ಕೇಳೊ ಗೆಳೆಯ ಕೇಳೊ ಕತೆಯ
ಉರಿ ಹತ್ತಿದ ಕಟ್ಟಿಗೆ
ಇದ್ದಿಲಾದ ವ್ಯಥೆಯ.
ಕನ್ನಡದ ಕಾಡಿನಲಿ ಏಸೊಂದು ಮರಗಳು
ಸಿರಿಗಂಧವೊಂದೇ ರಾಜನೇನು?
ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ
ಕನ್ನಡದ ಜಾಲೀಮರ ಬಲ್ಲೆಯೇನು?
ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ
ಕನ್ನಡದ ಕಲ್ಪತರು ನೋಡು ಗೆಳೆಯ
ಸಾಹುಕಾರರಿಗೆಲ್ಲ ಸಿರಿಗಂಧ ಬೇಕು
ಕೇಳುವರೆ ಗತಿಯಿಲ್ಲ ಕನ್ನಡದ ಕತೆಯ.
ಹೊಲದ ಕಾವಲಿಗಾಗಿ ಬೇಲಿ ಭಟನಾಗಿ
ಜಾಲಿಯದೆ ಜಯಘೋಷ
ತಣ್ಣೀರ ಕಾಯಿಸುವ ಸೌದೆಯಾಗಲು ಸಿದ್ಧ
ಸುತ್ತಿಕೊಂಡಿತು ಸರ್ಪ ಕಣ್ಣೀರ ಪಾಶ.
ಕನ್ನಡದ ಕಟ್ಟಿಗೆಯು ಇದ್ದಿಲಾಯಿತು ಇಲ್ಲಿ
ಗೆದ್ದ ಗದ್ದುಗೆಯೆ ನಗಬೇಡ ನೀನು
ಬಿದ್ದ ಇದ್ದಿಲಿನಲ್ಲಿ ಬೆಂಕಿ ಮೌನವಾಗಿಹುದು
ಕೆಂಪು ಕೆಂಡದ ಬೆಳಕು ಬಂದೀತು ಜೋಕೆ!
ಗರ ಬಡಿದು ಗದ್ದುಗೆಯು ಬಿದ್ದೀತು ನೆಲಕೆ!
*****