ಬಂಗಾಳಕ್ಕೆ ಬಾಲ್ಯದಿಂದ
ಬೆಳಕಿನ ಕನಸು,
ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ
ಎಲ್ಲದರಲ್ಲಿ
ಅದನ್ನೇ ಅರಸುವ ಮನಸು,
ಆಕಾಶದಂಗಳದಲ್ಲಿ
ಬಿಕ್ಕಿದ ಅಕ್ಕಿಕಾಳನ್ನೆಲ್ಲ
ಹೆಕ್ಕಿ ತರುವ ಹಬ್ಬಯಕೆ
ಈ ಹಕ್ಕಿಗೆ,
ಹೀಗಿದ್ದೂ ಅದನ್ನು
ಸುತ್ತಿ ನಿಂತ ಪಂಜರ
ಬಿರುಸು.
ಆದರೆ
ಮಾಯದ ಬಯಕೆ ಸಾಯುವುದಿಲ್ಲ,
ಬಣ್ಣ ಬಣ್ಣದ
ರಾಗ ನೇಯುತ್ತದೆ;
ನೋವು ನರಳು
ಕೋಪ ಕೆರಳು
ಬಿಗಿಯುವ ಉರುಳು ಬೆರಳು ಎಲ್ಲ
ಪೀತಾಂಬರ ಪೇಟೆ ತೆರೆಯುತ್ತವೆ;
ಆಸೆ ನೆಲವಾಗುತ್ತದೆ
ಹಾಸಿ ಜಲವಾಗುತ್ತದೆ
ಬೀಸಿ ಎಲರಾಗುತ್ತದೆ
ಉಣ್ಣುವ ಅನ್ನದಲ್ಲಿ ಸೇರಿ
ನಾಡಿನ ಉಸಿರಾಗುತ್ತದೆ.
ಆಗ ಪ್ರಾಣಕ್ಕೆ ಕವಡೆ ಬೆಲೆ
ಭಯ ದೈನ್ಯ ಲೋಭದಿಂದ
ಹಠಾತ್ ಬಿಡುಗಡೆ
ಸಾವಿನ ಬಾವಿಗಂಟಲಿಗೆ ಸುರಿದು ಹೋಗುತ್ತದೆ
ಪ್ರಾಣದ ನಿರರ್ಗಳ ಅಮೃತಧಾರೆ.
ಮೊನ್ನೆ
ಋತು ಕೆರಳಿತು ಬಂಗಾಳದಲ್ಲಿ.
ಮಾಗಿಯ ಕೊರೆತದಲ್ಲಿ
ಎಲ್ಲ ಕಡೆ ಬೋಳುಮರ, ಬಂಗಾಳದಲ್ಲಿ ಚಿಗುರು
ಕರುಳಿರಿಯುವ ಚಳಿಗೆ
ಭೂಗೋಳ ರಗ್ಗು ಹೊದ್ದಿದ್ದಾಗ
ಬಂಗಾಳಿಯ ಮೈಯಲ್ಲಿ ಕೆಂಪು ಬೆವರು;
ಹುಡುಗರ ಬಾಳೆಮೈ
ಹೂ ಬಿಟ್ಟ ಮುತ್ತುಗ,
ಹೆಣ್ಣಿನ ಮಾನ ಮೈ
ಕೀಚಕ ಕ್ರೀಡೆಗೆ ಗಜ್ಜುಗ,
ಎಂದಿನದೋ ಕಿಡಿ ಕೆರಳಿ
ದಳ ದಳ ದಳ ದಳ ಅರಳಿ
ಮೊಹರಂ ಕುಂಡ
ಭಾರಿ ಹೊಗೆ ಹಬ್ಬಿ
ಜಗತ್ತನ್ನೇ ತಬ್ಬಿ
ಪಶ್ಚಿಮದಲ್ಲಿ ಕೊಂಚ ಗೊಂದಲ
ಬೆಳಿಗ್ಗೆ ಎಲ್ಲ ಎದ್ದು
ಕಣ್ಣುಜ್ಜಿ ನೋಡುವಾಗ
ನಗುತ್ತಿದೆ ಪೂರ್ವದಲ್ಲಿ
ಬೆಳಕು ಮುಡಿದ ಬಂಗಾಳ *
*****
* ಬಾಂಗ್ಲಾದೇಶ ಸ್ವತಂತ್ರವಾದ ದಿನ ಬರೆದದ್ದು