ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ
ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ
ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ
ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸಂಗೀತ ವಾದ್ಯಗಳು, ವರ್ಣಚಿತ್ರಗಳು. ಸುಮ್ಮನೆ
ನೋಡಿದರೆ ಇದು ನರಕದ ಡಿಲಕ್ಸ್ ಡಿಪಾರ್ಟ್ಮೆಂಟು ಅನ್ನಿಸುತ್ತದೆ; ಕುದಿಯುವ ಎಣ್ಣೆ
ಕೊಪ್ಪರಿಗೆ ಇಲ್ಲ. ಮೈ ಕೊಯ್ಯುವ ಗರಗಸವಿಲ್ಲ. ಧಗಧಗ ಉರಿಯುವ ಬೆಂಕಿ
ನಾಲಗೆಗಳಿಲ್ಲ.
ವರ್‍ಷ ಪೂರ್ತಿ ಕಾವ್ಯ ಸ್ಪರ್ಧೆ, ಸಂಗೀತೋತ್ಸವ, ಕಲಾ ಮೇಳಗಳೇ. ಇವಕ್ಕೆ ಕ್ಲೈಮಾಕ್ಸ್
ಎಂಬುದಿಲ್ಲ. ಶಾಶ್ವತವಾಗಿ, ಬಹುಮಟ್ಟಿಗೆ ಅನಂತವಾಗಿ ಅಖಂಡವಾದ ಕ್ಲೈಮಾಕ್ಸೇ
ಯಾವಾಗಲೂ. ತಿಂಗಳಿಗೊಂದು ಹೊಸ ಪಂಥ, ಹೊಸ ಶೈಲಿಯ ಅವಿಷ್ಕಾರ.
ಅಗ್ರಗಾಮಿ ಕವಿ ಕಲಾವಿದರ ಮುನ್ನೆಡೆಯನ್ನು ತಡೆಯುವವರೇ ಇಲ್ಲ.
ನರಕದೊಡೆಯ ಬೇಲ್ಸೆಬಬ್‍ನಿಗೆ ಕಲೆಯನ್ನು ಕಂಡರೆ ತುಂಬ ಪ್ರೀತಿ. ನರಕದ ಮೇಳ,
ನರಕದ ಕವಿಗಳು, ನರಕದ ಸಂಗೀತಗಾರರು ಇವರೆಲ್ಲ ಸ್ವರ್ಗದಲ್ಲಿರುವ ಇಂಥವರಿಗಿಂತ
ತುಂಬ
ಅತ್ಯುತ್ತಮ ಎಂದು ಜಂಬಕೊಚ್ಚಿಕೊಳ್ಳಲು ಶುರುಮಾಡಿದ್ದಾನೆ. ಅತ್ಯುತ್ತಮ ಕಲೆ ಇದ್ದರೆ
ಅತ್ಕುತ್ತಮ ಸರ್ಕಾರವಿರುತ್ತದೆ. ಸತ್ಯ, ಪರಮ ಸತ್ಯ. ಸದ್ಯದಲ್ಲೆ ನರಕದ ಕಲಾವಿದರಿಗೂ
ಸ್ವರ್ಗದವರಿಗೂ ನಡುವೆ ಒಂದು ಸ್ಪರ್ಧೆ ಇದೆ, ಎರಡು ವಿಶ್ವಗಳ ಮಹಾ ಸರ್ಧೆ.
ಡಾಂಟೆ, ಫ್ರಾ ಏಂಜಲಿಕೋ, ಬಾಖ್ ಎಷ್ಟು ಮಟ್ಟಿಗೆ ಉಳಿದುಕೊಳ್ಳುತಾರೋ ನೋಡಬೇಕು.
ನರಕದೊಡೆಯ ಕಲೆಗೆ ಸಾಹಿತ್ಯಕ್ಕೆ ತುಂಬ ಪ್ರೋತ್ಸಾಹ ಕೊಡುತ್ತಾನೆ. ಕಲಾವಿದರಿಗೆ
ಶಾಂತಿ, ಅತ್ಯುತ್ತಮ ಆಹಾರ, ನರಕದ ಬದುಕಿನ ತಳಮಳ ತಾಗದಂಥ ಪ್ರತ್ಯೇಕ ಪರಿಪೂರ್ಣ
ಏಕಾಂತ ಒದಗಿಸಿದ್ದಾನೆ.
*****
ಮೂಲ: ಝ್ಬಿಗ್ನ್ಯೂ ಹರ್‍ಬರ್‍ಟ್ / Zbigniew Herbert