ಬೆಟ್ಟದ ನೆತ್ತಿಗೆ ಕಿರೀಟವಿಟ್ಟ ಬಿಸಿಲು
ಕಪ್ಪಗೆ ದೂರ ನೆಲಕ್ಕೆ ಜಾರಿದ ಮುಗಿಲು
ಮತ್ತೆ ಮತ್ತೆ ಮೇಲೆ ಚಿಗಿವ ಆಲದ ಬಿಳಲು
ಬಿಕ್ಕುತ್ತವೆ ಹಠಾತ್ತನೆ ನಿನ್ನ ಮುಖ ಕೈಕಾಲು
ಹೊಳೆದ ಗಳಿಗೆ ಮೈಯುದ್ದ ಬೆಳೆದು
ಪರವಶ ನೀನು
ಬೆಳೆದ ಗಳಿಗೆ ಕೊರಳುಬ್ಬಿ ಬಂದು
ಧರೆ ಕಪಿಲವಸ್ತು
ಪಡೆದ ಭಾವ ಕಡಲಗಲ ಬೆಳೆದು
ಶಾಂತಿರಸ್ತು
ಆದರೆ
ಗಾಂಧಿ ಬರಿ ಮಿಂಚು ಮಿಂಚಿನಂತೆ ಧಗೆ
ಒಂದೆ ಗಳಿಗೆ
ಗಾಂಧಿ ಸಂಜೆಬಗೆ, ಒಂದೆ ಕ್ಷಣದ ನಗೆ
ಮತ್ತೆ ಇರುಳಿಗೆ
ಇರುಳು ಧರಿಸುವುದೂ ಹಗಲ ಗರ್ಭವನೆ
ಮತ್ತೆ ಬೆಳಕಿಗೆ
ಹುಟ್ಟು ಸಾವುಗಳ ಚಿತ್ರಕೂಟದಲಿ
ಚಿತ್ತ ಚಕ್ರಸುಳಿಗೆ.
*****