ಏನು ಆಟವೋ ಕೃಷ್ಣ ನಿನ್ನ ಮಾಟವು…
ಕೆಂಪು ತುಟಿಯಲಿ ಕೊಳಲ ನುಡಿಸುತ
ಮುಗ್ಧ ಬಾಲೆಯರ ಸೆಳೆಯುವಂತಹ
||ಏನು ಆಟವೋ||
ಕಣ್ಣ ನೋಟವೋ ಮದನ ಬಿಟ್ಟ ಬಾಣವೋ…
ಜೋಡಿ ಕಂಗಳಲಿ ಮೋಡಿ ಮಾಡುತ
ಬಳುಕು ಬೆಡಗಿಯರ ಕರೆಯುವಂತಹ
||ಕಣ್ಣ ನೋಟವೋ||
ನೀಲ ವರ್ಣವೋ ಗಗನ ಎರೆದ ಲಾಸ್ಯವೋ…
ಮೈಯ ಬಣ್ಣದಲಿ ಸ್ಫೂರ್ತಿ ಸೂಸುತ
ನವಿಲ ತರುಣಿಯರ ಕುಣಿಸುವಂತಹ
||ನೀಲ ವರ್ಣವೋ||
ಎಂಥ ಚೆಂದವೋ ನುಡಿವ ಮಾತಿನಂದವು…
ಮಧುರ ಮಾತಿನಲಿ ಪ್ರಣಯ ಬೀರುತ
ಚೆಲುವ ಚೆನ್ನಿಯರ ಗೆಲ್ಲುವಂತಹ
||ಎಂಥ ಚೆಂದವೋ||
ವಿಶ್ವ ರೂಪವೋ ಧರೆಗೆ ಇಳಿದ ನಾಕವೋ…
ಸೌಮ್ಯ ರೂಪಿನಲಿ ಧರ್ಮ ಕಾಯುತ
ಹೃದಯ ಹೃದಯದಲು ರಾಗ ತಂದವ
||ವಿಶ್ವರೂಪವೋ||
*****