ಇಬ್ಬರು ಕಳ್ಳರು ಊರನ್ನು ದೋಚಿದರು.
ರೈತರ ಕತ್ತು ಮುರಿದರು.
ಒಬ್ಬ ಹಸಿದ ತೋಳದಂತೆ ತೆಳ್ಳಗಿದ್ದ.
ಇನ್ನೊಬ್ಬ ಜಗದ್ಗುರುವಿನಂತೆ ದಪ್ಪಗಿದ್ದ.
ಇಬ್ಬರು ಕಳ್ಳರಲ್ಲಿ ಅಷ್ಟೇಕೆ ವ್ಯತ್ಯಾಸ?
ಅವರಲ್ಲೊಬ್ಬ ಒಡೆಯ, ಇನ್ನೊಬ್ಬ ಗುಲಾಮ.
ಒಡೆಯ ಕೆನೆಹಾಲು ಕುಡಿಯುತ್ತಿದ್ದ
ಗುಲಾಮನಿಗೆ ನೀರು ಮಜ್ಜಿಗೆ ಕೊಡುತ್ತಿದ್ದ.
ಒಂದು ದಿನ ರೈತರು ಕಳ್ಳರನ್ನು ಹಿಡಿದರು.
ಒಂದೇ ಮರಕ್ಕೆ ಒಂದೇ ಹಗ್ಗದಿಂದ ಇಬ್ಬರನ್ನೂ ನೇಣಿಗಿಟ್ಟರು.
ಒಬ್ಬ ಹಸಿದ ತೋಳದಂತೆ ತೆಳ್ಳಗಿದ್ದ.
ಇನ್ನೊಬ್ಬ ಜಗದ್ಗುರುವಿನಂತೆ ದಪ್ಪಗಿದ್ದ.
ನಿಂತು ನೋಡಿದರು, ಮೂಗಿನ ಮೇಲೆ ಬೆರಳಿಟ್ಟರು.
ತಿಳಿಯಲೇ ಇಲ್ಲ ರೈತರಿಗೆ, ನೋಡೇ ನೋಡಿದರು.
ದಪ್ಪನೆಯವನು ಕಳ್ಳ ಎಂದೇನೋ ತಿಳಿಯಿತು
ತೆಳ್ಳನೆಯವನೂ ಕಳ್ಳ ಹೌದೆ? ಯಾಕೆ? ಎಂದರು.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht