ಯಾವುದೀ ಒಳಗಿನ ಲೋಕ
ಹೊರಗೆ ಲಯವಾಗುತ್ತ ಒಳಗೆ
ಹುಟ್ಟುತಿಹುದು.
ಒಳಗೆ ಮೂಡಿದ ಆಕೃತಿ
ಹೊರಗೆ ಕೃತಿಯಾಗುತ್ತಿಹುದು.
ಸತ್ತ ಜೀವಗಳ ಮೇಲೆ ಚಿತ್ತವಿಟ್ಟವರಾರು
ಭೂಮಿಯಲ್ಲಿ ಎಲ್ಲರೂ ಬೆಂಕಿ ಬೆಳೆದವರು
ಅಗ್ನಿಸುತೆ ಸೀರೆಯಲಿ ಸಂಕಟವ ಬಿಚ್ಚಿಕೊಳ್ಳುತ್ತಿರುವಾಗ
ಬಾಯಿ ಕಚ್ಚಿಕೊಂಡರು ನಮ್ಮ ಪುಣ್ಯಪುರುಷರು!
ಸೀತೆಸೀರೆಯ ಗಂಟು ಬಿಚ್ಚಿಕೊಳ್ಳಲಿಲ್ಲ
ಬೆಚ್ಚಿಬಿದ್ದರು ನೀತಿವಂತರು ರಾವಣನ ಹೆಸರಿಗೆ
ಹೊರಗೆ ಏಕಲವ್ಯನ ಹೆಬ್ಬೆರಳು ಕೆಂಬೆವರು
ಮುಂದೆ ಬರೆಯಿತು ಕರ್ಣರಥವ ಕರಿನೆತ್ತರು.
ಪುರಾಣಕ್ಕೆ ಮಾಡಿದ ಕಸಿ ಇತಿಹಾಸವಾಗಿ
ಸಮಕಾಲೀನದಲ್ಲೂ ಬುದ್ಧಿ-ಬಲದ ಅಟ್ಟಹಾಸ!
ಯಾರು ರಾವಣ, ಯಾರು ರಾಮ
ಯಾರು ಕೌರವ, ಯಾರು ಧರ್ಮ, ದ್ರೋಣ?
ಯಾರದೊ ಬಿಲ್ಲು ಯಾರದೊ ಬಾಣ
ಮಾರಾಟಕ್ಕಿದೆ ಬೆವರಿನ ಪ್ರಾಣ!
ಪುರಾಣೇತಿಹಾಸದ ಪುಣ್ಯಾರ್ಚನೆಯಲ್ಲಿ
ಒಳತಿರುಳ ಸುಟ್ಟು
ಅರ್ಥಶೋಧಕ್ಕೆ ಹಾಕಿದರು ಕಣ್ಣುಕಟ್ಟು.
ಹೊರಗಿನ ಹುನ್ನಾರ ಲಯವಾಗುತ್ತ ಹೋದಂತೆ
ಒಳಗು ಬಿಚ್ಚಿಕೊಳ್ಳುತ್ತದೆ ಸಿಪ್ಪೆ ಸುಲಿದು
ಬೀಜ ಬೆಳೆಯುತ್ತದೆ ಹುಟ್ಟಿನಲ್ಲಿ ಸಾಯುತ್ತ
ಸಾವಿನಲಿ ಹುಟ್ಟುತ್ತ ಜೀವರೂಪವ ತಳೆದು.
*****