯ್ತವ್ವ, ಇನ್ಯಾವತ್ತೂ ಕಣ್ಣೀರಾಕಾಕಿಲ್ಲ. ಆ ದ್ಯಾವ್ರ ಮ್ಯಾಲೆ ಆಣೆ ಕಣವ್ವ” ಎಂದ ಭಾವಪರವಶನಾಗಿ, ಅವನ ಉತ್ತರಿಂದ ತೃಪ್ತಳಾದ ರಿತು ಮೆಲು ನಗುತ್ತ “ಗುಡ್ ಈರಜ್ಜ ಸದಾ ಹೀಗೇ ಇರಬೇಕು” ಎಂದು ಹೇಳಿ ಒಳಹೋದಳು.
ರಿತು ಒಳ ಹೋಗುವುದನ್ನೇ ನೋಡುತ್ತಿದ್ದ ಈರಜ್ಜನಿಗೆ ತನ್ನ ಬದುಕಿನ ಒಂದೊಂದೇ ಚಿತ್ರಣಗಳು ಕಣ್ಮುಂದೆ ಹಾದುಹೋಗತೊಡಗಿದವು.
ಮೆಚ್ಚಿ, ಹಟ ಹಿಡಿದು ಗೌರಿಯನ್ನೇ ಮದುವೆಯಾಗಬೇಕೆಂದು ಶತಪ್ರಯತ್ನ ನಡೆಸಿ, ಸಿರಿವಂತ ಮನೆಯ ಅಪೂರ್ವ ಸುಂದರಿ ಗೌರಿಯನ್ನು ಕೈಹಿಡಿದಿದ್ದ ಈರೇಶ, ಮೆಚ್ಚಿದವನ ಹಿಂದೆ ಓಡಿ ಹೋದವಳೆಂದು ತೌರಿನವರು ಧಿಕ್ಕರಿಸಿ, ಕೈಬಿಟ್ಟಾಗ, ಈರೇಶನ ಪ್ರೇಮದಲ್ಲಿ ತನ್ನೆಲ್ಲ ನೋವನ್ನು ಮರೆತು ತನ್ನ ಸಂಸಾರದಲ್ಲಿ ಮುಳುಗಿಹೋದಳು. ಇವರಿಬ್ಬರ ಅನ್ನೋನ್ಯ ದಾಂಪತ್ಯ ನೋಡಿದ ವಿಧಿಗೆ ಸಹಿಸಲಾಗಲಿಲ್ಲವೇನೋ. ಹಾವು ಕಚ್ಚಿದ್ದೇ ನೆವವಾಗಿ ವರ್ಷದ ಮಗು ರಂಗನಾಥನನ್ನು ತಬ್ಬಲಿಯನ್ನಾಗಿ ಮಾಡಿ ಗೌರಿ ಈ ಲೋಕವನ್ನೇ ಬಿಟ್ಟು ನಡೆದಿದ್ದಳು. ಪ್ರೀತಿಯ ಪತ್ನಿಯ ಈ ಅಗಲಿಕೆಯಿಂದ ಕಂಗಾಲಾಗಿದ್ದ ಈರೇಶ ರಂಗನಾಥನನ್ನು ನೋಡುತ್ತ, ಅವನನ್ನು ಸಾಕುತ್ತ, ತನ್ನ ದುಃಖವನ್ನು ಇಂಗಿಸಿಕೊಳ್ಳುತ್ತಿದ್ದ. ಇಷ್ಟು ಬೇಗ ಪತ್ನಿಯನ್ನು ಕಳೆದುಕೊಂಡು ಹೀಗೆ ಒಂಟಿಯಾಗುವೆನೆಂದು ಕನಸು-ಮನಸ್ಸಿನಲ್ಲಿಯೂ ನೆನೆಸದ ಈರೇಶ ಸದಾ ಗೌರಿಯ ನೆನಪಿನಲ್ಲಿಯೇ ದಿನ ದೂಡುತ್ತಿದ್ದನು. ಇನ್ಯಾರೇ ಬಂದರೂ ಗೌರಿಯ ಸ್ಥಾನ ತುಂಬಲಾರರೆಂಬ ಸತ್ಯ ಗೊತ್ತಿದ್ದೇ ಮರು ವಿವಾಹಕ್ಕೆ ಮನಸ್ಸು ಮಾಡದೆ, ರಂಗನಾಥನಿಗೆ ಚಿಕ್ಕಮ್ಮನ ಕಾಟ ತಪ್ಪಿಸಿದ್ದ. ಯಾವ ಕಾರಣಕ್ಕೂ ಮನೆಗೆ ಮತ್ತೊಂದು ಹೆಣ್ಣನ್ನು ತರಲಾರನೆಂಬ ಶಪಥ ಮಾಡಿದ್ದ. ಅಪ್ಪ-ಅಮ್ಮ ಎರಡೂ ಆಗಿ ರಂಗನಾಥನಿಗೆ ಯಾರ ಕೊರತೆ ಕಾಣದಂತೆ ಬೆಳೆಸುತ್ತಿದ್ದ. ತನ್ನ ಹಾಗೂ ಗೌರಿಯ ಪ್ರೇಮದ ಕುರುಹು ಈ ಮಗ. ಇವನಿಗೆ ಯಾವ ರೀತಿಯಲ್ಲೂ ನೋವಾಗಬಾರದು ಎಂದು ಬಹಳಷ್ಟು ಶ್ರಮಿಸುತ್ತಿದ್ದ. ಮಗ ದಿನದಿನಕ್ಕೆ ಬೆಳೆಯುತ್ತಿದ್ದ. ಆ ಸಮಯದಲ್ಲಿಯೇ ನಾಗಮ್ಮನ ಪರಿಚಯವಾದದ್ದು. ಪಕ್ಕದ ತೋಟದಲ್ಲಿದ್ದ ನಾಗಮ್ಮ ಗಂಡನನ್ನು ಕಳೆದುಕೊಂಡ ವಿಧವೆಯಾಗಿದ್ದಳು. ಒಂಟಿ ಹೆಣ್ಣು ಬಂಧು-ಬಳಗದವರಿಲ್ಲ. ಹಾಗಾಗಿ ಈರಜ್ಜನ ಸಹಾಯ ಯಾಚಿಸಿದ್ದಳು. ತನ್ನ ತೋಟದ ಕೆಲಸ ಮಾಡುತ್ತಲೇ ತನ್ನ ಕೆಲಸದ ನಡುವೆಯೂ ಕನಿಕರಿಸಿ, ಆಕೆಯ ತೋಟದ ಕೆಲಸವನ್ನು ಮಾಡಿಕೊಡುತ್ತಿದ್ದ. ಈ ಸಹಾಯವನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದ ನಾಗಮ್ಮ ಈರೇಶನಿಂದ ಆಕರ್ಷಿತಳಾದಳು. ಅವಳು ಗಂಡನಿಲ್ಲದ ಹೆಣ್ಣು, ಇವನು ಹೆಂಡತಿ ಇಲ್ಲದ ಗಂಡು. ಬೆಂಕಿಯ ಮುಂದೆ ಬೆಣ್ಣೆ ಕರಗದೇ ಇದ್ದೀತೇ? ಸ್ನೇಹ ಸಲುಗೆಗೆ ತಿರುಗಲು ತಡವಾಗಲಿಲ್ಲ. ನಾಗಮ್ಮ ಒಳ್ಳೆಯ ಹೆಣ್ಣು. ಪಾಪ ಒಂಟಿ ಹೆಣ್ಣು. ಮೇಲಾಗಿ ಲಕ್ಷಣವಂತೆ. ಈರೇಶನೂ ಇನ್ನೂ ಪ್ರಾಯವಂತ. ಗೌರಿ ಮನದಲ್ಲಿಯೇ ಇದ್ದರೂ ಮೈ ಬಿಸಿ ಆರಿರಲಿಲ್ಲ. ಪ್ರಕೃತಿ ಧರ್ಮಕ್ಕೆ ಸೋಲದವರಾರು? ಹೇಗೋ ನಾಗಮ್ಮ-ಈರೇಶ ಒಂದಾದರು. ಆದರೆ ಆ ಸಂಬಂಧ ನಾಲ್ಕು ಜನಕ್ಕೆ ಕಾಣದಂತೆಯೇ ನಡೆಯುತ್ತಿತ್ತು. ಪಾಪ, ಈರೇಶ ಮನಸ್ಸು ಮಾಡಿದ್ದರೆ ಎಂಥ ಹೆಣ್ಣನ್ನಾದರೂ ಮದುವೆಯಾಗಬಹುದಿತ್ತು. ಆದರೆ ಹೆಂಡತಿಗೆ ನಿಷ್ಠನಾಗಿ, ಒಂಟಿಯಾಗಿ ಬಾಳುತ್ತಿದ್ದಾನೆ. ಅವನ ನಿಯತ್ತಿಗೆ ಎಣೆ ಇದೆಯೇ ? ಇಂಥ ವ್ಯಕ್ತಿ ಮತ್ತೊಬ್ಬ ಇರಲು ಸಾಧ್ಯವೇ? ಬಹಳ ಸಂಯಮದ ಗಂಡು ಎಂದೇ ಜನ ಭಾವಿಸಿರುವಾಗ ಈರೇಶನನ್ನು ಯಾರೂ ಸಂಶಯವಾಗಿ ನೋಡದಾದರು. ನಾಗಮ್ಮನೂ ಒಳ್ಳೆಯ ಹೆಂಗಸೇ, ಪಾಪ, ಯಾರೂ ಇಲ್ಲದ ಒಂಟಿ ಹೆಣ್ಣು. ಈರೇಶ ಆಕೆಗೆ ಸಹಾಯ ಮಾಡುತ್ತಿದ್ದಾನೆ ಎಂದೇ ಜನ ತಿಳಿದಿದ್ದರು. ಈರೇಶ ಹಾಗೂ ನಾಗಮ್ಮನೂ ಯಾರಿಗೂ ಸಂಶಯ ಬಾರದಂತೆಯೇ ನಡೆದುಕೊಳ್ಳುತ್ತಿದ್ದರು. ಎಷ್ಟೋ ವರ್ಷಗಳ ಕಾಲ ಈ ಸಂಬಂಧ ಹೀಗೆಯೇ ನಡೆದಿತ್ತು. ಆದರೆ ವಯಸ್ಸಿಗೆ ಬರುತ್ತಿದ್ದ ರಂಗನಾಥನಿಗೇಕೊ ಈ ವಾಸನೆ ಬಡಿಯಹತ್ತಿದಾಗ ಅಪ್ಪನ ಮೇಲೆ ರೇಗಾಡತೊಡಗಿದ. ನಾಗಮ್ಮನ ಮನೆಗೆ ಹೋಗುವುದನ್ನು ವಿರೋಧಿಸಹತ್ತಿದ. ಮುದ್ದಿನ ಮಗನ ವಿರೋಧ ನುಂಗಲಾರದ ತುತ್ತಾಗಿತ್ತು. ಇತ್ತ ಮಗನನ್ನು ಬಿಡಲಾರ, ಅತ್ತ ನಾಗಮ್ಮನನ್ನು ಬಿಡಲಾರ. ಈ ಇಬ್ಬದಿಯ ಸಂಕಟದಲ್ಲಿ ತೊಳಲಾಡುತ್ತಿದ್ದಾಗಲೇ ನಾಗಮ್ಮನೇ ಈ ಸಂಬಂಧಕ್ಕೆ ಇತಿಶ್ರೀ ಹಾಡಿದಳು.
ವಯಸ್ಸಿಗೆ ಬಂದಿರುವ ಮಗ ಇರುವಾಗ, ಅದೂ ಆತನಿಗೆ ಅನುಮಾನ ಬಂದಿರುವಾಗ ನಮ್ಮ ಈ ಸಂಬಂಧ ಮುಂದುವರಿಯುವುದು ಬೇಡ. ಇಷ್ಟು ದಿನ ಸ್ನೇಹ, ಪ್ರೀತಿ, ವಿಶ್ವಾಸ ತೋರಿಸಿ ಒಂಟಿತನ ದೂರ ಮಾಡಿದ್ದೆ. ಇನ್ನು ಮುಂದೆ ದೂರವೇ ಇದ್ದುಬಿಡೋಣವೆಂದು ಹೇಳಿದಾಗ ಈರೇಶ ಮೌನವಾಗಿಯೇ ಒಪ್ಪಿಗೆ ಸೂಚಿಸಿದ್ದ. ಆದರೆ ಆದಷ್ಟು ಸುಲಭವಾಗಿರಲಿಲ್ಲ. ಒಮ್ಮೆ ಬೆಳೆದುಕೊಂಡಿದ್ದ ಸಂಬಂಧದ ಮೈತ್ರಿಯನ್ನು ಕಡಿದು ಹಾಕುವುದು ಕಷ್ಟವಾಗಿತ್ತು. ಆದರೆ ಮಗನಿಗಾಗಿ ಆ ನೋವನ್ನು ಸಹಿಸಲು ಸಿದ್ದನಾದ. ನಾಗಮ್ಮನನ್ನು ನೋಡದೆ ದಿನಗಳು ಯುಗಗಳಂತೆ ಭಾಸವಾಗಿ ಬಳಲಿ ಹೋಗಿದ್ದ. ಇತ್ತ ರಂಗನಾಥ ಅಪ್ಪನ ಈ ಸಂಕಟವನ್ನು ನೋಡುತ್ತಲೇ ದಿಗ್ವಿಜಯ ಸಾಧಿಸಿದಂತೆ ಬೀಗಿದ್ದ. ಅಪ್ಪ ನಾಗಮ್ಮನ ಮನೆಗೆ ಹೋಗದಂತೆ, ಆಕೆಯನ್ನು ನೋಡದಂತೆ ದಿಗ್ಬಂಧನೆಯನ್ನೇನೋ ಹಾಕಿದ್ದ. ಆದರೆ ಆಕೆಗಾಗಿ ಮಿಡಿಯುವ ಹೃದಯಕ್ಕೆ ಕಡಿವಾಣ ಹಾಕಲಾಗಿರಲೇ ಇಲ್ಲ. ಈರೇಶ ದೂರವೇ ಇದ್ದರೂ ನಾಗಮ್ಮನಿಗಾಗಿ, ಆಕೆಯ ಒಳಿತಿಗಾಗಿ ಹಾರೈಸುತ್ತಿದ್ದ. ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ತಂದರೆ ಮಗ ತನ್ನ ಸಂಸಾರದಲ್ಲಿ ಮುಳುಗಿ ತನ್ನ ತಂಟೆಗೆ ಬಾರದಂತಿರುತ್ತಾನೇನೋ ಎಂದು ಭಾವಿಸಿ, ಹತ್ತಾರು ಊರು ಹುಡುಕಿ, ಮುದ್ದಾದ ಹುಡುಗಿಯನ್ನು ಹುಡುಕಿ ಮನೆ ತುಂಬಿಸಿಕೊಂಡ ಸೊಸೆ ಕಮಲಿ ರೂಪದಲ್ಲಿ ರತಿಯಾದರೆ, ವಿನಯದಲ್ಲಿ ನಡ-ನುಡಿಯಲ್ಲಿ ಸೀತೆಯಂತಿದ್ದಳು. ಮಾವನನ್ನು ಕಂಡರೆ ಹೆತ್ತ ತಂದೆಯಷ್ಟೇ ಗೌರವ, ಪ್ರೀತಿ, ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗಿಂತ ಸೊಸೆಯೇ ಪ್ರೀತಿ-ವಾತ್ಸಲ್ಯ ತೋರಿಸಿ, ಮಗಳಂತಾಗಿದ್ದಳು. ಯಾವ ಜನ್ಮದ ಪುಣ್ಯವೋ ಇಂಥ ಸೊಸೆ ಸಿಕ್ಕಿರುವುದು ಎಂದು ಈರೇಶ ಹಿರಿಹಿರಿ ಹಿಗ್ಗುತ್ತಿದ್ದ. ಆದರೆ ಆ ಹಿಗ್ಗು ಹೆಚ್ಚು ದಿನ ಉಳಿಯುವಂತೆ ಕಾಣಲಿಲ್ಲ. ರಂಗನಾಥನಿಗೆ ಹೆಂಡತಿ ತನ್ನ ಅಪ್ಪನನ್ನು ಅಷ್ಟೊಂದು ಓಲೈಸುವುದು ಸರಿ ಕಾಣುತ್ತಿರಲಿಲ್ಲ. ಕಮಲಿ ಮಾವನ ಸೇವೆ ಮಾಡುತ್ತಿದ್ದರೆ, ಆತನೊಂದಿಗೆ ನಕ್ಕು ಮಾತಾಡುತ್ತಿದ್ದರೆ ಸಹಿಸಲಾರದೆ ರೇಗುತ್ತಿದ್ದ. ನೇರವಾಗಿ ಹೆಂಡತಿಗೆ ಹೇಳಲಾರದೆ ಅಪ್ಪನನ್ನು ಕಂಡರೆ ಸಿಡುಕುತ್ತಿದ್ದ. ಹೀಗ್ಯಾಕೆ ಅಂತ ಮೊದಮೊದಲು ಈರೇಶನಿಗೆ ಅರ್ಥವೇ ಆಗುತ್ತಿರಲಿಲ್ಲ. ನಿಧಾನವಾಗಿ ಅರ್ಥವಾಗತೊಡಗಿತು. ಈರೇಶನಿಗೆ ಭೂಮಿ ಮೇಲೆ ಬದುಕುವುದೇ ಬೇಡವೆನಿಸಿಬಿಟ್ಟಿತು. ಹೆತ್ತ ಮಗನಿಗೆ, ತನ್ನ ಹೆತ್ತ ತಂದೆಯ ಮೇಲೆಯೇ ಸಂಶಯ. ಅಪ್ಪನನ್ನು ನಂಬಲಾರ. ಆಡಲಾರದೆ ಮುಸುಕಿನಲ್ಲಿಯೇ ಗುದ್ದುತ್ತಿದ್ದಾನೆ. ಎಂದಾದರೊಮ್ಮೆ ನೇರವಾಗಿ ಆರೋಪಿಸಲಾರನೇ ಎನಿಸಿ ಬೆಚ್ಚಿದನು.
ಈ ನೋವಿನಲ್ಲಿರುವಾಗಲೇ ನಾಗಮ್ಮ ಹಾಸಿಗೆ ಹಿಡಿದ ಸುದ್ದಿ ತಿಳಿದವನೇ, ಮಗನಿಗೆ ಅಂಜದೆ ಹೊರಟುಬಿಟ್ಟ. ಕೊನೆಗಾಲದಲ್ಲಿದ್ದ ನಾಗಮ್ಮ ಒಂಟಿಯಾಗಿ ಪರಿತಪಿಸುತ್ತಿರುವುದನ್ನು ಕಂಡು, ನಿಸ್ವಾರ್ಥದಿಂದ ಸೇವೆ ಮಾಡಿದನು. ನಾಗಮ್ಮಳನ್ನು ಈ ಪರಿಸ್ಥಿತಿಯಲ್ಲಿ ನೋಡಿಕೊಳ್ಳುವುದು ತನ್ನ ಕರ್ತವ್ಯವೆಂದು ಬಗೆದು ಹಗಲಿರುಳು ಸೇವೆ ಮಾಡಿ ನಾಗಮ್ಮ ಸಂತೃಪ್ತಿಯಾಗಿ ಕಣ್ಮುಚ್ಚುವಂತೆ ಮಾಡಿ, ಆಕೆಯ ಅಂತ್ಯ ಸಂಸ್ಕಾರವನ್ನು ಮಾಡಿಯೇ ಮನೆಗೆ ಬಂದರೆ ಮಗ ಮನೆಯೊಳಗೆ ಬಾರದಂತೆ ತಡೆದ. ಸೊಸೆ ಕಣ್ಣೀರು ಹಾಕುತ್ತಾ ಗಂಡನನ್ನು ಬೇಡುತ್ತಿದ್ದರೂ ಬಾಗಿಲು ಹಾಕಿಯೇಬಿಟ್ಟಾಗ ಈರೇಶನಿಗೆ ಬದುಕು ಬೇಡವೆನಿಸಿ ಸಾಯಬೇಕೆಂದು ನಿರ್ಧರಿಸಿ, ಅಲ್ಲಿಂದ ಹೊರಟುಬಿಟ್ಟ ಹಾಗೆ ಹೊರಟವನಿಗೆ ಎಲ್ಲಿಗೆ ಹೋಗಬೇಕು ಎಂಬುದು ತಿಳಿಯದೆ ರಸ್ತೆಯುದ್ದಕ್ಕೂ ನಡೆಯುತ್ತಲೇ ಇದ್ದವನಿಗೆ ದೂರದಲ್ಲಿ ಬರುತ್ತಿದ್ದ ಕಾರಿನಡಿ ಸಿಕ್ಕು ಪ್ರಾಣ ಬಿಡಬೇಕೆಂದು ಕಾರು ಹತ್ತಿರವಾಗುತ್ತಿದ್ದಂತೆ ಕಾರಿನತ್ತ ನುಗ್ಗಿಯೇ ಬಿಟ್ಟ. ಆ ಕಾರು ‘ನಮ್ಮ ಮನೆ’ಯ ವೆಂಕಟೇಶ್‌ರವರು ಕಾರಾಗಿತ್ತು. ಎದುರಿಗೆ ಬಂದ ಈರೇಶನನ್ನು ಉಳಿಸಲು ಕಾರಿನ ಡೈವರ್ ಸಡನ್ ಆಗಿ ಬ್ರೇಕ್ ಹಾಕಿದ. ಆದರೂ ಕೊಂಚ ಈರೇಶನನ್ನು ತಾಗಿ, ಹೆಚ್ಚಾಗಿ ರಕ್ತ ಹರಿಯಿತು. ತತ್ ಕ್ಷಣವೇ ಈರೇಶನನ್ನು ತಮ್ಮ ಕಾರಿನಲ್ಲಿಯೇ ಆಶ್ರಮಕ್ಕೆ ಕರೆತಂದು ಚಿಕಿತ್ಸೆ ನೀಡಿ ಮರುಜೀವ ನೀಡಿದರು. ಜತೆಗೆ ಆಶ್ರಮದಲ್ಲಿ ಕೆಲಸ ಕೊಟ್ಟು, ಬದುಕಿಗೆ ಭರವಸೆ ತುಂಬಿ, ಇಲ್ಲಿನ ವೃದ್ದರೊಂದಿಗೆ ಈರೇಶನನ್ನೂ ಸೇರಿಸಿದರು. ಸಮವಯಸ್ಸಿನವರೊಂದಿಗೆ ತನ್ನೆಲ್ಲ ನೋವನ್ನು ಮರೆತು, ತನ್ನಂತೆ ನೊಂದವರ ಸೇವೆ ಮಾಡುತ್ತ, ಅವರಿಗೆ ಸಾಂತ್ವನ ನೀಡಿ ತನ್ನ ಬೇಗುದಿಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದ. ದೇಹದಲ್ಲಿ ಕಸುವು ಅಲ್ಪ-ಸ್ವಲ್ಪ ಇನ್ನೂ ಉಳಿದಿದ್ದುದರಿಂದ ತೋಟದ ಕೆಲಸವನ್ನು ವಹಿಸಿಕೊಂಡು ಆಶ್ರಮಕ್ಕೆ ಬೇಕಾಗಿ ಉಳಿಯುವಷ್ಟು ತರಕಾರಿ ಬೆಳೆಯುತ್ತಿದ್ದ. ಈರ್‍ಏಶ ಇಲ್ಲಿಗೆ ಬಂದ ಮೇಲೆಯೇ ಆಶ್ರಮದ ಜಾಗದಲ್ಲಿ ತರಕಾರಿ ಬೆಳೆಸುವ ಆಲೋಚನೆ ಬಂದದ್ದು. ಹಾಗಾಗಿಯೇ ಈರೇಶನ ಸಹಾಯಕ್ಕಾಗಿ ಇನ್ನಿಬ್ಬರು ಮಾಲಿಗಳನ್ನು ನೇಮಿಸಿ ವೆಂಕಟೇಶ್‌ರವರು ಆದಾಯ ಪಡೆಯುವಂತಾದರು. ಈರೇಶ ಬರಬರುತ್ತಾ ಎಲ್ಲರ ಬಾಯಲ್ಲಿ ಈರಜ್ಜ ಆದ.
ತನ್ನೂರನ್ನೂ ಮಗ-ಸೊಸೆಯನ್ನು ಬಿಟ್ಟು ಬಂದಿದ್ದರೂ ಅಲ್ಲಿನ ಸೆಳೆತ ತಪ್ಪಿರಲಿಲ್ಲ. ಮೊಮ್ಮಗ ಹುಟ್ಟಿದ್ದಾನೆ ಅಂತ ಗೊತ್ತಾದ ಮೇಲಂತೂ ಸೊಸೆಯ ತವರು ಮನೆಗೇ ಹೋಗಿ ಮಗುವನ್ನು ನೋಡಿಕೊಂಡು, ದುಡಿದಿದ್ದ ಹಣವನ್ನೆಲ್ಲ ಮಗುವಿನ ಕೈಗಿಟ್ಟು ಬಂದಿದ್ದ. ಅಪ್ಪ ಮಗುವನ್ನು ಹೆಂಡತಿಯ ಮನೆಗೆ ಬಂದು ನೋಡಿ ಹೋದದ್ದು ಗೊತ್ತಾದ ಮಗರಾಯ, ಥಕಥಕನೆ ಕುಣಿದಿದ್ದ. ಸೊಸೆ ಕಣ್ಣೀರಿಡುತ್ತಾ ಎಲ್ಲವನ್ನೂ ಹೇಳಿದ ಮೇಲೆ ಮನಸ್ಸು ಬಿಗಿ ಹಿಡಿದು ಹೋಗುವುದನ್ನೇ ಬಿಟ್ಟಿದ್ದ. ನಾಲ್ಕು ವರ್ಷ ಅತ್ತ ತಲೆ ಹಾಕಿರಲೇ ಇಲ್ಲ. ಊರಿನವರ್ಯಾರೋ ಸಿಕ್ಕಿ ರಂಗನಾಥನಿಗೆ ಈಗ ಹೆಣ್ಣು ಮಗುವಾಗಿದ್ದು, ಅದು ಅಜ್ಜಿಯನ್ನೇ ಹೋಲುತ್ತಿದ್ದು, ಗೌರಿಯೇ ಮತ್ತೊಮ್ಮೆ ಹುಟ್ಟಿ ಬಂದಿದ್ದಾಳೆ ಎಂದು ಹೇಳಿದ ಮೇಲಂತೂ ಮಗುವನ್ನು ನೋಡದೇ ಇರದಾದ. ಮಗ ಏನಾದರೂ ಅಂದುಕೊಳ್ಳಲಿ, ತನ್ನ ಗೌರಿಯನ್ನು ನೋಡಿಯೇ ನೋಡುತ್ತೇನೆಂದು ಭಂಡನಂತ ಮಗ ಇಲ್ಲದ ಸಮಯ ನೋಡಿ ಹೋಗಿ ಬಂದ. ಆಗ ಮತ್ತೊಮ್ಮೆ ಗಂಡ-ಹೆಂಡತಿಯರಿಗೆ ಯುದ್ದ. ಮಗನಿಗೆ ಅಪ್ಪನ ಮೇಲೆ ಸಂಶಯ, ಈತ ಬರುವುದು ತನ್ನ ಹೆಂಡತಿಯ ಮೇಲಿನ ಆಸೆಯಿಂದಲೇ, ಮೊದಲೇ ಕಚ್ಚೆ ಹರುಕ, ಹೆಂಗಸರನ್ನು, ಅದರಲ್ಲೂ ಚಿಲುವೆಯಾದ ಹೆಂಗಸರನ್ನು ಕಂಡರೆ ಸುಮ್ಮನಿರುವನೇ? ಮನೆಗೆ ಸೇರಿಸಿದರೆ ಮನೆ ಬಿಟ್ಟು ಓಡಿಸುವುದಾಗಿ ಬೆದರಿಸಿದ್ದ. ಸೊಸೆ ಕಣ್ಣೀರಿಡುತ್ತ ಎಲ್ಲವನ್ನೂ ಹೇಳಿ, ಇನ್ನೆಂದೂ ಇತ್ತ ಬರಬೇಡಿ ಎಂದು ಕೈಮುಗಿದು ಬೇಡಿದ್ದಳು. ಅಂದೇ ಮಗ-ಮೊಮ್ಮಕ್ಕಳ ಆಸೆಗೆ ತರ್ಪಣವೆರೆದಿದ್ದ.
ಎಲ್ಲವನ್ನೂ ಮರೆತು, ಎಲ್ಲರನ್ನೂ ಮರೆತು ‘ಕಾಯಕವೇ ಕೈಲಾಸ’ ಎಂದು ತನ್ನ ಕಾಯಕದಲ್ಲಿಯೇ ಮೈಮರೆಯುತ್ತ ಈರೇಶ ಇಲ್ಲಿ ಎಲ್ಲರಿಗೂ ಈರಜ್ಜನಾಗಿದ್ದ. ತನ್ನಂತೆಯೇ ನೊಂದವರನ್ನು ಕಂಡು ಅವರ ನೋವಿನ ಮುಂದೆ ತನ್ನ ನೋವೇನು ಎಂದು ಅವರನ್ನು ಸಂತೈಸುತ್ತ ಕಾಲ ಹಾಕುತ್ತಿದ್ದ. ಬೆಳಗ್ಗೆಯಿಂದ ಸಂಜೆವರೆಗೂ ಮೈಮರೆತು ದುಡಿಯುತ್ತಿದ್ದ ಈರಜ್ಜನಿಗೆ ರಾತ್ರಿ ಮಲಗಿದೊಡನೆ ಬರುತ್ತಿದ್ದ ನಿದ್ರೆ ಇತ್ತೀಚೆಗೆ ಬರದಾಗಿತ್ತು. ಇಡೀ ರಾತ್ರಿ ನಿದ್ರೆ ಇಲ್ಲದೆ ಹೊರಳಾಡುತ್ತ ಬೆಳಗು ಹರಿಸುತ್ತಿದ್ದ. ಆ ಸಮಯದಲ್ಲಿಯೇ ಮೊಮ್ಮಕ್ಕಳು ಕಾಡತೊಡಗುತ್ತಿದ್ದರು. ಮಗನ ವರ್ತನೆಗೆ ರೋಸಿಹೋಗಿದ್ದವನಿಗೆ, ಮೊಮ್ಮಕ್ಕಳು, ಅವರ ಮೇಲಿನ ಪ್ರೀತಿ ಊರಿನತ್ತ ಸೆಳೆಯತೊಡಗಿತ್ತು. ದುಡಿದದ್ದೆಲ್ಲವೂ ಬ್ಯಾಂಕಿನಲ್ಲಿತ್ತು. ಅವನಿಗಾದರೂ ಏನಿತ್ತು ಖರ್ಚು? ಊಟ, ತಿಂಡಿ ಎಲ್ಲರೊಂದಿಗೆ ಇಲ್ಲಿಯೇ ಆಗುತ್ತಿತ್ತು. ಎಲ್ಲೋ ಮೂಲೆಯಲ್ಲಿ ರಾತ್ರಿ ಮಲಗುತ್ತಿದ್ದ. ಸಂಬಳವೇ ಬೇಡವೆಂದರೂ ವೆಂಕಟೇಶ್‌ರವರು ಒಪ್ಪದೆ, ಮುಂದೆ ಬೇಕಾಗಬಹುದು. ಆಗ ಯಾರು ಕೊಡುತ್ತಾರೆ? ಶ್ರಮಪಡುತ್ತೀಯಾ ಅದಕ್ಕೆ ಪ್ರತಿಫಲ ತೆಗೆದುಕೋ. ಬೇರೆ ಯಾರೇ ಇದ್ದರೂ ಕೊಡಲೇ ಬೇಕಿತ್ತಲ್ಲವೇ ಎಂದು ಒಂದಿಷ್ಟು ಹಣವನ್ನು ಅವರ ಕೈಗಿಡುತ್ತಿದ್ದರು. ಅದೆಲ್ಲವನ್ನೂ ಬ್ಯಾಂಕಿಗೆ ವೆಂಕಟೇಶ್‌ರವರ ಸಲಹೆಯಂತೆ ಹಾಕುತ್ತಿದ್ದ.
ಈ ಮುದುಕನಿಗ್ಯಾಕೆ ಅಷ್ಟೆಲ್ಲ ಹಣ ಎಂದುಕೊಳ್ಳುತ್ತಿದ್ದ, ಈಗೀಗ ಮಕ್ಕಳನ್ನು ನೋಡಬೇಕೆಂಬ ಆಸೆ ಹೆಚ್ಚಾಗಿ ಕೊನೆಗೂ ಊರಿಗೆ ಹೊರಟುನಿಂತ. ಒಂದಿಷ್ಟು ಹಣ ಬ್ಯಾಂಕಿನಿಂದ ತೆಗೆದುಕೊಂಡು ಸಡಗರದಿಂದ ಎಲ್ಲರಲ್ಲಿಯೂ ಹೇಳಿಕೊಂಡು, ತಾನು ಹದಿನೈದು ದಿನ ಊರಿನಲ್ಲಿದ್ದು ಬರುತ್ತೇನೆ ಎಂದು ಹೊರಟ. ಈಗಾಗಲೇ ತನಗಿಷ್ಟು ವಯಸ್ಸಾಗಿದೆ. ಮಗ ಇನ್ನು ತನ್ನನ್ನು ಅಪಾರ್ಥ ಮಾಡಿಕೊಳ್ಳಲಾರ. ಜತೆಗೆ ಹಣ ತೆಗೆದುಕೊಂಡು ಹೋಗುತ್ತಿದ್ದೇನೆ. ಅದರ ಆಸೆಗಾದರೂ ನನ್ನ ನಾಲ್ಕು ದಿನ ಇಟ್ಟುಕೊಂಡಾನೆಂಬ ನಂಬಿಕೆ, ಭರವಸೆಯಿಂದ ಹೋದವನಿಗೆ ಭ್ರಮನಿರಸನವಾಗಿತ್ತು. ಮಗ ಎಂದಿಗೂ ಬದಲಾಗಲೇ ಇಲ್ಲ ಎನ್ನುವ ಸತ್ಯ ತಿಳಿದು ವಾಪಸ್ಸು ಬಂದಿದ್ದ. ಇನ್ನೆಂದಿಗೂ ಮಗ ಬದಲಾಗಿ, ತನ್ನನ್ನು ‘ಅಪ್ಪಾ’ ಎಂದು ಆದರಿಸಿಯಾನು ಎಂಬ ಕನಸು ಕರಗಿ ಹೋಗಿತ್ತು. ಇನ್ನೆಂದೂ ತೆರೆಯದ ಮಗನ ಮನೆಯ ಬಾಗಿಲನ್ನು ತಾನು ಮತ್ತೆ ತಟ್ಟಬಾರದೆಂಬ ವಿವೇಕ ಹುಟ್ಟಿ, ಮಾನಸಿಕವಾಗಿ ಮಗ-ಸೊಸೆ-ಮೊಮ್ಮಕ್ಕಳ ಮಮಕಾರದ ಪಾಶವನ್ನು ಕತ್ತರಿಸಿಕೊಂಡು ತನ್ನವರೇ ತನ್ನನ್ನು ನೋಡಿಕೊಳ್ಳಬೇಕು, ತಾನು ತನ್ನವರೊಂದಿಗೇ ಇರಬೇಕು ಎಂಬ ಸ್ವಾರ್ಥವನ್ನು ದೂರ ಮಾಡಿಕೊಂಡನು. ಇಲ್ಲಿರುವವರೇ ನನ್ನವರು, ಯಾರು ಪ್ರೀತಿ, ವಿಶ್ವಾಸ ತೋರಿಸುತ್ತಾರೋ ಅವರೇ ರಕ್ತಸಂಬಂಧಿಗಳು ಎಂಬ ಸಿದ್ಧಾಂತಕ್ಕೆ ಬಂದ ಇನ್ನುಳಿದ ದಿನಗಳನ್ನು ನೆಮ್ಮದಿಯಾಗಿ ಕಳೆಯಬೇಕೆಂದು ನಿರ್ಧರಿಸಿಕೊಂಡ.
*****