ಹೆಂಡತಿಯನ್ನು ಅರ್ಧಾಂಗಿಯೆಂದು ಕರೆಯುತ್ತಾರೆ. ಹೆಂಡತಿಯ ಸಹೋದರ ಭಾವಮೈದುನನಾದರೋ ಪೂರ್ಣಾಂಗನೇ ಆಗಿದ್ದಾನೆ. ಹೆಂಡತಿಯನ್ನು ನಾವು ಪ್ರೀತಿಸಬಹುದು ಇಲ್ಲವೆ ಬಿಡಬಹುದು. ಆದರೆ ಭಾವಮೈದುನನನ್ನು ಪ್ರೀತಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಆದಕ್ಕೆಂತಲೇ ಹೇಳುತ್ತಾರೆ. ಸಾರೀ ದುನಿಯಾ ಏಕತರಫ್, ಜೋರುಕಾ ಭಾಯಿ ಏಕತರಫ್ ಎಂದು. ಹೆಂಡತಿಯಾದವಳು ಒಮ್ಮೆ ನಕ್ಕಂತೆ ಮಾಡಿ, ಇನ್ನೊಮ್ಮೆ ಅತ್ತು, ಮಗುದೊಮ್ಮೆ ಮುದ್ದುಕೊಟ್ಟು, ಮತ್ತೊಮ್ಮೆ ಮುನಿಸು ತೋರಿ, ಒಮ್ಮೆ ಸಿಟ್ಟು ಸೆಡವುಗಳನ್ನು ತೋರುತ್ತ ನಮ್ಮನ್ನೂ ಗಾಳಿಪಟವನ್ನಾಗಿ ಮಾಡುವಳು. ನಾವೆಲ್ಲರೂ ದೇವನ ಕೈಯೊಳಗಿನ ಸೂತ್ರದ ಬೊಂಬೆಗಳೆಂದು ತತ್ವಜ್ಞಾನಿಗಳು ಹೇಳುತ್ತಾರೆ. ಆ ಮಾತಿಗೆ ನನ್ನ ಆಕ್ಷೇಪವೇನಿಲ್ಲ. ಆದರೆ ನನ್ನ ಅನುಭವದ ಪ್ರಕಾರ ಹೆಂಡತಿಯ ಕೈಯೊಳಗಿನ ಕಠಪುತಲಿಗಳು ನಾವು. ಅವಳು ಕುಣಿಸಿದಂತೆ ಕುಣಿಯಬೇಕು. ಕುಣಿತದಲ್ಲಿ ಕಿಂಚಿತ್ ಊನವಾದರೂ ನಮ್ಮ ಕಿವಿಗಳು ನಮ್ಮ ಯಜಮಾನಿಯ ವಶಕ್ಕೆ ಬರುತ್ತವೆ. ಅರ್ಧಾಂಗಿಯೇ ಇಷ್ಟು ಪ್ರಬಲಳಾದ ಸರ್ವಾಧಿಕಾರಿಯೆಂದ ಬಳಿಕ, ಪೂರ್ಣಾಂಗನಾದ, ದಶಮಗ್ರಹವಾದ ಸರ್ವಾಧಿಕಾರಕೈ ಮಿತಿಯೆಲ್ಲಿದೆ?
ಈ ಭಾವಮೈದುನನೆಂದರೆ ಯಾರು ಎಂದು ನೀವು ಕೇಳಿದರೆ, ನಿಮಗಿನ್ನೂ ಲಗ್ನವಾಗಿಲ್ಲವೆಂದೇ ಹೇಳಬೇಕು. ಲಗ್ನವೆಂದರೆ ಏನೆಂದು ತಿಳಿದಿದ್ದೀರಿ ಸ್ವಾಮಿ. ಅದೊಂದು ಪುನರ್ಜನ್ಮ. ಪುನರ್ಜನ್ಮ ಇದೆಯೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆದರೆ ಲಗ್ನವಾದ ಕ್ಷಣದಲ್ಲಿಯೇ ಗಂಡೆಂಬ ಪ್ರಾಣಿಯು ಮದುವೆಯ ಮುಂಚಿನ ಸಂಸ್ಕಾರಗಳನ್ನೆಲ್ಲ ಕಳಚಿ ಒಗೆಯುತ್ತದೆ. ತಂದೆ ತಾಯಿಗಳನ್ನೂ ಮರೆತು ಅತ್ತೆ ಮಾವಂದಿರ ಬಳಗಕ್ಕೆ ಸೇರುತ್ತದೆ. ಆಗ ಎದುರಾದ ಭಾವಮೈದುನನ ಸರಬರಾಜಿನಲ್ಲಿ ತನ್ನ ಪುಣ್ಯವನ್ನೆಲ್ಲ ಸವೆಸಬೇಕಾಗಿ ಬರುತ್ತದೆ. ಹಿಂದಿನ ಅವಿಭಕ್ತ ಕುಟುಂಬದಲ್ಲಿ ಭಾವಮೈದುನ ಪ್ರಮುಖಸ್ಥಾನ ವಹಿಸಿದ್ದುದು ಕಾಲಮಹಿಮೆಯಷ್ಟೇ.
ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕ್ತಿಯೆಂದರೆ-ನಮ್ಮ ಹಿರಿಯರು. ಆದರೆ ಪತ್ನಿಗುಲಾಮರಾಗದವರೆಗೆ ಮುಕ್ತಿ ದೊರೆಯುವುದು ದೂರ ಉಳಿಯಿತು. ಎರಡೂ ಹೊತ್ತು ಊಟ ಸಿಕ್ಕರೆ ದೊಡ್ಡ ಮಾತಾಯ್ತು. ಅಂಥ ಮಹಾ ಭಾರ್ಯೆಯ ದಾಸನಾಗಿ ಪಡೆಯುವ ಆನಂದವನ್ನು ಯಾವ ದೇಶದ ಸಾವಾಭೌಮತ್ವವೂ ಕೊಡಲಾರದು. ಇಲ್ಲಿ ಒಂದು ಮಾತು. ನಮ್ಮ ಪತ್ನಿಯಾದವಳು ತನ್ನ ತಮ್ಮನನ್ನು ನಮ್ಮ ಮುಂದೆ ನಿಲ್ಲಿಸಿ ಇವನನ್ನು ಪ್ರೀತಿಸಿರಿ ಎಂದು ಆಜ್ಞೆಮಾಡುವಳೇ? ಛೀ ಎಂದೂ ಇಲ್ಲ. ಅದು ಹುಂಬರ ನೇರವಾದ ಪದ್ಧತಿಯಾಯ್ತು. ಜಾಣರ ರೀತಿಯಾಗಲಿಲ್ಲ. ಜಾಣೆಯಾದ ನಮ್ಮ ಪತ್ನಿ ತನ್ನ ತಮ್ಮನ ಮೇಲೆ ಅತಿಶಯವಾದ ಪ್ರೀತಿಯನ್ನು ತೋರಿಸುತ್ತ ನಾವೂ ಅವಳಂತೆ ಅವನನ್ನು ಪ್ರೀತಿಸಬೇಕು ಎಂದು ಸೂಚಿಸುತ್ತಾಳೆ. ಒಂದಿಷ್ಟು ಭಾವಮೈದುನನ್ನು ಅಲಕ್ಷಸಿದೆವೋ ಮನೆಯಲ್ಲಿ ಗುಡುಗು ಸಿಡಿಲಿನ ಮಳೆಯಾಗುತ್ತದೆ. ಆಗ ನಾವೇ ಹಾದಿಗೆ ಬರುತ್ತೇವೆ. ಅಲ್ಲಿಂದ ಮುಂದೆ ಭಾವಮೈದುನನ ವಿವಿಧ, ವಿಚಿತ್ರ ಆಶೆಗಳನ್ನು ಈಡೇರಿಸುವ ಒಂದು ಯಂತ್ರವಾಗುತ್ತೇವೆ. ಹೆಂಡತಿಯ ವಿಚಿತ್ರ ಅಧಿಕಾರದ ಪ್ರಭಾವಕ್ಕೊಳಗಾಗಿ ಭಾವಮೈದುನನ್ನು ಬಹಿರಂಗವಾಗಿ ಪ್ರೀತಿಸಬೇಕಾಗಿ ಬಂದ ನಾವು ಅವನನ್ನು ಅಂತರಂಗದಲ್ಲಿ ದ್ವೇಷಿಸುತ್ತೇವೆ. ಆದಕ್ಕಾಗಿಯೇ ಅವನಿಂದ ದೂರವಿರಬೇಕೆಂದು ಅಪೇಕ್ಷೆಪಡುತ್ತೇವೆ. ನಮ್ಮ ಆಪೇಕ್ಷೆಗಳೆಲ್ಲ ಈಡೇರುವಂತಿದ್ದರೆ ನಾವೇಕೆ ಮಾನವರಾಗಿ ಹುಟ್ಟುತ್ತಿದ್ದೆವು ಮಣ್ಣು ತಿನ್ನಲು?
ಈ ಭಾವಮೈದುನರ ಕಥೆಗಳನ್ನು ಅಪ್ಪಿಷ್ಟು ಕೇಳಿದ್ದ ನಾನು ವಧೂಪರೀಕ್ಷೆಯ ಪರ್ವದಲ್ಲಿ ಒಂದು ವಿಶೇಷ ಪ್ರಶ್ನೆಯನ್ನು ನನ್ನ ಬತ್ತಳಿಕಯಲ್ಲಿರಿಸಿದೆ, ನನ್ನ ಜೊತೆಗಾರರು ಕನ್ಯೆಯ ಹಸರು ದೆಸೆಗಳನ್ನು ಕೇಳಿ ಮುಗಿಸಿದ ಬಳಿಕ ಸುಕೋಮಲೆಯಾದ ಕನ್ಯಗೆ ನಿನಗೆಷ್ಟು ಅಣ್ಣತಮ್ಮಂದಿರು ಎಂದು ಕೇಳುತ್ತಿದ್ಧೆ. ಎಷ್ಟೋ ಜನ ಸುಂದರಿಯರನ್ನೂ ಆಪ್ಸರೆಯರನ್ನೂ ಕೇವಲ ಅವರ ಆಣ್ಣತಮ್ಮಂದಿರ ಹಚ್ಚಿನ ಸುಂಖ್ಯೆಗೆ ಅಂಜಿಯೇ ನಾನು ತಿರಸ್ಕರಿಸಿದ್ದುಂಟು. ಕೊನೆಗೂ ಈಗ ಆರ್‍ಧಾಂಗಿಯಾಗಿರುವ ಮಹಾಮಹಿಳೆಯನ್ನು ಲಗ್ನವಾದೆ. ಏಕೆಂದರೆ ಅವಳಿಗಿರುವವನು ಒಬ್ಬನೇ ತಮ್ಮನೆಂದು. ಇವನೇನೂ ನನ್ನ ಜೀವಕ್ಕೆ ಮೂಲವಾಗಲಾರ ಎಂದು ಭ್ರಮೆಪಟ್ಟು ಅವಳನ್ನು ಲಗ್ನವಾದೆ. ಲಗ್ನವಾಯ್ತು. ಇಲ್ಲಿಗೆ ಕಥೆ ಮುಗಿಯಿತೆಂದು ತಿಳಿಯಬೇಡಿ. ಪ್ರಾರಂಭವಾಯ್ತು.
ನನ್ನಾಕೆ ಹಸಿರು ಸೀರೆಯನ್ನುಟ್ಟು, ಬಲಗಾಲನ್ನು ಮುಂದೆ ಮಾಡಿ ಗೃಹಪ್ರವೇಶ ಮಾಡಿದಳು. ಅವಳ ಜೊತೆ ಬಾಲಾಗಸಿ ಅವಳ ತಮ್ಮ ಬಂದೇಬಿಟ್ಟಿದ್ದ. ಯಾವನಿಗಾಗಿ ಇಷ್ಟು ಕಾಲ ಹೆದರಿದ್ದೆನೋ ಅವನು ನನ್ನ ಮುಂದೆ ಕುಕ್ಕರಿಸಿದ್ದ. ಅಂದಿನಿಂದ ಇಂದಿನವರೆಗೆ ಅವನು ನನ್ನ ನೆರಳಾಗಿ, ನಮ್ಮಿಬ್ಬರ ಅಡ್ಡಗೋಡೆಯಾಗಿ, ಕಿರಿಕಿರಿ ಮಾಡುವ ಕಿರಿಯವನಾಗಿ, ದಿನಕ್ಕ ಇಪ್ಪತ್ತು ನಾಲ್ಕು ಗಂಟೆ ಗೂರಕೆ ಯೊಡೆಯುವ ಅಲಾರಂ ಗಡಿಯಾರವಾಗಿ ನನ್ನ ಸಾಮಾನುಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಹರಡುವ ಇಲಿಯಾಗಿ, ನನ್ನ ಬುಶ್‍ಶರ್‍ಟು, ಪ್ಯಾಂಟುಗಳ ಮಾಸಲು ಮುರಿಯುವ ನೆಂಟನಾಗಿ ಕಾಡುತ್ತಿದ್ದಾನೆ. ಇವನಿಂದ ಮುಕ್ತಿಯೆಂದು ದೂರೆತೀತೋ ಎಂದು ಕಾದಿದ್ದೇನೆ.
ಮದುವಯಾದ ದೊಸತರಲ್ಲಿ ಗಂಡ ವೆಂಡಿರಲ್ಲಿ ಒಂದಿಷ್ಟು ಏಕಾಂತತೆ ಬೇಕಾಗುತ್ರ ದಂಬುದನ್ನು ಎಲ್ಲರೂ ಬಲ್ಲರು. ಆ ಏಕಾಂತತೆಗೆ ಭಂಗ ತರುವುದರಲ್ಲಿ ನಮ್ಮ ಭಾವಮೈದುನ ನಿಸ್ಸೀಮ. ಅವನು ನಮ್ಮ ಎಷ್ಟೆಷ್ಟೋ ಸರಸ ಸಲ್ಲಾಪಗಳಿಗೆ ತಡೆಯನ್ನೊಡ್ಡಿದ್ದಾನೆ. ಸಂಗಮ ಥೇಟರಿನಲ್ಲಿ ಹೊಸ ಸಿನೆಮಾ ಬಂದಿದೆಯೋ ಕುಮಾರಾ ನೋಡಿ ಬಾ ಎಂದು ಹೇಳಿದರೆ-ಕುಮಾರನು ನಾನು ಸಿನೆಮಾ ನೋಡಲಾರೆ ಎನ್ನುತ್ತಾನೆ. ಆದರೆ ನಾವಿಬ್ಬರೂ ಸಿನೆಮಾಕ್ಕೆ ಹೊರಟರೆ ಮಾತ್ರ ನಾನೂ ಬರುವೆನೆಂದು ಕಾಲು ಹೊಸೆದು ಥೇಟರಿಗೆ ಬಂದೇ ಬರುತ್ತಾನೆ. ನಟಿಯೊಬ್ಬಳು ನೃತ್ಯ ಮಾಡುವ ದೃಶ್ಯ ಬಂದಾಗ ಅವಳು ಯಾರು ಭಾವಾ, ಅವಳು ಅಕ್ಕನಂತಿಲ್ಲವೇನೋ ಭಾವಾ ಎಂದು ಕೇಳಿ ತನ್ನ ಚಿಕಿತ್ಸಕ ಬುದ್ಧಿಯನ್ನು ತೋರಿಸುತ್ತಾನೆ. ಇವನು ಮನೆಯಲ್ಲಿರುತ್ತಿರಲಿಕ್ಕಾಗಿ ನಾವು ಯಾವ ಸಿನೆಮಾಗಳನ್ನು ನೋಡುವಂತಿಲ್ಲ. ಎಲ್ಲ ನನ್ನ ಕರ್‍ಮ.
ಕುಮಾರನೆಂದ ಕೂಡಲೇ ನಮ್ಮ ಭಾವಮೈದುನ ಆರೇಳು ವರ್‍ಷಗಳ ಹಸುಳೆಯೆಂದು ತಿಳಿಯಬೇಡಿ. ಅವನಿಗೆ ಮೊನ್ನೆ ತಾನೆ ಇಪ್ರತ್ತು ವರ್‍ಷ ತುಂಬಿವೆ. ಪಾಪ ಅವನ ಅಕ್ಕನ ಕಣ್ಣಿಗೆ ಅವನೊಂದು ಕೂಸು. ಮ್ಯಟ್ರಿಕ್ ಪರೀಕ್ಷೆಯಲ್ಲಿ ಮೊರು ಸಾರೆ ಲಾಗ ಹೊಡೆದು ಬಂದ ಕುಮಾರನಿಂದು ಮಾಡುವ ಮಹಾಕಾರ್‍ಯವೆಂದರೆ ಉಣ್ಣುವುದು, ಉಂಡಿದ್ದನ್ನು ಕರಗಿಸಿ ಮತ್ತೊಂದು ಊಟಕ್ಕಾಗಿ ಹಾದಿ ಕಾಯುವುದು, ತೂಕಡಿಸುವುದು, ಮಲಗುವುದು, ಅತ್ತಿತ್ತ ಊರ ತಿಪ್ಪೆಗಳಿಗೆಲ್ಲ ಸಂದರ್ಶನ ಕೊಟ್ಟು ಮನೆಗೆ ಮರಳಿ ಬಂದು ಆಕಳಿಸುತ್ತ ಕೂಡುವುದು. ಕುಮಾರನನ್ನೊಮ್ಮೆ ಕಿರಾಣಿ ಸಾಮಾನುಗಳನ್ನು ತರಲು ಅಂಗಡಿಗೆ ಕಳಿಸಿದ್ದೆ. ಭೋರೆಂದು ಅಳುತ್ತ ಬಂದ. ಏಕೋ ಅಂದರೆ ಎಣ್ಣೆ ಡಬ್ಬಿ ಬಿದ್ದುಹೋಯ್ತು. ಚೀಲದಲ್ಲಿಯ ಸಕ್ಕರೆ ಚೆಲ್ಲಿಹೋಯ್ತು. (ಯಾಕೋ ಹೀಗಾಯ್ತು ಎಂದು ನಾನಂದರೆ ಓಡುತ್ತ ಹೊರಟಿದ್ದೆ, ಎಣ್ಣೆಡಬ್ಬಿ ಬಿತ್ತು ನಾನೇನು ಮಾಡಲಿ ಅಂದ). ಅಂದಿನಿಂದ ಅವನಿಗೆ ಯಾವ ಸಣ್ಣಪುಟ್ಟ ಕೆಲಸವನ್ನೂ ಹೇಳುವ ಧೈರ್‍ಯ ಮಾಡುತ್ತಿಲ್ಲ. ನಾನು ಓಡಾಡುತ್ತ ತೆಳ್ಳಗಾಗುತ್ತ ನಡೆದಿದ್ದರೆ, ಕುಮಾರನೋ ತನ್ನ ದೇಹವನ್ನು ಬೆಳೆಸುತ್ತ ಫುಟ್ಬಾಲ್ ಚೆಂಡಾಗಿದ್ದಾನೆ. ನನ್ನ ತೂಕದ ಮೇರೆಯನ್ನು ಎಂದೋ ದಾಟಿ ನನ್ನ ಮೇಲೆ ದಿಗ್ವಿಜಯ ಸಾರಿದ್ದಾನೆ.
ನಮ್ಮ ಮನಗೆ ಬರುವ ನನ್ನ ಗೆಳೆಯರನ್ನೂ ಆತ ಬರಮಾಡಿಕೊಳ್ಳುವ ರೀತಿ ಅದ್ಭುತವಾಗಿದೆ. ಹಂಡತಿಯ ಮುಖ ನೋಡಿ ಸಿಟ್ಟನ್ನು ನುಂಗಿಕೊಳ್ಳುತ್ತೇನೆ. -ಮೂರ್ತಿ ಇದ್ದಾರೇನ್ರಿ ಎಂದು ನನ್ನ ಗೆಳೆಯರು ಕೇಳಿದರೆ ಅವರನ್ನು ಬಾಗಿಲ ಹೊರಗೆ ನಿಲ್ಲಿಸಿ ‘ಅವರು ಮನೆಯಲ್ಲಿಲ್ಲ’ವೆಂದು ಒರಟು ಉತ್ತರ ಕೊಡುತ್ತಾನೆ. ಯಾವಾಗ ಬರುತ್ತಾರೆಂದು ಎರಡನೇ ಪ್ರಶ್ನೆ ಕೇಳಿದಾಗ ಅವರು ನನಗೆ ಹೇಳಿಹೋಗಿಲ್ಲ-ಅನ್ನುತ್ತಾನೆ. ‘ನಾನು ಪಾಟೀಲ ಬಂದಿದ್ದೇನೆಂದು ಮೂರ್ತಿಯವರಿಗೆ ಹೇಳು’-ಎಂಬ ಹುಂಬ ಧೈರ್‍ಯದಿಂದ ಬಿನ್ನವಿಸಿದರೆ ನಮಗೆ ಪಾಟೀಲ ಗಿಟೀಲ ನನಪಿರುವುದಿಲ್ಲ. ನೀವು ಈ ಕಾಗದದಲ್ಲಿ ನಿಮ್ಮ ಹೆಸರನ್ನು ಬರೆದಿಟ್ಟು ಹೋಗಿರಿ-ಎಂದು ಅನ್ನುತ್ತಾನೆ. ಎಂಥ ಮೃಗವನ್ನು ಸಾಕಿದ್ದೀಯೋ ಮೂರ್ತಿ ಎಂದು ನನ್ನನ್ನು ಪಾಟೀಲ ಮೊನ್ನೆ ಕೇಳಿದರೆ, ಮೃಗವಲ್ಲಪ್ಪ ಅದು, ನನ್ನ ಮಹಾಮಡದಿಯ ಮಹಾ ಸಹೋದರನೆಂದು ಹೇಳಿದೆ. ತಲೆಯಿದ್ದೂ ವಿಚಾರಮಾಡದ, ಕೈಯಿದ್ದೂ ಹೊಡೆಯಲಾರದ, ಬಾಯಿದ್ದೂ ಮಾತನಾಡದ ಅಸಹಾಯಕ ಸ್ಥಿತಿಯಲ್ಲಿದ್ದೇನೆ. ಭಾವಮೈದುನನ ಕಪಿಮುಷ್ಟಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದೇನೆ. ನನಗೆ ಬಿಡುಗಡೆಯೆಂಬುದಿಲ್ಲ.
ಅರ್‍ಜುನ ಮೂರುಲೋಕದ ಗಂಡನಾದರೂ ಸುಭದ್ರಯ ದಾಸಹನೂ, ಭಾವಮೈದುನ ಕೃಷ್ಣನ ದಾಸಾನುದಾಸನೂ ಆಗಿದ್ದನು. ಒಳ್ಳೇ ಸಾರಥಿಗಳು ಸಾಕಷ್ಟು ಸಿಗುತ್ತಿದ್ದರೂ ಅರ್‍ಜುನನು ತನ್ನ ಭಾವಮೈದುನನನ್ನೇ ಸಾರಥಿಯನ್ನಾಗಿ ಮಾಡಿಕೊಳ್ಳಬೇಕಾಯ್ತು. ತನ್ನ ಬಂಧು ಬಳಗದವರ ಮೇಲೆ ಕೈಯೆತ್ತಬೇಕಲ್ಲ ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಭಾವಮೈದುನ ಕೃಷ್ಣನ ಭಗವದ್ಗೀತೆಯೆಂಬ ಬೋರಿಂಗ್ ಭಾಷಣವನ್ನು ಅರ್‍ಜುನನು ಕೇಳಬೇಕಾಯ್ತು. ಈ ಆವಧಿಯಲ್ಲಿ ಅರ್‍ಜುನನು ಅದೆಷ್ಟು ಬಾರಿ ಆಕಳಿಸಿದನೋ ತೂಕಡಿಸಿದನೋ ಅಸಹ್ಯಪಟ್ಟನೋ ಬಲ್ಲವರಾರು. ಹೇಗಿದೆ ನೋಡಿ ಭಾವಮೈದುನನ ಪ್ರಭಾವ!
ನನಗೆ ನನ್ನ ಭಾವಮೈದುನ ಕುಮಾರನ ಮೇಲೆ ಸಿಟ್ಟೇನೋ ಇದೆ. ಆದರೆ ಅವನ ಮೇಲೆ ಪ್ರೀತಿಯ ನಟನೆ ಮಾಡಬೇಕಾಗುತ್ತದೆ. ಮನೆಯ ಸೌಹಾರ್‍ದ ವಾತಾವರಣಕ್ಕಾಗಿ ಇದು ಅನಿವಾರ್ಯ. ಹಾದಿಯಲ್ಲಿ ನವದಂಪತಿಗಳು ಸರಾಗವಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಕಂಡು ಕೇಳಬೇಕೆನಿಸುತ್ತದೆ. ನಿಮ್ಮಲ್ಲಿ ಭಾವಮೈದುನರಿಲ್ಲವೇನ್ರಿ ಎಂದು ಯಾರಿಗೆ ಗೊತ್ತು. ಅವರ ಭಾವಮೈದುನ ಮನಗೆ ಹತ್ತಿದ ಹೆಗ್ಗಣದಂತೆ ಕುಲಕ್ಕೆ ಅಂಟಿದ ಘಾತಕನಂತೆ ಮನೆಯಲ್ಲೇ ಕುಳಿತು ಮೆತ್ತನ್ನ ಪದಾರ್ಥವನ್ನು ಮೇಯುತ್ತಿರಬಹುದು.
ನನ್ನದೊಂದು ವಿಚಾರವಿದೆ. ಭಾವಮೈದುನರ ಅರ್‍ಥಾತ್ ಸಾಲೇ ಸಾಹೇಬರ ವಿರುದ್ಧ ಸಂಘವೊಂದನ್ನು ಕಟ್ಟಬೇಕೆಂದಿದ್ದೇನೆ. ನಾನಂತೂ ಆ ಸಂಘದ ಪದಾಧಿಕಾರಿಯಾಗಲಾರೆ. ಯಾಕೆಂದರೆ ನನ್ನ ಎಲ್ಲ ಚಟುವಟಿಕೆಗಳನ್ನು ಸದಾ ನಿರೀಕ್ಷಸುತ್ತಿರುವ ನನ್ನ ಸಿ.ಐ.ಡಿ. ಅಥವಾ ಗೃಹಮಂತ್ರಿ ನನ್ನ ಬೆನ್ನ ಹಿಂದೆಯೇ ಇದ್ದಾಳೆ. ಈ ವಿಷಯದಲ್ಲಿ ಆಸಕ್ತರಾದವರು ನನ್ನ ಆಫೀಸಿನ ಬಿಡುವಿನ ವೇಳೆಯಲ್ಲಿ ಭೇಟಿಯಾಗಿ ಉಚಿತಸಲಹೆಗಳನ್ನು ಪಡಯಬಹುದು. ದೇಶದ ಕಲ್ಯಾಣಕ್ಕಾಗಿ ಕುಟುಂಬದ ಪ್ರಗತಿಗಾಗಿ ಈ ಸಲಹೆಗಳನ್ನು ಕೊಡುತ್ತಿದ್ದೇನೆ.
*****