ನಟ್ಟಿರುಳು ಚಳಿ ಮೌನ, ಸಣ್ಣಗೆ ಅಳುವ ದೀಪ
ಕೋಣೆ ಮೂಲೆಯ ಕಡ್ಡಿಚಾಪೆ ಮೇಲೆ
ನಿದ್ದೆಯಿಲ್ಲದೆ ಹಸಿದ ಹೊಟ್ಟೆಯಲ್ಲಿ ಹೊರಳುವ ತಾಯಿ
ಕಪ್ಪಿಟ್ಟ ಮುಖ, ಸುಕ್ಕುಕೆನ್ನೆ, ನಿಟ್ಟುಸಿರು
ಚಿಂತೆ ಮಡುನಿಂತಂತೆ ಕಣ್ಣು
ಯೋಚಿಸುತ್ತಾಳೆ ತಾಯಿ ಯುದ್ಧಕ್ಕೆ ನಡೆದ
ಮಗನನ್ನು ಕುರಿತು
ಯೋಚಿಸುತ್ತಾಳೆ ಇರುಳ ಕಂದರಕ್ಕೇ ಜಿಗಿದ
ಉರಿವ ಧಗಧಗ ಪಂಜು ಕುರಿತು.
“ಚಿಕ್ಕಂದಿನಿಂದಲೂ ಅವನ ರೀತಿಯೆ ಹಾಗೆ
ಮಗುವಾಗಿದ್ದಾಗ ಮರಿ ಹುಲಿಯೇ!
ಕವುಚಿ ತೆವಳುತ್ತ ಹೂಂಕರಿಸುತ್ತ ತಲೆಯೆತ್ತಿ
ಹೆಡೆ ತೂಗುತ್ತಿದ್ದದೋ
ಬಾಚಿ ಹಿಡಿದರೆ ಹೊರಳಿ ಜಿಗಿಯುತ್ತಿದ್ದದ್ದೋ
ಛೀ ಪುಂಡ ಎಂದು ಸೆಳೆದಪ್ಪಿದರೆ ಮುಖವನ್ನೆ
ಕಚ್ಚುತ್ತಿದ್ದದ್ದೋ –
ಹೊಟ್ಟೆಯುರಿಸುವ ನೆನಪು ಉಕ್ಕಿ ಕಾಡುತ್ತದೆ
ತೊಡೆ ಮೇಲೆ ಹಾಗೆ ಥಕ ಥೈ ಕುಣಿವ ಮುದ್ದುಮಗು
ಈಗ ಎಲ್ಲಿ?
ಸಾವಿನ ಕರಾಳಬಾಯಿ ಜೀವ ಮೇಯುವ
ಯಾವ ಜಾಗದಲ್ಲಿ ?
“ಹೇಗೆ ಬೆಳೆದ ಹುಡುಗ ಕೆಚ್ಚು ಬೆಳೆದಂತೆ!
ಕಟ್ಟಿಗೆಯಲ್ಲಡಗಿದ್ದ ಕಿಚ್ಚು ಎದ್ದಂತೆ.
ಕ್ರಿಕೆಟ್ ಕೊಕ್ಕೋ ಅಂತ ಊರು ತಿರುಗಿದ್ದೇನು
ಹೋದಲ್ಲೆಲ್ಲ ಕಪ್ಪು ಷೀಲ್ಡು ಬಾಚಿದ್ದೇನು
ಚೆಂಡು ತೂರುವ ಕಪಿಲ್, ಬ್ಯಾಟು ಬೀಸುವ ಸುನೀಲ್
ಮನೆಗೋಡೆ ಮೇಲೆಲ್ಲ ಚಿತ್ರ ತೂಗಿದ್ದೇನು
ಶಕ್ತಿಯ ಆರಾಧನೆಯೆ ಕೌಮಾರ್‍ಯವಲ್ಲ!
ಯುದ್ಧಕ್ಕಾಗೇ ನಡೆದ ಪೂರ್ವ ಸಿದ್ಧತೆ, ಆಗ ತಿಳಿಯಲೇ ಇಲ್ಲ.
ಆಡಿ ಹಸಿದು ಬಂದು
ಅಮ್ಮಾ ಕೈ ತುತ್ತು ಎಂದು
ಇನ್ನೂ ಬೇಕೆಂದು ಮುಕ್ಕಿ ಉಣ್ಣುತ್ತಿದ್ದ ಹುಡುಗ
ಈಗ ಎಲ್ಲಿ?
ಸಾವಿನ ಕರಾಳಬಾಯಿ ಜೀವ ಮೇಯುವ
ಯಾವ ಜಾಗದಲ್ಲಿ?
“ಬೆಚ್ಚನೆಯ ಮನೆರಕ್ಷೆ ಇತ್ತು ಆಗ
ಹೇಗಿರಬಹುದು ಈಗ ಇರುವ ಜಾಗ ?
ಕತ್ತಲ ಹೊಟ್ಟೆ ತಿವಿವ ಹಿಮದ ದಿಬ್ಬಗಳು
ಹೆಪ್ಪುಗಟ್ಟಿದ ಥಂಡಿ ಸುತ್ತಮುತ್ತ,
ಸಿಳ್ಳು ಹಾಕುತ್ತ ಮೈಯ ಒತ್ತಿ ತಳ್ಳುವ ಗಾಳಿ,
ಮೈಗೆ ಫಟ್ಟೆಂದು ಬಡಿದು ಬೊಬ್ಬೆ ಹೊಡೆಸುವ ಬಂಡೆ
ಉಂಡದ್ದು ನಿನ್ನೆ ಮಧ್ಯಾಹ್ನ, ಹಿಡಿಯಷ್ಟು
ಆದರೂ ……… ಆದರೂ
ಹತ್ತಲೇಬೇಕು ಕತ್ತಲಲ್ಲೂ ಕೂಡ
ಶಸ್ತ್ರಾಸ್ತ್ರ ಹೊತ್ತು ತಡಕುತ್ತ ತೆವಳುತ್ತ;
ಏರಬೇಕು, ಏರಿ ಹೋಗಬೇಕು
ದಿಟ್ಟ ಪತಾಕೆಯಂತೆ ಸೆಟೆದು ತಲೆಯೆತ್ತಿ
ಸಿಡಿಸಬೇಕು ತುಪಾಕಿ,
ಉರಿವ ಶೆಲ್ಲುಗಳನ್ನು ವೈರಿ ಠಾಣೆಯ ಮೇಲೆ
ಸುರಿಸಬೇಕು,
ಸಾಯಲೂ ನೋಯಲೂ ವೈರಿ ಕೈಸೇರಲೂ
ಊನಾಗಿ ಬಾಳಲೂ ಸಿದ್ಧನಿರಬೇಕು.
“ಯುದ್ಧವಂತೆ ಯುದ್ಧ !
ಯಾಕಾಗಿ ಈ ಯುದ್ಧ?
ಮನುಷ್ಯ ಮುಖ ಹೊತ್ತ ಯಾವ ದೆವ್ವಗಳನ್ನು ತಣಿಸಲಿಕ್ಕೆ,
ಯಾವ ಅವಿವೇಕಿ ಮುಟ್ಠಾಳ ಕೊಳಕರ ರಾಜಕಾರಣ ಕುತಂತ್ರಕ್ಕೆ?
ಎಂದೂ ಕಾಣದ ಯಾವನನ್ನೊ ದ್ವೇಷವೆ ಇರದೆ
ಇರಿದು ಕೊಲ್ಲುವುದು.
ಗೊತ್ತೇ ಇರದ ಯಾವ ಮಗನನ್ನೊ ಪತಿಯನ್ನೊ
ತುಪಾಕಿಗುಣಿಸಿ
ನಗುತ್ತಿದ್ದ ಮನೆಯ ಸುಡುಗಾಡು ಮಾಡುವುದು.
ಸಾಕು ದೇವರೆ ಹೀಗೆ
ಬೆಳೆದ ಹುಡುಗರ ಮೈಗೆ ಉರಿ ಹಚ್ಚಿ ಸುಡುವ ರೋಗ
ಯುದ್ಧಕ್ಕೆ ಮೂಲ ಕಾರಣ ಯಾರೊ ಅವನ ಮನೆ
ಹಾಳಾಗಿ ಹೋಗ!
ಲೋಕಕ್ಕೆಲ್ಲ ಬೆಳಕ ಕರುಣಿಸುವ ದೇವರೇ
ಹಚ್ಚಿಡುವೆ ನಿನಗೆ ಕಂಪಿಡುವ ಧೂಪ,
ಬೆಳಗುತ್ತಲೇ ಇರಲಿ ಎಲ್ಲೆ ಇದ್ದರು ಸದಾ
ನನ್ನ ಹುಡುಗನ ಕಣ್ಣ ದೀಪ,
ಮುಕ್ಕಾಗದಿರಲಿ ಎಂದೂ ಅವನ ಮೈಮಾಟ.
ನಾಡ ಕೇಡನ್ನು ಅವನು ಮೆಟ್ಟಿ ಬರಲಿ
ಕಿರುಬಗಳ ಗಡಿಯಾಚೆ ಅಟ್ಟಿ ಬರಲಿ
ಮ್ಯತ್ಯುವಿನ ಕಣದಲ್ಲೆ ಕಾದಿ ಗೆದ್ದು
ಮತ್ತೆ ನಚಿಕೇತ ಮನೆಗೆ ಬರಲಿ”.
*****