ಈಗ ಕೂಡ ಒಮ್ಮೊಮ್ಮೆ
ದೆವ್ವ ಮನೆಗೆ ಬರುತ್ತವೆ ;
ಬರೀ ಕೈಲಿ ಬರುವುದಿಲ್ಲ
ಏನೋ ವಾರೆಂಟ್ ತರುತ್ತವೆ
ನಟ್ಟ ನಡೂರಾತ್ರಿ ;
ಡೈರಿ ಬರೆದ ದಿನವಂತೂ
ಅವು ಬರುವುದು ಖಾತ್ರಿ –
ಝಡತಿಯ ದಂಡದ ಹಾಗೆ,
ಮಿಡತೆಯ ಹಿಂಡಿನ ಹಾಗೆ,
ಕುಕ್ಕಿ ಕುಕ್ಕಿ ಗುಟ್ಟ ಬಗೆವ
ಮರಕುಟುಕನ ಹಾಗೆ.
ದೆವ್ವಕ್ಕ ಕಿಚ್ಚೇ ಕಣ್ಣು
ಧಗ ಧಗ ಜ್ವಲಿಸುತ್ತವೆ;
ಚಿತ್ತದ ಪಾತಾಳಗಳೂ
ಅವಕ್ಕೆ ತೆರೆಯುತ್ತವೆ;
ಒಳಗೇ ಆಡುವ ಆಸೆಯ
ಕಬ್ಬಿನ ಆಲೆಗಳು,
ಬೆಳಕೇ ಹಾಯದ ಕಾಮದ
ನಿಗೂಢ ಕಾಡುಗಳು,
ಮೈ ಕೈ ಕಾಯಿಸಬಾರದ
ಗಂಜಿಯ ಬೇಯಿಸಬಾರದ
ಹೆಣಕ್ಕೆ ಹಚ್ಚಿದ ಕಿಚ್ಚಿನ
ಮೈಲಿಗೆ ಜ್ವಾಲೆಗಳು,
ಕಾಣುತ್ತವೆ ಆ ಕಣ್ಣಿಗೆ ಎಲ್ಲಾ ಲೀಲೆಗಳೂ!
ಈ ಸಲ ಬಂದಾಗ ದೆವ್ವ
ಏನೋ ನಕ್ಷೆ ತಂದವು :
‘ಈ ಕನ್ನಡಿ ತಗೊ ಮಗನೇ
ಮುಖ ನೋಡಿಕೊ’ ಎಂದವು.
ಅದೋ, ರಸ್ತೆನಕ್ಷೆ. ಅಲ್ಲಿ
ರಾಜಮಾರ್ಗ ಮೂರು,
ಆ ದಾರಿಗೆ ಚಿಗುರಿದ್ದ
ಸೊಟ್ಟಾಪಟ್ಟ ಬೆಳಿದಿದ್ದ
ಹಾಸುಹೊಕ್ಕು ಹೆಣೆದಿದ್ದ
ಕಾಲುದಾರಿ ನೂರು.
ರಾಜಮರ್‍ಗ ಒಂದರಲ್ಲೂ
ಹೆಜ್ಜೆಯ ಗುರುತಿಲ್ಲ,
ದಾರಿಯೆ ಸಮೆದಿಲ್ಲ ;
ಕುರುಚಲು ತುಂಬಿದೆ ಯಾರೂ
ನಡೆಯಲು ಬಳಸಿಲ್ಲ.
ಕೆದರಿದ್ದರೂ ಮಣ್ಣು ಅದು
ಮಳೆ ಬಿದ್ದದ್ದಕ್ಕೆ.
ಹುಳು ಹರಿದದ್ದಕ್ಕೆ:
ಉತ್ತಿದ್ದಕ್ಕಲ್ಲ ಅಥವಾ
ಬಿತ್ತಿದ್ದಕ್ಕಲ್ಲ.
ಕಾಲುದಾರಿ ರೀತಿಯೋ
ಗೀಚಿ ಬರೆವ ಸ್ಲೇಟು:
ನಿರಂಕುಶ ಅಭಿವ್ಯಕ್ತಿ
ಲಂಡನ್ ಹೈಡ್‌ಪಾರ್ಕು:
ಸ್ಪಾಟ್‌ಲೈಟ್ ಸುಳಿವೇ ಇಲ್ಲದ
ಚಂಬಲ್ ಕಣಿವೆ,
ಬೇಕಾಬಿಟ್ಟಿ ಒಟ್ಟಿದ
ಒಣಹುಲ್ಲಿನ ಬಣವೆ;
ಎಲ್ಲಿಂದ ಎಲ್ಲಿಗೋ ಜಿಗಿದು
ಸುರಂಗ ಗಟಾರದಲ್ಲಿ ಮುಗಿದು
ಒಬ್ಬನೇ ಸಮೆಸಿದ ದಾರಿ
ಎಲಾ ಗಡಿ ಮೀರಿ,
ಪರಮಪದದ ದ್ವಾರದಿಂದ
ಪ್ರತಿಸಲವೂ ಜಾರಿ.
ಶಹಭಾಶ್ ಎಂದವು ದೆವ್ವ,
ಸುಮ್ಮನೆ ಮುಖ ನೋಡಿದೆ.
“ಸುಳ್ಳು ಬದುಕು ಯಾಕಪ್ಪಾ”
ಎಂದವು. ಹಲ್ಕಿರಿದೆ.
“ಎಲ್ಲಾ ಡೈರಿ ಸುಟ್ಟು ಬಿಡೊ
ನಿಜದ ಬದುಕನ್ನೊಪ್ಪಿಬಿಡೊ
ಢೋಂಗಿ ಬದುಕು ಯಾಕೋ ಮಗನೆ”
ಎಂದವು. ಮುಖ ಬಿಗಿದೆ.
ಎಲ್ಲೋ ಹಾಳು ಸಹವಾಸ
ಮೂಲಕ್ಕೇ ಮೋಸ ;
ತಾನೇ ದೆವ್ವ, ಮಾಡುವುದೋ
ನೀತಿಯ ಉಪದೇಶ
ಎನ್ನಿಸಿದ್ದೇ ಒಳಗೊಳಗೇ
ಉಕ್ಕಿತು ಕುದಿಕೋಪ
ಎದ್ದು ಹೋಗಿ ದೆವ್ವಗಳನು
ಒದ್ದು ಹೊರಗೆ ಹಾಕಿದೆ,
ಕದ ಕಿಟಕಿಯ ಜಡಿದೆ :
ಆತ್ಮಕಥೆಯ ರೇಷ್ಮೆವಸ್ತ್ರ
ನೇಯಲೆಂದು ಡೈರಿ ಹಿಡಿದು
ಒಳಕೋಣೆಗೆ ನಡೆದೆ.
*****