ಹತ್ತೂ ಜನರು ಓದಿಯಾದ ಮೇಲೆ
ನನ್ನ ಕೈಸೇರಿತು ಮಹಮದನ ಪತ್ರ
ತನ್ನೂರಿನ ಬಗ್ಗೆ
ತನ್ನ ಅಕ್ಕ ತಂಗಿಯರ ಬಗ್ಗೆ
ಮಲ್ಪೆಯ ಮೀನು, ಸಮುದ್ರದ ಹಿನ್ನೀರು
ಗೇರು ಹಣ್ಣು, ಗುಳ್ಳದ ಬಗ್ಗೆ
ಏನೆಲ್ಲ ಅಚ್ಚ ಕನ್ನಡದಲ್ಲಿ
ಬರೆದಿದ್ದ ಪತ್ರ
‘ಈದ್’ಗೆ ಮನೆಗೆ ಬರಲೇಬೇಕೆಂದು
ಕೇಳಿಕೊಂಡಿದ್ದ ಪತ್ರ
ಅದರಲ್ಲಿ ಪ್ರೇಮದ ವಿಷಯವೇನೂ
ಇರಲಿಲ್ಲವಾದರೂ
ಅದು ಪ್ರೇಮ ಪತ್ರವೆಂದು
ಮುದ್ರೆ ಒತ್ತಲ್ಪಟ್ಟಿತು
ಮಹಮದನಿಗೆ ಗುದ್ದು
ನನಗೆ ಎಚ್ಚರಿಕೆ
ಹತ್ತು ಹಲವು ಹದ್ದುಗಳು
ನನ್ನ-ಅವನ
ಚಲನವಲನದ ಬಗ್ಗೆ
ನಿಗಾ ಇಡುವಂತಾಯಿತು
ಒಮ್ಮೆ ಮಹಮದನನ್ನು
ಭೇಟಿಯಾಗಬೇಕು
‘ಪ್ರೇಮ ಭಾವ’
ಅರಳಿಸಿದ್ದಕ್ಕೇ
ಕ್ಷಮೆ ಬೇಡಬೇಕು ಎಂದೆಲ್ಲಾ
ಅಂದುಕೊಂಡೆನಾದರೂ…
ಪ್ರತಿಬಾರಿ…
ನಮ್ಮಿಬ್ಬರ ನಡುವೆ
ಮಸೀದಿಯ ಗುಡ್ಡ
ಅಡ್ಡ ಬರುತ್ತಿತ್ತು
ಅದೊಂದು ದಿನ-
ದೊಡ್ಡ ದೇವರ ಪಲ್ಲಕ್ಕಿ ಉತ್ಸವ
ಇಬ್ಬರನೂ ಸೀಳಿಕೊಂಡು
ಹೊರಟು ಹೋಯಿತು!
ಹೂವಿನಷ್ಟೇ ತಾಜ-ಕೋಮಲ
ಮಹಮದನ ಪ್ರೇಮ
ವಜ್ರದಷ್ಟೇ ಕಠಿಣ-ಕಠೋರ
ಸುತ್ತಣ ಜನರ ಆತ್ಮ…
ಗಾಳಿ-ಬೆಂಕಿ ಸೇರಿಕೊಂಡು
ತನಗೆ ತಾನೇ ಕೂಡಿಕೊಂಡು
ಎಷ್ಟು ಸುತ್ತು ಉರಿದರೇನು
ಎಷ್ಟು ಹೊತ್ತು ಉರಿದರೇನು
ಉರಿಯೊಳಗೆ ಬಿರಿಯುತ್ತಿತ್ತು
ಬಿರಿದು ತಾನೇ ಬೆಳಗುತ್ತಿತ್ತು
ಪ್ರೇಮ ಪುಷ್ಪ ಅರಳುತ್ತಿತ್ತು.
*****