ಎತ್ತ ಹೋದನಮ್ಮ?
ನಮ್ಮಯ ಕೃಷ್ಣಾ
ಎತ್ತ ಹೋದನಮ್ಮ|
ನಾವು ಅವನಕೂಡೆ
ಆಡೆ ಬಂದೆವಮ್ಮ||
ಅವನು ಏಲ್ಲಿ ಹೋಗುವಂತಿಲ್ಲ
ಅವನ ನಾನು ಬಿಡುವುದೂ ಇಲ್ಲ|
ಅವನ ತರಲೆ ಕೇಳಿ ಕೇಳಿ
ನನಗಂತೂ ಸಾಕಾಗಿದೆ|
ಅದಕೆ ಅವನ ಕಂಬಕೆ
ಕಟ್ಟಿಹಾಕಿ, ಹಾಲು ಮೊಸರು
ಬೆಣ್ಣೆಯನೆಲ್ಲಾ ದೂರವಿರಿಸಿರುವೆ||
ಅವನದೇನು ತಪ್ಪಿಲ್ಲಮ್ಮ
ಎಲ್ಲಾ ನಮಗಾಗಿಯೇ ಮಾಡಿದನಮ್ಮ|
ಅವನೊಬ್ಬನಿಗೇಕೆ ಇಂಥ ಶಿಕ್ಷೆ
ನಮಗೂ ನೀಡಿ ಅಂತಹುದೇ ಶಿಕ್ಷೆ|
ನಾವು ಅವನ ಬಿಟ್ಟು
ಎಲ್ಲೂ ಹೋಗುವುದೇ ಇಲ್ಲ ||
ಮುದ್ದು ಮಕ್ಕಳ ಮಾತ ಕೇಳಿ
ನಕ್ಕು ಯಶೋಧೆ |
ಶ್ರೀ ಕೃಷ್ಣನ ಕೈಯ ಬಿಡಿಸಿ
ಮಕ್ಕಳ ಮಾಣಿಕ್ಯನ
ಅಪ್ಪಿ ತಾ ಮುದ್ದಿಸಿ|
ಹಾಲು ಮೊಸರನ್ನೆಲ್ಲಾ
ಮಕ್ಕಳಿಗೆ ನೀಡಿ ಆನಂದಿಸಿ|
ಜನ್ಮ ಧನ್ಯತೆಯಿಂದ ಭಾಷ್ಪಿಸಿದಳು||
ಅತ್ತ ಮತ್ತೆ ಕೃಷ್ಣ ಗೆಳೆಯರ ಕೂಡಿ
ಹೊರಗೆ ಓಡಿದನಮ್ಮ
ಮತ್ತೆ ತರಲೆಗಳ
ಸರಮಾಲೆಯನೆ ತಂದನಮ್ಮ ||
*****