ಕಾಡಿನ ಕೋತಿ ಬಿದುರಿನ ಚದುರೆ ಖಾಸ ಬಂಗ್ಲಿ ಬೋನಲ್ಲಿ……….
ವಿಕಾರ! ವಿಕಟ! ನಗೆಗೇಡೆಂದು ಹಳಿವರು ನಾವು ಮಾನವರು!
ಗಡವಮಂಗ, ಬಾಲದಕೋತಿ, ಮೊಂಡು ಬಾಲ, ನೀಲಮೂಗು,
ಈ ಪರಿಯುಂಟು ಮಂಗಗಳು ಹಣ್ಣೆ ತಿಂದು ಜೀವಿಪವು;
ಸಂಶಯ ಬಂತು ಆಕೆಗೆ! ನೀವೇ ನೆಂಬಿರಿ ಉತ್ತಮರೆ?
ಮಾನವರು ನಾವು! ವಾನರರು ಅವು! ಯಾರು ಹೇಳಿ ನಗೆಗೀಡು?
ಕೂದಲು ಉದುರೆ, ಹಲ್ಲು ಕಳಚೆ, ಗುಳ್ಳೆಗಣ್ಣು ಗಜ್ಜುಗವಾಗೆ!
ಚರ್ಮವೊಂದೇ ವ್ಯತ್ಯಾಸ! ವಸ್ತ್ರವೊಂದೇ ವ್ಯತ್ಯಾಸ!
ಎಂಥ ವಿಕಾರ ಅಡಗಿದೆ ಇಲ್ಲಿ ಮಾನವ ದೇಹದಲ್ಲಿ……..!
ಪರಿಯಿಷ್ಟೆ ಇನ್ನೂ ಸೂಕ್ಷ್ಮ ತೋರಿಸಬಲ್ಲೆ -ತೋರಿಸಿ ನಿಮ್ಮ ನೋಯಿಸಲೊಲ್ಲೆ!
ಆದರೆ, ನೋಡಿ, ಒಮ್ಮಾತಿನಲ್ಲಿ ಇದ್ದರೆ ಬೋನಿನ ಒಳಗಡೆ ನಾವು
ಕಾಣುವವೆಷ್ಟೋ ಅವಕಿಂತ ಅ-ವ-ಲ-ಕ್ಷ-ಣ!…………….
ತುಸುವೂ ಇಲ್ಲ ವ್ಯಾಯಾಮ! ಯೌವ್ವನ ಕಳೆಯಲು ಪರಿತಾಪ!
ನುಂಗುವುದಂತೂ ಲಾಡು, ಚಿರೋಟಿ ತಿಂದರೆ ಅರಗದು ನಮಗೇ ಗೊತ್ತು!
ಗುಡ್ಡದ ಗಾತ್ರ, ತಂಬಾಕು ಸೇದಲು ಸಾಲದು ನಿತ್ಯ ನಿತ್ಯ!
ಸಾಗರದಷ್ಟು ಸಾರಾಯಿ ಕುಡಿಯದೆ ತೃಪ್ತಿ ನಮಗೆಲ್ಲಿ?
ಯಾಕೋ ಏನೋ ಯಾರಿಗೆ ಗೊತ್ತು ಮಾನವರೆಲ್ಲರ ಪರಿಯಷ್ಟೆ!
ಕಾಯಗಳನ್ನು ಕಸುವಾಗಿಡಲು ಹಣ್ಣೇತಿಂದು ಇರಬಹುದಲ್ಲ?
ಆದರೆ ನೋಡಿ ಹಣ್ಣೆಲ್ಲ ವಾನರರಾಹಾರ!
ಹಣ್ಣು ಎಂದರೆ ಸಾಮಾನ್ಯ ಅಲ್ಲವು ಕೇಳಿ ನಿವೆಲ್ಲ!
ಬೇಸಿಗೆ ಬಿಸಿಲು, ಮಾಗೀ ಗಾಳೀ, ಭೂಮೀ ಸಾರ, ಜಡಿಮಳೆಯು
ಎಲ್ಲ ಸೇರಿ ಹಣ್ಣಿನ ರೂಪ ತಿಳಿಯದೆ? ನಿಮಗೆ? ಈ ಗುಟ್ಟು?
ದೇಹವ ಶೋಧಿಸಿ, ಮಿದುಳನು ತೊಳೆದು,
ದ್ವೇಷದ ದೋಷದ, ಇಲ್ಲಣ ತೊಡೆದು
ಮಾನವ ದೇಹವ ದೇವರ ಭಾವಕೆ ಸರಿಸಮನೆನಿಸಲು ಹಣ್ಣೇ ಬೇಕು!
ಆದರೆ, ನಾವು ದೇವರ ನೋಡಿಸಿ ಹಾ-ಯಾ-ಗಿ-ಹೆ-ವು!…………….
ಅದಕೇ ತಾನೇ, ಅವು ತಾವಾಗಿ ಕಾಣುತ ನಮ್ಮನುಹರಿದೂ ಹಾರೀ,
ಹತ್ತೀ, ಕುಣಿದೂ!…………..
ಬೆಳಗೂ ಬೈಗೂ, ತಲೆಕೆಳಗಾಗಿ ನೇತುಬಿದ್ದಿವೆ ಬೋನಲ್ಲಿ!
ಮಾಡುತಿಹನೆ ಅಪಹಾಸ್ಯ? ಮಾಡುತಿಹವೆ ನೀತಿಬೋಧೆ?
ನಗರದ ನರರ ಪರಿಮಿಷ್ಟೆ! ಬೋನಿನ ವಾನರರರಿವಷ್ಟೆ
ಅದು ನೋಡಿದರೆ ದೈವತ್ವ! ಅದರ ವಿಕಾರವೆ ನಮಗೆ ಮಹತ್ವ!
*****